Wednesday, December 11, 2019

ಚಿತ್ತಾರ


ಅಬ್ಬಾ !!
ಎಷ್ಟೊಂದು ದೂರ ಸಾಗಿ ಬಂದೆ
ಯಾವುದೊಂದು ಅರ್ಥವಾಗುತ್ತಿಲ್ಲ
ಅದೇ ಬಾಂದಣ
ಅದೇ ಚಿತ್ತಾರ
ಅವೇ ಕಮರಿ, ಸೊರಗಿ,
ಮಿಸುಕಾಡುವ ಮುಖಭಾವಗಳು,
ಭಯಕೆಗಳು ಹಿಮ್ಮೆಟ್ಟುವಾಗ,
ಆಸೆಗಳು ಸತ್ತು!
ಮತ್ತೆ ಮತ್ತೆ
ಮರುಹುಟ್ಟು ಪಡೆಯುತ್ತಿವೆ

ಒಂದರ್ಧ ಗಂಟೆಯ ಹಿಂದೆ
ಅವನಿಂದ ಭಾಷೆಯೊಂದನ್ನ ಪಡೆದಿದ್ದೆ
ನಿನ್ನ ಜೋಳಿಗೆಯ ತುಂಬಾ
ನನ್ನ ಬಿಸಿ ಅಪ್ಪುಗೆಯ
ಮುಖ ಭಾವನೆಗಳನ್ನು
ಜೋಪಾನವಾಗಿಡು
ಬೆಳದಿಂಗಳು ಕಮರುವ ಮುನ್ನ
ಎಲ್ಲಿಯೂ ಸೋರಿ ಹೋಗದಂತೆ
ಹಿಂದೊಪ್ಪಿಸು ಎಂದು!!
ಆದರೆ
ಅಮಾವಾಸ್ಯೆಯ ಕಡುಗತ್ತಲಾದರೂ
ಅವನ ಸುಳಿವೆಯೇ ಇಲ್ಲ

ಅವಳ ನೀಲಿ ಕಂಗಳಲ್ಲಿ
ಚಿತ್ತಾರದ ಹೊಂಬೆಳಕು ಮೂಡುತ್ತದೆ
ಅವಳು ರಾಧೆಯೋ,
ಸುನಾದದ ವೀಣೆಯೋ
ಎಂಬುದನ್ನು ಖಾತ್ರಿಗೊಳಿಸಬೇಕಿದೆ!
ಕೊಂಚ ಕಾಯಿರಿ
ಈಗಷ್ಟೇ
ಅವಳಿಂದ ಕೆಲವು ಕನಸುಗಳನ್ನು
ಎರವಲು ಪಡೆಯಬೇಕಿದೆ.
ಮುಂಗಾರು ಮಳೆ ಸುರಿಸಬೇಕಿದೆ
ಮನಸ್ಸಿನ ಅಂಗಳದ ತುಂಬಾ
ಅವಳದೇ ಚಿತ್ತಾರದ
ಬಿಂಬಗಳನ್ನು ಕೃಷಿಸಬೇಕಿದೆ.

Friday, October 13, 2017

ಮಳೆ

ಮಳೆ‌ ಥೋ ಎಂದು
ಸುರಿಯುತ್ತಿದೆ,
ಸೊಕ್ಕಾಗಿ ಎಡೆಬಿಡದೆ
ಧರೆಯ ದಾಹ ಇಂಗುವ ತನಕ
ಭೋರ್ಗರೆದು,
ಯಾರ ಆತಂಕಕ್ಕೂ
ಆವೇದನೆಗೂ ಬಗ್ಗದೆ,
ಕೊಚ್ಚಿ ಹೋಗುತ್ತಿರುವ
ಬದುಕುಗಳ ನಡುವೆ
ಸೂತಕದ ಕಾರ್ಮೋಡ
ಆವರಿಸಿದೆ

ಮಳೆಯೆಂದರೆ
ಮೌನ,
ಮಳೆಯೆಂದರೆ ಧ್ಯಾನ,
ಮಳೆಯೆಂದರೆ
ಮರುಗಟ್ಟಿ ಮರೆಯಾಗುವ
ಕಣ್ಣೀರಿನ ಸೆಲೆ,
ಮಳೆಯೆಂದರೆ ಕಾರ್ಮೋಡ
ಗುಡುಗು ಸಿಡಿಲುಗಳ ಅಬ್ಬರ,
ಮಳೆಯೆಂದರೆ
ಬೊಗಸೆಯಲ್ಲಿ ಮಿನುಗುವ
ಕೋಲ್ಮಿಂಚು,
ಕಣ್ಣೀರಿನ ಧಾರೆ

ಹೌದು!
ಮಳೆಯೆಂದರೆ ಹೀಗೆಯೇ!
ಬಾ ಎಂದಾಗ ಬರದೆ,
ಬೇಡ ಎಂದಾಗ ನಿಲ್ಲದೆ,
ಮುಳುಗಿಹೋಗುವ
ಬದುಕುಗಳ ಕುಲುಮೆಯೊಳಗೆ
ತಣ್ಣನೆಯ ಅನುಭವ
ಮತ್ತೆ ಮತ್ತೆ
ನೆನಪಿಸುತ್ತಲೇ ಇರುವಂತಹ
ಕಪ್ಪು ಛಾಯೆ

ಅಗೋ!
ಅಲ್ಲೊಂದು‌ ಹೆಣ
ತೇಲಿ ಬರುತ್ತಿದೆ,
ಇದಕ್ಕೆ ಇಲ್ಲೊಂದು ಕವಿತೆ
ಸಾಕ್ಷಿಯಾಗಿದೆ,
ಮಾಧ್ಯಮ ಸುದ್ದಿಗಳ
ಬಿತ್ತರಿಕೆಯ ನಡುವೆ
ಒಂದಷ್ಟು ಕವಿತೆಗಳೂ,
ಕಥೆಗಳು, ತಂತಾನೆ
ಮಳೆಯ ಬಗ್ಗೆ
ಹೇಳಿಕೊಳ್ಳುತ್ತಲೇ
ಇವೆ.

ಚಿತ್ರಕೃಪೆ:cdn1.theodysseyonline.com

Wednesday, October 11, 2017

ಇಂತನ್ನಷ್ಟೇ ಹೇಳಬಯಸಿದ್ದು!

ನನಗೆ ಮಿಂಚಾಗುವ ಬಯಕೆ,
ಭೋರ್ಗರೆದು
ಮಳೆ ಸುರಿಯುವ ಬಯಕೆ,
ಬತ್ತಿದ ನೆಲದಲ್ಲಿ
ಹಸಿರ ಬೆಳೆಯಾಗುವ ಬಯಕೆ,
ಸೋತು ಸೊರಗಿದ ಮನಗಳಲ್ಲಿ
ನೆಮ್ಮದಿಯ
ಸೆಲೆಯಾಗುವ ಬಯಕೆ

ಹೀಗೊಂದು ಆಸೆ
ನನಗೆ ಬರಬಾರದೆಂಬೇನಿಲ್ಲ
ಏಕೆಂದರೆ!
ನಾನೂ ಒಬ್ಬ ಮನುಷ್ಯ
ಮಿಂಚಾಗುವುದು,
ಮಳೆಯಾಗುವುದು,
ಬತ್ತಿದ ನೆಲದಲ್ಲಿ ಬೆಳೆಯಾಗುವುದು
ನನ್ನಿಂದಾಗದ ಕೆಲಸ.
ಮತ್ತೂ ಅದು ಹುಚ್ಚುತನದ
ಸಂಖೇತವಾಗಬಹುದು

ಹಾಗಂತ!
ನಾ ಕನಸು ಕಾಣುವುದು
ಅಪರಾಧವಾಗುವುದಿಲ್ಲ,
ಅದು ತಪ್ಪಿನ ಗುರುತಾಗುವುದಿಲ್ಲ,
ಪ್ರತಿಯೊಬ್ಬರಿಗೂ
ಒಂದೊಂದು
ಕನಸ್ಸು ಕಾಣುವ ಆಸೆಯಿರುತ್ತದೆ
ನನಗೂ ಈ ತರಹದ
ಬಯಕೆಯಿದೆ

ಹೋಗಲಿ ಬಿಡಿ! ಕಡೆಯ ಪಕ್ಷ
ನಾ ತೊಡಕಾಗಲಾರೆ,
ನಾ ಸುಳ್ಳಾಗಲಾರೆ,
ಯಾರೊಬ್ಬರನ್ನೂ
ವಂಚಿಸಿ ಖುಷಿಪಡಲಾರೆ,
ಅದರಂತೆ
ಇಲ್ಲಿನ ವ್ಯವಸ್ಥೆಗೆ
ಧಕ್ಕೆತರಲಾರೆ
ಇಗೋ! ಇಂತನ್ನಷ್ಟೇ
ಹೇಳಬಯಸಿ
ಸುಮ್ಮನಾಗುತ್ತಿದ್ದೇನೆ.

ಚಿತ್ರಕೃಪೆ: i.ytimg.com


Tuesday, October 10, 2017

ನೀ ಬರದಿರು!

ಹಸಿದ ಹೆಬ್ಬುಲಿಗಳ
ಅಬ್ಬರದ
ಕೇಕೆಗಳ ನಡುವೆ
ಅನಾಥವಾದ
ಆ ನೀಲಿ ಕಂಗಳ ಭಯವು!
ಹೆಪ್ಪುಗಟ್ಟಿ
ಥಂಡಿಯಾಗಿದೆ

ಸುಳಿಗಾಳಿಯ
ಸೆಳೆತಕ್ಕೆ ಸಿಲುಕಿದ
ಆ ತರಗೆಲೆಗಳು
ಅತ್ತಿಂದಿತ್ತ, ಇತ್ತಿಂದತ್ತ
ನರಳಾಡಿ!
ಕೊಂಚ
ಸಮಾಧಾನಗೊಂಡಿವೆ

ಆ ನುಣುಪಾದ
ಚೂಪು ಕಲ್ಲುಗಳು
ಹಿತವಾಗಿ
ಒಂದಷ್ಟು ರಕ್ತದ
ಕಲೆಗಳನ್ನು
ಗುರುತು ಮಾಡಿ
ಅಳತೆಗಾಗಿ ಕಾಯುತ್ತಿವೆ

ಒಂದಷ್ಟು
ನೋವಿನ ಚಿತ್ರಗಳು
ತಮ್ಮದೇ 
ಕಲಾಕೃತಿಗಳನ್ನು 
ತಾವೇ ಬಿಡಿಸಿ,
ಬಿಕರಿಯಾಗದೆ
ಕೊಳ್ಳುವವನಿಗಾಗಿ
ಎದುರುನೋಡುತ್ತಿವೆ

ಓ ದೇವರೆ!
ತಪ್ಪಾಗಿಯೂ ನೀನು!
ಆ ಕಾಡಿನ ದಾರಿ,
ಆ ಸುಳಿಗಾಳಿಯ ಸೆಳೆತ,
ಮತ್ತು
ಆ ನುಣುಪಾದ
ಕಲ್ಲುಗಳ ಹಾದು
ಬಿಕರಿಯಾಗೇ
ಇರುವ
ಆ ಚಿತ್ರಪಠಗಳ ಮಧ್ಯೆ
ಎಂದೆಂದಿಗೂ ನೀ
ಬರದಿರು

ಏಕೆಂದರೆ!
ನಿಮ್ಮ ನಿರ್ಮಲವಾದ
ಪಾದಗಳ
ಹೆಜ್ಜೆಗುರುತುಗಳೂ
ಸಹ!
ಹಿಮ್ಮುಖವಾಗಿ
ನಡೆದಾಡಬಹುದು.

Monday, October 9, 2017

ಮನಸ್ಸುಗಳು

ಮನಸ್ಸುಗಳು
ಮಾತನಾಡುತ್ತವೆ
ಒಂದನ್ನೊಂದು ದಿಟ್ಟಿಸಿ,
ಆಲಂಗಿಸಿ, ಉಮ್ಮಳಿಸಿ,
ವಿಷಾದಿಸಿ, ಉನ್ಮಾದಿಸಿ,
ದುಃಖಿಸಿ, ಒಮ್ಮೆ ಅತ್ತು,
ಒಮ್ಮೆ ನಕ್ಕು

ಮನಸ್ಸುಗಳು
ಸುಮ್ಮನಿರುತ್ತವೆ
ಮರುಗಟ್ಟಿದ ಮೌನ,
ಒಂಟಿತನದ ಬೇಗೆ,
ಕಾರ್ಮುಗಿಲು,
ಅಬ್ಬರ, ಕನವರಿಕೆ,
ಸೋಲಿನ ಭೀತಿ,
ಸುನಾಮಿಯ ಕೇಕೆ

ಮನಸ್ಸುಗಳು
ಕನಸ್ಸುಕಾಣುತ್ತವೆ
ಸೂರ್ಯ, ಚಂದ್ರ, ನಕ್ಷತ್ರ,
ಚಿನ್ನದ ತೇರು,
ಹೊನ್ನಿನ ಊರು,
ಸಿಂಹಾಸನ, ಕಿರೀಟ,
ರಾಜ ದರ್ಬಾರು,
ಬಿಸಿಯಪ್ಪುಗೆ, ಬರಸಿಡಿಲು,
ಹೊಂಬೆಳಕು, ಸಾವು

ಮನಸ್ಸುಗಳು ನಗುತ್ತವೆ
ಹೊಸ ಹುರುಪು,
ಹೊಸ ವಿಷಯ,
ಹೊಸ ನೋಟ,
ಹೊಸ ಉಮ್ಮಸ್ಸು,
ಹೊಸ ವೇಷ,
ಹೊಸ ಧ್ಯೇಯ
ಹೊಸ ಬಯಕೆ

ಮನಸ್ಸುಗಳು ಕರಗುತ್ತವೆ
ಖಾಲಿ ಆಕಾಶ,
ನೀರಿಲ್ಲದ ಬಾವಿ,
ಬೋಳು ಮರ,
ಒಡೆದ ಕನ್ನಡಿ,
ಕಾರ್ಗತ್ತಲು,
ಆರದ ಗಾಯ,
ಹಳೇ ಅಲೆಗಳು,
ನೀರ ಮೇಲಿನ ಸುಳಿ
ಅಳಸಿಹೋದ ಹೆಜ್ಜೆಗಳು.

ಚಿತ್ರಕೃಪೆ: i.pinimg.com