Saturday, August 28, 2010

ಕಾಣದ ಸತ್ಯಗಳಿಗಾಗಿ ಹುಡುಕುತ್ತ ...!.


ಅಗೋಚರವಾದ ದಾರಿಯಲ್ಲಿ
ಗೋಚರಿಸುವ ಸತ್ಯಗಳಿಗಾಗಿ
ಪುಟ್ಟ ದೀಪದೊಂದಿಗೆ ಸಾಗುತ್ತೇನೆ.

ಗಾಳಿಯ ರೂಪದಲ್ಲಿ
ಕತ್ತಲೆಯು ಕೆನ್ನಾಲಿಗೆ ಚಾಚಿ
ಭಯ ಹುಟ್ಟಿಸುವ
ಶಬ್ಧಗಳೊಂದಿಗೆ ಬಂದಾಗ.

ದೀಪದ ಬೆಳಕಲ್ಲಿ ನಿಂತ ನನಗೆ
ನಾ ಬಂದದ್ದಾದರೂ ಏಕೆ
ಎಂಬುದು ಮರೆತೇ ಹೋಗಿರುತ್ತದೆ.

ಸತ್ಯಗಳನ್ನು ಹುಡುಕುವ ತವಕದಲ್ಲಿ
ನನ್ನೊಳಗೆ ನನಗೆ ಕಾಣದ
ಹಲವಾರು ಭಯಗಳು ರೂಪುಗೊಂಡು
ತಪ್ಪಿಸಿಕೊಳ್ಳಲು ಹೆಣಗಾಡುತ್ತೇನೆ.

ಆಸೆ, ನಿರಾಸೆ, ಧ್ವೇಷ,
ಅಸೂಯೆ, ಮೋಹಗಳೆಲ್ಲವು
ನನ್ನನ್ನೇ ಸುತ್ತುವರೆದು ನಿಲ್ಲುತ್ತವೆ.

ನನಗೆ ತಿಳಿಯದ ನನ್ನೊಳಗೂ ಹಲವು
ತಪ್ಪುಗಳಿರುವುದನ್ನು ಕಂಡು
ಪರರ ತಪ್ಪುಗಳಿಗಾಗಿ ಹುಡುಕುವುದು
ಸರಿಯಲ್ಲವೆಂದೆನಿಸಿ.

ಬೆಳಗುತ್ತಿದ್ದ ದೀಪವನ್ನಾರಿಸಿ
ಕತ್ತಲಲ್ಲಿ ನಡೆದು ಸಾಗುತ್ತೇನೆ
ಏನೂ ಕಾಣದ ನನಗೀಗ,
ಬಾನ ಚಂದಿರನೇ ಜತೆಯಾಗುತ್ತಾನೆ. 
                                                                       ವಸಂತ್

Sunday, August 22, 2010

ಸೃಷ್ಟಿಯೊಳಗಿನ ಅದ್ಭುತ ರಹಸ್ಯಗಳು...!.

     ಜಗತ್ತು ಹಲವಾರು ವಿಸ್ಮಯಗಳ ತಾಣವಾಗಿದೆ. ಪ್ರಕೃತಿಯ ಅಂತರಂಗವನ್ನು ಕೆದಕುತ್ತ ಹೋದಂತೆ ಊಹೆಗೂ ನಿಲುಕದ ಸಂಗತಿಗಳು ಹೊರಬೀಳುತ್ತ ಸಾಗುತ್ತವೆ. ಹಲವಾರು ಅದ್ಭುತಗಳನ್ನು ತನ್ನ ಮಡಲಿನೊಳಗೆ ಅಡಗಿಸಿಟ್ಟುಕೊಂಡು ಮನುಷ್ಯನ ಯೋಚನೆಗು ವಿಜ್ಞಾನಿಗಳ ವಾದಕ್ಕು  ಮಧ್ಯದಲ್ಲಿ ಗೋಡೆಯಂತೆ ನಿಂತಿದೆ. ಇದರ ಮರ್ಮವನ್ನು ತಿಳಿದು ಹೇಳುವುದಕ್ಕೆ ಯಾರಿಗಾದರೂ ಕಷ್ಟದಾಯಕವಾಗುತ್ತದೆ. ಪ್ರಪಂಚದ ಪುಟಗಳನ್ನು ತಿರುವುತ್ತ ಸಾಗಿದಂತೆ ನಮಗೆ ಎಲ್ಲೂ ಕಂಡು, ಕೇಳರಿಯದ ಅದ್ಭುಗಳು ಗೋಷರವಾಗುತ್ತದೆ. ಇದು ನಿಜಾನ ಎಂದು ನಮ್ಮ ಮೂಗಿನ ಮೇಲೆ ನಾವೇ ಬೆರಳಿಟ್ಟುಕೊಂಡು ನೋಡಿಕೊಳ್ಳುತ್ತೇವೆ. ಸೃಷ್ಟಿಯೊಳಗಿನ ವೈಪರಿತ್ಯಗಳಿಗೆ ಕಾರಣವಾಗಿರುವ ಪ್ರಕೃತಿಯು ತನ್ನ ಕಪಿಮುಷ್ಠಿಯೊಳಗೆ ಸದಾ ಹಸಿರಿನಿಂದ ಕಂಗೊಳಿಸುವ ನಿತ್ಯಹರಿದ್ವರ್ಣ ಕಾಡುಗಳು. ದುಮ್ಮಿಕ್ಕಿ ಹರಿಯುವ ಜಲಪಾತಗಳು, ನೋಡಿದಷ್ಟು ದೂರಕ್ಕೆ ಬೆಳ್ಳಿಯಂತೆ ಬಿದ್ದುಕೊಂಡಿರುವ ಹಿಮಪರ್ವತಗಳು, ಒಮ್ಮೆಗೆ ಪುಟಿದೆದ್ದು ಲಾವರಸಗಳನ್ನು ಹರಿಸುವ ಜ್ವಾಲಾಮುಖಿಗಳು, ಮನುಷ್ಯನ ಬದುಕನ್ನೆ ತಲ್ಲಣಗೊಳಿಸುವ ಸುನಾಮಿಗಳು, ಬಿರುಗಾಳಿಗಳು, ಚಂಡಮಾರುತಗಳು, ಪ್ರವಾಹಗಳು, ಮಳೆಯೆ ಬೀಳದ ಮರುಳುಗಾಡುಗಳು, ಸದಾ ಮಳೆಯನ್ನೆ ಸುರಿಸುವ ಆಗೊಂಬೆಯಂತ ಪ್ರೆದೇಶಗಳು, ವರ್ಷಪೂರ್ತಿ ಹರಿಯುವ ನದಿಗಳು ಹೇಳುತ್ತ ಹೋದರೆ ಇದರ ಸಂಖ್ಯೆ ಬೆಳೆಯುತ್ತ ಸಾಗುತ್ತದೆ. ಪ್ರಪಂಚದ ಯಾವುದೇ ಭಾಗಕ್ಕೆ ಹೋದರು ಪ್ರೆದೇಶಕ್ಕೆ ಸೀಮಿತವಾದ ಹಲವಾರು ಅದ್ಭುತಗಳ ಸಂಗ್ರಹವನ್ನೆ ಕಾಣಬಹುದು. ಕೆಲವು ಸ್ಥಳಗಳಲ್ಲಿ  ಉದಯಸಿರುವ ವಿಸ್ಮಯಗಳು ಅಂತಹ ಪ್ರದೇಶಗಳಲ್ಲಿವಾಸಿಸುವ ಜನರ ಧಾರ್ಮಿಕ ಸಂಖ್ಯೇತಗಳಾಗಿರುತ್ತವೆ. ಮತ್ತಲವು ಅವರವರ ನಂಬಿಕೆಯಾಗಿ ಮಾರ್ಪಟ್ಟಿರುತ್ತದೆ. ಒಟ್ಟಿನಲ್ಲಿ ನಂಬಲೇ ಬೇಕಾದ ಸತ್ಯಗಳು ನಮ್ಮ ಕಣ್ಣಮುಂದೆ ಸುಳಿದರೆ, ನಂಬಲೇ ಬೇಕಾದ ಪರಿಸ್ಥಿತಿ ನಮ್ಮದಾಗುತ್ತದೆ. ಇಲ್ಲಿ ನಿಮಗೆ ಕೆಲವು ಚಿತ್ರಗಳನ್ನು ತೋರಿಸುತ್ತೇನೆ. ಇದೊಂದು ಅದ್ಭುತ ಮರದ ಚಿತ್ರಗಳು. ಈ ಮರಕ್ಕೆ ಹೆಣ್ಣುಮರ ಅಥವಾ ಹೆಣ್ಣುಬಿಡುವ ಮರವೆಂದು ಕರೆಯುತ್ತಾರೆ. ಇಲ್ಲಿನ ಚಿತ್ರಗಳನ್ನು ಅಂತರ್ ಜಾಲ ತಾಣದಿಂದ ತೆಗೆದುಕೊಳ್ಳಲಾಗಿದೆ. ಇದೋ ನೋಡಿ ಈ ಚಿತ್ರವೆ (Nareepol-Tree) ಹೆಣ್ಣುಬಿಡುವ ಮರಥೈಲ್ಯಾಂಡಿನಲ್ಲಿ ಮರವನ್ನು  ನರೀಪೊಲ್ ಮರವೆಂದು (Nareepol-Tree)  ಕರೆಯುತ್ತಾರೆ.
 
     ಈ ಮರವನ್ನು ಥೈಲ್ಯಾಂಡಿನ (Petchaboon province) ಎಂಬ ಪ್ರೆದೇಶದಲ್ಲಿ ಕಾಣಬಹುದು. ಅಲ್ಲಿನ ಜನರು ಮರವನ್ನು ದೇವರ ಮರವೆಂದು ನಂಬುತ್ತಾರೆ. ದೇವರೆ ಸ್ವತಃ ಮರವನ್ನು ಸೃಷ್ಟಿಮಾಡಿ ಹೋದನೆಂದು ಹೇಳುತ್ತಾರೆ. ಮರದ ಕಾಯಿಗಳು ಮೊದಲಿಗೆ ಬದನೆಕಾಯಿಯ ರೂಪದಲ್ಲಿ ರೂಪುಗೊಂಡು ನಂತರ ಬೆಳೆದಂತೆ ಕೈಕಾಲುಗಳು, ತಲೆ, ಮುಖ, ದೇಹವೆಲ್ಲವೂ ಹೋರಬೀಳುತ್ತದೆ. ಈ ಕಾಯಿಯ ಎಲ್ಲಾ ಲಕ್ಷಣಗಳು ನಗ್ನವಾಗಿ ನಿಂತಿರುವಂತ ಸುರ ಸುಂದರಿಯ ರೂಪವನ್ನು ಹೋಲುತ್ತದೆ. ನೋಡಲು ನಗ್ನರೂಪದ ಅಪೂರ್ವ ಸೌಂಧರ್ಯ ಕಾಶಿಯಂತೆ ಕಂಗೊಳಿಸುತ್ತದೆ. ಈ ಮರದ "ಸೃಷ್ಟಿ" ಒಂದು ಅದ್ಭುತ, ಊಹೆಗೂ ನಿಲುಕದ ಒಂದು ರಹಸ್ಯ.
    ನೋಡಿ ಇಲ್ಲಿ ಮಲಗಿರುವ ಅಜ್ಜಿ ಆಕೃತಿ ನರೀಪೊಲ್ ಮರದಲ್ಲಿ ಬೆಳೆದು ಒಣಗಿದಂತ ಕಾಯಿಯದು. ಸತ್ತ ಅಜ್ಜಿಯ ರೋಪವನ್ನು ಹೋಲುತ್ತದೆ. ಅಲ್ಲಿನ ಜನರು ಮರದ ಕಾಯಿಗಳನ್ನು ಬಹಳ ಭಯ ಭಕ್ತಿಯಿಂದ ತೆಗೆದುಕೊಂಡು ಹೋಗಿ,  ತಮ್ಮ ಮನೆಗಳಲ್ಲಿ ಅವುಗಳಿಗೆ ಆಭರಣಗಳಿಂದ ಶೃಂಗರಿಸಿ ದೇವರ ಕೋಣೆಯಲ್ಲಿಟ್ಟು ಪೂಜಿಸುತ್ತಾರೆ. ಅವರ ಧರ್ಮಗ್ರಂಥಗಳಲ್ಲಿ ಮರದೊಳಗಿನ ದೈವಗುಣದ ಉಲ್ಲೇಖವಿದೆಯಂತೆ. ಮರದ ಉಟ್ಟಿನ ಬಗ್ಗೆ ಅವರದೆ ಆದಾ ಪ್ರತಿವಾದಗಳಿವೆ. ಚಿತ್ರದಲ್ಲಿ ತೋರಿಸಿದಂತೆ ಉಲ್ಲೇಖಿಸಲಾಗಿದೆಯಂತೆ.
   ಈ ಮರವು ಪ್ರಪಂಚದ ಇತರೆಡೆಗಳಲ್ಲಿ ಕಂಡು ಬರುವುದಿಲ್ಲ. ಇದು ಸುಳ್ಳಲ್ಲ ಸತ್ಯ "ನಂಬಿದರೆ ನಂಬಿ ಇಲ್ಲವಾದಲ್ಲಿ ಮರವನ್ನೊಮ್ಮೆ ಕಣ್ಣಾರೆ ನೀಡಬನ್ನಿ" ಎಂದು ಅಲ್ಲಿನ ಜನ ಇತರರಿಗೆ ಸವಲಾಕುತ್ತಾರೆ. ಮರವನ್ನು ನೀವು  ಸಹ ನೋಡಬಹುದು. ಬ್ಯಾಂಕಾಕ್ ನಿಂದ 500 ಕಿ. ಮೀ ದೂರವನ್ನು ಕ್ರಮಿಸಿದರೆ ಸಾಕು. ನಿಮ್ಮ ಮುಂದೆ ಮರದ ವಿರಾಠ್ ರೂಪ ಪ್ರತ್ಯಕ್ಷವಾಗುತ್ತದೆ. (You can see the real tree at Petchaboon province about almost 500 kms away from Bangkok). ಪ್ರಯಾಣಕ್ಕೆ ಸಿದ್ದರಾಗುತ್ತಿದ್ದಿರೇನು ?. 
    ಏನೇ ಹಾಗಲಿ ಸೃಷ್ಟಿಯ ಮುಂದೆ ನಾವೆಲ್ಲರು ಕುಬ್ಜರು. ವರ್ಣಿಸಲು ಸಾಧ್ಯವಾಗದ ಕೌತುಕಗಳನ್ನು ಸೃಷ್ಟಿ ಸೃಷ್ಟಿಸುತ್ತದೆ. ಸೃಷ್ಟಿಗೆ ಮನುಷ್ಯರಾದ ನಾವುಗಳು ತಲೆಬಾಗಲೇ ಬೇಕು. ಇದೊಂದು ಮಾಯಜಗತ್ತು. ಯಾರಿಂದಲು ಸೃಷ್ಟಿಸಲಾಗದ ಸೃಷ್ಟಿಯೊಳಗಿನ ರಹಸ್ಯ.
[ಸೂಚನೆ: ಈ ಮರದ ಬಗ್ಗೆ ವಿವರಣೆ ಸಂಗ್ರಹಣೆ ಮಾಡಿ ಈ ಲೇಖನ ಬರೆಯಲಾಗಿದೆ. ಕೆಲವರು ಈ ಚಿತ್ರಗಳನ್ನು ಗ್ರಾಪಿಕ್ಸ್ ತಂತ್ರಜ್ಞಾನ ಅನ್ನುತ್ತಾರೆ. ಇದರ ಬಗ್ಗೆ ಯಾವುದೇ ಮಾಹಿತಿಯಿರುವುದಿಲ್ಲ]

Saturday, August 14, 2010

ಗಾಂಧಿ ನೆಹರು ಠಾಗೂರರ ದಾರಿಯಲ್ಲಿ ನಡೆವೆವು ..!.


ವರುಷಕೊಮ್ಮೆ ಸ್ವಾತಂತ್ರ್ಯ

ಬಂದೆ ಬರುವುದು,

ಹರುಷಕೊಂದು ಬಾವುಟ

ನಮ್ಮಲಿರುವುದು,ಮೂರು ಬಣ್ಣ ಇದರದಣ್ಣ

ಕೂಗಿ ತಿಳಿಸುವೆ.

ಸತ್ಯ ಅಹಿಂಸೆ ಜ್ಞಾನವೆಂದು

ಹಾಡ ಕಟ್ಟುವೆ.ರಾಷ್ಟ್ರಗೀತೆ ಹಾಡಬೇಕು

ಜಯ ಘೋಷವ ಮೊಳಗಬೇಕು

ಬೀದಿ ಬೀದಿ ಸುತ್ತಿ ತಿರುಗಿ

ಮಡಿದವರಿಗೆ ನಮಿಸಬೇಕು.ಶಾಲೆಯಲ್ಲಿ ಸಿಹಿಯ ತಿಂದು

ನಾವೆಲ್ಲರು ಒಂದೆ ಎಂದು

ಜಾತಿ ಮತ ಕುಲವ ಕೊಂದು

ಮನುಷ್ಯರಂತೆ ಬಾಳ್ವೆವು

ಗಾಂಧಿ ನೆಹರು ಠಾಗೂರರ ದಾರಿಯಲ್ಲಿ ನಡೆವೆವು.
ಜೈ ಹಿಂದ್, ಜೈ ಭಾರತ ಮಾತೆ.

ಎಲ್ಲರಿಗೂ 64 ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು...!                                                                                                                                                                                                             

                                                                           ವಸಂತ್
                                                                                                                                                                                                                                                                               


Wednesday, August 11, 2010

ದಾರಿ ಯಾವುದಯ್ಯ ಈ ಜಗದೊಳಗೆ ..!.ಸಾಗಲೊಲ್ಲದ ಹಾದಿ ಯಾವುದಯ್ಯ,
ಈ ಜಗದೊಳಗೆ, ಸಾಗಿ ಹೋಗುತಿಹರು ಬಿಡದೇ, 
ಕಾಣದ ಹಾದಿ ಬೀದಿಗಳ ಹುಡುಕುತ್ತಾ
ದಿನಕ್ಕೊಂದು ಹೊಸದಾರಿಯ ಅನ್ವೇಷಣೆಯಲಿ.

ತಣ್ಣಗೆ ಮಲಗಿರುವ ಬೀದಿಗಳ ಕೆಣಕಿ
ಹೇ ದಾರಿ, ನಿನ್ನ ಹಾದಿ ಎಲ್ಲಿದೆ,
ಹಾಗೇಯೆ ನಿನ್ನ ಅಂತ್ಯವನ್ನೊಮ್ಮೆ ತಿಳಿಸಿಬಿಡು,
ಎಲ್ಲವನ್ನೂ ಪರೀಕ್ಷಿಸಿ ಬರೆದುಕೊಳ್ಳಬೇಕಿದೆಯೆಂದು.

ಅದು ಇಂದ್ರನಲ್ಲಿರಲಿ ಚಂದ್ರನಲ್ಲಿರಲಿ
ಅಥವಾ ಮತ್ಯಾವುದೋ ಗ್ರಹದಲ್ಲಿರಲಿ
ಅವನಿಗೆ ಬೇಕಿರುವುದು ಕೇವಲ
ಆ ದಾರಿಯ ಲೆಕ್ಕಾಚಾರ ಮಾತ್ರ.

ತಾನು ಮೆಟ್ಟಿದ ನೆಲದಲ್ಲಿ
ಗರಿಕೆಯು ಸಹ ಚಿಗುರೊಡೆಯುವುದಿಲ್ಲ
ಹಾಗೆಂದ ಮಾತ್ರಕ್ಕೆ ಸುಮ್ಮನಿರುತ್ತಾನೆಯೆ ?
ಬೀದಿಗಳಲ್ಲಿ ಸಿಮೆಂಟಿನ ಮರಗಳನ್ನು ಸೃಷ್ಟಿಸುತ್ತಾನೆ,
ಹಸಿರ ರಾಶಿಯ ಕೆಡವಿ ಕಾಂಕ್ರೇಟಿನ ಕಾಡಾಗಿಸುತ್ತಾನೆ.

ಉಣ್ಣುವ ನೆಲವನ್ನು ಕಸಿದು
ಮಿರ ಮಿರ ಮಿಂಚುವ ಮನೆಗಳಾಗಿಸುತ್ತಾನೆ.
ತನ್ನದೇ ದಾರಿಗಳನ್ನು ಪರರಿಗೆ ಮಾರುತ್ತಾ .
ಉಟಕ್ಕೆ ಗತಿ ಇಲ್ಲದವರನ್ನು ಹೊಡೆದು ಹೊರ ದೂಡಿ
ಮೃಷ್ಠಾನ್ನವ ತಿನ್ನುತ್ತಾ ಮೋಜು ಮಾಡುತ್ತಾನೆ.

ಯಾರು ತಾನೆ ಎಷ್ಟೆಷ್ಟು ದೂರ ನಡೆದಾರೂ
ಇಲ್ಲಿ ಬದುಕುವ ಸಕಲ ಜೀವರಾಶಿಗಳಿಗೂ
ಮಾನವನ ಪಾಲಿನಷ್ಟೆ, ಹಕ್ಕಿದೆಯೆಂಬುದನ್ನು ಮರೆಯಬಾರದು
ತನ್ನ ದಾರಿಯಲ್ಲಿ ತಾನು ಮಾತ್ರ ನಡೆಯುವುದ ಬಿಟ್ಟು,
ಇತರರನ್ನು ತನ್ನ ಜೊತೆ ನಡೆಸಿಕೊಂಡು ಸಾಗಿದರೆ 
ಸಕಲ ಜೀವಕುಲಕ್ಕೂ ಒಳಿತಾಗಬಹುದಲ್ಲವೆ.
                                                                                         ವಸಂತ್

Friday, August 6, 2010

ನಾಳೆ ಬರುವ ಕನಸಿಗಾಗಿ ಕಾಯುತ್ತಿರುತ್ತೇನೆಹತ್ತಾರೂ ಬಾರಿಯಾದರೂ ದಿಟ್ಟಿಸುತ್ತೇನೆ
ಮೇಲೆ ಸಾಗುವ ಮೋಡಗಳ ಪಯಣವನ್ನು
ಸಾಗುತ್ತಾ ಸಾಗುತ್ತಾ ಮರೆಯಾಗುವ
ಅವುಗಳ ಪರಿಯ ಒಮ್ಮೆಯಾದರೂ
ನನ್ನ ಜೀವನಕ್ಕೆ ಅಳವಡಿಸಿಕೊಳ್ಳಲು
ಸಾಧ್ಯವಾಗುತ್ತದೇನೊ ಎಂಬ ತವಕದೊಂದಿಗೆ.
ಅವುಗಳ ಸ್ವಚ್ಛಂದ ಸಾಗಾಟ
ಗಾಳಿಯೊಂದಿಗಿ ಬೆಸೆದ ನಂಟು
ಸೂರ್ಯನ ತಾಪಕ್ಕೆ ಕರಗಿಹೋದರೂ 
ನಾಳೆಯ ಬಗ್ಗೆ ಯೋಚಿಸದ ಪರಿಯನ್ನು
ತದೇಕಚಿತ್ತದಿಂದಲೇ ಗಮನಿಸುತ್ತೇನೆ
ನನ್ನ ಜೀವನವು ಅವುಗಳಂತಾದರೆ ಸಾಕೆಂದು
ಪ್ರತಿ ರಾತ್ರಿಯು ಕನಸುಕಾಣುತ್ತೇನೆ
ದಿನನಿತ್ಯದ ಗೊಡವೆಗಳು
ಬೇಸರವನ್ನು ತರಿಸುವ ಪ್ರಸಂಗಗಳು
ನೋವಿನ ಛಾಯೆಗಳು
ವಿಷಾದದ  ಬಿಂಬಗಳು
ಕೊನೆಯಾಗದ ಹೆಜ್ಜೆ ಗುರುತುಗಳು
ಮನಸ್ಸಿನಲ್ಲಿ ಮೂಡಿ ಕಸಿವಿಸಿ ಗೊಳಿಸುತ್ತವೆ
ನನ್ನ ಸ್ವಚ್ಛಂದ ಆಸೆಗೂ ಅಡ್ಡಿಯುಂಟುಮಾಡುತ್ತವೆ
ಮುಂಜಾನೆಯೆ ಎದ್ದು ಆಕಾಶದೆಡೆಗೆ  
ಮುಖಮಾಡಿ ದಿಟ್ಟಿಸಿ ನೋಡುತ್ತೇನೆ
ಬಿಸಿಯುಸಿರ ಭಾವವೊಂದು ಬಂದು ಕಣ್ಮರೆಯಾಗುತ್ತದೆ
ನನ್ನ ಸ್ವಚ್ಛಂದ ಜೀವನಕ್ಕೆ ರೆಕ್ಕೆ ಮೂಡುವುದು
ಕೇವಲ ಕನಸಿನಲ್ಲೆಂದು ತಿಳಿದು
ನಾಳೆ ಬರುವ ಕನಸಿಗಾಗಿ ಕಾಯುತ್ತಿರುತ್ತೇನೆ.

[ಕ್ಷಮಿಸಿ ತಡವಾಗಿ ಎಲ್ಲರಿರಗೂ ಸ್ನೇಹಿತರ ದಿನದ ಶುಭಾಷಯಗಳನ್ನು ಕೋರುತ್ತಿದ್ದೇನೆ.]