Tuesday, June 29, 2010

ಉರಿಯುವ ದೀಪದ ವೇದನೆ.!..


ಉರಿಯುತ್ತೇನೆ ದೀಪವಾಗಿ
ಅನುದಿನವು ವೇದನೆಯನ್ನು ಪಡುತ್ತ.
ಕೆಂಡವನ್ನು ಮಡಿಲಲ್ಲಿ ಸುತ್ತಿಕೊಂಡು
ರಾತ್ರಿಗಳ ಕಳೆಯುತ್ತೇನೆ.

ಇಂದು ಸಾಯುತ್ತೇನೆಂಬ
ಭಯವಿಲ್ಲ.
ನಾಳೆ ಮತ್ತೆ ಬೆಳಕಾಗುತ್ತೇನೆಂಬ
ವೇದನೆಯಿಲ್ಲ.
ಎಣ್ಣೆ ಇರುವ ತನಕ
ಬತ್ತಿಯೊಡನೆ ಬೆಳಕನ್ನು ತೋರುತ್ತೇನೆ.

ನನ್ನ ಕೆಳಗೊಂದಷ್ಟು ಕತ್ತಲಿರುವುದು
ನನಗೆ ಅರಿವಿದೆ
ಆದರೂ
ಇತರರಿಗೆ ಬೆಳಕ ತೋರುವುದು
ನನ್ನ ಧರ್ಮ.

ನನ್ನ ಜ್ವಾಲೆಯಿಂದ ಹಲವರು
ಬೆಚ್ಚಗೆ ಮೈಕಾಯಿಸಿಕೊಳ್ಳುತ್ತಾರೆ.
ತಮ್ಮ ಸಿಗರೇಟಿನ ಹೊಗೆಯಂತೆ
ಬೆಚ್ಚಗಿನ ಬಿಸಿಯನ್ನು ಹೀರಿ
ಸಂತಸ ಪಡುತ್ತಾರೆ.

ಆದರೆ ನಾನು
ಮರುಕ ಪಡುವ ಹಾಗಿಲ್ಲ.
ಚಳಿಗೊ ಮಳೆಗೊ
ಗಾಳಿಗೊ ನನ್ನ ಕಾರ್ಯವನ್ನು
ನಿಲ್ಲಿಸುವಂತಿಲ್ಲ.
ನನ್ನ ಬೆಳಕು
ಬೀರುತ್ತಲೇ ಇರಬೇಕು ಸದಾ.

ಅದೆಷ್ಟೊ ರಾತ್ರಿಗಳಿಗೆ
ಬೆಳಕಾಗಿದ್ದೇನೆ.

ಬೆತ್ತಲೆಯ ನರಳಾಟಗಳಿಗೆ.
ಸುಖಪಡುವ ಸಮಯಗಳಿಗೆ.
ಬಲಾತ್ಕಾರದ ಸನ್ನಿವೇಶಗಳಿಗೆ.
ತನ್ನ ಮಾನವನ್ನು ಕಳೆದುಕೊಂಡು
ಹತಾಶರಾಗಿ ಕುಳಿತ
ಹಲವು ಮನಸ್ಸುಗಳಿಗೆ
ನನ್ನ ಬೆಳಕನ್ನು ಬೆಳಗಿಸಿದ್ದೇನೆ.

ನಾ ಸತ್ಯವನ್ನು ಹೇಳಲು
ಸಿದ್ದನಾದರೂ ನನ್ನ ಬಾಳಿಗೆ
ಸೂರ್ಯನೆಂಬ ಬೆಳಕು ಆಗಮನವಾಗಿರುತ್ತದೆ.

ಕೇವಲ ರಾತ್ರಿಗಳನ್ನು ಬೆಳಗಲು
ಮಾತ್ರ ನನ್ನ ಉಪಯೋಗ.
ಹಗಲಿಗೆ ನನ್ನ ಅವಶ್ಯಕತೆಯಂತು
ಬರುವುದೇ ಇಲ್ಲ.
ಮತ್ತೊಂದು ರಾತ್ರಿಗಾಗಿ ಕಾಯುತ್ತೇನೆ

ನನ್ನೊಳಗಿನ ಸತ್ಯವನ್ನೊಮ್ಮೆ
ಬಿಡಿಸಿ ಎಲ್ಲರೆದಿರು
ಹೇಳಬೇಕು ಎಂದುಕೊಳ್ಳುತ್ತೇನೆ.

ನನ್ನ ಅಂಧಕಾರ
ಕಳೆದು ಹೋಗುವ ಕಾಲಕ್ಕಾಗಿ ಕಾಯುತ್ತಿದ್ದೇನೆ.
ಆ ಕಾಲ ಬರುವುದಾದರೂ ಎಂತು ???.

                                                    ವಸಂತ್

Monday, June 28, 2010

ನೀ ಬರುವೆಯಾ ಗೆಳತಿ ?...ಗೆಳತಿ…!,,
ನಿನಗಾಗಿ ನಾ
ಚಿನ್ನದ ರಥವನ್ನು ತರಲಾರೆ !.
ವಜ್ರ ವೈಡೂರ್ಯಗಳನ್ನು ತರಲಾರೆ !.
ಮುತ್ತಿನ ರಾಶಿಯೋ.
ಹೊನ್ನಿನ ಕಣಜವೋ.
ಯಾವುದನ್ನೂ ತರಲಾರೇ !.

ನೀ ಬರುವುದಾದರೆ
ಹೊಂಗೆಯ ಮರದಡಿಯಲ್ಲಿ
ಉಯ್ಯಾಲೆಯನ್ನು ಕಟ್ಟಿ.

ಬಣ್ಣದ ಹೂಗಳ
ಮಾಲೆಯನು ತಂದು
ಸೂರ್ಯ ಚಂದ್ರನನ್ನು
ಆಮಂತ್ರಣಕ್ಕೆ ಕರೆದು
ನವಿಲಿನ ನಾಟ್ಯದ ಮುಂದೆ
ಕೋಗಿಲೆಯ ಕಂಠದಿ
ಮಂಗಳವಾಡಿಸಿ.

ಹುಲ್ಲಿನ ಗುಡಿಸಲಲ್ಲಿ
ನನ್ನ ಮನವನ್ನು
ತುಂಬಿಸಿ ಕೊಳ್ಳುತ್ತೇನೆ
ನೀ ಬರುವೆಯಾ ಗೆಳತಿ ?...

                                             ವಸಂತ್

Saturday, June 26, 2010

ರಾತ್ರಿಯ ಕನಸುಗಳು..!.

ನನ್ನ ಹೃದಯದ ಬಯಲಿನಲಿ, ನಿನ್ನ
ನೆನಪುಗಳು ಚಿಗುರಾಗಿ ಅರಳಿದ್ದು..
ಎರಡು ಅಮವಾಸ್ಯೆಗಳು ಕಳೆದು
ಮೂರನೆ ಹುಣ್ಣಿಮೆಯ ಅಂತರದಲ್ಲಿ...

ಬಾವನೆಗಳು ಬಯಕೆಗಳಾಗಿ
ಆಸೆಗಳು ಹೂವಾಗಿ ಅರಳಿದಾಗ..
ನನ್ನ ನಿನ್ನ ಸಂಬಂಧದ ನಡುವೆ
ಎರಡು ಹೆಜ್ಜೆಗಳ ಅಂತರವಷ್ಟೆ ಇತ್ತು...

ಮುಂಗುರುಳು ತಿರುವುತ್ತ
ಬಾನಿನೆಡೆಗೆ ಮುಖಮಾಡಿ..
ನೋಟ ಬಾನಿನತ್ತ ಇದ್ದರೂ
ತವಕ ಪಡುವ ಮನಸ್ಸು ನನ್ನೆಡೆಗಿತ್ತು...

ಆಸೆಗಳನ್ನೇ ಇಟ್ಟಿಗೆಗಳ್ಳನ್ನಾಗಿಸಿ
ಜೀವನವೆಂಬ ಮನೆಯನ್ನು
ಚಿನ್ನದ ಬಣ್ಣದಿಂದ ಲೇಪಿಸುತ್ತಾ..
ಮೌನವಾಗಿ ಕಟ್ಟುತ್ತಿಲಿದ್ದೆ...

ಶಾಶ್ವತವಾಗಿರಲೆಂದು ಪ್ರೀತಿಯ
ಕಣ್ಣೀರನು ಸುರಿಸಿ..
ಮನೆಯ ಅಂಗಳಕ್ಕೊಪ್ಪುವ
ಹೂ ದೋಟವನ್ನು ಬೆಳೆಸುತ್ತಿದ್ದೆ......

ಮೊಗ್ಗು ಬಿರಿವ ಹೊತ್ತಿನಲ್ಲಿ
ಮನಸು ಮನಸುಗಳು ಒಂದಾದಾಗ
ಅದನ್ನು ಕಂಡು ಮನ ಮುರಿಯುವ
ಮನಸುಗಳ ಸಂಖ್ಯೆಯೇ ಹೆಚ್ಚಾಗಿರುವಾಗ...

ನಮ್ಮ ಹೂದೋಟದ ಅಂಗಳಕ್ಕೆ
ಮತ್ಯಾರನ್ನು ಅನುಮತಿಸಲಿಲ್ಲ
ನಮ್ಮ ಬಾಳಿಗೆ ನಾವೇ ಒಡೆಯರಾದೆವು
ನಮ್ಮ ಜೀವನದ ಪುಟಗಳನ್ನು ನಾವೇ ಬರೆದುಕೊಂಡೆವು...

ನಮ್ಮ ಬಾಳಿನಲಿ ಬೆಳಕನ್ನು ಬಿಟ್ಟು
ಕತ್ತಲಿಗೆ ಅವಕಾಶ ನೀಡಲಿಲ್ಲ..
ಎಲ್ಲಾ ರಾತ್ರಿಗಳಲ್ಲೂ ಹುಣ್ಣಿಮೆಯನ್ನು ಕಾಣುತ್ತಾ
ಪ್ರತಿ ರಾತ್ರಿ ಕನಸುಗಳನ್ನು ಬೆಳೆಯುತ್ತಿದ್ದೆವು...

                                                                     ವಸಂತ್

Thursday, June 24, 2010

ಸಂಜೆಯ ಸೂರ್ಯನಂತೆ ಕತ್ತಲಾಗಿ ಕಳೆದು ಹೋಗುತ್ತೇನೆ..!.

ಎದೆಯನ್ನು ಬಗೆದು
ಉತ್ತು ಹದಮಾಡಿ
ಬಿತ್ತಿದ ಬೀಜಗಳು
ಮೊಳಕೆಯೊಡೆಯಲಿಲ್ಲ...

ಬಾಳಪೈರಿಗೆ ಕಷ್ಟವೆಂಬ
ಕಣ್ಣೀರೆರೆದರೂ ಫಲಕೊಡಲಿಲ್ಲ…

ಬತ್ತದ ಬಯಕೆಗಳು
ಪೂರೈಸಲಾಗದ ಆಸೆಗಳು
ಭವದ ಬಯಲಲ್ಲಿ
ಹನಿಮಳೆಗಾಗಿ ಹಾತೊರೆಯುತ್ತವೆ…

ಜೀವಕುಲದಲ್ಲಿ ಅಪಾರ
ಆಸೆಗಳ ಹೊತ್ತು ಚಿಗುರಿದೆ
ರೆಕ್ಕೆಗಳು ಮೂಡಲಿಲ್ಲ
ಚಿಗುರುಗಳು ಅರಳಲಿಲ್ಲ…
ಆಸೆಗಳು ಬೆನ್ನಟ್ಟಿ ಬಂದಾಗ
ಬಯಕೆಯೂರಿ ನಿಂತೆ…

ಒಣಗಿ ನಿಂತ ಮರದಂತೆ
ಸೊರಗದ ಬಯಕೆಗಳಿಗೆ
ಎದೆಯೆಂಬ ಮರುಭೂಮಿಯಲಿ
ಸ್ವಾತಿ ಮಳೆ ಹನಿಗಾಗಿ
ಎದುರು ನೋಡುತ್ತೇನೆ…

ಉರಿಯುವ ಸೂರ್ಯ
ತನ್ನಾಸೆಗೆ ತಡೆಯೊಡ್ಡಿ
ಬೆವರು ಸುರಿಸುತ್ತಾನೆ…

ನಾ ಒಂಟಿಯಂತೆ ಅನಿಸಿ
ಪೂರೈಸಲಾಗದ ಆಸೆಗಳು
ಪೂರ್ಣವಾಗದ ಕನಸುಗಳು
ಅಗ್ನಿಕುಂಡವಾಗಿ ಉರಿದಾಗ…

ಸಂಜೆಯ ಸೂರ್ಯನಂತೆ
ಕಪ್ಪನೆಯ ಕತ್ತಲಾಗಿ
ಕಳೆದು ಹೋಗುತ್ತೇನೆ…

                                           ವಸಂತ್

Wednesday, June 23, 2010

ಇದೆಲ್ಲಕ್ಕೂ ಕಾರಣರಾರು ?..


ಹಾರುವ ಮೋಡಕೆ ರೆಕ್ಕೆಯ ಕಟ್ಟಿ
ತೇಲಲು ಬಿಟ್ಟವರಾರು ?
ಬೀಸುವ ಗಾಳಿಯಲಿ ಕಣ್ಣಿಗೆ ಕಾಣದ
ಉಸಿರನು ಇಟ್ಟವರಾರು ?
ಕತ್ತಲನೋಡಿಸಿ ಬೆಳಕನು ನೀಡುವ
ಸೂರ್ಯನ ನೆಟ್ಟವರಾರು ?
ತಣ್ಣಗೆ ತಣಿಸುವ ಹನಿಗಳ ಸುರಿಸುವ
ಮಳೆಯನು ಕೊಟ್ಟವರಾರು ?
ಯಾರು… ಅವರಾರು…?. ಇದೆಲ್ಲಕೂ ಕಾರಣರಾರು ?.

ತಳಕುತ ಬಳಕುತ ಕುಣಿಯುವ ನವಿಲಿಗೆ
ನಾಟ್ಯವ ಕಲಿಸಿದವರಾರು ?
ಕುಹೂ ಕುಹೂ ಎಂದು ಕೂಗುವ ಕೋಗಿಲೆಗೆ
ಕಂಠವ ಕೊಟ್ಟವರಾರು ?
ಕೆಸರಲಿ ಅರಳುವ ಕಮಲದ ಸೊಬಗಿಗೆ
ಅಂದವನಿಟ್ಟವರಾರು ?
ಸರಸರ ಹರಿಯುವ ನದಿಗಳ ಊರಿಗೆ
ದಾರಿಯ ತೋರುವರಾರು
ಯಾರು… ಅವರಾರು…?. ಇದೆಲ್ಲಕೂ ಕಾರಣರಾರು ?.

ಧಗಧಗ ಬೆಂಕಿಯ ಉಗುಳುವ ಜ್ಯಾಲೆಗೆ
ಬಿಸಿಯನು ಕೊಟ್ಟವರಾರು ?
ಬೆಟ್ಟಗಳಂತೆ ಮನೆಯನು ಕಟ್ಟಿದ
ಹಿಮವನು ಇಟ್ಟವರಾರು ?
ತಿಳಿಯದೆ ಸುತ್ತುವ ನಮ್ಮಯ ಭೂಮಿಗೆ
ಪಥವನು ತೋರುವರಾರು ?
ಇದ್ದೆಲ್ಲವ ಕಾಣಲು ಎಲ್ಲವ ತಿಳಿಯಲು
ನಮ್ಮನೆ ಕೊಟ್ಟವರಾರು ?
ಯಾರು… ಅವರಾರು…?. ಇದೆಲ್ಲಕೂ ಕಾರಣರಾರು ?.


                                                                              ವಸಂತ್
"ಇದೆಲ್ಲಕ್ಕೂ"

Tuesday, June 22, 2010

ಆ ಸಮಯವಾದರೂ ಬರುವುದೆಂತು ?.


ಕನಸೆಂಬ ಪರದೆಯ ಮೇಲೆ
ಎಷ್ಟೊಂದು ಬಣ್ಣದ ಚಿತ್ರಗಳು
ಅನುದಿನವು ಮೂಡಿಬರುತ್ತವೆ.

ಒಂದೊಂದು ದಿನವು
ಒಂದೊಂದು ರೀತಿಯ ಕಥೆಗಳು
ಜೀವನದ ವ್ಯಥೆಗಳು.

ಕೆಲವೊಮ್ಮೆ ಈ ಕನಸು
ಇನ್ನೂ ಸ್ವಲ್ಪ ಸಮಯ
ಹಾಗೇಯೆ ಇರಬಾರದೆ ಎನ್ನುತ್ತೇವೆ.

ಮತ್ತೊಮ್ಮೆ ಈ ಹಾಳಾದ
ಕನಸಾದರೂ ಯಾಕೆ ಬಂತೋ..!
ಎಂದು ಮೂದಲಿಸುತ್ತೇವೆ.

ಈ ಕನಸುಗಳಾದರೂ ಎಲ್ಲಿಂದ ಬರುತ್ತವೆ
ಎಂಬುದು ನನ್ನ ಅನುದಿನದ ಪ್ರಶ್ನೆ ?.

ನಮ್ಮೊಳಗೆ ಹಲವಾರು
ಕಥೆಗಳನ್ನು ಹೆಣೆಯುವ
ಚಾಣಕ್ಷತನದ ಮನಸ್ಸಿದೆ.

ಈ ಕಥೆಗಳಿಗೆ ಕ್ಯಾಮರಾ ಹಿಡಿಯುವ
ಕಾಣದ ಕೈಗಳ ಗುರುತುಗಳಿವೆ.

ನಿರ್ದೆಶಕನೊಂದಿಗೆ ನಿರ್ಮಾಪಕನ
ಪಾತ್ರವನ್ನು ಸಹ ತಾನೆ ನಿರ್ವಹಿಸುತ್ತದೆ.

ಅದೇ ಫಲಶೃತಿಯಾಗಿ ನಮಗೆ
ದಿನಕ್ಕೊಂದು ಸಿನಿಮಾ ನೋಡುವ ಭಾಗ್ಯ.

ಕಥೆ ಬರೆಯುವ ಬರಹಗಾರನಿಲ್ಲದೆ,
ಹಣ ಹೂಡುವ ನಿರ್ಮಾಪಕನಿಲ್ಲದೆ,
ಸನ್ನಿವೇಶವನ್ನು ನಿರ್ಧರಿಸುವ ನಿರ್ದೇಶಕನಿಲ್ಲದೆ,
ಪಾತ್ರ ವರ್ಗವು ಸಹ ಇಲ್ಲದೆಯು,
ಸಿನಿಮಾವನ್ನು ನೋಡುತ್ತೇವೆ.

ಈ ಸಿನಿಮಾನು ಸಹ
ತೀರಾ ನಮ್ಮ ಜೀವನಕ್ಕೆ
ಬಹಳ ಹತ್ತಿರವಾದುದ್ದಾಗಿರುತ್ತದೆ.

ನಮ್ಮ ಬದುಕಿನ ಚಿತ್ರಗಳನ್ನೆ ಅನುದಿನವು
ತೋರಿಸುವ ಪಾತ್ರವರ್ಗದವರಿಗೆ
ಒಮ್ಮೆಯಾದರು
ಒಂದು ಪದವಿಯನ್ನೊ !..
ಒಂದು ಪ್ರಶಸ್ತಿಯನ್ನೊ !..
ಅಥವಾ ಒಂದು ಡಾಕ್ಟರೇಟನ್ನೊ !..
ನೀಡಿ ಗೌರವಿಸಬೇಕೆಂಬುದು ನನ್ನ ಬಯಕೆ.

ಆದರೆ ಆ ಸಂದರ್ಭ ಒದಗಿಬರುತ್ತಿಲ್ಲ
ಈಗಲೂ ಸಹ ನಾನು ಕನಸಿನೊಳು
ಅನುದಿನವು ಕಾಯುತ್ತೇನೆ ?.
ಆ ಸಮಯವಾದರೂ ಬರುವುದೆಂತು ಎಂದು?.

                                                           ವಸಂತ್

Sunday, June 20, 2010

ಮುಂಗಾರಿನಲ್ಲಿ ಜೊತೆಯಾದ ಪ್ರಣಯ ಪಕ್ಷಿಗಳು.ನಾ ನಿನ್ನ ಕಂಡದ್ದು
ಬಸ್ಟಾಂಡಿನಲ್ಲೇ ಆದರೂ
ನನ್ನೊಳಗೊಂದು ಪ್ರೀತಿಯ ಬೀಜವು
ರೂಪು ಗೊಂಡದ್ದು ಅದೇ ಸ್ಥಳದಲ್ಲಿಯೇ ?.
ಎಂಬುದ್ದನ್ನು ನಾ ಎಂದು ಮರೆಯುವುದಿಲ್ಲ.

ನನಗಾಗಿ ನೀನು ನಿನಗಾಗಿ ನಾನು
ಎಂದೂ!. ಕಾದು ಕುಳಿತವರಲ್ಲ.
ಆ ದಿನ ಸುರಿದ ಮುಂಗಾರಿನ ಮಳೆಯಲ್ಲಿ
ರಭಸದಿಂದ ಸಿಡಿದ ಸಿಡಿಲಿಗೆ  
“ಬೆಚ್ಚಿ” ನೀನು ನನ್ನ ತೋಳಿನ ತೆಕ್ಕೆಯಲಿ
ಸದಾ ಬಂದಿಯಾಗುತ್ತೀಯಾ ಎಂದು
ನಾನು ಕನಸಕಂಡಿರಲೇ ಇಲ್ಲ.

ಸದಾ ಜನ ಜಂಗುಳಿಯಿಂದ ತುಂಬಿದ್ದ
ನಿಲ್ದಾಣ ಒಂದರಲ್ಲಿ  
ನಮ್ಮ ಪ್ರೇಮ ಪೂರಾಣಕ್ಕೊಂದು
ಮುನ್ನುಡಿಯನು ಬರೆಯಲು  
ನಿಂತುಹೋಗಿದ್ದ ಮುಂಗಾರೇ
ಸಾಕ್ಷಿಯಾಗುವುದೆಂದು  ನಾ ಅಂದುಕೊಂಡಿರಲಿಲ್ಲ?.
ನೀನು ಬುತ್ತಿಯಲ್ಲಿ ತರುತ್ತಿದ್ದ ಅನ್ನದಲ್ಲಿ
ನನಗೂ ಪಾಲಿದೆಯೆಂದು ನಾನು
ಎಂದೂ ಅರಿತಿರಲಿಲ್ಲ.

ನಿನಗಾಗಿ ನಾ ಅನುದಿನವು ಕಾಯುತ್ತಿದ್ದೆ.
ನೀ ಕಾಣದಿದ್ದಾಗ ಪರಿತಪಿಸುತ್ತಿದ್ದೆ.
ನಿನ್ನ ಬಗ್ಗೆ ಹಲವಾರು ಕನಸುಗಳನ್ನು ಕಾಣುತ್ತಿದ್ದೆ.
ಒಮ್ಮೊಮ್ಮೆ
ಆ ನಿನ್ನ ಕಣ್ಣುಗಳಿಗೆ
ಆ ನಿನ್ನ ನಾಚಿಕೆಗೆ
ಆ ನಿನ್ನ ಮುನಿಸಿಗೆ
ಆ ನಿನ್ನ ಓಲೈಕೆಗೆ ಸೋತು ಕರುಗುತ್ತಿದ್ದೆ.
ನೀ ಒಂದು ಕ್ಷಣ ತಡವಾಗಿ ಬಂದರು
ಏನನ್ನೊ ಕಳೆದುಕೊಂಡೆನೆಂಬ
ಬಾವನೆ ನನ್ನಲ್ಲಿ ಸದಾ ಹುಚ್ಚುಹಿಡಿಸುತ್ತಿತ್ತು.

ಆದರೆ
ನಮ್ಮಿಬ್ಬರ ಜೀವನದ ಪುಟಗಳನ್ನು
ಆ ದೇವರೆ ಬರೆಂದತ್ತಿತ್ತು.
ಯಾಕೆಂದರೆ ?.
ನಾವಿಬ್ಬರು ತಬ್ಬಲಿಗಳಾಗಿದ್ದೆವು.
ಬಾಳ ಪಯಣ ಬಹಳ 
ದೂರವೆಂದು ತಿಳಿದಿದ್ದರು 
ಚಿಂತಿಸುವ ಅಗತ್ಯವಂತು ಇರಲಿಲ್ಲ.
ಎದುರಿಸಿ ಗೆಲ್ಲುವ ಚೈತನ್ಯವನು
ರೂಡಿಸಿಕೊಳ್ಳಬೇಕಿತ್ತು.

ಇಂದಲ್ಲ ನಾಳೆ
ನಮಗೂ ಒಂದು ಸುಂದರ
ಕನಸೊಂದು ಕಾಣಬಹುದು.
ಅದರಲ್ಲಿ ನಾನು ಷಹಜಹಾನ್
ನೀನು ಮುಂತಾಜ್
ನಾವಿಬ್ಬರು ಪ್ರೀತಿಯಿಂದಲೇ
ಪ್ರೇಮದ ಗುಡಿಯನ್ನು ನಿರ್ಮಿಸಲ್ಲಿದ್ದೆವು.

ನಮ್ಮ ಜೀವನದಲ್ಲಿ ಬರುವ ಕಷ್ಟ ಸುಖಗಳನ್ನು
ಪಾಲುಮಾಡಿಕೊಳ್ಳುತ್ತಿದ್ದೆವು.
ಅದು ಕಣ್ಣೀರಾದರು ಸಹ
ಅಂಚಿಕೊಳ್ಳಲು ಸಿದ್ದರಿದ್ದೆವು.
ನಮಗೂ ಒಂದು ಬದುಕಿದೆ
ಆ ಬದುಕಿಗೆ ಒಂದು ಸುಂದರ ಗುಡಿಯನ್ನು
ಕಟ್ಟಬೇಕೆಂಬ ಆಲೋಚನೆಗಳಿಗೆ
ಒಪ್ಪುವ ಮನೆಯನ್ನು ಕಟ್ಟಿ ಅದಕ್ಕೊಪ್ಪುವ 
ಬಣ್ಣವನ್ನು ಬಳಿದು ಸುಂದರ ಗೊಳಿಸಿ 
ಅಚ್ಚುಕಟ್ಟಾದ ಮನೆಯಾಗಿಸಿ
ನಮ್ಮ ಕನಸುಗಳನು ಬೆಳೆಯಲು ತಯಾರಾಗಿದ್ದೆವು.

                                                                    ವಸಂತ್

Saturday, June 19, 2010

ಮುಕ್ತಿ ಯಾವಾಗ ತಿಳಿಸುತ್ತೀರಾ?.


ಸತ್ತ ದೇಹದಲಿ
ಬಚ್ಚಿಟ್ಟ ಆಸೆಗಳನ್ನು ಹೊತ್ತು
ಹಗಳಿರುಳು ಅಲೆದಲೆದು
ಮುಕ್ತಿ ಕಾಣದೆ
ಪ್ರೇತವಾಗಿ ಅಲೆಯುತ್ತಿದ್ದೇನೆ.

ಹಸಿ ಹಸಿಯಾದ ಆಸೆಗಳು
ಬಿಸಿಯಾಗಿ ಉಕ್ಕುತ್ತವೆ
ಹನಿ ಹನಿ ನೀರಿನಂತೆ
ಸೋರಿ ಹೋದರು
ಯಾರಿಗು ಕಾಣುತ್ತಿಲ್ಲ.

ಬತ್ತದ ಬಯಕೆಗಳು
ಬವಣೆಗಳಾಗಿ ನನ್ನನ್ನು
ಬಯಲು ಸೀಮೆಗೆ ಎಳೆದೊಯ್ಯುತ್ತಿವೆ.

ದಾರಿಯ ತುಂಬೆಲ್ಲ ರಕ್ತಹರಿದರು
ಕೇಳುವರಂತು ಯಾರು ಇಲ್ಲ ?.

ನಾ ಬಾಳಲಾರೆ !.
ಬಾಳೋಣವೆಂದರೆ ಸತ್ತು
ಗೋರಿಯಾಗಿದ್ದೇನೆ.

ಕೊಳೆತು ನಾರುತಿಹ
ದೇಹವಾದರು
ಜೀವ ಪಡೆಯಲು ಸಾದ್ಯವೇ?.

ಇದು ನಿಜ.!

ನಾನು ಬದುಕಿದಷ್ಟು ದಿನ
ಆಕಾಶಕ್ಕೆ ಏಣಿ ಇಟ್ಟು
ಏರಿಹೋಗಲು ಹವಣಿಸುತ್ತಿದ್ದೆ.

ಮೋಡಗಳಲ್ಲಿ ಮನೆಯನ್ನು ಕಟ್ಟಿ
ಸವಿ ಸವಿಯಾದ ಕನಸುಗಳನ್ನು
ಬೆಳೆಯಲು ನಿರ್ಧರಿಸಿದ್ದೆ.

ಸೂರ್ಯನನ್ನು ಪ್ರೀತಿಸಿ
ಮದುವೆಯಾಗಲು ಪರಿತಪಿಸುತ್ತಿದ್ದೆ.

ಚಂದಿರನ ಅಂಗಳದಲ್ಲಿ
ಹನೀಮೂನ್ ಗೆ ಹೋಗಲು
ರೆಡಿಯಾಗಿದ್ದೆ.

ಗಾಳಿಗೆ ಗಾಳಹಾಕಿ
ಆಕಾಶವನ್ನೆ ಸೀರೆಯನ್ನಾಗಿಸಿ
ಉಟ್ಟುಕೊಳ್ಳಲು ಹಾತೊರೆಯುತ್ತಿದ್ದೆ.

ಆದರೆ ನನ್ನ ಕನಸುಗಳು
ಕನಸಾಗಿಯೇ ಉಳಿದಿವೆ
ಮುಕ್ತಿಯಾವಾಗ ತಿಳಿಸುತ್ತೀರಾ ?????.

                                                   ವಸಂತ್

Friday, June 18, 2010

ಬದುಕಲು ಸಹ ಬವಣೆಯನು ಪಡುತ್ತಾ ??.


ನಾನೊಂದು ಬಣ್ಣದ ಪಕ್ಷಿಯಾಗಿ
ಆಗಸದಲ್ಲಿ ಹಾರಬೇಕೆಂದುಕೊಳ್ಳುತ್ತೇನೆ.
ಆದರೆ ನಾ ಹಾರುವ ಮುನ್ನವೆ
ನನ್ನ ರೆಕ್ಕೆಗಳು ಬೇಟೆಗಾರನ ಬಿಲ್ಲಿಗೆ
ತುಂಡಾಗಿ ಭೂಮಿಗೆ ಬೀಳುತ್ತವೆ.

ನಾನೊಂದು ಸುಂದರ ಹೂವಾಗಿ
ಅರಳ ಬೇಕೆಂದುಕೊಳ್ಳುತ್ತೇನೆ.
ಆದರೆ ನಾ ಅರಳುವ ಮೊದಲೆ
ಶ್ರೀಮಂತರ ಮನೆಯ
ಮೇಜಿನ ಬೊಕ್ಕೆಯಾಗಿರುತ್ತೇನೆ.

ನಾನೊಂದು ಅಂದದ ಮರವಾಗಿ ಬೆಳೆದು
ತಂಪಾದ ಗಾಳಿ ನೆರಳನ್ನು
ನೀಡ ಬೇಕೆಂದುಕೊಳ್ಳುತ್ತೇನೆ.
ನಾ ಬೆಳೆಯುವ ಮೊದಲೆ
ಮಾನವನ ಆಯುಧಕ್ಕೆ ಬಲಿಯಾಗಿ
ಕೆಳಗೆ ಬಿದ್ದು ಕಟ್ಟಿಗೆಯಾಗುತ್ತೇನೆ.

ನಾನೊಂದು ಚೆಂದದ ಕವನವಾಗಿ
ಅರಳಿ. ಎಲ್ಲರ ಮನವನ್ನು
ತಲುಪ ಬೇಕೆಂದುಕೊಳ್ಳುತ್ತೇನೆ.
ನಾ ಓದಿಸಿಕೊಳ್ಳುವ ಮೊದಲೇ
ಅಹಾರದ ಪೊಟ್ಟಣವಾಗಿ
ಕಸದ ಬುಟ್ಟಿಯನು ಸೇರಿರುತ್ತೇನೆ.

ಇಂತಹ ಹೀನ ಸಮಾಜದಲ್ಲಿ
ಬದುಕಲು ಇಷ್ಟವಾಗದೆ
ಮಳೆಯ ಹನಿಯಾಗಿ ಸಮುದ್ರವನು ಸೇರಿ
ಹೊಳೆಯುವ ಮುತ್ತಾಗಿ ಮರೆಯಾಗುತ್ತೇನೆ.

                                                               ವಸಂತ್

Thursday, June 17, 2010

ಅಣಕು ಶಾಯರಿ...3.


11.
ಅಳಬೇಡ ಪ್ರಿಯೇ
ನಿನಗೊಂದು ತರುತ್ತೇನೆ
ಪುಷ್ಪಕ ವಿಮಾನ.
ವ್ಹಾ.......ವ್ಹಾ........
ಅಳಬೇಡ ಪ್ರಿಯೇ
ನಿನಗೊಂದು ತರುತ್ತೇನೆ
ಪುಷ್ಪಕ ವಿಮಾನ.
ವ್ಹಾ.......ವ್ಹಾ........

ಆದರೆ
ಮೇಲೆ ಹಾರಿಸಿಕೊಂಡು ಹೋಗಲು
ಸರಿಯಿಲ್ಲ ಹವಾಮಾನ...

12.
ನನ್ನವಳಿಗೆ ಬರೆಯುತ್ತೇನೆ ಅನುದಿನವು
ಒಂದು ಪ್ರೇಮ ಪತ್ರ.
ವ್ಹಾ.......ವ್ಹಾ........
ನನ್ನವಳಿಗೆ ಬರೆಯುತ್ತೇನೆ ಅನುದಿನವು
ಒಂದು ಪ್ರೇಮ ಪತ್ರ.
ವ್ಹಾ.......ವ್ಹಾ........

ಆದರೆ
ಅವುಗಳನ್ನು ಪ್ರೀತಿಯಿಂದ ಕೊಡಲು
ಹೋದಾಗ ಹೇಳುತ್ತಾಳೆ ?.
ಬರಲೇ ಬೇಡ ನೀನು ನನ್ನ ಹತ್ರ...13.
ರಾತ್ರಿಯ ಕನವರಿಕೆಯಲ್ಲು
ನಮ್ಮ ಜನಗಳು ಹೇಳುತ್ತಾರೆ
ಟೊಂಟಿ, ಪಾರ್ಟಿ, ಸಿಕ್ಸ್ಟಿ.
ವ್ಹಾ.......ವ್ಹಾ........
ರಾತ್ರಿಯ ಕನವರಿಕೆಯಲ್ಲು
ನಮ್ಮ ಜನಗಳು ಹೇಳುತ್ತಾರೆ
ಟೊಂಟಿ, ಪಾರ್ಟಿ, ಸಿಕ್ಸ್ಟಿ.
ವ್ಹಾ.......ವ್ಹಾ........


ತಪ್ಪು ತಿಳಿಯಬೇಡಿ ಇದು
ಸ್ಕೂಲಿನಲ್ಲಿ ಕಲಿತ ವಿಧ್ಯೆಯಲ್ಲ

ನಮ್ಮ ಜನಗಳು ಬಾರುಗಳಲ್ಲಿ
ಆಗಾಗ ಹೋಗಿ ಕಲಿತ
ಇಂಗ್ಲೀಶ್ ಅಕ್ಷರಗಳ ಪಟ್ಟಿ...

14.
ಆದ್ಯಾಕೋ ಗೊತ್ತಿಲ್ಲ ನನ್ನ
ಪೋನಿನಲ್ಲಿ ಹತ್ತಾರು
ಮಿಸ್ಡ್ ಕಾಲ್ಸ್.
ವ್ಹಾ.......ವ್ಹಾ........
ಆದ್ಯಾಕೋ ಗೊತ್ತಿಲ್ಲ ನನ್ನ
ಪೋನಿನಲ್ಲಿ ಹತ್ತಾರು
ಮಿಸ್ಡ್ ಕಾಲ್ಸ್.
ವ್ಹಾ.......ವ್ಹಾ........

ಹೋಗಲಿ
ಬೈದಾದರು ಬುದ್ಧಿ ಹೇಳೊಣವೆಂದರೆ
ಇರುವುದಿಲ್ಲ ಒಂದು ರೂ ಬ್ಯಾಲೆನ್ಸು...

15.
ನಿನ್ಯಾಕೆ ಹುಡುಗಿ ಪೋನಿನಲ್ಲಿ
ಮಾತಾಡುವೆ ಗಂಟೆ ಗಂಟೆ.
ವ್ಹಾ.......ವ್ಹಾ........
ನಿನ್ಯಾಕೆ ಹುಡುಗಿ ಪೋನಿನಲ್ಲಿ
ಮಾತಾಡುವೆ ಗಂಟೆ ಗಂಟೆ.
ವ್ಹಾ.......ವ್ಹಾ........

ನಿನಗ್ಯಾಕೆ ಬೇಕು
ಈ ಕಾಲದ ಪಡ್ಡೆ ಹುಡುಗರ ತಂಟೆ...

                                                              ವಸಂತ್

Wednesday, June 16, 2010

ಚೆನ್ನ ಮಲ್ಲಿಕಾರ್ಜುನ ಮಡಿಲಿಗೆ ಒಂದಷ್ಟು ವಚನಗಳು.


1.
ಮನಸು ಮನಸುಗಳೊಳಗಿನ ಮಹದೇವ
ಮೊದಲ ಸಲ ನಿನ್ನಲ್ಲಿ ನನ್ನ ಜ್ಞಾನದ ಬೀಜವನು
ಬಿತ್ತಿರುವೆ. ನನ್ನಲಿರುವ ಅಜ್ಞಾನವನು ಹೊಡೆದೊಡಿಸಿ
ಸುಜ್ಞಾನವನು ಕೊಡು ತಂದೆ ಅಯ್ಯಾ ಚೆನ್ನ ಮಲ್ಲಿಕಾರ್ಜುನ.


2.
ವಿಧಿಯ ಬರಹದ ಬಗ್ಗೆ ಯೋಚಿಸುವ ಒಬ್ಬರನು ನಾಕಾಣೆ
ತಂತ್ರ ಕುತಂತ್ರಗಳ ಹೆಣೆಯುತ್ತಾ
ಜಾರಿ ಬೀಳುವ ಜನರಿಗಾಗಿ ಕಾದು ಕುಳಿತ
ಜೇಡರಗಳನ್ನು ಶಿಕ್ಷಿಸುವುದೆಂತು ಮಲ್ಲಿಕಾರ್ಜುನ.

3.
ನಿಜವಾದ ಮಾನವರೂಪಿ ದೇಹದಲಿ
ಕಾಮವನ್ನು ಕಾಮವೇ ತಿಂದು
ಕ್ರೋದವನ್ನು ಕ್ರೋದವೇ ತುಳಿದು
ಮಧವು ಮತಿಹೀನವಾಗಿ
ಮತ್ಸರವು ಮತ್ಸರವನ್ನೆ ಮರೆತು
ಲೋಭವನು ಲಾಭವನಾಗಿಸಿಕೊಂಡು
ಮೋಹದೊಂದಿಗೆ ಎಲ್ಲಾ ಮರ್ಮಗಳು
ಮಸಣವನು ಸೇದಂತೆ ಮಲ್ಲಿಕಾರ್ಜುನ.

4.
ತಾನೂ ನಿಜವಾದ ಜ್ಞಾನವಂತನೆಂದುಕೊಳ್ಳುವವನು
ತನ್ನೊಳಗಿನ ಅಜ್ಞಾನದ ಕಿಚ್ಚಿಗೆ ಬಲಿಯಾಗಿ
ದಾರಿ ನೆಟ್ಟಗಿದ್ದರು ಅವನ ಕಣ್ಣಿಗೆ ಅದು
ಸೊಟ್ಟಗೆ ಕಾಣುವುದಲ್ಲ ಮಲ್ಲಿಕಾರ್ಜುನ.

5.
ಮನುಕುಲದ ಕಲ್ಮಶವನ್ನು ತೊಳೆಯಲು
ವಿಧಿಯೇ ಮುಂದೆ ಬಾರದಿದ್ದಾಗ ಅವರವರ
ನಂಜು ಅವರವರನ್ನೆ ಸರ್ವನಾಷವಾಗಿಸುವ
ಕಾಲ ಬಹಳ ದೂರವಿಲ್ಲವಲ್ಲ ಮಲ್ಲಿಕಾರ್ಜುನ.

                                                                     ವಸಂತ್

Tuesday, June 15, 2010

ಕತ್ತಲೊಳಗೊಂದು ದಿನ..!.


ಆ ಹೊತ್ತು
ಬೆಳಕು ಮೂಡಿರಲಿಲ್ಲ
ಕರಿಹೊತ್ತಿನ ಕೆನ್ನಾಲಿಗೆಗೆ
ಆಹುತಿಯಾಗಿದ್ದೆ.

ಕಾಣದ ಕೈಗಳು ನನ್ನನ್ನು
ಮಧುಮಂಚಕ್ಕೆ ಕರೆದೊಯ್ಯುತ್ತಿದ್ದವು.
ಅರಿಯದ ಆವೇದನೆ
ಅಡ್ಡಗಟ್ಟಿ ನಿಲ್ಲಿಸಿತ್ತು.

ಅರ್ಥಸಿಗದ ಅಕ್ಕರೆ
ಬರಸೆಳೆಯಲೆತ್ನಿಸುತ್ತಿತ್ತು.
ನಕ್ಷತ್ರಗಳೆಲ್ಲ ಇಣುಕಿ
ನನ್ನೆಡೆ ನೋಡುತ್ತಿದ್ದವು.
ಸೋಲಲೊಪ್ಪದೆ
ಗೆಲ್ಲಲಾಗದೆ
ಹೆಜ್ಜೆಗಳು ಮಾತ್ರ ಸವೆಯುತ್ತಿದ್ದವು.

ತುಟಿಗಳು ಕಂಪಿಸುತ್ತಿದ್ದವು
ತಣ್ಣನೆಯ ಗಾಳಿಗೆ
ಉಟ್ಟ ಸೀರೆಯು ನಿಲ್ಲದೆ
ಜಾರಿ ಬೀಳುತ್ತಿತ್ತು.

ಯೌವನ ಯಮರಾಯ
ಕ್ಷಣಿಕ ಸುಖಕ್ಕೆ ಮುಡಿಪಾಗದೆ
ಅರಿವಿಗೆ ಎಣ್ಣೆ ಹಚ್ಚಿ
ಸೂರ್ಯನನ್ನು ಬರಮಾಡಿಕೊಂಡೆ.

                                               ವಸಂತ್

ಚಿಂತೆಯು ಚಿತೆಯಾದಾಗ.?..

 


ನಾ ಹತ್ತಿ ಕುಳಿತಿದ್ದು
ವಿಮಾನವನ್ನಲ್ಲ !.
ಚಿಂತೆಯೆಂಬ ಚಿತೆಯನ್ನ.
ಬಾಳಿನ ಹಣತೆಗೆ
ಹಚ್ಚಲು ಎಣ್ಣೆಯಿಲ್ಲದೆ
ಬೆಳಗಲು ಬೆಂಕಿಯಿಲ್ಲದೆ
ನಿಂತ ನೆಲ ಬಿಟ್ಟು
ಹಾರಿ ಹೋಗಲು
ಮನಸ್ಸು ಮಾಡಿದೆ.
ರೆಕ್ಕೆಗಳು ಮೂಡಲಿಲ್ಲ
ಆಸೆಗಳು ಅರಳಲಿಲ್ಲ
ಸಂಬಂಧಗಳು ಸೊರಗಿ
ಒಂಟಿಯಾದೆ.
ಅಂಧವನ್ನು ಗಿರವಿಯಿಟ್ಟು
ಯೌವನದ ಕೊಳದಲ್ಲಿ
ಈಜಲು ಅನುವುಮಾಡಿದೆ.
ದೊಡ್ಡ ದೊಡ್ಡ ತಿಮಿಂಗಿಲಗಳು
ಈಜಿ ಹೋದವು.
ಮದಿಸಿದ ಆನೆಗಳು ಬಂದು
ಕುಡಿದು ಹೋದವು.
ನನ್ನ ಬಾಳು
ತರಗೆಲೆಯಂತಾಯಿತು
ಆಸರೆಗಿದ್ದ ಅರವಿ
ಹರಿದು ಹೋಯಿತು
ಕೊಳವು ಬತ್ತಿಹೋಯಿತು
ಆದರೆ
ನಾ ಹತ್ತಿದ್ದು ವಿಮಾನವನ್ನಲ್ಲ
ಚಿಂತೆಯೆಂಬ ಚಿತೆಯನ್ನ.

                                         ವಸಂತ್

ಕೊನೆಯ ಮುಟ್ಟದ ದಾರಿ.!..ಆ ದಾರಿಯಲ್ಲಿ
ಕೊನೆಯವರೆಗೆ ಯಾರು ನಡೆದವರಿಲ್ಲ ?.
ನಡೆದವರು ಕೊನೆಯ ಮುಟ್ಟಿರಲಿಲ್ಲ ?.
ಮುಟ್ಟಿದವರ ಪಾದಗಳು ಸವೆದಿರಲಿಲ್ಲ ?.
ನಡೆಯಲು ಆ ದಾರಿ ಸಾಗುತ್ತಿರಲಿಲ್ಲ ?.

ಆದರೂ ಹತ್ತಾರು ದಾವಂತ
ಮನಸ್ಸುಗಳು
ಕೋಪಗಳು
ಪ್ರತಾಪಗಳು
ಕಲಹಗಳು
ಕೋಮು ದಳ್ಳೂರಿಗಳು
ನಯವಂಚಕರ ಯೋಜನೆಗಳು
ಮುರಿದು ಬಿದ್ದ ಹಲವು ಇತಿಹಾಸಗಳು
ನಡೆಯಲೆತ್ನಿಸಿದವು
ಆದರೆ ಗುರಿಯನ್ನು ತಲುಪಲಿಲ್ಲ.

50,60,70 ರ ವಯಸ್ಸುಗಳು
ಹರಿತವಾದ ಚೂರಿಗಳು
ಹಾರೆಗಳು
ಪಿಕಾಸಿಗಳು
ಈಟಿಗಳು
ಮೊನಚಾದ ಬಿಲ್ಲುಗಳು
ಪಿರಂಗಿಗಳು
ಮದ್ದು ಗುಂಡುಗಳು
ದೊಡ್ಡ ದೊಡ್ಡ ಬಾಂಬುಗಳು
ಅಣು ಆಯುಧಗಳೆಲ್ಲವು
ನಡೆದವು
ಆದರೂ ಗುರಿ ತಲುಪಲಿಲ್ಲ.

ಭೂಕಂಪಗಳು
ಕ್ಷಾಮಗಳು
ಸುನಾಮಿ ಅಲೆಗಳು
ಜ್ವಾಲ ಮುಖಿಗಳು
ಹೊಸ ಹೊಸ ರೋಗಗಳು
ಪ್ರಯೋಗಗಳು
ಅತ್ಯಾಚಾರಗಳು
ಹತ್ಯೆಗಳು
ಅಹಂಕಾರಗಳು
ಮತ್ತಲವು ಪ್ರಯತ್ನ ಪಟ್ಟವು
ಆದರೂ ಕೊನೆಯ ಮುಟ್ಟಲಾಗಲಿಲ್ಲ.

ಈಗ ನಮ್ಮ ದೃಷ್ಟಿಯು ಸಹ
ಆ ನವಿರಾದ ದಾರಿಯಮೇಲೆ ಬಿದ್ದಿದೆ
ಒಮ್ಮೆ ಪ್ರಯತ್ನಿಸಿಬಿಡೋಣ !.
ನಮ್ಮಿಂದಾದರು ಮುಟ್ಟಲಾಗುವುದಾ ಎಂದು ?
ಪ್ರಯತ್ನಿಸಿ ನೋಡೋಣವಲ್ಲವೆ ?.

                                                               ವಸಂತ್

ಮೂಡಿಬಂದಾನೇ ಆ ನನ್ನ ಸೂರ್ಯ ?


ಬಾಳ ಬತ್ತಳಿಕೆಯಲ್ಲಿ ನಾಲ್ಕು
ಆಸೆಯ ಪೈರುಗಳನು ನೆಟ್ಟಿರುವೆ
ಚಿಗುರು ಕೊನೊರೊಡೆಯಬೇಕು
ಸರಿದು ಹೋಗುವುದೇ ಈ ಕತ್ತಲು ?

ನಾಳೆ ಉದಯಿಸುವ ಸೂರ್ಯನಿಗಾಗಿ
ವರ್ಷಗಳಿಂದ ಕಾಯುತ್ತಿರುವೆ
ಬೆಳದಿಂಗಳಾದರೂ ಬರಬಹುದಿತ್ತು ಆದರೆ
ಸೂರ್ಯನ ಮೇಲೆ ಪೂರ್ಣ ವಿಶ್ವಾಸ

ನನ್ನ ಆಸೆಗಳಿಗೆ ಜೀವ ಬಂದಲ್ಲಿ
ಆ ಪೈರುಗಳು ಚಿಗುರೊಡೆದಲ್ಲಿ
ನನ್ನ ಬವಣೆಗಳನ್ನು ಬದಿಗಿಟ್ಟು
ನೆಮ್ಮದಿಯ ಹುಡುಕ ಹೊರಡುತ್ತೇನೆ

ಆದರೂ

ನಾಳೆ ಬರುವ ಬೆಳಕಿನ ಮೇಲೆ
ಪೂರ್ಣ ವಿಶ್ವಾಸವನ್ನಿರಿಸಿಕೊಂಡಿರುವೆ
ನಾಳೆ ಮೂಡುವ ಚಿಗುರುಗಳಿಗಾಗಿ ಕಾದು ಕುಳಿತಿರುವೆ
ಮೂಡಿಬಂದಾನೇ ಆ ನನ್ನ ಸೂರ್ಯ ?                                                          ವಸಂತ್

ನನ್ನಮ್ಮ .!.


ನನ್ನಮ್ಮನ ಮಡಿಲಲ್ಲಿ
ಎಳೆಕಂದನಾಗಿದ್ದಾಗ
ಬಾನಂಗಳದಲ್ಲಿ ಚಲಿಸುತ್ತಿದ್ದ
ಮೋಡಗಳ ಕೇಳಿದ್ದೆ ?.
ನನಗಾಡಲು
ಚಂದಿರನನ್ನು ಕೊಡಿ ಎಂದು.

ಹಾರುತ್ತಿದ್ದ ಹಕ್ಕಿಗಳ
ಸ್ವಚ್ಛಂದ ಪಯಣವನು
ತಡೆಹಿಡಿದು ನುಡಿದಿದ್ದೆ ?.
ನನಗಾರಲು
ರೆಕ್ಕೆಗಳ ಕೊಡಿ ಎಂದು.

ಓಡುತ್ತಿದ್ದ ಜಿಂಕೆಗಳ
ವೇಗವನು ಅನುಸರಿಸಿ
ಓಡಲಾರದೇ ನುಡಿದಿದ್ದೆ ?.
ನನಗೋಡಲು
ಪಾದಗಳ ಕೊಡಿ ಎಂದು.

ಆದರೆ ನನ್ನಮ್ಮ
ಅಕ್ಕರೆಯೆಂಬ ಹಾಲನು ಕೊಟ್ಟು
ಮಮತೆಯೆಂಬ ಸಿಹಿ ಮುತ್ತನಿಟ್ಟು
ಜ್ಞಾನದ ದಾರಿಯನು ತೋರಿ
ನೋವಿನ ಉಯ್ಯಾಲೆಯನೇರಿ
ಹೋದವಳು ಎಲ್ಲಿಗೋ
ಇನ್ನೂ ತಿಳಿಯುತ್ತಿಲ್ಲ.

                                                 ವಸಂತ್

ಹುಟ್ಟು ಮತ್ತು ಸಾವು !..

 

"ಹುಟ್ಟು " ಎಂಬುದೊಂದು
 ಅಗೋಚರವಾದ
ಆದಾರ ಸಹಿತವಾದ
ಅನುಭೂತಿಯಾಗಿದೆ.


"ಸಾವು" ಎಂಬುದೊಂದು
ತುಂಬಾ ಬೇಸರವಾದ
ಮನಸ್ಸಿಗೆ ಬೇಡವಾದ
ನಿರಧಾರದಂತಿರುತ್ತದೆ.

ಹುಟ್ಟಿದಾಗಿನಿಂದ
ಸಾಯುವ ತನಕ
ನಮ್ಮ ಜೀವನ

ನೀರಿನಿಂದ ತೆಗೆದ

ಮೀನಿನಂತಾಗಿರುತ್ತದೆ


                                             ವಸಂತ್

ಬೆಳದಿಂಗಳ ಬಾಲೆ..!.


ಹುಣ್ಣಿಮೆಯ ರಾತ್ರಿಯಲಿ
ಬೆಳದಿಂಗಳೆಲ್ಲವನ್ನು
ಬೊಗಸೆಯಲ್ಲಿ ಬಚ್ಚಿಟ್ಟುಕೊಂಡು
ಓಡಿ ಬಾ ಪ್ರಿಯತಮ
ಎಂದು !
ಕಪ್ಪನೆಯ ಕತ್ತಲಾಗಿ ಕುಣಿಯುತ್ತಾಳೆ.

ನಾ ಬರೆಯುವ ಕವನಕ್ಕೆ
ಚುಕ್ಕಿಯನ್ನಿಟ್ಟು.
ನಿನ್ನ ಅಂತರಂಗದ ಕವನ
ನಾನೇ ಬರೆಯುವಾಗ
ಬಹಿರಂಗದ ಕವನ ನಿನಗ್ಯಾಕೆ
ಎಂದು !
ಕಾವ್ಯವಾಗಿ ಅರಳುತ್ತಾಳೆ.

ನಾ ಒಂಟಿ ಎಂದುಕೊಂಡಾಗ
ಕೈಹಿಡಿದು ಜೊತೆಗೂಡಿ
ನೀ ಒಂಟಿಯಲ್ಲ ನಾನಿರುವತನಕ
ನಾವಿಬ್ಬರು ಪ್ರಣಯ ಪಕ್ಷಿಗಳು
ಎಂದು !
ಕನಸಾಗುತ್ತಾಳೆ.

ನಾ ಹಿಂತಿರುಗಿ ನೋಡಿದಾಗ
ಒಮ್ಮೆ ತಂಗಾಳಿಯಾಗಿ
ತಣ್ಣಗೆ ಬೀಸಿ !
ಕಣ್ಮರೆಯಾಗುತ್ತಾಳೆ.

                                              ವಸಂತ್

ನೀನು ಯಾರು ?.


ಮಲ್ಲಿಗೆ ಪರಿಮಳದಲ್ಲಿ
ತಾವರೆಯ ಚಲುವಿನಲ್ಲಿ
ಮಂದಾರದ ಒಡಲಿನಲ್ಲಿ
ಮುತ್ತಿನ ತೇರಿನಲ್ಲಿ ಬಂದೇ
ನೀ ನಾರು ?

ಮುಂಗಾರಿನ ಮಿಂಚಿನಲ್ಲಿ
ಚೈತ್ರಮಾರುತದ ಅಂಚಿನಲ್ಲಿ
ನಕ್ಷತ್ರ ಮಾಲೆಯ
ಉಯ್ಯಾಲೆಯನ್ನೇರಿ ಬಂದೇ
ನೀ ನಾರು ?

ಕೋಗಿಲೆಯ ರಾಗದಲ್ಲಿ
ನಲಿವಿನ ನಾಟ್ಯದಲ್ಲಿ
ಸ್ವರ್ಣಗೀತೆ ಕಾವ್ಯದಲ್ಲಿ
ಕುಣಿಯುತ್ತ ಬಂದೇ
ನೀ ನಾರು?

ಮಧುಮಾಸದ ಸಂಜೆಯಲ್ಲಿ
ರವಿಮುಳುಗಿದ ನಸುಕಿನಲ್ಲಿ
ಬಿದಿಗೆ ಚಂದ್ರಮನ ಬೆಳಕಿನಲ್ಲಿ
ನನ್ನ ಹೃದಯವ ತುಂಬಿಕೊಂಡೆ
ನೀ ನಾರು ?

                                                 ವಸಂತ್

ನಿನ್ನ ಅದೃಷ್ಟವಂತನ ಹೆಸರಾದರೂ ಏನು? ನನ್ನ ಗೆಳತಿ!!!,...


ಮುಸ್ಸಂಜೆಯ ಹೊತ್ತಿನಲ್ಲಿ
ಸಹ್ಯಾದ್ರಿ ಮಡಿಲಲ್ಲಿ
ಹಸಿರು ಕುಪ್ಪಸ ತೊಟ್ಟು
ಬಂಡೆಗಲ್ಲಿನ ಮೇಲೆ ನಿಂತು
ಕಾಯುತ್ತಿದ್ದಾದರು ಯಾರಿಗಾಗಿ ನನ್ನ ಗೆಳತಿ?.

ಮಂಜು ಹನಿಯ ಹೊಲದಲ್ಲಿ
ಇಬ್ಬನಿಯ ಮಾಲೆ ಧರಿಸಿ
ಒದ್ದೆಯಾದ ನಿನ್ನ ಮುಖದಲ್ಲಿ
ಮುಚ್ಚಿ ತೆರೆಯುತ್ತಿದ್ದ ಆ ನಿನ್ನ ಕಣ್ಣುಗಳು
ಹುಡುಕುತ್ತಿದ್ದಾದರೂ ಯಾರಿಗಾಗಿ ನನ್ನ ಗೆಳತಿ?.

ನಾನು ಕೊಟ್ಟ ನವಿಲುಗರಿಯನ್ನು ತೆಗೆದುಕೊಂಡು
ನಿನ್ನ ಪುಟ್ಟ ಸೈಕಲ್ಲನ್ನೇರಿ
ಶರಾವತಿ ದಂಡೆಯ ಮೇಲೆ
ನಿನ್ನ ಸ್ನೇಹಿತರ ಜೊತೆಗೂಡಿ
ನನ್ನೆಡೆಗೆ ಸನ್ನೆಮಾಡಿ
ಹೇಳುತ್ತಿದ್ದ ಮಾತುಗಳಾದರೂ ಯಾವುವು ನನ್ನ ಗೆಳತಿ?.

ನಿನಗಾಗಿ ನಾ ಬಂದಾಗ ?
ಬಾಳೆ ದಿಂಡುಗಳಿಂದ ಶೃಂಗರಿಸಿದ
ಮದುವೆಯ ಮಂಟಪದಲ್ಲಿ
ನೀ ತಲೆಬಾಗಿ ಕಟ್ಟಿಸಿಕೊಂಡಿದ್ದ
ಮಂಗಳ ಸೂತ್ರವ ಕಟ್ಟಿದ
ನಿನ್ನ ಅದೃಷ್ಟವಂತನ ಹೆಸರಾದರೂ ಏನು? ನನ್ನ ಗೆಳತಿ!!!,...

                                                                                              ವಸಂತ್

ಉತ್ತರಗಳನ್ನು ಹುಡುಕುತ್ತಾ ?


ಕನಸು ಕಾಣುವ ಹೊತ್ತಿನಲಿ
ಬಂದು ಸಾಗುವ ವರ್ಣಗಳು
ಕಪ್ಪು ಬಿಳಿಯ ಪರದೆಯಲಿ
ವರ್ಣ ರಂಜಿತ ಚಿತ್ರಗಳು
 ಅರ್ಥವಾಗುವಂತೆ ?
ಅರ್ಥವಾಗದಂತೆ ?
ಬಂದು ಸಾಗುವ ದೃಷ್ಯಗಳು

ಬದುಕಿನ ಬವಣೆಗಳು
ಕಾಣದ ವೇದನೆಗಳು
ವಿಷಾದದ ಅಲೆಗಳು
ಹಳಿದುಹೋದ ಆಸೆಗಳು
ಮುಗಿದುಹೋದ ಪಯಣಗಳು

ಕಳೆದುಹೋಗದ ಬದುಕುಗಳು
ಸಾಲು ಸಾಲು ಸಾವುಗಳು
ಕೊಳೆತು ನಾರುವ ಶವಗಳು
ತುತ್ತು ಕಾಣದ ದೇಹಗಳು
ಇಂಗಿಹೋದ ಕಣ್ಣುಗಳು
ಹೆಕ್ಕಿ ಸಾಗುವ ರಣಹದ್ದುಗಳು

ತುಂಬಿ ತುಳುಕುವ ಪಾಪದ ಕೊಡಗಳು
ಸತ್ತರು ಸಾಯಲಾಗದ ಭಗ್ನ ಹೃದಯಗಳು
ಹಳಿದುಳಿದ ಆಸೆಗಳಿಗಾಗಿ
ಕಾದು ಕುಳಿತ ಪ್ರೇತಗಳು
ಅರ್ಧಂಬರ್ದ ಸುಟ್ಟ ಪ್ರೇಮ ಪತ್ರಗಳು
ಮುಕ್ತಿ ಸಿಗದ ಮೂಡ ನಂಬಿಕೆಗಳು
ಮುಸಿ ಮುಸಿ ನಕ್ಕು ಸಾಗುವ
ಮಲೆಯ ಮಾರುತಗಳು

ಅರ್ಥವಾಗದ ಹೊತ್ತಿನಲಿ
ವ್ಯರ್ಥ ವ್ಯರ್ಥವಾಗಿ
ಬಂದು ಸಾಗುವ ಕನಸುಗಳಿಗೆ
ಉತ್ತರಗಳನ್ನು ಹುಡುಕುತ್ತಾ ಸಾಗುತ್ತೇನೆ
ಸಾವಿರಾರು ಪ್ರಶ್ನೆಗಳು
ನನ್ನ ಕನಸುಗಳನ್ನು ಕದಡಿ
ಪ್ರಶ್ನೆಗಳನ್ನಾಗಿಸಿ
ಮುಸಿ ಮುಸಿ ನಕ್ಕು ಸಾಗುತ್ತವೆ
ಉತ್ತರಗಳನ್ನು ಹುಡುಕುತ್ತಾ ?

ಕನಸಿನ ಮನೆ..!.


ಕನಸಿನ ಮನೆಯೊಂದನ್ನು
ಕಟ್ಟಲು ನಿರ್ದರಿಸಿರುವೆ.
ಬೆಲೆ ಎಷ್ಟಾದರು ಚಿಂತೆಯಿಲ್ಲ!
ಭಾವನೆಗಳನ್ನಾದರು ಮಾರಿ
ನಿರ್ಮಿಸಲೇ ಬೇಕೆಂಬ ಹೆಬ್ಬಯಕೆ.
ಭಾವನೆಗಳನ್ನು?
ಕೊಳ್ಳುವವರು ಯಾರು?.
ಹರಾಜು ಮಾರುಕಟ್ಟೆಯೊಂದನ್ನು
ತೆರೆಯಲೇ ಬೇಕು.
ಇಲ್ಲಿ ಎಲ್ಲಾ ರೀತಿಯ
ಭಾವನೆಗಳನ್ನು
ಬಯಕೆಗಳನ್ನು
ಅಪರೂಪದ ಅನುಬಂಧಗಳನ್ನು
ಮಾರಲಾಗುತ್ತದೆ ಎಂಬ
ದೊಡ್ಡ ದೊಡ್ಡ ಬೋರ್ಡುಗಳನ್ನು
ಬರೆಯಿಸಬೇಕು.
ನನ್ನ ಚಿಂತೆ ನನ್ನೊಂದಿಗೆ
ಮಾತನಾಡಿ.!.
ನೀನು ಕಟ್ಟುವುದು
ಕನಸಿನ ಮನೆ
ಭಾವನೆಗಳ ಅಡಿಪಾಯ ಬೇಕು.
ಅನುಬಂಧದ ಗೋಪುರಗಳು ಬೇಕು.
ನೆನಪುಗಳೆಂಬ ಚಾವಣಿ ಬೇಕು.
ಹೀಗಿರುವಾಗ
ಎಲ್ಲವನ್ನು ಮಾರಿ
ಮನೆಕಟ್ಟಲು ಆಸಾದ್ಯ?...
ಉತ್ತರಿಸಲಾರದಂತಹ ಪ್ರಶ್ನೆ?.
ಮರು ಉತ್ತರವಿಲ್ಲದೆ
ಕನಸಿನ ಲೋಕದಿಂದ ನಿರ್ಗಮಿಸಿದೆ.
                                                       ವಸಂತ್

Monday, June 14, 2010

ಪುರಾವೆಗಳಿಲ್ಲದ ರಾತ್ರಿಯಲ್ಲಿ..!.


ಕಾಡು ಕಣಿವೆ ಹಾದಿಯಲ್ಲಿ
ಬೆಳದಿಂಗಳನ್ನು ಜೊತೆಯಾಗಿಟ್ಟುಕೊಂಡು
ನಿನ್ನ ಸೇರಲೆಂದು ನಾ ಬಂದೆ...!
ನೀನಿಲ್ಲದ ಮನೆಯಲ್ಲಿ ನಿನ್ನ ನೆನಪುಗಳು ಮಾತ್ರ
ಮೌನವಾಗಿ ವೇದನೆ ಪಡುತ್ತಿದ್ದವು.

ಅವುಗಳನ್ನೆ ಓದಲು ಕುಳಿತೆ..
ಒದ್ದೆಯಾಗಿದ್ದ ಕಣ್ಣೀರೊಂದು
ನಿಲ್ಲು ನಿಲ್ಲು ಎಂಬಂತೆ ತಡವರಿಸಿದಂತ್ತಿತ್ತು...

ಅನಾಥವಾಗಿ...!  ಒಡೆದು ಹೋಳಾಗಿ ಬಿದ್ದಿದ್ದ
ಹೃದಯದ ಚೂರೊಂದಕ್ಕೆ
ಘಳಿಗೆಯೊಂದು ಸಮಾಧಾನ ಪಡಿಸುತ್ತಾ
ಮುಟ್ಟಿ ಮುಟ್ಟಿ ಸಂತೈಸುತ್ತಿತ್ತು..!

ಬಿಸಿಯುಸಿರ ಬಿಕ್ಕಳಿಕೆಯೊಂದು
ಕಳೆದುಹೋದ ಸಮಯವನ್ನು
ಲೆಕ್ಕಾಚಾರ ಮಾಡಿಕೊಂಡು ಸಾಗುತ್ತಿತ್ತು...

ಜೇಡರ ಬಲೆಗಳು ಇಲಿ ಹೆಗ್ಗಣಗಳು
ಅಲ್ಲಿದ್ದ ಎಲ್ಲಾ ವಿವರಗಳನ್ನು
ದಾಖಲು ಪಡಿಸಿಕೊಂಡು ಹೋಗುತ್ತಿದ್ದವು...

ದೂರದಲ್ಲಿದ್ದ ಕನ್ನಡಿಯೊಳಗಿಂದ
ಮಸುಕಾದ ಆಕೃತಿಯೊಂದು
ತನ್ನ ವೇದನೆಯನ್ನು ಹೇಳಲೆತ್ನಿಸುತ್ತಿತ್ತು...

ಅನಾಥವಾಗಿ ಬಿದ್ದಿದ್ದ ಬಾಚಣಿಗೆಯೊಂದಕ್ಕೆ
ಒರಟುಗಟ್ಟಿ ಸುತ್ತಿದ್ದ  ಕೂದಲನ್ನು ಬಿಡಿಸಲಾಗದೆ
ಒಂದೇ ಸಮನೆ ವೇದನೆ ಪಡುತ್ತಿತ್ತು...

ಬಣ್ಣ ಕಳೆದುಕೊಂಡಿದ್ದ ಬಿಂದಿಗಳು
ಒಡೆದು ಚೂರಾಗಿದ್ದ ಬಳೆಯ ಚೂರುಗಳು
ಯಾವುದೋ ಕಥೆಯನ್ನು ಹೇಳುತ್ತಿದ್ದವು...

ಪಕ್ಕದಲ್ಲಿದ್ದ ಮಂಚದಿಂದ
ಮುಲುಗುವಿಕೆಯೊಂದು ಕೇಳಿಬರುತ್ತಿತ್ತು...

ಪ್ರತಿಯೊಂದು ಪುರಾವೆಗಳು
ಅರ್ಧ ಸತ್ಯ ಇನ್ನರ್ಧ ಸುಳ್ಳನ್ನು ಹೇಳುತ್ತಿದ್ದವು...

ಭಾರವಾದ ಹೃದಯದಿಂದ
ನನ್ನ ಬಯಕೆಗಳನ್ನು ಬೆಳದಿಂಗಳಿಗೆ ತಿಳಿಸಿ
ಕತ್ತಲಲ್ಲಿ ಕನಸಾಗಿ ಕರಗಿ ಹೋಗುತ್ತೇನೆ....!.
                                                                      ವಸಂತ್

Sunday, June 13, 2010

ಅಣಕು ಶಾಯರಿ...2.


6.
ಆದ್ಯಾಕೆ ಹುಡುಗಿ ?.
ನನ್ನ ಕೆಂಪು ವಸ್ತ್ರವ ಕಂಡರೆ ಸಾಕು
ನಿನ್ನೊಳಗೆ ಒಂದು ರೀತಿಯ
ಭಯ ಭಕ್ತಿ ಆನಂದ.
ವ್ಹಾ.......ವ್ಹಾ........
ಆದ್ಯಾಕೆ ಹುಡುಗಿ ?.
ನನ್ನ ಕೆಂಪು ವಸ್ತ್ರವ ಕಂಡರೆ ಸಾಕು
ನಿನ್ನೊಳಗೆ ಒಂದು ರೀತಿಯ
ಭಯ ಭಕ್ತಿ ಆನಂದ.
ವ್ಹಾ.......ವ್ಹಾ........


ಹೇಳಿ ಬಿಡು ಗೊತ್ತಾಗುತ್ತಿಲ್ಲ ?.
ನನ್ನ ಮುಖದಲ್ಲೇನಾದರು ಕಾಣುತ್ತಾನ
ಆ ನಿತ್ಯಾನಂದ...


7.
ನಾನು ಪ್ರೀತಿಸುತ್ತಿದ್ದ ಪ್ರತಿ ಹುಡುಗೀರ
ಮುಖ ನೋಡಿ ಹೇಳುತ್ತಿದ್ದೆ
ನಿನ್ನ ಮುಖ ಐಶ್ವರ್ಯಾ ರೈ.
ವ್ಹಾ.......ವ್ಹಾ........
ನಾನು ಪ್ರೀತಿಸುತ್ತಿದ್ದ ಪ್ರತಿ ಹುಡುಗೀರ
ಮುಖ ನೋಡಿ ಹೇಳುತ್ತಿದ್ದೇ
ನಿನ್ನ ಮುಖ ಐಶ್ವರ್ಯಾ ರೈ.
ವ್ಹಾ.......ವ್ಹಾ........

ಇದರಿಂದಲೆ ಏನೋ ?.
ಅವರೆಲ್ಲ ಹೇಳಿ ಹೋಗುತ್ತಿದ್ದರು ನನಗೆ
ಬಾಯ್ ಬಾಯ್...

8.
ನಿನ್ನ ಕಣ್ಣ ನೋಟಕ್ಕೆ ಸೋತು
ನಾನು ಅನುದಿನವು ಬಿದ್ದು ಏಳುತ್ತಿದ್ದೆ.
ವ್ಹಾ.......ವ್ಹಾ........
ನಿನ್ನ ಕಣ್ಣ ನೋಟಕ್ಕೆ ಸೋತು
ನಾನು ಅನುದಿನವು ಬಿದ್ದು ಏಳುತ್ತಿದ್ದೆ.
ವ್ಹಾ.......ವ್ಹಾ........

ಆದರೆ
ನಿನ್ನ ಜೊತೆಗೆ ನಿನ್ನ
ಗಂಡನನ್ನು ಕರೆತಂದಾಗ
ನಾನು ಹೇಳದೆಯೆ ಬಿದ್ದೆ...

9.
ಅಳಬೇಡ ಹುಡುಗಿ
ನಾನೇನು
ಮಾಡಲು ಸಾಧ್ಯವಿಲ್ಲ !.
ವ್ಹಾ.......ವ್ಹಾ........
ಅಳಬೇಡ ಹುಡುಗಿ
ನಾನೇನು
ಮಾಡಲು ಸಾಧ್ಯವಿಲ್ಲ !.
ವ್ಹಾ.......ವ್ಹಾ........

ನಿನ್ನಪ್ಪನ ಬಳಿಗೋಗು ಕೇಳು
ಕೊಡಿಸುತ್ತಾನೆ
ಪೆನ್ನು ಪುಸ್ತಕಗಳನ್ನೆಲ್ಲ...

10.
ನಿನ್ನ ಕಂಡರೆ ನನಗೆ ಕಾಣುವುದು
ಮಂಜು ಮುಸುಕಿದ ನೀಲಿ ಆಕಾಶ.
ವ್ಹಾ.......ವ್ಹಾ........
ನಿನ್ನ ಕಂಡರೆ ನನಗೆ ಕಾಣುವುದು
ಮಂಜು ಮುಸುಕಿದ ನೀಲಿ ಆಕಾಶ.
ವ್ಹಾ.......ವ್ಹಾ........

ಕಾರಣ ತಿಳಿಯಲಿಲ್ಲ ?.
ಆದರೂ
ಡಾಕ್ಟರ್ ಬಳಿ ಕೇಳಿದಾಗ
ಅವರೆಂದರು
ನಿನ್ನ ಕಣ್ಣನಲ್ಲಿದೆ ದೃಷ್ಟಿದೋಷ..

                                                         ವಸಂತ್

ನಾನೇಕೆ ಕರೆಯಬೇಕು ಇವುಗಳ ಹೆಸರುಗಳನಿಡಿದು ?..

ನಾನೇಕೆ !....
ಚಂದಿರನನ್ನು ಚಂದಿರ ಅನ್ನಬೇಕು ?.
ಸೂರ್ಯನನ್ನು ಸೂರ್ಯನೆನ್ನಬೇಕು ?.
ಗಾಳಿಯನ್ನು ಗಾಳಿ ಅಂತಲು ?.
ಮಳೆಯನ್ನು ಮಳೆ ಅಂತಲು ಅರ್ಥವಾಗುತ್ತಿಲ್ಲ ?.

ನನ್ನ ಭಾವನೆಗಳ ಆಳದಲ್ಲಿ ಹೊಳೆಯುತ್ತಿದ್ದ
ಚಂದಿರ ಕಲ್ಲಾಗಿ ಹೋಗಿರುವಾಗ ?
ನನ್ನ ಶೃಂಗಾರವನ್ನು ಬೀಗಿ ಬೆಳಗುತ್ತಿದ್ದ
ಸೂರ್ಯ ಕತ್ತಲಾಗಿ ಹೋಗಿರುವಾಗ?
ಮುಂಜಾನೆಯ ತಂಪನ್ನು ತರುತ್ತಿದ್ದ
ತಿಳಿಗಾಳಿ ಮಾಯವಾಗಿ ಹೋಗಿರುವಾಗ ?.
ಮುಂಗಾನ್ನು ಸುರಿಸುತ್ತಿದ್ದ ಮಳೆ
ನಿಂತೇ ಒಣಗಿರುವಾಗ ?.
ನಾನೇಕೆ ಇವುಗಳ ಹೆಸರಿಡಿದು ಕರೆಯಬೇಕು?.

ನನ್ನ ದೌರ್ಭಾಗ್ಯವನ್ನು ಕಂಡು
ಕಾಲ ಮುಂದೆ ಹೋಗುವ ಬದಲು
ಹಿಂದೆ ಹಿಂದೆ ಸುತ್ತಿದಂತಿದೆ ?.
ನನ್ನ ಕನಸುಗಳು
ರಾತ್ರಿ ಅರಳುವ ಬದಲು
ಹಗಲೇ ಬಿತ್ತರಗೊಳ್ಳುತ್ತವೆ.
ಹಗಲಿನಲ್ಲೇ ರಾತ್ರಿಯನ್ನು ಕಂಡರೆ
ನನ್ನ ಬದುಕಿನಲ್ಲಿ ಬೆಳಕು ಮೂಡಲು ಸಾಧ್ಯವೇ ?.

ನಾ ನಂಬಿಬಂದ ಜೀವನ ನನ್ನದಾಗಲಿಲ್ಲ
ನಾ ನೆಟ್ಟ ಗಿಡದಲ್ಲಿ ಹೂಗಳು ಅರಳಲಿಲ್ಲ
ನಾ ಕಟ್ಟಿದ ಮನೆ ಮನೆಯಾಗಲೇ ಇಲ್ಲ
ನನ್ನ ಬಯಕೆಗಳು ಚಿಗುರೊಡೆಯಲಿಲ್ಲ
ನಾ ಹಚ್ಚಿಟ್ಟ ಹಣತೆ ಕಡೆಯವರೆಗು ಬೆಳಗಲೇ ಇಲ್ಲ
ಮತ್ಯಾಕೆ ನಾನು ಹೆಸರಿಡಿದು ಕರೆಯಬೇಕು?.

ನನ್ನ ಅಭ್ಯಾಗ್ಯ ಬದುಕಿನಲ್ಲಿ
ಬೆಳದಿಂಗಳಿಗಾಗಿ ಕಾಯುತ್ತೇನೆ ?
ನನ್ನ ದೌರ್ಭಾಗ್ಯ ಜೀವನದಲ್ಲಿ
ಬೆಳಕಿಗಾಗಿ ಕಾಯುತ್ತೇನೆ ?.
ನನ್ನ ಜೀವನದ ಮುಂಜಾನೆಯಲ್ಲಿ
ತಣ್ಣನೆಯ ಗಾಳಿಗಾಗಿ ಕಾಯುತ್ತೇನೆ ?.
ನನ್ನ ಎದೆಯೆಂಬ ಬರಡು ಭೂಮಿಗೆ
ಮುಂಗಾರಿನ ಮಳೆಗಾಗಿ ಕಾಯುತ್ತೇನೆ
ಬಂದಾದರೆ ಬರಲಿ
ಆಗಲೇ ಕರೆಯುತ್ತೇನೆ ಅವರವರುಗಳ ಹೆಸರುಗಳನ್ನಿಡಿದು !..

Saturday, June 12, 2010

ಮುದುಡಿಹೋದ ಮಲ್ಲಿಗೆ...!

ದಾರಿ ಸವೆಯುತ್ತದೆ
ದೇಹವು ದಣಿಯುತ್ತದೆ
ನಡೆನಡೆದು ಸಾಗುತ್ತೇನೆ
ಹೆಜ್ಜೆ ಗುರುತುಗಳು ಮಾತ್ರ ಮೂಡುವುದಿಲ್ಲ.

ಬಿರು ಬಿಸಿಲು ಕಳೆದು
ಸಂಜೇಗತ್ತಲಾದರು
ಬಿಸಿಯುಸಿರ ಧಗೆ ಮಾತ್ರ
ತಣ್ಣಗಾಗಿರಲಿಲ್ಲ.

ಕಪ್ಪಗಿನ ಮಬ್ಬಿನಲ್ಲು
ಕೆಂಡ ಸಂಪಿಗೆಯಂತೆ ಧಗಧಗಿಸಿ
ಕತ್ತಲನ್ನು ಕಂಡು ಕೆಕ್ಕರಿಸುತ್ತಾ
ಬೆದರಿಸಿ ಹೋಡಿಸುವಂತ್ತಿತ್ತು.

ದೇಹ ಮಾತ್ರ ಸುಟ್ಟಿರಲಿಲ್ಲ
ಹಸಿವು ಕೂಡ ಇಂಗಿರಲಿಲ್ಲ
ನನ್ನ ನಡುಗೆ ಮತ್ತಷ್ಟು ಬಿರುಸುಗೊಂಡು
ಓಡಿ ಹೋಗಲು ಕಾತರಿಸುತ್ತಿತ್ತು.

ಉರಿವ ಚಿತೆಯನ್ನು
ಮಡಿಲಲ್ಲಿ ಸುತ್ತಿಕೊಂಡು
ಹನಿ ನೀರಿಗಾಗಿ
ಅತ್ತಿತ್ತ ಅಲೆದಾಡುತ್ತೇನೆ.

ಸುಟ್ಟು ಕರಕಲಾದ ಕನಸುಗಳು
ಒಡೆದುಹೋದ ಮನಸ್ಸುಗಳು
ಒದ್ದೆಯಾದ ಕಣ್ಣುಗಳು
ಗುರುತು ಮೂಡದ ಹೆಜ್ಜೆಗಳು
ಕದಲಲಾಗದ ಬಯಕೆಗಳು
ತೆವಳಲಾಗದ ಆಲೋಚನೆಗಳು
ಮುಗಿಸಲಾರದ ಪಯಣಗಳು ಅಡ್ಡಗಡ್ಡಿ ನಿಲ್ಲಿಸುತ್ತವೆ.

ಬದುಕಿನ ಆಶಾಕಿರಣಕೆ
ನೆಮ್ಮದಿ ಸಿಗದಿದ್ದಾಗ
ಹಿತ್ತಲಲ್ಲಿ ಉರಿವ ಚಿತೆಯೋಳಗೆ
ಮುದುಡಿಹೋದ ಮಲ್ಲಿಗೆಯಾಗಿ ಕಳೆದು ಹೋಗುತ್ತೇನೆ.

                                                                         

ನಿತ್ಯಾನಂದನ ಆನಂದ ಪುರಾಣ...

    ನಿತ್ಯಾನಂದ ಹೆಸರೆ ಸೂಚಿಸುವಂತೆ ಸದಾ ಹಸನ್ಮುಖಿ "ನಿತ್ಯ ಆನಂದವನ್ನು ಅನುಭವಿಸುವವನು" ಎಂಬ ಅರ್ಥವನ್ನು ಮೂಡಿಸುತ್ತದೆ. ಇಷ್ಟೊಂದು ಕಿರಿತನದ ವಯಸ್ಸಿನಲ್ಲೆ ಸಾಧನೆ, ಖ್ಯಾತಿ, ಲಕ್ಷಾಂತರ ಭಕ್ತಸಮೂಹ, ಧಾರ್ಮಿಕ ಕೇಂದ್ರಗಳು, ಅಧ್ಯಾತ್ಮ, ಚಿಂತನೆ, ಯೋಗ ಇದೆಲ್ಲವನ್ನು ಗಳಿಸಬೇಕೆಂದರೆ ಅದು ಸಾಮಾನ್ಯರಿಗೆ ಸಾಧ್ಯವಾದ ಮಾತಲ್ಲ. ತನ್ನ ಚಿಕ್ಕ ವಯಸ್ಸಿನಲ್ಲೆ ಹಿರಿಯರಿಂದ ಆರ್ಶಿವಾದ ಪಡೆದು ಜ್ಞಾನ, ಯೋಗ, ಆಧ್ಯತ್ಮದ ಕಡೆ ಒಲವನ್ನು ಬೆಳೆಸಿಕೊಂಡು ತನ್ನ 32ನೇ ವಯಸ್ಸಿಗೆ ಇದು ದೊಡ್ಡದೊಂದು ಸಾಧನೆಯೇ ಸರಿಯೆನ್ನಬಹುದು. ದೇಶ ವಿದೇಶಗಳಲ್ಲಿನ ಅಪಾರ ಭಕ್ತ ಸಮೂಹ ಮತ್ತು ಧಾರ್ಮಿಕ ಕೇಂದ್ರಗಳನ್ನು ಗಳಿಸಿಕೊಂಡಿರುವ ಹಿರಿಮೆ ಸಾಧಾರಣ ವಿಷಯವಲ್ಲ. ಆದರೆ ಅಷ್ಟೇ ಬೇಗ ಅಪಖ್ಯಾತಿಗೆ ನಿತ್ಯಾನಂದ ಗುರಿಯಾಗುತ್ತಾನೆಂದು ಯಾರು ಊಹಿಸಿರಲಿಲ್ಲ.

        ನಿತ್ಯಾನಂದನ ಬೋಧನೆಯಲ್ಲಿ ಮೊದಲಿಗೆ ಕಾಮ, ಕ್ರೋದ, ಮಧ, ಮಾತ್ಸರ್ಯಗಳಿಂದ ದೂರವಿರಬೇಕು. ನಮ್ಮ ಮನಸ್ಸನ್ನು ನಮ್ಮ ಹಿಡಿತದಲ್ಲಿ ಬಂಧಿಸಿಕೊಂಡಿರಬೇಕು. ಸ್ನೇಹ, ಸಹಬಾಳ್ವೆ, ಅಧ್ಯಾತ್ಮ, ಚಿಂತನೆಗಳನ್ನು ಮೈಗೂಡಿಸಕೊಳ್ಳಬೇಕು. ಸದಾ ದೇವರಲ್ಲಿ ನಂಬಿಕೆಯನ್ನು ಇಟ್ಟುಕೊಂಡಿರಬೇಕು, ಹಿರಿಯರಿಗೆ ಗೌರವ, ಮಾತೆಯರಲ್ಲಿ ಮಮತೆಯನ್ನು ಕಾಣಬೇಕು. ಇಂತಹವು ನಿತ್ಯಾನಂದನ ಅನುದಿನದ ನಿತ್ಯ ಪ್ರವಚನವಾಗಿತ್ತು. ಈ ಪ್ರವಚನಗಳು ಪ್ರವಚನಗಳಂತಿದಿದ್ದರೆ ಇಲ್ಲಿ ಯಾರು ನಿತ್ಯಾನಂದನ ಬಗ್ಗೆ ಚಕಾರವೆತ್ತುತ್ತಿರಲಿಲ್ಲ. ಆದರೆ ಇವನ ಸನ್ನಿದಾನದಲ್ಲಿ ರಾತ್ರಿ ಕಳೆದರೆ ಆನಂದ ರಾತ್ರಿಗಳು. ಸಿನಿಮಾ ನಟಿಯರ ಜೋತೆ ಚಕ್ಕಂದ ಪ್ರಣಯಗಳು. ಸಾಧ್ವಿಗಳ ಜೊತೆ ಲೈಂಗಿಕ ಕ್ರಿಯೆಗಳು. ರಾಸಲೀಲೆಗಳಿಗೆ ಗೌಪ್ಯ ಒಪ್ಪಂದಗಳು. ವಿಧವೆಯರು ಮತ್ತು ವಿದೇಶಿ ಯುವತಿಯರನ್ನು ಬಳಸಿಕೊಂಡು ಮಾಡುತ್ತಿದ್ದ ಕಾಮ ಕೇಳಿಗಳು. ಮತ್ತು ಇನ್ನುಳಿದ ಹಲವು ರಾತ್ರಿಯ ವ್ಯವಹಾರಗಳನ್ನು ಆತನ ಭಕ್ತ (ಕಾರುಚಾಲಕ) "ಲೆನಿನ್" ತನ್ನ ರಹಸ್ಯ ಕ್ಯಾಮರಾ ಬಳಸಿ ಸೆರೆಹಿಡಿಯದೆ ಹೋಗಿದಿದ್ದರೆ ಇನ್ನೂ ಹಲವು ದಿನಗಳ ಕಾಲ ನಿತ್ಯಾನಂದನ ಆನಂದದ ಕಾಮ ಕೇಳಿಗಳು ಸಾಗುತ್ತಿತ್ತೇನೊ ಅಲ್ಲವೆ?. ಕಡೆಗೆ ನಿತ್ಯಾನಂದನನ್ನು ಹಿಮಾಚಲ ಪ್ರೆದೇಶದ ಸೋಲನ್ ಜಿಲ್ಲೆಯ ಮಾಂಗ್ಲಿಕ್ ಎಂಬ ಗ್ರಾಮದಲ್ಲಿ ಸಿಐಡಿ ಪೋಲಿಸರು ತನ್ನ ಸಹಚರರ ಜೋತೆಗೆ  ನಿತ್ಯಾನಂದನ ನಗುಮುಖದೊಂದಿಗೆ ಕರೆತಂದರು.

      ತಮಿಳುನಾಡು ಮತ್ತು ಕರ್ನಾಟಕದ ಬಿಡದಿ ಆಶ್ರಮಗಳಲ್ಲಿ ನಿತ್ಯಾನಂದ ನಡೆಸುತ್ತಿದ್ದ ಸೆಕ್ಸ್ ದಂಧೆಗಳು ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿದಂತೆ ನಿತ್ಯಾನಂದ ಸ್ವಾಮಿ ಅಜ್ಞಾತ ಸ್ಥಳಕ್ಕೆ ಪರಾರಿಯಾಗಿದ್ದ. ನಿತ್ಯಾನಂದನ ಪ್ರಕಾರ ನನ್ನ ಮೇಲೆ ನನಗಾಗದವರು ನಡೆಸುತ್ತಿರುವ ಒಳಸಂಚು. ನನ್ನ ತಪ್ಪು ಇದರಲ್ಲೇನು ಇಲ್ಲ ನಾನು ನಿರಪರಾಧಿ ಎಂದು. ಕೇವಲ ಇಂಟರ್ ನೆಟ್ ನಲ್ಲಿ ಸಂದರ್ಶನಗಳನ್ನು ನಡೆಸುತ್ತಿದ್ದ. ಪತ್ರಿಕಾ ಹೇಳಿಕೆಗಳನ್ನು ಕೊಡುತ್ತಾ ಆಗಾಗ ಕಾಣಿಸಿಕೊಳ್ಳುತ್ತಿದ್ದ. ತನಗೆ ಯಾವ ಪಾಪವು ಗೊತ್ತಿಲ್ಲವೆಂದರೆ ಯಾಕೆ ಓಡಿ ಹೋಗಿ ಆಜ್ಞಾತವಾಗಿರಬೇಕು ಎಂಬ ಪ್ರಶ್ನೆ? ಎಲ್ಲರಲ್ಲು ಎದ್ದು ಕಾಣುತ್ತದೆ. ನಿತ್ಯಾನಂದನ ಆಶ್ರಮಕ್ಕೆ ಭೇಟಿ ನೀಡುತ್ತಿದ್ದ ವಿದೇಶಿ ಭಕ್ತೆಯರು ಮತ್ತು ಸಂಸಾರದ ತೊಳಲಾಟಗಳಿಂದ ನೊಂದು ಬಂದ ಗೃಹಿಣಿಯರು, ಸಾಧ್ವಿಯರನ್ನು ಮತ್ತು ಅಪ್ರಾಪ್ತ ವಯಸ್ಕ ಬಾಕಕಿ ಬಾಲಕಿಯರ ಜೊತೆ ತಾಂತ್ರಿಕ ಸೆಕ್ಸ್ ದಂಧೆಯನ್ನು ನಡೆಸುತ್ತಿದ್ದ ಎನ್ನಲಾಗಿದೆ.

        ಕನ್ನಡ ಮತ್ತು ತಮಿಳು ಚಿತ್ರರಂಗದ ಚಿತ್ರ ನಟಿಯರ ಜೊತೆ ಪೋನಿನ ಸಂಬಾಷಣೆಗಳು ಮತ್ತು ತಮಿಳು ಚಿತ್ರ ರಂಗದ ಚಿತ್ರನಟಿ ರಂಜಿತಾಳ ಜೊತೆ ನಡೆದ ಕಾಮ ಕೇಳಿಯನ್ನು ದೇಶವೆ ನೋಡಿ ದಂಗಾಗಿತ್ತು. ಇದು ಸಭ್ಯರು ಮಾಡುವ ಕೆಲಸನಾ ಎಂದರೆ ? ಯಾವ ಹುತ್ತದಲ್ಲಿ ಯಾವ ಹಾವಿರುತ್ತದೊ ಯಾರಿಗೆ ಗೊತ್ತು ಎಂಬ ಅರ್ಥದಲ್ಲಿ ಎಲ್ಲರು ಮಾತನಾಡಿಕೊಳುತ್ತಿದ್ದರು. ರಂಜಿತಾಳ ಪ್ರಕಾರ ನಾನು ಅವರ ಭಕ್ತೆ ಅವರ ಸೇವೆ ಮಾಡುವುದರಿಂದ ನನ್ನಲಿದ್ದ ಖಾಯಿಲೆಗಳೆಲ್ಲ ಗುಣವಾಯಿತು ಎನ್ನುತ್ತಾಳೆ. ಸ್ವಾಮಿಜಿಯ ಸೇವೆ ಮಾಡಿದರೆ ಯಾರು ತಾನೆ ಕೇಳುತ್ತಾರೆ. ಅವರ ಜೊತೆಯಲ್ಲಿನ ಚಕ್ಕಂದದ ದೃಶ್ಯಗಳು ಇಂಟರ್ ನೆಟ್ ನಲ್ಲಿ ಹರಿದಾಡುತ್ತಿವೆಯಲ್ಲ ಇದನ್ನು ಸುಳ್ಳು ಎಂದು ನಂಬಬೇಕೆ? ಅಥವಾ ನಿಜವೆನ್ನಬೇಕೆ ಜನರೆ ಹೇಳಬೇಕಿತ್ತು. ಹೇಳುವುದೊಂದು ಮಾಡುವುದೊಂದು ಎಂದು ನಡೆದವರಿಗೆ ಇಂತಹ ಶಿಕ್ಷೆ ಆಗಬೇಕು ಬಿಡಿ ಎನ್ನುವುದು ಜನ ಅಭಿಪ್ರಾಯ. ತನ್ನ ಪಂಚ ಇಂದ್ರಿಯಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲಾಗದವನು. ಪ್ರಪಂಚಕ್ಕೆ ಯಾವ ಸಂದೇಶವನ್ನು ಸಾರುತ್ತಾನೆ. ಈಗ ಕಳೆದುಕೊಂಡಿರುವ ಮಾನವನ್ನು ಕೊರ್ಟಿನಲ್ಲಿ ಪಡೆದುಕೊಂಡರು ಸಮಾಜದ ಮುಂದೆ ತನ್ನ ಕಳಂಕ ತೊಳೆದುಕೊಂಡು ತಲೆಯತ್ತಿ ನಡೆಯಲು ಸಾದ್ಯವಿದೆಯೆ ? "ಆಡಿಕೆಗೆ ಹೋದ ಮಾನ ಆನೆ ಕೊಟ್ಟರು ಬರುವುದಿಲ್ಲ" ಎಂಬ ನಾಡುನುಡಿ ನಿತ್ಯಾನಂದನಿಗೆ ಒಪ್ಪುವಂತಿದೆ.

      ನಮ್ಮ ಹಲವು ಸ್ವಾಮಿಜೀಗಳಿಗೆ ಪ್ರವಚನಗಳನ್ನು ಹೇಳುವುದಕ್ಕೆ ಟೈಮಿಲ್ಲ. ಈ ಸಮಯದಲ್ಲಿ ಕಂಪ್ಯೂಟರ್ ಇಂಟರ್ ನೆಟ್ ಎಂದು ಯಾರು ಅಷ್ಟಾಗಿ ತಲೆಕೆಡಿಸಿ ಕೊಳ್ಳುತ್ತಿಲ್ಲ. ಆದರೆ ನಿತ್ಯಾನಂದನಿಗೆ ಅನುದಿನವೂ ಇಂಟರ್ ನೆಟ್ ದೆ ಧ್ಯಾನ. ತಾನು ಮಾಡುವ ಗುಟ್ಟಾದ ಕಾರ್ಯಗಳನ್ನು ಕಂಪ್ಯೂಟರ್ ನಲ್ಲಿ ರೆರ್ಕಾಡ್ ಮಾಡುತ್ತಿದ್ದ ಎನ್ನುವ ವಿಷಯಗಳು ಗುಟ್ಟಾಗಿ ಹುಳಿಯಲಿಲ್ಲ. ತನ್ನ ಭಕ್ತರುಂದದ ಜೊತೆ ಇಂಟರ್ನೆಟ್ಟಿಗೂ ಸಕಲ ಪೂಜೆಗಳು ಸಲ್ಲುತ್ತಿದ್ದವು ಎನ್ನಬಹುದು ಅಲ್ಲವೆ. ಅವೆಕ್ತ ದೈವೀ ಅನುಭೂತಿ ಎಂದು ಪುರಾತನ ಗ್ರಂಥಗಳಲ್ಲಿ ಉಲ್ಲೆಖವಿದೆ ಎಂದು ಲೈಂಗಿಕ ಭಂಗಿಗಳನ್ನು ಸ್ತ್ರೀ ಪುರುಷ ಮತ್ತು ಪುರುಷ ಪುರುಷರ ಸಂಭೋಗ ಮತ್ತು ನಗ್ನದೃಶ್ಶಗಳನ್ನು ಮಹಿಳೆ ಮತ್ತು ಪುರುಷರಿಗೆ ತೋರಿಸಿ ಅವರಿಗೆ ಕಾಮ ಪ್ರಚೋದನೆಯನ್ನು ಮಾಡಿ ಉದ್ರೇಕಿಸುವ ಮಾಹಿತಿಗಳೆಲ್ಲವು ಸಿಐಡಿ ಪೋಲಿಸರಿಗೆ ಲಭ್ಯವಾಗಿದೆ. ಆಶ್ರಮದಲ್ಲಿನ ಕಂಪ್ಯೂಟರ್ ಹಾರ್ಡ್ ಡಿಸ್ಕ್ ಗಳಲ್ಲಿನ ಗುಪ್ತ್ ಗುಪ್ತ್ ಮಾಹಿತಿಗಳು ಮತ್ತು ಪೋಟೊಗಳ ಸಮೇತ ಸಿಕ್ಕಿಬಿದ್ದಿದ್ದು ಮತ್ತು ತಾಂತ್ರಿಕವಾಗಿ ಸೆಕ್ಸ್ ದಂಧೆಗೆ ಹುಡುಗ ಹುಡುಗಿಯರನ್ನು ಬಳಸಿಕೊಳ್ಳುತ್ತಿದ್ದ ಎನ್ನುವ ವಿಷಯಗಳ ಅಗತ್ಯ ಮಾಹಿತಿ ಮತ್ತು ದಾಖಲೆಗಳ ಸಮೇತ ಲಭ್ಯವಾಗಿರುವುದು ಪ್ರಮುಖ ಆಧಾರವಾಗಿದೆ.

     ಹೀಗಿರುವಾಗ ಮಧುವೆಯನ್ನು ಮಾಡಿಕೊಂಡು ಎಷ್ಟೊ ಸ್ವಾಮಿಗಳು ಉತ್ತಮವಾದ ಆದರ್ಶಗಳನ್ನು ಪಾಲಿಸಿಕೊಂಡು ಮಠಗಳನ್ನು ನಡೆಸುತ್ತಿದ್ದಾರೆ. ಅದರೆ ನಿತ್ಯಾನಂದನ ಕದ್ದು ಮುಚ್ಚಿ ಮಾಡಿದ ಕಾರ್ಯಗಳಿಂದ ಎಷ್ಟೊಂದು ರಾದ್ದಂತವಾಯಿತು ಇದನ್ನು ಯಾರುತಾನೆ ಕ್ಷಮಿಸುತ್ತಾರೆ ಹೇಳಿ? ನಿತ್ಯಾನಂದನ ಈ ವ್ಯಾಮೋಹ ಮೊದಲಿನಿಂದ ಇದ್ದಿದ್ದರೆ ಮದುವೆಯನ್ನು ಮಾಡಿಕೊಂಡೆ ಈ ಕಾರ್ಯಕ್ಕೆ ಕೈಹಾಕಬಹುದಿತ್ತು. ಆದರೆ ಅದು ಹಾಗುವ ಕಾರ್ಯವಲ್ಲ. ಒಂದು ರೀತಿಯಲ್ಲಿ ನಿತ್ಯಾನಂದನ ಕಿರಿತನದ ಸಾಧನೆ ಮತ್ತು ಇವನ ಜೀವನ ವೃತ್ತಾಂತವನ್ನು ಮೆಚ್ಚಲೇ ಬೇಕು. ಮತ್ತು ಇವನನಿ ಪ್ರವಚನಗಳಲ್ಲಿ ಒಳ್ಳೆಯ ಆದರ್ಶಗಳು ಮತ್ತು ಒಳ್ಳೆಯ ಗುಣಗಳು ಇತ್ತು ಎಂದು ಸಹ ಸಭೀತಾಗಿದೆ. ಆದರೆ ಇವರು ಮಾಡುವ ಕಾರ್ಯಗಳು ಎಂತಹವು ಎಂದರೆ "ಮಾಡುವುದು ಅನಾಚಾರ ಮನೆಮುಂದೆ ಬೃಂದಾವನ" ವೆಂಬುದು ಆಗಬಾರದಿತ್ತು. ಇನ್ನು ಮುಂದೆ ನಿತ್ಯಾನಂದ ಸ್ವಾಮಿಗೆ ದೇವರು ಒಳ್ಳೆಯ ಬುದ್ಧಿಯನ್ನು ದಯಪಾಲಿಸಲಿ ಎಂದು ಆಶಿಸುತ್ತಾ ಮತ್ತು ಮುಂದೆ ನಿತ್ಯಾನಂದ ಯಾವ ದಾರಿಯನ್ನು ಕಂಡುಕೊಳ್ಳಲಿದ್ದಾನೆ ಎಂಬುದನ್ನು ಕಾದು ನೋಡುತ್ತಾ....

ಮನುಷ್ಯ ಎಂದರೆ ?.

ಮನುಷ್ಯ ಎಂದರೆ ?
ಯೋಚಿಸುವ ತಿಳುವಳಿಕೆ
ಯುಳ್ಳವನು.

ಮನುಷ್ಯ ಎಂದರೆ ?
ರೋಗ ರುಜನೆಗಳ
ಮಾಂಸದ ಮುದ್ದೆ.

ಮನುಷ್ಯ ಎಂದರೆ ?
ಮೂಳೆ ಚರ್ಮಗಳ
ಮಿಶ್ರಣ.

ಮನುಷ್ಯ ಎಂದರೆ ?
ಪ್ರಾಣಿ ಪಕ್ಷಿಗಳಿಗಿಂತಲೂ
ಹೀನವಾದ ಮುಖವಾಡ.

ಮನುಷ್ಯ ಎಂದರೆ ?
ಮಾನವ ಸಂಭಂದಗಳ
ಸರಮಾಲೆ.

ಮನುಷ್ಯ ಎಂದರೆ ?
ಆಹಂಕಾರದ ಪರಮಾವದಿ.

ಮನುಷ್ಯ ಎಂದರೆ ?
ತನ್ನೋಳಗೆ ತಾನೆ ಕುದಿಯುವ
ಜ್ಯಾಲಾಮುಖಿ.

ಮನುಷ್ಯ ಎಂದರೆ ?
ತನ್ನ ನಾಶವನ್ನು ತಾನೇ
ಕಾಣದ ಅಂಧ....

                                        ವಸಂತ್

                                       

Friday, June 11, 2010

ಜೀವನದ ಪಯಣ .!..

ಬದುಕು ಒಂದು ಪಾಠದಂತೆ
ಜೀವನದುದ್ದಕ್ಕು ಕಲಿತರು
ತೀರದ ದಾಹ ನಮ್ಮನ್ನು
ಪ್ರಶ್ನೆಯಾಗಿ ಕಾಡುತ್ತಲೇ ಇರುತ್ತದೆ.

ಬದುಕಿನ ಪುಟಗಳು
ಒಂದೊಂದೆ ತೆರೆದುಕೊಳ್ಳುವಾಗ
ಸಂತೋಷದ ಅಲೆಗಳು
ದುಃಖ ದುಮ್ಮಾನದ ಕರಿ ನರಳುಗಳು
ರೋಷ ಆವೇಶದ ಮಜಲುಗಳು
ತೇಲುತ್ತಾ ಮುಳುಗುತ್ತ
ನಿರಂತರವಾಗಿ ಸಾಗುತ್ತವೆ.

ಅಡೆ ತಡೆಗಳೆಷ್ಟೊ
ಆದರೆ ಗುರಿ ತಲುಪುವ ತವಕ
ರೆಕ್ಕೆಗಳಿಲ್ಲದಿದ್ದರು
ರೆಕ್ಕೆಗಳಾಗಿಸುವ ಪ್ರಯತ್ನ !
ಹಾರಿ ಹೋಗಲು ಪಕ್ಷಿಗಳಲ್ಲವಲ್ಲ
ವಿಮಾನಗಳಾಗುತ್ತೇವೆ.

ನಿರಂತರ ಪ್ರಗತಿಯಲಿ ಸಾಗುತ್ತಾ
ನಮ್ಮ ಪಯಣ ಎಲ್ಲಿಗೆ ?
ನಮ್ಮ ದಿಕ್ಕು ಯಾವಕಡೆ ?
ನಾವು ನಮ್ಮ ನಿರೀಕ್ಷಿತ ಗುರಿಯನ್ನು ತಲುಪುತ್ತೇವ ?
ಎಂಬ ಹಲವು ಪ್ರಶ್ನೆಗಳು ನಮ್ಮನ್ನು
ಮರೀಚಿಕೆಯಾಗಿ ಕಾಡುತ್ತವೆ.

ಜೀವನದ ಪುಟಗಳು
ಸವೆಯುತ್ತ ಸವೆಯುತ್ತಾ
ಮರೆವು ನಮ್ಮನ್ನು ಆವರಿಸುತ್ತದೆ.
ಓದದೆ ಉಳಿದ ಪುಟಗಳಲಿ
ಮಂಜು ಕವಿಯುತ್ತದೆ.
ಯೋಚಿಸುವ ಮನಸ್ಸು ಮಂಕಾಗುತ್ತದೆ.
ಅಂಧಕಾರ ನಮ್ಮನ್ನು ಹಂತ ಹಂತವಾಗಿ
ಆವರಿಸುತ್ತಾ ಬರುತ್ತದೆ.

ಕಡೆಯಲ್ಲಿ ಜೀವನವನ್ನು
ಪೂರ್ತಿ ಓದಲಾಗದೆ ?
ಓದಿರುವುದು ಅರ್ಥವಾಗದೆ ?
ನಮ್ಮ ಜೀವನದ ಅಧ್ಯಾಯವನ್ನು
ಅರ್ಧಕ್ಕೆ ಮುಚ್ಚಿ
ಹೊರಟು ಹೋಗುತ್ತೇವೆ.

                                             ವಸಂತ್

ಅಣಕು ಶಾಯರಿ...1.

1.

ಒಂದು ಮುತ್ತಿಗಾಗಿ
ಹಗಳಿರುಳು ಕಾದೆ
ವ್ಹಾ... ವ್ಹಾ..

ಒಂದು ಮುತ್ತಿಗಾಗಿ
ಹಗಳಿರುಳು ಕಾದೇ
ವ್ಹಾ... ವ್ಹಾ..

ಅದು ಸಿಗದ ಕಾರಣ
ಒಂದೇ ಕ್ಷಣದಲ್ಲೆ ಕುಡಿತಕ್ಕೆ
ದಾಸನಾದೇ.

2.

ಜೀವನದಲ್ಲಿ ಆಸೆಗಳು
ನೂರು ನೂರು
ವ್ಹಾ... ವ್ಹಾ..

ಜೀವನದಲ್ಲಿ ಆಸೆಗಳು
ನೂರು ನೂರು
ವ್ಹಾ... ವ್ಹಾ..

ಅವು ಬರುವುದಾದರೆ ಜೊತೆಗೆ
ರಲಿ ಒಂದು ಚಿನ್ನದ ತೇರು.

3.

ಲವ್ ಮಾಡೋ ಮುಂಚೆ ?
ನಂದೆ ಕಾರುಬಾರು.
ವ್ಹಾ... ವ್ಹಾ..

ಲವ್ ಮಾಡೋ ಮುಂಚೆ ?
ನಂದೆ ಕಾರುಬಾರು.
ವ್ಹಾ... ವ್ಹಾ..

ಲವ್ ಮಾಡಿದ ಮೇಲೆ
ಆವಳದ್ದು "ಕಾರು".
ನಂದು "ಬಾರು".

4.

ನಕ್ಕರೆ ಜೋರಾಗಿ ನಕ್ಕು ಬಿಡು
ನಾ ಜೋತೆಯಾಗಿ ಇರುವೆ.
ವ್ಹಾ... ವ್ಹಾ..

ನಕ್ಕರೆ ಜೋರಾಗಿ ನಕ್ಕು ಬಿಡು
ನಾ ಜೋತೆಯಾಗಿ ಇರುವೇ.
ವ್ಹಾ... ವ್ಹಾ..

ನೀ ನಕ್ಕಾಗ ಕಾಣದಿದ್ದ ನಿನ್ನ
ಹಲ್ಲುಗಳ ಕಂಡು
ನಾ ಇನ್ನು ಬರುವೆ.

5.

ನಡೆದು ಸಾಗುತಿದ್ದೆ ನೀನು
ನಮ್ಮ ಮನೆ ಮುಂದೆ
ವ್ಹಾ... ವ್ಹಾ..

ನಡೆದು ಸಾಗುತಿದ್ದೆ ನೀನು
ನಮ್ಮ ಮನೆ ಮುಂದೆ
ವ್ಹಾ... ವ್ಹಾ..

ಆದರೆ ನೀ
ನಡೆದದ್ದಾರು ಏಕೆ ?.
ನನ್ನಪ್ಪನ ಹಿಂದೆ.Wednesday, June 9, 2010

ಮುನ್ನುಡಿಯನ್ನಾದರು ಬರೆದು ಮುಗಿಸುತ್ತೇನೆ...!


ಎಂದೊ ಗೀಚಿ ಬರೆದಿದ್ದ ನಾಲ್ಕು ಗೆರೆಗಳು
ಇಂದು ಚಿತ್ರವಾಗಲು ಹವಣಿಸುತ್ತವೆ.

ಬದುಕಿನ ಉದ್ದವೆಷ್ಟೊ ಅಗಲವೆಷ್ಟೊ ತಿಳಿಯದಿದ್ದರು
ಅನುಕ್ರಮ! ಲೋಮ ವಿಲೋಮಗಳಿಂದ
ನಾಲ್ಕು ಗೆರೆಗಳಿಗು ಒಂದೆ ಅನುಪಾತ.

ಮೂಡಿದಷ್ಟು ಮೂಡಲಿ ಬಾಳ ರೇಖೆಗಳು
ವಕ್ರವಾಗಿರದಿದ್ದರೆ ಸಾಕೆನುವ ಹಂಬಲ
ಎಡವಿ ಬೀಳುವ ಸರದಿ ನನ್ನದಾಗಬಾರದಲ್ಲ.

ಒಂದೊಂದು ಗೆರೆಗೆ ಹಲವು ರೀತಿಯ ಬಣ್ಣಗಳನ್ನು
ನಾ ಬಳಿದು ತೋರಿಸಲಾರೆ.

ಸೊಕ್ಕು ಗಟ್ಟಿದ ನೆರಿಗೆಗಳಿಗೆ
ಬಾಡಿಹೋದ ಕಣ್ಣುಗಳಿಗೆ
ಬದುಕಿನ ನೊಗವನ್ಹೊತ್ತು ಬೆಂಡಾದ ದೇಹಗಳಿಗೆ
ಯಾವ ಬಣ್ಣದಿಂದ ಶೃಂಗರಿಸಲು ಸಾದ್ಯ?.

ಪಯಣಕ್ಕೆ ಸಿದ್ದವಾದ ಮನಸುಗಳಿಗೆ
ಅಕ್ಕರೆಯ ಕಂಬನಿಯೊಂದನ್ನು ಮೂಡಿಸಬಹುದಷ್ಟೇ.
ನಾಳೆ ನನ್ನ ಸರದಿಯಲ್ಲವೆ ಕಾದು ಕೂರುತ್ತೇನೆ.

ಈಗೀಗ ನನ್ನ ಚಿತ್ರಗಳು ಹಗಲುವೇಶಗಳನ್ನು
ಕಾಣಲು ಹಂಬಲಿಸುತ್ತವೆ.
ಕಪ್ಪು ಬಿಳಿಯ ದಾರಿಯಲ್ಲಿ
ಬಣ್ಣಗಳನ್ನು ಬೆಳೆಯಲು ಕಾಯುತ್ತವೆ.

ಕಣ್ಣೀರಿಗಾಗಿ ಬಿ೦ದಿಗೆಯೊ೦ದ ಹಿಡಿದು
ಬೀದಿ ಬೀದಿ ಸುತ್ತಿ ಬಿದ್ದ ಹನಿಗಳನ್ನು
ಹೆಕ್ಕಿ ಹೆಕ್ಕಿ ತುಂಬಿಸಿಕೊಳ್ಳಲೆತ್ನಿಸುತ್ತವೆ
ಬಿಂದಿಗೆ ತುಂಬಿದರೆಷ್ಟು ಬಿಟ್ಟರೆಷ್ಟು.
ನಿರಾಸೆಯೊ೦ದು ಮೌನವಾಗಿ
ಹಾಡುತ್ತಾ ಸಾಗುತ್ತದೆ.

ಆ ನಾಲ್ಕು ಗೆರೆಗಳು ಅದೆಷ್ಟು ಉದ್ದ
ಉತ್ತರದಿಂದ ದಕ್ಷಿಣದವರೆಗು
ಪೂರ್ವದಿಂದ ಪಕ್ಷಿಮದವರೆಗು ಚಾಚಿಕೊಂಡಂತಿವೆ
ಮುಗಿವುದರೊಳಗೊಂದು ಪೂರ್ಣ ವಿರಾಮ
ಮುಗಿಯುವ ಅಧ್ಯಾಯಕ್ಕೆ ಮುನ್ನುಡಿಯನ್ನಾದರು ಬರೆದು ಮುಗಿಸುತ್ತೇನೆ.

ಆ ನೆರಳು ನಾನೆ ಆಗುವೆನೆಂದು ತಿಳಿದಿರಲಿಲ್ಲ.!..


ನನಗೆ ತಿಳಿದಿರಲಿಲ್ಲ
ನಿನ್ನೊಳಗೆ ನನ್ನದೊಂದು
ಆಕೃತಿ ಅಡಗಿದೆಯೆಂದು.

ನನಗೆ ತಿಳಿದಿರಲಿಲ್ಲ
ನಿನ್ನೊಳಗೆ ಚಿತ್ತಾರ ಬಿಡಿಸುವ
ಮನಸ್ಸಿದೆಯೆಂದು.

ನನಗೆ ತಿಳಿದಿರಲಿಲ್ಲ
ನಿನ್ನಲಿ ಮೌನವನ್ನೆ ಮೀರಿಸುವ
ಗುಣವಿದೆಯೆಂದು.

ನನಗೆ ತಿಳಿದಿರಲಿಲ್ಲ
ನಿನ್ನ ಕಣ್ಣುಗಳಲ್ಲಿ ಬಿಗಿದಪ್ಪುವ
ಬಯಕೆಯಿದೆಯೆಂದು.

ನನಗೆ ತಿಳಿದಿರಲಿಲ್ಲ
ನಿನ್ನಲ್ಲಿ ಪ್ರೀತಿಯೆಂಬ ತುಡಿತ
ಆರಳುತಿದೆಯೆಂದು.

ನನಗೆ ತಿಳಿದಿರಲಿಲ್ಲ
ನಿನ್ನ ಕನಸಲ್ಲೊಂದು ಕವನ
ಕಟ್ಟುತಿರುವೆಯೆಂದು.

ನನಗೆ ತಿಳಿದಿರಲಿಲ್ಲ
ನಿನ್ನ ಉಸಿರೊಳಗೊಂದು
ನೋವಿದೆಯೆಂದು.

ನನಗೆ ತಿಳಿದಿರಲಿಲ್ಲ
ನಿನಗೊಂದು ನೆರಳು
ಬೇಕಿದೆಯೆಂದು

ನನಗೆ ತಿಳಿದಿರಲಿಲ್ಲ
ಆ ನೆರಳು ನಾನೆ ಆಗುವೆನೆಂದು.

                                                    ವಸಂತ್

ಒಂದು ಹೂವಿನ ಕಥೆ.!..


ನಾನೊಂದು ಪ್ಲಾಸ್ಟಿಕ್ ಹೂ
ನನ್ನಲ್ಲಿ ಜೀವವಿಲ್ಲ
ವಾಸನೆಯಿಲ್ಲ
ನಾ! ಬಾಡುವುದೇ ಇಲ್ಲ.

ಹೂವ್ವಂತೆ ಕಂಡರೂ
ಚಿಟ್ಟೆಗಳು ಬಳಿ ಬರುವುದಿಲ್ಲ.
ಎಲ್ಲರಂತೆ ಬದುಕಲು ಆಸೆಯಿದೆ
ದೇಹದಲಿ ಉಸಿರಿಲ್ಲ.

ನನ್ನೂಳಗೆ ತೀರದಷ್ಟು ನೋವಿದೆ
ಹೇಳಿಕೊಳ್ಳುವುದಿಲ್ಲ.
ಶೋಷಣೆಗೆ ಬಲಿಯಾದ
ವಿಶಾದಕ್ಕೆ ಗುರಿಯಾದ
ಹೀನವಾದ ಬದುಕಿನ
ಪ್ಲಾಸ್ಟಿಕ್ ಹೂ ನಾ!.

ನಾ ಸಾಯುವುದಿಲ್ಲ
ಸಾಯಲು ಬಿಡುವುದಿಲ್ಲ.
ನನ್ನ ಆಸೆಗಳು ಆಗಾಧ
ಪೂರೈಕೆಯಿಲ್ಲ.

ಮಣ್ಣಲಿ ಬೆಳೆವ ಅಸಲಿ ಹೂಗಳ
ರೂಪ ಮಾತ್ರ ನಾ.
ಮಣ್ಣಲಿ ಹುಟ್ಟುವ ಭಾಗ್ಯ
ನನಗಿಲ್ಲ.

ಇರುವ ತನಕ
ಬಾಡಿಹೋದ
ಬಾಡಿ ಹೋಗದಂತ
ಪ್ಲಾಸ್ಟಿಕ್ ಹೂ ನಾ!…

ತುತ್ತಿನ ಚೀಲ…


ಅನುದಿನದ ಅಲೆದಾಟದಲಿ
ಹಸಿವೆಂಬ ಪಾತ್ರೆಯನಿಡಿದು
ಪರದಾಡುತ್ತಾ ಪರಿತಪಿಸಿ
ದೈನ್ಯ ಮನಸುಗಳತ್ತ ಹುಡುಕಾಟ.

ಒಂದೊ ಎರಡೊ
ತಟ್ಟೆಯಲ್ಲಿ ಸದ್ದಾದರೆ
ಅ ದಿನದ ಮಟ್ಟಿಗೆ ಔತಣವೇ ಸರಿ.

ಬದುಕನ್ನು ಮರೆತು
ಭಾವನೆಗಳನ್ನು ಬದಿಗಿಟ್ಟು
ಮರವಾದರೇನು
ಗುಡಿಯಾದರೇನು
ಕಣ್ಣು ಮುಚ್ಚಿದರೆ
ಸ್ವರ್ಗವೆ ಧರೆಗಿಳಿದಂತೆ.

ಮಡಿಯುಟ್ಟ ನಾರೆಯರು
ಅಡಿಯಿಡುವ ನೀರೆಯರಂತೆ
ಮೈಮರೆತ ಮನವು
ಚಿಂದಿಯೊಳು ಕಾಣುತ್ತಿದೆ
ರಂಬೆ ಮೇನಕೆಯರ ಸೊಗಸು.

ಯಾರು ಏನೆಂದರು
ಬದುಕುವ ಬವಣೆ ತಪ್ಪುವುದೇನು?.
ಕಾಡಿದರೇನಂತೆ
ಬೇಡಿದರೇನಂತೆ
ತನ್ನ ಬದುಕಿಗೆ ಬೇಕಲ್ಲವೆ ಕೀಲೆಣ್ಣೆ.

ಒತ್ತು ಉರಿಯುತ್ತದೆ
ಧರಣಿ ಉರುಳುತ್ತದೆ
ನಿಂತು ಬಿಟ್ಟರೆ ಬಿಡುವುದೆ ಈ ಜಗವು?.

ಉರಿಸಲು ಬೆಂಕಿಯಿಲ್ಲ
ಹತ್ತಿಕೊಂಡರು ನಿಲ್ಲುವುದಿಲ್ಲ.
ರಬಸದಲಿ ಬರುವ ಬಿರುಗಾಳಿಗೆ
ಕತ್ತಲೆಯು ಕೆಕ್ಕರಿಸಿ ನಗುತ್ತದೆ.

ಇನ್ನೆಲ್ಲಿದೆ ಆಸರೆ
ಇನ್ನೆಲ್ಲಿದೆ ಅರಿಗೋಲು
ಬಿಕ್ಷೆಯೊ ಶಿಕ್ಷೆಯೊ
ಬದುಕಿನ ಬಂಡಿಯನ್ನು ತಡೆಯುವವರುಂಟೆ ?.

ನೀಲ ಸಮುದ್ರದ ಕಪ್ಪು ಕಡಲಿನ ತಡಿಯಲ್ಲಿ .!..


ಸಂಜೇಯು ಕಳೆದು
ಸೂರ್ಯ ಜಾರಿ ಬೀಳುವ ಸಮಯದಲ್ಲಿ
ನನ್ನಲ್ಲಿ ನೀ ಬಂದು
ಕೇಳಿದ್ದಾದರೂ ಏನು ಗೆಳತಿ?.

ಆಗಸದಲ್ಲೊಂದು ಬೆಳಕನ್ನು
ನೆಟ್ಟು ಬಾ ಎಂದಾ ?.
ಕಳೆದು ಹೋಗಿರುವ
ಸೂರ್ಯನನ್ನಾದರೂ
ಹುಡುಕಿ ಕೊಡಲು ಪ್ರಯತ್ನಿಸುವೆ.

ತುಸು ಚಂದ್ರನಿಗಾದರೂ ತಿಳಿಸುಬಿಡು
ಸ್ವಲ್ಪ ಬೆಳಕನಾದರೂ
ದಾನ ಕೊಡಲಿ.

ಬಾನಲಿ ಮಿನುಗುವ ನಕ್ಷತ್ರಗಳಿಗಾದರೂ
ತಿಳಿಸಿ ಬಿಡು
ಕತ್ತಲಲ್ಲಿ ನನಗೆ ಬೆಳಕದೋರುವ
ದೀಪವಾಗಲಿ.

ರಾತ್ರಿಯಲ್ಲಿ ತಿರುಗುವ
ಮಿಣುಕು ಹುಳುಗಳನ್ನಾದರೂ
ನನ್ನ ಸಂಗಡ ಕಳಿಸಿಕೊಡು
ಹುಡುಕಿ ಕೊಡುಲು
ಪ್ರಯತ್ನವನ್ನಾದರೂ ಮಾಡುತ್ತೇನೆ.

ಇಲ್ಲದಿದ್ದಲ್ಲಿ
ಹೇಗೆ ಹುಡುಕಲಿ ಗೆಳತಿ...
ಆ ನೀಲ ಸಮುದ್ರದ
ಕಪ್ಪು ಕಡಲಿನ ತಡಿಯಲ್ಲಿ
ಮುಳುಗಿಹೋದ ಸೂರ್ಯನನ್ನು.