Saturday, October 23, 2010

ಮೌನದೊಳು ಮೌನವಾಗುತ್ತ....!.


ನೂರಾರು ಆಸೆಗಳ ಹೊತ್ತು ಹಲವಾರು ಕನಸುಗಳೊಂದಿಗೆ
ಜವರಾಯನ ಬೆದರಿಕೆಗೂ ಬಗ್ಗದೆ
ಮೌನದೊಳು ಮೌನವಾಗಿ ಬದುಕುತ್ತೇನೆ....

ಜಡವಾದ ಮಾತುಗಳು, ಸತ್ಯವನ್ನು ತೊರೆದ ನಾಲಿಗೆಗಳು,
ಎಡಗೈಯಿಂದ ಬಲಗೈಗೆ ಗೊತ್ತಾಗದಂತೆ
ಹಸ್ತಾಂತರವಾಗುವ ಪಾಪಗಳು ನನ್ನನ್ನು
ನಿನ್ನದು ಯಾವ ದಿಕ್ಕಿನ ದಾರಿ ಎಂದು ಕೇಳುತ್ತವೆ.... ?.

ಒಮ್ಮೆ ತಣ್ಣಗೆ ಬೀಸಿಬಂದ ತಂಗಾಳಿಯಲ್ಲಿ
ಕಾಣದ ವಿಷವಾಯು ಹರಿಯುತ್ತದೆ....
ದಾಹ ತೀರಿಸಿಕೊಳ್ಳಲೆಂದು ನೀರು ಕುಡಿಯಲು ಹೋದಾಗ
ಲವಣಗಳು ವಿಷಕಾರಕ ಪದಾರ್ಥಗಳು
ನಮ್ಮ ದೇಹದೊಳು ಸೇರುತ್ತಿರುತ್ತವೆ....
ಕತ್ತಲಲ್ಲೂ ಬೆಳಕಾದಂತೆ ಬಂದೂಕು ಬಾಂಬುಗಳ ಸ್ಪೋಟಗಳು
ಅಬ್ಬರಿಸಿ ತಣ್ಣಗೆ ಮರೆಯಾಗುತ್ತವೆ....

ಮೌನವಾಗಿ ಕುಳಿತಿದ್ದ ನನ್ನಲ್ಲಿ
ಕೆಲವು ಪ್ರಶ್ನೆಗಳು ಎದುರುಗೊಂಡು ಕೇಳುತ್ತದೆ
ನಾವು ಬದುಕುವುದಾದರೂ ಯಾವ ಪುರುಷಾರ್ಥಕ್ಕಾಗಿ....
ಅಪಾಯ ಕಾರಕ ವಿಷಜಂತುಗಳ ಜೊತೆ ನೆಮ್ಮದಿಕಾಣದ ಬದುಕು, 
ಯಾವ ಕ್ಷಣದಲ್ಲಾದರು ಏನಾದರೂ ಆಗಬಹದು
ಈ ಲೋಕವನ್ನು ಮತ್ತೆ ತಿದ್ದಲು ಬಾಬ, ಗಾಂಧಿ, ಬುದ್ದ
ಬಸವರಂತಹವರಾರು ಬರಲಾರರ ಎಂಬ ಪ್ರಶ್ನೆಗೆ ?.
ನನ್ನ ಬಳಿ ಉತ್ತರವಿರಲಿಲ್ಲ....!.
ಆದರೆ ಸಜ್ಜನಿಕೆಯ ಮನಸ್ಸುಗಳು ಒಂದಾದಲ್ಲಿ ಮಾತ್ರ
ದುರ್ಗುಣಗಳನ್ನು ಹೋಗಲಾಡಿಸಬಹುದೆಂದು ನನ್ನ ಒಮ್ಮತವಾಗಿತ್ತು....

ಪ್ರಾಣವಿಲ್ಲದ ವೃಕ್ಷ ಸಂಪತ್ತು
ತನ್ನಲಿ ಬಿಡುವ ಹೂ ಹಣ್ಣುಗಳ ಬಗ್ಗೆ ತಮಗೆ ಅರಿವಿಲ್ಲದಿದ್ದರೂ
ಪರರ ಉದರವನ್ನು ಪೋಷಿಸುತ್ತವೆ....
ಹಾಗೆ ನಮ್ಮ ಬದುಕು ತನಗಲ್ಲದಿದ್ದರೂ
ಇತರರ ನೆರವಿಗಾದರೂ ಜೀವಿಸಬೇಕೆಂದುಕೊಳ್ಳುತ್ತದೆ....
ಗಾಂಧೀಜಿಯ ತತ್ವವನು ಗಾಳಿಗೆ ತೂರಿ
ಗೌತಮನ ಭೋದಿಷೃಕ್ಷವನ್ನೇ ಕಡಿದು
ಅಲ್ಲಮ ಬಾಬರ ವಾಕ್ಯಗಳಿಗೆ ಬೆಲೆಕೊಡುವವರಾರೆಂದು ಅಂದುಕೊಳ್ಳುತ್ತಿದ್ದಾಗ....

ಸಂಜೆಯ ಬಾನಲಿದ್ದ ಸೂರ್ಯ ಆಗತಾನೇ ಕತ್ತಲು ದೂಡಿ ಕೆಂಪಾಗುತ್ತಿರುತ್ತಾನೆ.....
ಅದರರ್ಥ ನಾಳೆಯ ಬೆಳಕಿಗೆ ಈ ಕತ್ತಲು ಸಾಕ್ಷಿಯೆಂಬಂತ್ತಿತ್ತು....
ಮೌನದಲಿ ಮೌನವಾಗಿದ್ದ ನನಗೆ ಮುಂದಿನ ಕಾರ್ಯಗಳ ಬಗ್ಗೆ ಅರಿವಾಗಿ
ಕಾಣದ ಸತ್ಯಗಳನ್ನು ಹುಡುಕುತ್ತ ಕತ್ತಲಲ್ಲಿ ಸಾಗುತ್ತೇನೆ.......

                                                                              ವಸಂತ್ 

ಚಿತ್ರಕೃಪೆ. http://lh4.ggpht.com

Tuesday, October 19, 2010

ಬಾರಮ್ಮಿ ನನ್ ಮನೆಗೊಗುವ...!. ಹಳ್ಳಿ ಹಾಡು.


ಕದ್ದು ಮುಚ್ಚಿ ನಿನ್ನ ನೋಡಿ
ಸುಮ್ನೆ ಇರಾಕಾಗ್ತ ಇಲ್ಲ
ಆಗೈತೇ... ನನ್ನ ಮನಸ್ಸು ರಾಡಿ..
ಚಲ್ವಿ ಬೇಗ... ಒಪ್ಕೋಳ್ಳೊಲೇ  ಬಂದು ಕೂಡಿ... IIಪII

ಅತ್ತ ಇತ್ತ ಸುಳಿಯಂಗಿಲ್ಲ
ಹೆಜ್ಜೆ ಊರಿ ನಡಿಯೊಂಗಿಲ್ಲ
ಏನಾ ಆಗೈತೆ... ಹೈದ ನಿಂಗೆ ದಾಡಿ...
ಸುಮ್ನೆ ಹೋಗೋಕ್ಬಿಂಡಗಿಲ್ಲ ಮಾನಗೇಡಿ...

ನಿನ್ನ ಮಾತು ಎಷ್ಟು ಚೆನ್ನ
ಬೇಕಾದ್ರೆಳು ಕೊಡುವೆ ಚಿನ್ನ
ದೂರ... ಹೋಗು ಅಂತ ಮಾತ್ರ ಹೇಳ್ಬೆಡ...
ಚಲ್ವಿ ದೂರ... ಹೋಗು ಅಂತ ಮಾತ್ರ ಹೇಳ್ಬೆಡ...

ಮೂತಿ ನೋಡು ಓತಿಕೇತ
ಮಯ್ಯಾ ಬಣ್ಣ ಕಾಗೆ ಚಿನ್ನ
ಹೆಂಗಾ... ಒಪ್ಕೊಳ್ಳಿ ನಿನ್ನ ಹಳ್ಳಿ ಹೈದ...
ನಾನು ಹೆಂಗಾ... ಒಪ್ಕೊಳ್ಳಿ ನಿನ್ನ ಹಳ್ಳಿ ಹೈದ...

ಲೇ ಆರ್ನೂರು ಎಕ್ರೆ ಅಡಿಕೆ ತೋಟ
ಮುನ್ನೂರೆಕ್ರೆ ಭತ್ತದ ಗದ್ದೆ
ಇನ್ನೇನ್ ಬೇಕು... ಹೇಳೇ ಬಂದು ಬಾಳೋಕೆ...
ಚಲ್ವಿ ಇನ್ನೇನ್ ಬೇಕೆ... ಕೇಳು ಜೊತೆಯಾಗಿರೊಕೆ...

ನಿನ್ ಅಡಿಕೆ ತೋಟ ನಿನೇ ಇಟ್ಕೊ
ಭತ್ತದ ಗದ್ದೆ ತಲೆಮ್ಯಾಲೊತ್ಕೊ
ಪ್ರೀತೀನ್ ...ದುಡ್ಡಿನಲ್ಲಿ ಆಳಿಯೋಕಾಗಲ್ಲ...
ಹೈದ ಪ್ರೀತೀನ್... ದುಡ್ಡಿನಲ್ಲಿ ಆಳಿಯೋಕಾಗಲ್ಲ...

ನೀನ್ ಬತ್ತಿನಂದ್ರೆ ಜೊತೆಯಾಗ್ ಬತ್ತಿನಿ
ಇಲ್ಲಾ ಅಂದ್ರೆ ಪ್ರಾಣ ಬಿಡ್ತಿನಿ
ನಿನ್ ಮೇಲ್ ನಂಗೆ... ತುಂಬಾ ಪ್ರೀತಿ ಐತಮ್ಮಿ ...
ಚಲ್ವಿ ನಿನ್ ಮೇಲ್ ನಂಗೆ... ತುಂಬಾ ಪ್ರೀತಿ ಐತಮ್ಮಿ...

ಒಂದೇ ಮಾತ್ನಗೆ ಸೋಲಿಸ್ಬಿಟ್ಟೆ
ಪ್ರಾಣ ಬಿಡ್ತಿನಿನಂತ ಅತ್ತಿಸಿ ಬಿಟ್ಟೆ
ಬತ್ತಿನ್ ನಡಿಯೋ... ಹೈದ ನಿನ್ನ ಊರಿಗೆ...
ಇನ್ನು ನನ್ನ ಬಾಳು... ಎಲ್ಲಾ ನಿನ್ನ ಜೊತೆಯಾಗೆ...

                                                      ವಸಂತ್ 

ಚಿತ್ರಕೃಪೆ. http://www.sulekha.com

Saturday, October 16, 2010

ನಿನ್ನ ನಗುವೇತಕೆ ಮೌನವಾಗಿದೆ..!.


ಕುದಿಯುವ ಕೋಪ ಮನದೊಳಗೆ
ಅರಿಯದ ವೇದನೆ ನಿನ್ನೊಳಗೆ
ನಗುವೇತಕೆ ಮೌನವಾಗಿದೆ  
ನಿನ್ನ ನಲಿವೇತಕೆ ಮರೆಯಾಗಿದೆ . IIಪII

ಹೊಳೆಯುವ ರೂಪವು ನೀನಲ್ಲವೆ
ನಿನ್ನ ಮುನಿಸಿಗೆ ಕಾರಣ ಬೇಕಲ್ಲವೆ
ನಿನ್ನಯ ವೇದನೆ ನನ್ನದಲ್ಲವೆ
ನಿನ್ನ ಹೃದಯದೊಳೆನಗೆ ಸ್ಥಳವಿಲ್ಲವೆ.

ಪ್ರೀತಿಯ ಪುಟಗಳ ಹಾಳೆಯ ಮೇಲೆ
ಕಣ್ಣೀರಿನಿಂದ ಕಥೆ ಬರೆದೆ
ಹೃದಯದ ಒಳಗೆ ಉಸಿರಾದಂತೆ
ನನ್ನ ಬಾಳಿಗೆ ಮುನ್ನುಡಿಯಾದೆ.

ಬೆಳಗುವ ಸೂರ್ಯ ಕತ್ತಲಾದಂತೆ
ನಲಿಯುವ ತಾವರೆ ಸುಮ್ಮನಾಗಿದೆ
ಲೋಕಕೆ ಲೋಕವು ಒಂಟಿಯಾದಂತೆ
ಸುಮ್ಮನಿರೆ ನೀ, ನಾ ಶಿಲೆಯಾಗುವೆ.

ಮನಸಿನ ಕೋಪವ ತಣಿಸಿಬಿಡು
ಹೂನಗೆ ತುಟಿಗಳ ಅರಳಿಬಿಡು
ನಿನ್ನ ಜೀವಕೆ ಜೀವವು ನನ್ನಾಣೆ
ನಿನಗಾಗಿ ನನ್ನ ಪ್ರಾಣವ ಬಿಟ್ಟೆನೇ..

ನಗುವೇತಕೆ ಮೌನವಾಗಿದೆ  
ನಿನ್ನ ನಲಿವೇತಕೆ ಮರೆಯಾಗಿದೆ . IIಪII

                                       ವಸಂತ್


ಚತ್ರಕೃಪೆ. http://lh3.ggpht.com

Tuesday, October 12, 2010

ನೇಸರ...!.


ಮೂಡಲ ಬಾಗಿಲಿನಿಂದ
ಅರುಣೋದಯ ನೇಸರ ಬಂದ
ಕತ್ತಲು ಕವಿದ ಮನಕೆ
ಚೈತನ್ಯದ ಬೆಳಕತಂದ.

ಗಿರಿ ಶಿಖರಗಳ ಮೇಲೆ ಹೇರಿ
ಸುಮ ಲತೆಗಳ ಮನವ ಗೆದ್ದ
ಹಸಿರಮ್ಮನ ಗುಡಿಯ ಹೊಕ್ಕು
ಕಲರವಗಳನು ನೀಡಿದ.

ಜುಳು ಜುಳನೆ ಹರಿವ ಝರಿಗೆ
ದಾರಿತೋರೊ ದಾತನಾದ.
ತನಗಾಗಿ ಕಾದ ಪದ್ಮಕೆ
ಹೊಸ ಹುರುಪಿನ ಕಾಂತಿತಂದ.

ಸಮಯಕ್ಕೆ ತಕ್ಕ ಚಲನೆ
ಒಂದುಗಳಿಗೆ ಸುಮ್ಮನಿರನು
ಧರೆ ಕಾಯೋ ಧೀರನಿವನು
ದಿಟ್ಟ ತನದಿ ಮೆರೆವನು.

ಮೂಡಣದಿ ಹುಟ್ಟಿ ಬೆಳೆದು
ಪಡುವಣದಲಿ ಮುಳುಗುವ.
ನವ ಚೈತನ್ಯದಿ ಜನ್ಮಪಡೆದು
ಮತ್ತೆ ಬೆಳಕ ತೋರುವ.

                                    ವಸಂತ್
ಚಿತ್ರಕೃಪೆ. http://lh5.ggpht.com

Friday, October 8, 2010

ಜನಾ (ಕಾಯೋ ಮಾ) ದೇಶ ...!.


ಏನಾಗುತಿದೆ ನಮ್ಮ ರಾಜ್ಯಕ್ಕೆಏನಾಗಿದೆ ನಮ್ಮ ಜನಪ್ರತಿನಿಧಿಗಳಿಗೆ
ಕನ್ನಡಾಂಬೆಯ ಮಾನವನ್ನು 
ಹಣಕ್ಕೂ ಅಧಿಕಾರಕ್ಕೂ
ಹೊರ ರಾಜ್ಯಗಳಲ್ಲಿಟ್ಟು ಮಾರುತಿಹರಲ್ಲ
ಇದು ಸರಿಯೇ ?.

ಘಳಿಗೆಗೊಂದು ಮಾತು
ದಿನಕ್ಕೊಂದು ಬಣ್ಣ
ಅಭಿವೃದ್ಧಿಯ ರತ್ನಗಂಬಳಿಯಾಗಬೇಕಿದ್ದ ಸರ್ಕಾರ
ಅಧಿಕಾರಕ್ಕಾಗಿ ಕಚ್ಚಾಡುತ್ತಿದೆಯಲ್ಲಾ
ಇದು ನ್ಯಾಯವೇ ?.

ಜನರಿಂದ ಗೆದ್ದು ಬಂದು
ಜನರಿಗಾಗಿ ಮಾಡುವ ಕಾರ್ಯಗಳ ಮರೆತು
ದಿನಕ್ಕೊಂದು ಸಮಸ್ಸೆಯನು ಸೃಷ್ಟಿಸಿ
ಶ್ರೀಮಂತ ರಾಜ್ಯವನು 
ಲೂಟಿ ಕೋರರ ರಾಜ್ಯವಾಗಿಹರಲ್ಲ
ಇದು ಧರ್ಮವೇ ?.

ಜನತೆಯ ಮಾನವನ್ನು ಬೀದಿಯಲ್ಲಿಟ್ಟು
ಅಭಿವೃದ್ಧಿಯ ಆಶ್ವಾಸನೆ ಕೊಟ್ಟು
ಜನತೆಯ ಹಣದಿಂದ 
ಮೋಜು ಮಸ್ತಿ ಮಾಡುತ್ತಿದ್ದರೆ
ರಾಜ್ಯದ ಗತಿಯೇನು ?
ಸಮಸ್ಸೆಗಳಿಗೆ ಉತ್ತರವೇನು ?

ಜನ ಸರ್ಕಾರವೋ
ಜಾಣರ ಸರ್ಕಾರವೋ
ಶ್ರೀಮಂತರ ರಾಜ್ಯದಲ್ಲಿ
ಸಾಮಾನ್ಯ ಜನರು ಉಸಿರಾಡದಂತ
ಸ್ಥತಿಗೆ ಕಾರಣರಾರು ?.

ಜನ ಮರಳೋ ಜಾತ್ರೆ ಮರಳೋ
ಜನನಾಯಕರೋ ಹಣಚೋರರೋ
ಉದ್ದರಿಸುವ ನೆಪದಲ್ಲಿ
ಹಾಳುಗೆಡವಿ ಸಾಗುತಿಹರಲ್ಲಾ
ಇದು ನ್ಯಾಯವೇ ?.

ನಮ್ಮ ರಾಜ್ಯದಲ್ಲೊಂದು
ಹೊಸ ಧಿಗಂತದ ಪರ್ವ ಬೇಕಿದೆ.
ಜನರನ್ನು ಜನರನ್ನಾಗಿ ಕಾಣುವಂತ
ಜನ ಶಕ್ತಿಗಳು ಒಂದಾಗಬೇಕಿದೆ.
ಸಮಸ್ಸೆಗಳನ್ನು ಸುಲಭವಾಗಿ ತಿಳಿಗೊಳಿಸುವಂತ
ಉನ್ನತ ಮನಸ್ಸುಗಳ ಕೊರತೆಯಿದೆ.

ಮತಚಲಾಯಿಸುವ ಮುನ್ನ 
ಯೋಚಿಸಿ ಹೆಜ್ಜೆಯನಿಟ್ಟರೆ ಒಳ್ಳೆಯದು 
ಇಲ್ಲದಿದ್ದಲ್ಲಿ ನಮಗೆ ನಾವೇ ಶತ್ರುಗಳಾಗುತ್ತೇವೆ.

ಇದಕ್ಕಾಗಿ ಕಾಯುವುದೊಂದು ಬಿಟ್ಟು
ಬೇರೇನು  ಮಾಡಲಾಗದು
ಅಂತಹ ಸಮಯಕ್ಕಾಗಿ ಕಾಯಬೇಕಿದೆ.

                                                   ವಸಂತ್

ಚಿತ್ರಕೃಪೆ. http://www.southasianmedia.net
Tuesday, October 5, 2010

ಜೀವನ..!.ಬಾವನೆಗಳಿಗೆ ರೆಕ್ಕಗಳಿಲ್ಲ....
ಆಸೆಗಳಿಗೆ ಇಷ್ಟೆ ಅಂತರದ ಮಿತಿಯಿಲ್ಲ....
ಜೀವನವೆಂಬುದು ಸುಧೀರ್ಗ ಪಯಣ....
ಕಷ್ಟ ಸುಖಗಳೊಂದಿನ ಅನುದಿನದ ಪ್ರಯಾಣ....

ಸೋಲು ಯಾರನ್ನು ಬಿಡೋದಿಲ್ಲ....
ಸೋಲಿನ ಬೆನ್ನು ಹತ್ತು ವಂತ ಗೆಲುವೊಂದಿದೆ....
ಸದಾ ಸೋಲನ್ನೇ ನೆನೆದು ಕೊರಗುವುದ ಬಿಟ್ಟು....
ಗೆಲುವಿನ ದಾರಿಯಲ್ಲಿ ಪಯಣಿಸೋಣ.....


ಚಾಪೆಯಿದ್ದಷ್ಟು ಕಾಲನ್ನು ಚಾಚುತ್ತ .....
ಜೀವನದ ಅರ್ಥವ ತಿಳಿಯೋಣ....
ಏನೇ ಬಂದರೂ ಧೈರ್ಯದಿಂದ ಎದುರಿಸಿ....
ಬಾಳಿನ ಗುರಿಯನು ಮುಟ್ಟೋಣ....!.


                                                                     ವಸಂತ್
http://lh4.ggpht.com

Saturday, October 2, 2010

ಸದಾ ನೆನೆದು ಸಂಭ್ರಮಿಸುವೆ...!.


 
ಕತ್ತಲ ಕೋಟೆಯನು ತಣ್ಣಗೆ ಸರಿಸಿ
ಬೆಳ್ಮುಗಿಲ ದಟ್ಟನೆಯ ಧರಗೆ ತಂದಂತೆ
ರವಿಯ ಮಾದಕ ನೋಟಕು ಮೂಗು ಮುರಿಯುತ
ನಮ್ಮ ಮನೆಯ ಬಾಗಿಲಿನವರೆಗೂ ಮಂಜು ಮಂಜು....

ಹಸಿರ ಹುಲ್ಲಿನ ಮೇಲೆ ಮಿನುಗುವ ನಕ್ಷತ್ರದ ಹರಳು
ತಣ್ಣನೆಯ ಗಾಳಿಗೆ ಸೋತು ಸೊರಗುವ ಮನ
ಮೈಕೊಡವಿ ಎದ್ದ ಜೇಡನ ಬಲೆಯಲ್ಲೂ
ಶೃಂಗರಿಸಿ ಹೋಗಿದ್ದ ಮುತ್ತುಗಳ ಮಾಲೆ....

ಯಾರಿಗಾಗಿ ಬರೆದ ಕವನವಿದು ನಾಕಾಣೆ
ಮತ್ಯಾರಿಗಾಗಿ ರಚಿತವಾದ ಕಲಾಕೃತಿಯೋ ನನ್ನಾಣೆ
ಕತ್ತಲು ಸರಿದು ಬೆಳಕು ಮೂಡಿದೊಡನೆಯೆ
ಮಧುಮಾಸದ ಸಂಜೆಯನ್ನು ನೆನಪಿಸಿದಂತೆ....

ವರುಷಕೊಮ್ಮೆಯಾದರೂ ದರುಶನವಿತ್ತು ಹೋಗುವ
ಬಳಲಿ ಬೆಂಡಾದ ಮನಕೆ ಆಹ್ಲಾದವನು ನೀಡುವ
ನಮ್ಮನೆಯವರೆಗೂ ಕರೆಯದೇ ಬರುವ ಅಥಿತಿಯನ್ನು
ನಾ ಸದಾ ನೆನೆದು ಸಂಭ್ರಮಿಸುತ್ತೇನೆ....

                                                                   ವಸಂತ್
ಚಿತ್ರಕೃಪೆ. http://lh4.ggpht.com