Friday, July 30, 2010

ಇದ್ದಾರೆ ನಮ್ಮೊಳಗೆ..!.


ಇದ್ದಾರೆ ನಮ್ಮೊಳಗೆ
ಸ್ವಚ್ಚಂದವಾಗಿ ಬದುಕುವ ನವಿಲುಗಳನ್ನು ಕೊಂದು
ಅದರಿಂದ ಬಣ್ಣದ ಗರಿಗಳ ಕಡಿದು
ಜೇಡಿಮಣ್ಣಿಗೆ ನವಿಲಿನಂತೆ ರೂಪವಿಟ್ಟು
ಹಾದಿ ಬೀದಿಯಲ್ಲಿ ಮಾರಿಕೊಂಡು ಹೋಗುವಂತಾ ಜನ.

ಇದ್ದಾರೆ ನಮ್ಮೊಳಗೆ
ಸತ್ಯವನ್ನು ಸುಳ್ಳನ್ನಾಗಿಸಿ
ಸುಳ್ಳನ್ನು ಸತ್ಯವನ್ನಾಗಿಸಿ
ಸುಳ್ಳಿನಿಂದಲೆ ಮಹಲುಗಳ ನಿರ್ಮಿಸಿ
ಗುಂಡು ತುಂಡಿನ ಮಜದಲ್ಲಿ
ಅನುದಿನವು ನಶೆಯಲ್ಲಿ ತೇಲಾಡುತ್ತಿರುವಂತ ಜನ.

ಇದ್ದಾರೆ ನಮ್ಮೊಳಗೆ
ಒಂದು ಹೊತ್ತಿನ ಕೂಳಿಗಾಗಿ
ತಮ್ಮ ಮೈಯನ್ನೇ ಮಾರಿಕೊಳ್ಳುತ್ತ
ಸಿಕ್ಕ ಸಿಕ್ಕವರಿಗೆ ಸೆರಗನ್ನು ಚಾಚುವಂತ
ಬದುಕಲು ಬವಣೆ ಪಡುವಂತ ಅಭಾಗ್ಯಶೀಲ ಜನ.

ಇದ್ದಾರೆ ನಮ್ಮೊಳಗೇ
ಕೊಟ್ಟ ಕುದುರೆಯನು ಏರದವರು
ಹೌದು ಇವರು ಡೊಂಕು ಬಾಲದ ನಾಯಕರು
ತಮ್ಮ ತಪ್ಪುಗಳ ಬಗ್ಗೆ ಅರಿವಿದ್ದರೂ
ಮತ್ತೊಬ್ಬರ ತಪ್ಪುಗಳನ್ನು ಎತ್ತಿ ತೋರುವಂತ ಜನ.

                                                                         ವಸಂತ್

Monday, July 26, 2010

ನಿನ್ನ ಮನಸನ್ನು ಕದ್ದು ಹೋದೇನು .!...


ನೀ ಸುಮ್ಮನಾಗಿಬಿಡು ಗೆಳತಿ
ನೀ ನಗುವಾಗ ನಿನ್ನ ನಗುವನ್ನು ಕಂಡು
ಆ ಸೂರ್ಯನೇನಾದರೂ
ಬೆಳಕ ತೋರದೆ ಕತ್ತಲಾದಾನು...

ನೀ ನಡೆದಾಡದಿರು ಗೆಳತಿ
ನಿನ್ನ ಸುಕೋಮಲವಾದ ನಡುಗೆಯ ಕಂಡು
ಆ ನವಿಲೇನಾದರೂ
ನಾಟ್ಯವಾಡದೆ ನೊಂದು ಕೊಂಡೀತು...

ನೀ ಕೋಪಗೊಳ್ಳದಿರು ಗೆಳತಿ
ನಿನ್ನ ತಾಪಕ್ಕೆ ಮುಚ್ಚಿಹೋಗಿರುವ
ಅಗ್ನಿಪರ್ವತಗಳೇನಾದರೂ
ಮತ್ತೆ ಪುಟಿದೆದ್ದು ಬಂದಾವು...

ನೀ ಕನಸು ಕಾಣದಿರು ಗೆಳತಿ
ಆ ಕನಸೊಳಗೆ ನಾ ಬಂದು
ನಿನ್ನ ಹೃದಯದಲ್ಲಿ ಪ್ರೀತಿಯ ಬೀಜವನು ಬಿತ್ತಿ..
ನಿನ್ನ ಮನಸನ್ನೇನಾದರೂ ಕದ್ದು ಹೋದೇನು...

                                                                 ವಸಂತ್

Saturday, July 24, 2010

ಕನಸ ಕಟ್ಟುವ ಹೊತ್ತಿನಲಿ.!..

ರಾತ್ರಿಯ ಇರುಳಲ್ಲಿ
ಕನಸುಗಳನ್ನು ಹರಡಿ 
ಕಟ್ಟಲು ಪ್ರಯತ್ನಿಸುತ್ತೇನೆ.

ಕನಸುಗಳೇ ಹುಟ್ಟುವುದಿಲ್ಲ
ದೂರದ ಊರಿಗೊಂದು
ಕವಲು ದಾರಿ ಕಾಣುತ್ತದೆ.


ಹೆಜ್ಜೆಗಳನು ಇಟ್ಟು ನಡೆಯಲು
ಪ್ರಯತ್ನಿಸುತ್ತೇನೆ.
ಹೆಜ್ಜೆಗಳೇ ಸವೆಯುವುದಿಲ್ಲ
ಪಯಣವು ಮುಗಿಯುವುದಿಲ್ಲ.


ಬೆಳದಿಂಗಳ ರಾತ್ರಿಯಲಿ
ಹುಣ್ಣಿಮೆಯು ಅಮವಾಸ್ಯೆಯಂತಾದಾಗ

ಕಳೆದುಹೋದ ಚಂದಿರನನ್ನು
ಹುಡುಕಲು ಹೊರಡುತ್ತೇನೆ.
ರೆಕ್ಕೆಗಳು ಮೂಡುವುದಿಲ್ಲ


ಕತ್ತಲು ಸಹ ಕರಗಿರಲಿಲ್ಲ
ಬೆಳಕು ಕೂಡ ಬಂದಿರಲಿಲ್ಲ
ನನ್ನ ಕನಸ ಕಟ್ಟುವ ಪ್ರಯತ್ನವು 
ನಿಲ್ಲದೆ, ಕಳೆದುಹೋದ 
ಚಂದಿರನಿಗಾಗಿ ಹುಡುಕುತ್ತಿರುತ್ತೇನೆ.....


                                                  ವಸಂತ್

Thursday, July 22, 2010

ನಿನ್ನ ನೆನಪಲ್ಲಾದರೂ ನಾ ಪೂರ್ಣವಾಗಿ ಸಾಯುತ್ತೇನೆ..!.

ಆದ್ಯಾಕೋ ಗೊತ್ತಾಗುತ್ತಿಲ್ಲ ಗೆಳತಿ.
ನೀ ನನ್ನ ಮನದೊಳಗೆ ಬಂದು
ಇಲ್ಲ ಸಲ್ಲದ ರಂಪಾಟವ ಮಾಡಿ  
ಸತ್ತುಹೋಗಿರುವ ನನ್ನ ಹೃದಯದ ಬಯಲಿನಲ್ಲಿ
ಮತ್ತೆ ಆಸೆಗಳ ಬೀಜಗಳನ್ನು ಬಿತ್ತಿ ಕಣ್ಣೀರು ಸುರಿದು
ಚಿಗುರು ಮೂಡುವಂತೆ ಮಾಡಿ ಹೋಗುತ್ತೀಯ...!.

ನಿನಗೆ ಗೊತ್ತು ನಾನು ಸತ್ತು  
ಗೋರಿಯಂತಾಗಿರುವೆನೆಂದು,
ನನ್ನೊಳಗೆ ನಿನ್ನ ಯಾವ ಅವಶೇಷವೂ ಉಳಿದಿಲ್ಲ,
ಆದರೂ ನೀ ನನ್ನ ಬಿಡದೆ  
ಕಾಡಿಸಿ ಪೀಡಿಸಿ ಸತಾಯಿಸುತ್ತೀಯಾ,
ನಾ ಮಾಡಿದ ಪಾಪವಾದರೂ ಏನೂ ?.ನಿನ್ನ ಪ್ರೀತಿಗಾಗಿ ಹಗಳಿರುಳು ಕಾದು ಕುಳಿತೆ 
ಎಷ್ಟೊಂದು ಬೆಳದಿಂಗಳ ರಾತ್ರಿಗಳು ಕಳೆದು ಹೋದವು 
ಎಷ್ಟೊಂದು ಅಮವಾಸ್ಯೆಗಳು ಸೋರಿ ಹೋದವು
ನೀ ಬರದೆ, ನಿನ್ನ ನೆನಪಲ್ಲೆ ಪೂರ್ಣವಾಗಿ ಮುಳುಗಿ
ಸಾಯಲಾಗದೆ, ಬದುಕಲಾರದೆ, ಅಂತರ್ ಪಿಚಾಚಿಯಂತಾಗಿರುವೆ.

ನನ್ನ ಬಯಕೆಗಳು ಆಸೆಗಳೆಲ್ಲವೂ ಸತ್ತಮೇಲೆ  
ನಿನ್ನ ಪ್ರೀತಿಯ ಬಗ್ಗೆ ತಿಳಿಸಲು ನನ್ನ ಬಳಿ ತಾನೆ ಏನು ಉಳಿದಿದೆ ?.
ಈಗಲಾದರೂ ನಿನಗೆ ಕೈ ಮುಗಿದು ಬೇಡಿಕೊಳ್ಳುತ್ತೇನೆ.
ನೀ ನನ್ನ ಬಿಟ್ಟು ಹೊರಟು ಹೋಗು ...!..
ನಿನ್ನ ನೆನಪಿನಲ್ಲಾದರೂ ನಾ ಪೂರ್ಣವಾಗಿ ಸಾಯುತ್ತೇನೆ..!.

                                                                                      ವಸಂತ್

Wednesday, July 21, 2010

ಕವನ..!.

ನನಗೂ ಅನಿಸುತ್ತದೆ
ಕವನ ಬರೆಯಬೇಕೆಂದು.
ಆದರೆ ?
ಕಮರಿಹೋದ ಬಾವನೆಗಳು,
ಬಿಡಿಸಲಾರದ ಸಾಲುಗಳು,
ನನ್ನನ್ನು ಅಂಧಕಾರಕ್ಕೆ ತಳ್ಳುತ್ತವೆ.
ಮರಳಿ ಅದೇ ಯತ್ನ, ಪ್ರಯತ್ನ.
ನೆನ್ನೆಯಿದ್ದ ನೆನಪುಗಳು
ಇಂದು ಇರುವುದಿಲ್ಲ.
ಬರೆಯಬೇಕೆಂದರೆ
ಪದಗಳೇ ಹುಟ್ಟುವುದಿಲ್ಲ.
ಎಂತಹ ವಿಪರ್ಯಾಸ !
ಆದರೂ ಬಿಡುವುದಿಲ್ಲ
ನಾನೇ ಕವಿತೆಯಾಗಬೇಕು.
ನನ್ನ ಜೀವನವೇ
ಸಾಲುಗಳಾಗಬೇಕು.
ನನ್ನಲ್ಲಿ ವಿಶ್ವಾಸವಿದೆ
ಬರವಸೆಯಿದೆ.
ಬರೆದೇ ಮುಗಿಸುತ್ತೇನೆ ಎಂದು.
ಇಂದಲ್ಲ ನಾಳೆ
ನನ್ನ ಕವನ ಚಿಗುರಿ
ಮರವಾಗಿ, ಹೆಮ್ಮರವಾಗಿ,
ಬೆಳೆಯುತ್ತದೆ.
ಆಗ ತಿಳಿಯುತ್ತದೆ
ನನಗೂ ಕವನ ಬಿಡಿಸಲು
ಬರುತ್ತದೆ ಎಂದು.

                                             ವಸಂತ್

Tuesday, July 20, 2010

ಸೂರ್ಯ ಬಿಂಬ.....!.


ಮುಂಜಾನೆಯ ಮಬ್ಬಿನಲಿ
ಮಂಜು ಹನಿಯ ತೇರಿನಲಿ
ಮಲ್ಲಿಗೆ ಮೊಗ್ಗಿನ ಪರಿಮಳದಲಿ
ನೇತ್ರಾವತಿ ನದಿಯ ತೀರದಲಿ
ಮಲೆನಾಡ ಸಿರಿಯ ಹಸಿರೊಳಗಿಂದ
ಬೆಳಕಾಗಿ ಬಂದೇ.....
ನೀ ಸೂರ್ಯ ಬಿಂಬ.....!.

                                      ವಸಂತ್

Sunday, July 18, 2010

ಮಾನವ ಮತ್ತು ಅವನೊಳಗಿನ ಜೀವತಂತು..!.

ಓ ಜೀವವೇ,

ನೀನೆಷ್ಟು ಮನಮೋಹಕ,
ನೀನೆಷ್ಟು ಹಿತಚಿಂತಕ,
ನೀನೆಷ್ಟು ನಯವಂಚಕ,

ನಿನ್ನೊಳಗೆ ಕಾಣದ ಪ್ರೀತಿಯು ಅಡಗಿದೆ,
ಸ್ನೇಹವು ಅಡಗಿದೆ,
ಅಸೂಯೆಯು ಅಡಗಿದೆ,

ನಿನ್ನೊಳಗಿನ ಅಂತರಾತ್ಮವನ್ನು
ಯಾರಿಂದಲೂ ಅರಿಯಲು ಸಾಧ್ಯವೇ ಇಲ್ಲವೇನೊ?.

ನೀನೊಂದು ಸದಾ ಪುಟಿಯುವ ಜೀವತಂತು,
ನೀನೆಂದು ಸದಾ ಚಟುವಟಿಕೆಯಿಂದಿರುವ ಜಲಪಾತ,
ನೀನೆಂದು ಪರರ ಹಿತಕ್ಕಾಗಿ ದುಡಿಯುವ ಕಾಲಾಳು,
ನೀನೆಂದು ಪರರನ್ನೆ ಕೊಲ್ಲುವುದಕ್ಕಾಗಿ ಕಾಯುವ ಮಾಯಾಮೃಗ,

ಏನೆಲ್ಲ  ಅಡಗಿಸಿಕೊಂಡಿರುವೆ ನಿನ್ನಲ್ಲಿ ?
ಮಾನವರೂಪಿಯ ಒಡಲಲ್ಲಿ ಕುಳಿತು,
ಬ್ರಹಾಂಡವನ್ನೆ ಅರಿಯುವ ಕಲ್ಪನಾ ಚಾತುರ್ಯ,
ಗ್ರಹ ಮಂಡಲಗಳನ್ನೆ ಸುತ್ತಿಬಂದ ಶೌರ್ಯ,
ಒಂದೆಡೆ ಕುಳಿತು ವಿಶ್ವವನ್ನೆ ನಿಯಂತ್ರಿಸುತ್ತಿರುವ ನಿನ್ನ ಕ್ರಮಕ್ಕೆ.
ಸಾವಿರ ಸಾವಿರ ಪುಟಗಳನ್ನೇ ಪೋಣಿಸಬಹುದು.

ಹಾರುವ ಪಕ್ಷಿಯು ನೀನೆ,
ಹಾಡುವ ರಾಗವು ನೀನೆ,
ಕುಣಿಯುವ ನಾಟ್ಯವು ನೀನೆ,
ನಡೆದಾಡುವ ವಿಶ್ವಕೋಶವು ನೀನೆ,
ಕಡೆಗೆ ಪರಿತಪಿಸಿ ನೊಂದು ಮರೆಯಾಗುವ ಮಾಣಿಕ್ಯವು ನೀನೆ.

ಓ ಜೀವವೇ,

ಎಲ್ಲವನ್ನು ಅರಿತಿರುವ ಮಾನವನು
ನಿನ್ನನ್ನು ಅರಿಯಲು ಸಾಧ್ಯವಾಗುತ್ತಿಲ್ಲ,
ನಿನ್ನೊಳಗಿನ ಮರ್ಮವನ್ನು ತಿಳಿಯಲಾಗಲಿಲ್ಲ,
ನಿನ್ನ ಚಲನ ವಲನಗಳನ್ನು ಬಿಚ್ಚಿ ತೋರಲಾಗುತ್ತಿಲ್ಲ,
ನಿನ್ನ ಮುಂದೆ ಅವನ ಜೀವನ
ತೃಣ ಮಾತ್ರವಲ್ಲದೆ ಬೇರೇನೂ ಇಲ್ಲ.

ತನ್ನೊಳಗಿನ ಯೋಚನಾ ಲಹರಿಯಿಂದ
ಸಕಲವನ್ನು ಅರಿತುಕೊಂಡರು
ನಿನ್ನ ಗೆಲ್ಲಲು ಸಾಧ್ಯವಾಗಲೇ ಇಲ್ಲ,
ನಿನ್ನಯ ಮರುಹುಟ್ಟನ್ನು ಪಡೆಯಲಾಗಲಿಲ್ಲ.
ಆದರೂ ನಿನ್ನನ್ನು ಗೆಲ್ಲುತ್ತೇನೆಂಬ ಅಹಂಕಾರವಂತು ಇದೆ,
ನಿನ್ನೊಳಗಿನ ಮರ್ಮವನ್ನೆಲ್ಲ ತಿಳಿದು,
ಚಿರಂಜೀವಿಯಾಗುವ ಯೋಚನೆಯಲ್ಲಿ
ಪ್ರಯತ್ನಶೀಲ ಕಾರ್ಯಗಳಂತು ನಡೆಯುತ್ತಲೇ ಇವೆ
ಸಾವಿನ ಬೆನ್ನತ್ತಿ ಸಾಗುತಿರುವ ಪರಾಕ್ರಮಗಳಿಗೇನು ಕೊರತೆಯಿಲ್ಲ.

ಏನೇ ಆಗಲಿ,,
ನಿನ್ನ ತನವನ್ನು ನೀ ಬಿಟ್ಟುಕೊಡದೆ
ಮಾನವನ ಆಯಸ್ಸನ್ನು ನಿಯಂತ್ರಿಸುತ್ತಾ ಬರುತ್ತಿರುವ
ನಿನ್ನ ಕ್ರಮಕ್ಕೆ ಶಿರಬಾಗಿ ವಂದಿಸುತ್ತೇನೆ.

                                                                                         ವಸಂತ್

Friday, July 16, 2010

ಇದಾವ ನೋಟ,. ತಿಳಿಯುತ್ತಿಲ್ಲ…?.

ಇದಾವ ನೋಟ,,,.. ತಿಳಿಯುತ್ತಿಲ್ಲ…?
ನಿನ್ನೊಳಗೆ ನನಗರಿಯದ ಕೋಪ
ಕುದಿಯುವ ಮನದೊಳಗಿನ ಪ್ರತಾಪ
ಇದಾವ ನೋಟ,,, ! ಇದಾವ ನೋಟ,,,!

ಕೊರಗದಿರು, ಮರುಗಿ ಸೊರಗದಿರು,
ನಮಗಾಗಿ,, ತಾನೆ ಯಾರಿಹರು.
ನಿನ್ನೊಳಗೆ ನನ್ನ, ನನ್ನೊಳಗೆ ನಿನ್ನ,
ಅರಿತು ಬಾಳಿದರೇನೇ, ಜೀವನ,
ಇದಾವ ನೋಟ,,,.. ತಿಳಿಯುತ್ತಿಲ್ಲ…?

ಎಡವಿಬೀಳುವ ಹಾದಿ, ದಿಕ್ಕು ತಪ್ಪುವಕಾಲ,
ಎಲ್ಲೆಲ್ಲೂ,, ಕಾಣದ ಇದರದ್ದೆ ಜಾಲ.
ಸೋತು ಸಾಗಿದರೆ,, ದಾರಿ ಕ್ರಮಿಸಲಸಾಧ್ಯ,
ಗೆಲ್ಲೋಣ, ಗೆದ್ದು ಮುನ್ನಡೆಯೋಣ,
ಇದಾವ ನೋಟ,,,.. ತಿಳಿಯುತ್ತಿಲ್ಲ…?

ಬೆಚ್ಚನೆಯ ಹಾಲೆಂದು, ಬೆಳ್ಳಿಮೋಡವು ಅಲ್ಲ,
ಕಷ್ಟಗಳೇ ಎಂದು,, ಜೊತೆಗೂಡಿ ಬರುವುದಿಲ್ಲ.
ಚಿಗುರು ಮೂಡುವ ಕಾಲ,, ಬಂದೇ ಬರುವುದು ನಮಗೂ,
ಕೊರಗದಿರು, ನೊಂದು ನೋಯಿಸದಿರು ನನ್ನನ್ನು,
ಇದಾವ ನೋಟ,,,.. ತಿಳಿಯುತ್ತಿಲ್ಲ…?

ನಗು ಇನ್ನು, ನಕ್ಕು ಬಿಡು ಇನ್ನೂ ಚಿಂತೆ,
ಇದ್ದೇ ಇರುವುದು,, ಎಂದೂ ಈ ಗೋಳು.
ನಮ್ಮ ಬಾಳಲಿ ಮೂಡಿ,, ಬಂದೇ ಬರುವನು ಸೂರ್ಯ,
ನನ್ನ ನೋಡುವ ನೋಟ,, ಇನ್ನು ತಿರುಗಿಸು ಬಾನತ್ತ,
ಇದಾವ ನೋಟ,,,.. ತಿಳಿಯುತ್ತಿಲ್ಲ ತಿಳಿಯುತ್ತಿಲ್ಲ…?.

                                                                            ವಸಂತ್

Thursday, July 15, 2010

ನಾ ಕಾಯ್ವೆನು?.


ಎತ್ತ ಸಾಗುತಿದೆ ನಮ್ಮಯ ಸತ್ವ
ಎತ್ತ ಸಾಗುತಿದೆ ನಮ್ ನುಡಿಯ ಪಕ್ವ
ನಾನೆಂಬ ಅಹಂಕಾರದ ಇಂಗ್ಲೀಶ್ ಮಾಯೆಯೊಳ್.

ನಮ್ ತನವನು ಬದಿಗಿಟ್ಟು
ನಮ್ ನೆಲವನು ತೆರದಿಟ್ಟು
ಬಾ ಬಾ ನೀ ಓ ಪರಕೀಯಾ ಮಾಯೆ ಎಂಬೆನುತ.

ತೋರಣವಂ ಕಟ್ಟಿ, ಅಂಗಳವಂ ಗುಡುಸಿ,
ಬಕ್ಷ ಭೋಜನವಮ್ ಮುಂದಿಟ್ಟು ಕಾಯುತಿರ್ಪ
ಕನ್ನಡದ ಕಳಂಕಿಂತರನ್ ಏನೆನ್ನಬೇಕು ?.

ತನು ಕನ್ನಡ ಮನ ಕನ್ನಡ
ಧನ ಕನ್ನಡವೆನೆ  ಪಾಡಿದ
ನಮ್ ಕನ್ನಡದ ಕವಿಗಳನ್ ಕಾಯುವುದೆಂತು?.

ನಮ್ಮದಲ್ಲದ ಭಾರವನು ಹೊತ್ತು
ದೇಶ ವಿದೇಶವೆಂದು ಸಾಗುರ್ತಿಪ
ನಮ್ ಕನ್ನಡದ ಕಂದಗಳನ್ ರಕ್ಷಿಪರಾರು.

ನಮ್ ನೆಲದ ಸತ್ವವನು
ನಾವೇ ಮರೆತರೆ ಅರ್ಥವುಂಟೆ ?.
ನಮ್ ನೆಲದ ರುಣವನ್ ತೀರ್ಪರಾರು.

ರನ್ನ ಪಂಪರಂ ಕಂಡ ನಮ್ ಈ ಕಂಗಳು
ಹಕ್ಕ ಬುಕ್ಕರಾಡಿ ಹೊಗಳಿದ ನಮ್ ರಾಜ್ಯದಲಿ
ಕನ್ನಡಮ್ಮನಿಗೆ ಕಣ್ ಕಟ್ಟಿ ಕುರುಡು ಬಂದಿದೆಯಂದ್
ಪೊಳ್ ನುಡಿವ ಕಳಂಕಿತರನ್ ಶಿಕ್ಷೆಗೈಪರಾರು?.

ಬಸವಣ್ಣ ನುಡಿದ, ಸರ್ವಜ್ಞ ಪಾಡಿದ,
ಅಲ್ಲಮ ಅಕ್ಕಮಹಾದೇವಿಯರಂತ,
ವೆಕ್ತಿಗಳನ್ ಕಂಡ ನಮ್ ರಾಜ್ಯದಲಿ
ಕನ್ನಡಕೆ ಕಾಯಕವಂ ಮಾಡಬೇಕಿದೆ.

ಪರಕೀಯಾ ವ್ಯಾಮೋಹಿಗಳಂ ಹಿಡಿದು
ಕನ್ನಡದ ಕಷಾಯವಂ ಕುಡಿಸಿ
ನಮ್ ಕನ್ನಡ ತನವನ್ನು ನಲ್ಮೆಯಿಂದ್ ಕಲಿಸಿ
ಅಕ್ಕರೆಯ ಮಾತಿನೊಳ್ ಸಕ್ಕರೆಯನು ಸವಿಸಿ .

ಕನ್ನಡವ ಮರೆಯದಿರು
ಕನ್ನಡತನವ ತೊರೆಯದಿರು ಎಂಬೇಳಿ
ನಮ್ ತಾಯಿ ದರ್ಪದಿಂದ್ ಬೀಗುವ
ಕಾಲ ಬರುವುದೆಂತ್ ನಾ ಕಾಯ್ವೆನು ????.
                                                                  ವಸಂತ್

Tuesday, July 13, 2010

ಪ್ರೀತಿಯೆಂದರೆ ಇದೇನಾ ?.

ಕತ್ತಲಾದರೆ ಸಾಕು
ಕಣ್ಣಮುಂದೆ ಬಂದು ಕಾಡುವೆ,
ಕಣ್ಣು ಮುಚ್ಚಿದೊಡನೆಯೆ
ನೆನಪಾಗಿ ಮುಂದೆ ನಿಲ್ಲುವೆ,
ನಿನ್ನದೇ ಯೋಚನೆಯಲ್ಲಿ ಹಗಳಿರುಳೂ
ಮಿಂದು ಮೀಯುವಂತಾಗುತ್ತಿದೆ.
ಗೊತ್ತಾಗುತ್ತಿಲ್ಲ ಹೇಳಿಬಿಡು,
ಪ್ರೀತಿಯೆಂದರೆ ಇದೇನಾ ?.

ನಿನ್ನ ರೂಪ ಒಂದನ್ನು ಬಿಟ್ಟು
ಬೇರೇನು ಕಾಣದಾಗಿದೆ,
ನನ್ನ ಹೃದಯವ್ಯಾಕೊ ಸದಾ ?
ನಿನ್ನನ್ನೇ ಹಂಬಲಿಸುತ್ತದೆ,
ದಾರಿಯಲ್ಲಿ ಯಾರೇ ನಡೆದರೂ
ನಿನ್ನದೇ ಗೆಜ್ಜೆ ಸದ್ದು,
ಯಾರು ಮಾತನಾಡಿದರೂ
ನಿನ್ನದೇ ದ್ವನಿ.
ಇದರ ಅರ್ಥವನ್ನು
ಅರಿಯಾಲಾಗುತ್ತಿಲ್ಲ ತಿಳಿಸಿಬಿಡು,
ಪ್ರೀತಿಯೆಂದರೆ ಇದೇನಾ ?.

ನಿನ್ನ ಬಗ್ಗೆ ತಿಳಿಯುವ ಹುಚ್ಚಾಗುತ್ತಿದೆ,
ಕಥೆ ಕವನ ಬರೆಯುವ ಮನಸ್ಸು ಹೆಚ್ಚಾಗುತ್ತಿದೆ
ಆಸೆಗಳು ಅತಿಯಾಗುತ್ತಿವೆ,
ಬಯಕೆಗಳು ಬಣಗುಡುತ್ತಿವೆ,
ಕನಸುಗಳು ಕತ್ತಲಾಗುತ್ತಿವೆ,
ಊಟವು ಬೇಕಿಲ್ಲ, ನಿದ್ರೆಯು ಬರುತ್ತಿಲ್ಲ,
ನನಗೂ ತಿಳಿಯುತ್ತಿಲ್ಲ,
ದಯಮಾಡಿ ನುಡಿದುಬಿಡು,
ಪ್ರೀತಿಯೆಂದರೆ ಇದೇನಾ ?.

ಇದು ನಿಜವಾಗವಾಗಿಯೂ
ಪ್ರೀತಿಯೇ ಆಗಿದ್ದರೆ ?.
ನಿನಗಾಗಿ ಹಂಬಲಿಸುತ್ತಿರುವ
ನನ್ನ ಹೃದಯಕ್ಕೆ
ಮುಕ್ತಿಯನ್ನಾದರೂ
ದೊರಕಿಸುತ್ತೀಯೆಂದು ನಂಬಿರುವೆ.

ನಿನಗಾಗಿ ಹುಣ್ಣಿಮೆಯ ರಾತ್ರಿಯಂದು
ನಿನ್ನದೇ ನೆನಪಿನಲ್ಲಿ ಕಾಯುತ್ತಿರುತ್ತೇನೆ !.
ಚಂದ್ರನಂತೆ ನನ್ನ ಬಾಳಿಗೆ !..
ಬೆಳಕಾಗಿ ಬಂದು ಸೇರುವೆಯಾ ನನ್ನ ಗೆಳತಿ…!..

                                                                    ವಸಂತ್

Sunday, July 11, 2010

ಬಿಟ್ಟು ಬಿಗುಮಾನವನು, ಜೊತೆಗೂಡೆ ಬಾರೆ ಸಖಿ ...!.

ಬಿಟ್ಟು ಬಿಗುಮಾನವನು, ಜೊತೆಗೂಡೆ ಬಾರೆ ಸಖಿ,
ನಿನಗಾಗಿ ನಾ ತರುವೆ ಸ್ವರ್ಗವನ್ನೇ.
ಭುವಿಯೊಳಗೇನಡಗಿದೆ, ಪಾಪ ಕರ್ಮದ ನಂಟು,
ಕಟ್ಟೆಲೇ ರೆಕ್ಕೆಯನು ಚಂದ್ರನೆಡೆಗೆ.


ತೋರುವೆ ನಕ್ಷತ್ರವನು, ನೀಡುವೆ ಬಳುವಳಿಯ,
ಮೋಡದ ಮೇಲೊಂದು ಮನೆಯ ಕಟ್ಟಿ.
ಜವರಾಯನೇ ಬರಲಿ, ಇಂದ್ರನೇ ತಲೆದೂಗಲಿ,
ಎಲ್ಲರಿಗೂ ತಿಳಿಸುವೆ ನಾ ತೊಡೆಯ ತಟ್ಟಿ.


ಬೇಕಾದ್ದ ನೀ ಬೇಡು, ತಂದುಕೊಡುವೆನು ನೋಡು,
ಕಾಣುತಿರು ನೀನೆಂದೂ ಹಗಲುಗನಸು.
ಒಂದು ಓಲೆಗೆ ಯಾಕೆ, ಇಷ್ಟೊಂದು ಒಳಮುನಿಸು?
ತಂದು ತಿನಿಸಲೇ ಬೇಗ ಸಿಹಿಯ ತಿನಿಸು?


ಇರುಳು ಕಾಣದ ಊರು, ನಮ್ಮ ತವರೂರು,
ಬೆಳದಿಂಗಳೇ ಎಂದೆಂದೂ ನಮ್ಮ ಬಾಳು.
"ಬಿಲ್" ಕೇಳುವರಾರು, ಯಾರೂ ನಿನ್ನ ನೋಯಿಸರು,
ಅಂದದ ಕನಸೊಳಗೆ ಓಡುವುದು ನಿನ್ನ ಗೋಳು.


ಯಾಕಿನ್ನು ಬಿಡು ಚಿಂತೆ, ಒಮ್ಮೆ ನಗು ನೀ ಕಾಂತೆ,
ನಾ ಕಂಡ ಕನಸದು ಬೇಗ ನನಸಾಗಲೆಂದು
ನೀ ನಂಬಿ ಬಂದಿರುವೆ, ನಾ ನಿನ್ನ ಅರಿತಿರುವೆ,
ನಗುನಗುತ ಜೊತೆಯಾಗಿ ಹಾರುವ ಎಂದೆಂದು.


                                                                           ವಸಂತ್

Friday, July 9, 2010

ಅನುದಿನವು ಹಬ್ಬವನಾಚರಿಸುವೆ…


ಇದು ಯಾರ ಮಾಯೆಯ ಮೋಡಿ
ನನಗೊದಗಿ ಬಂದ ಸಿರಿಯೊ ಏಂತೊ!
ಕಣ್ ತಣಿಸುವ ಸೂರ್ಯಕಾಂತಿಗೆ
ನನ್ನ ಮನ ತಣಿದಿದೆಯಲ್ಲ.
ಪಚ್ಚೆಯ ಮೇಲೆ ಇಬ್ಬನಿಯ ನರ್ತನ
ಮುತ್ತುಗಳ ಹಾರವನು ಬಿಟ್ಟು ಸರಿದಂತೆ
ಒಮ್ಮೆ ದಗದಗಿಸಿ ಮತ್ತೊಮ್ಮೆ ಮೌನವಾಗುತ
ಜೀವಾತ್ಮವನ್ನೊತ್ತ ಪ್ರಕೃತಿಗೆ
ತಲೆಬಾಗಿ ವಂದಿಸುತ್ತೇನೆ.

ಇದು ಯಾರ ಭಾಗ್ಯವೊ ಏನೊ
ಇನ್ನಾರ ಪುಣ್ಯವೊ ನಾಕಾಣೆ
ನಂದನವನದಲ್ಲಿ ಮಿಂದು ಮೀಯುವ
ಸುಂದರತೆಯನು ಕಂಡು ಪುಳಕಿತನಾದೆನಲ್ಲ.

ಪಟಪಟನೆ ಸುರಿಯುವ ವರ್ಷಧಾರೆ
ಸರಸರನೆ ಹರಿದುಸಾಗುವ
ಕಾವೇರಿಯ ಕಾಲ್ ನಡುಗೆ
ಪಚ್ಚೆಯ ಸೀರೆಯನುಟ್ಟು
ಸೊಬಗಿನಿಂದ ಬೀಗುವ ಮಲೆನಾಡಮ್ಮನಿಗೆ
ನಾ ಏನೆಂದು ಬಣ್ಣಿಸಲಿ.

ತಣ್ಣನೆ ತಣಿಸುವ ತಂಗಾಳಿ
ಮೃದು ಕೂಗಕ್ಕಿಗಳ ಇಂಚರದಲಿ
ಕೆಂದಾವರೆಯ ನರ್ತವಂಕಂಡು ಹರ್ಷಗೊಂಡೆ
ಷರಾವತಿಯಲಿ ಸಾಗಿನಡೆದು
ಕಾವೇರಿಯಲಿ ಮುಳುಗಿತೇಲಿ
ಗಂಗೆಯಲಿ ಪೂರ್ಣ ಸ್ತಾನವಗೈದು ಮಿಂದಂತೆ

ಇದು ಯಾವ ಮೋಹದ ಮಾಯೆಯೊ ನಾಕಾಣೆ
ಪ್ರತಿ ದಿನದ ಮುಂಜಾನೆಯಲಿ ಪುಲಕಗೊಂಡು
ಅನುದಿನವು ನಾ ಹಬ್ಬವನಾಚರಿಸುತ್ತೇನೆ.

Monday, July 5, 2010

ನಿನಗಾಗಿ ಕಾಯುತಿರುತ್ತೇನೆ …!.


ಗೆಳೆಯ.!.

ನೀ ಉಳಿಸಿ ಹೋಗಿರುವ ನೆನಪುಗಳು
ನನ್ನಿಂದ ಹೆಕ್ಕಿತೆಗೆಯಲು ಸಾಧ್ಯವಾಗುತ್ತಿಲ್ಲ.
ನನ್ನ ಹೃದಯದೊಳಗೆ ಅರ್ಧಬರೆದಿಟ್ಟ
ಕವನಕ್ಕೆ ಮುಕ್ತಿ ದೊರೆಕಿಸಲಾಗುತ್ತಿಲ್ಲ.
ಸದಾ ನಿನ್ನದೇ ಯೋಚನೆಯಲ್ಲಿ ಮುಳುಗಿರುವ
ನನ್ನ ಮನಕ್ಕೆ ನೆಮ್ಮದಿ ಸಿಗುತ್ತಲೇ ಇಲ್ಲ.
ಇನ್ನೂ ಕಾಯಲೆನೆಗೆ ಸಾಧ್ಯವಿಲ್ಲ.

ಬರಿದಾದ ಹೃದಯದೊಂದಿಗೆ ನೊಂದು
ನಡೆಯಲಾರದೆ ಬಾರವಾಗಿ
ಅಡಿಯಿಟ್ಟು ಕಳೆದು ಹೋಗುತ್ತೇನೆ.

ನಿನ್ನೊಳಗೊಂದು ಹೃದಯವಿದ್ದರೆ
ಅದು ಬಡಿದುಕೊಳ್ಳುವುದು ಸತ್ಯವಾದರೆ
ನಿನ್ನ ಮನಸ್ಸಿನ ದೀಪವನ್ನು ಬೆಳಗಿಸಿ
ನಾ ಬಿಟ್ಟು ಹೋಗಿರುವ ಹೂ ರೆಕ್ಕೆಗಳನ್ನು
ಗಿಡವಾಗಿ ಚಿಗುರಿಸಿ ತೆಗೆದುಕೊಂಡು ಬಾ…!
ನನ್ನ ಹೃದಯವನು ತೆರೆದಿಟ್ಟು
ನಿನಗಾಗಿ ಕಾಯುತಿರುತ್ತೇನೆ … !.

                                                                  ವಸಂತ್


Sunday, July 4, 2010

ಮರೆಯದಿರು ನನ್ನನು...!.


ಮರೆಯದಿರು ನನ್ನನು
ತೋರೆದು ಹೋಗದಿರು ಗೆಳತಿ
ಬಯಸುತಿದೆ ನಿನ್ನೊಲವ
ನನ್ನ ಮನವು....

ಅನುದಿನವು ನಾ ಸೊರಗಿ
ಕರಗಿ ಹೋಗುವ ಹಾಗೆ
ಸುಡುತಲಿದೆ ನನ್ನೊಳಗೆ
ನಿನ್ನ ಒಲವು....

ನಿನಗಾಗಿ ಎಲ್ಲಿ ಹುಡುಕಲಿ
ಯಾವಸಾಗರದ ಮುತ್ತ ಹೆಕ್ಕಿತೆಗೆಯಲಿ
ನಿನ್ನೊಳಂತರಂಗ ಹೇಗೆ ಅರಿಯಲಿ
ನನ್ನೊಳಗಿನ ಮೌನ ವೇದನೆಗೆ ಏನೆಂದು ಉತ್ತರಿಸಲಿ ?.

ಬಾರೆನೆಂದು ಮಾತ್ರ ಹೇಳದಿರು
ನಿನ್ನ ಕಾಯುವ ಮನಕ್ಕೆ ನೋವಾಗ ಬಹುದು
ಎಂದಾದರೂ ನೀ ಬಂದು ಸೇರಲೇ ಬೇಕಲ್ಲವೆ
ಅದು ಹುಣ್ಣಿಮೆಯೇ ಆಗಬೇಕೆ ?.

ನೀ ಬರುವ ದಾರಿಯಲಿ ಹಗಲು ಹೂವಾಗಿ
ನೀ ನಡೆವ ರಾತ್ರಿಯಲಿ ಇರುಳ ಬೆಳಕಾಗಿ
ಅನುದಿನವು ನಿನ್ನ ಬರುವಿಕೆಗಾಗಿ ಕಾಯುತಿರುವೆ
ನನ್ನನ್ನೊಮ್ಮೆ ಸೇರಲು ಬರುವೆಯಾ ನನ್ನೊಲವೆ.

ಕಾಯುವಿಕೆಯಲ್ಲಿಯೇ ಇಹುದು ಸಂತಸವೆಂದು
ಶಬರಿ ಕಥೆಯಲ್ಲಿ ನಾ ಕೇಳಿರುವ ನೆನಪು
ಕಾದಿಹೆನು, ಕಾಯುವೆನು ನಿನ್ನೆ ನಾಳೆಯವರೆಗೆ
ಮುನಿಯದಿರು ಬಾ ಒಲವೆ ನೀ ಎನ್ನ ಕರೆಗೆ.
                                                                                                                                                                                          ವಸಂತ್

Friday, July 2, 2010

ಇತಿಹಾಸದ ಉರುಳು..!.

ಇತಿಹಾಸವು ಉರುಳುತಿದೆ
ಕಾಲಚಕ್ರದಡಿಯಲ್ಲಿ ಸಿಲುಕಿ
ಮನ್ವಂತರವಾಗಿ ಕಳೆದುಹೋಗುತಿದೆ..

ಬೆಳಕು ಕತ್ತಲೆಯಂಬ
ಗೆಜ್ಜೆ ಸದ್ದಿನ ಹಾಗೆ
ಮಾನವನ ಬದುಕು ನಡೆದುಹೋಗುತಿದೆ.

ಇತಿಹಾಸದೊಳು ಇಣಿಕಿದರೆ
ಸಹಸ್ರಾರು ಶಾಸನಗಳು ಕತೆಗಳು
ತೆರೆದುಕೊಳ್ಳುತ್ತಾ ಸಾಗುತ್ತವೆ.

ಅವಶೇಷಗಳು ಅನುಬಂಧಗಳಾಗಿ
ಹಿಂದಿನ ಕತೆಗಳ ಮರ್ಮಗಳನ್ನು
ತುಟಿಬಿಚ್ಚಿ ಹೇಳುತ್ತವೆ.

ಕ್ರಿಸ್ತಶಕ ಕ್ರಿಸ್ತಪೂರ್ವಗಳೆಂಬ
ಶಿಲಾಯುಗದೊಳಗೆ
ಘೋರ ಯುದ್ಧಗಳು
ರಾಜ ರಾಜರ ವೈಮನಸ್ಸುಗಳು
ಗತಕಾಲದ ವೈಭವಗಳು
ಸಾಹಿತ್ಯ ವಿಚಾರಗಳು
ಧಾರ್ಮಿಕ ಸಂಖೇತಗಳು
ವಿಧಿ ವಿಧಾನಗಳು
ಚರಿತ್ರೆಯ ಪುಟಗಳಲ್ಲಿ ರಾರಾಜಿಸುತ್ತವೆ.

ಮುಗಿದು ಹೋದ ಪಯಣಗಳಲಿ
ಕಳೆದುಹೋದ ಪ್ರಾಣಗಳನ್ನು
ಗೋರಿಗಳ ರೂಪದಲ್ಲಿ
ಪಿರಮಿಡ್ಡುಗಳ ಆಕಾರದಲ್ಲಿ ನವಿರೇಳಿಸುತ್ತವೆ.

ಕಾಲವು ಸದಾ
ನಡೆಯುತ್ತಲೇ ಇರುತ್ತದೆ.
ಕಾಲ ಗರ್ಭದಲ್ಲಿ
ಕಾಣದ ನೋವುಗಳು
ವಿಷಾದದ ಅಲೆಗಳು
ಮಹಾಯುದ್ಧಗಳ ಬೀಕರತೆಗಳು
ಕಾಮುಕರ ಕಣ್ಣುಗಳು
ವಂಚಕರ ಯೋಜನೆಗಳು.

ಹೆಣ್ಣಿನ ಬಲತ್ಕಾರಗಳು
ನೇಣಿನ ಕುಣಿಕೆಗಳು
ಅಡ್ಡಗಟ್ಟಿದ ಸರಳುಗಳು
ಹೆಣದ ರಾಶಿಗಳು
ಸ್ವಾತಂತ್ರ್ಯ ಘೋಷಗಳು
ಪಿರಂಗಿ ಗುಂಡುಗಳು
ಅಳಿದುಳಿದ ಸ್ಮಾರಕಗಳು
ಕುರುಹಾಗಿ ಉಳಿದ ಸಮಾದಿಗಳು
ಇತಿಹಾಸದ ಅವಶೇಷಗಳಾಗಿ
ಗತಕಾಲದೆಡೆಗೆ ನಮ್ಮನ್ನು ಕೊಂಡೊಯುತ್ತದೆ.


                                                                                ವಸಂತ್