Sunday, February 27, 2011

ನಾನು ನಾನೆನ್ನದಿರು ಎಲೆ ಮೂಡ ಮನವೆ...

ನಾನು ನಾನೆನ್ನದಿರು ಎಲೆ ಮೂಡ ಮನವೆ
ನಾವು ನಮ್ಮವರೆಂದಲ್ಲಿ ಶಾಂತಿಯುಂಟು...
ನಾಲ್ಕು ಜನರೊಳು ನೀ ತಾನೊಬ್ಬನಾದಲ್ಲಿ
ನಿನ್ನ ಸೋಲಿಸಲು ಮತ್ಯಾರು ಇಹರಿಲ್ಲಿ...

ನಾನೇ ಎಂದಲ್ಲಿ ನಿನ್ನ ಜೀವನವು ಸಾಗುವುದೆ ?
ಬಂಡಿನೊಗವನು ಹೊರಲು ಜೋಡೆತ್ತುಗಳು ಬೇಕು...
ನಾನು ನಾನೇ ಎಂದು ನಡೆದಾಗ ನೀನಿನೊಮ್ಮೆ 
ಎಡವಿ ಬಿದ್ದರೆ ನಿನ್ನ ಮತ್ತೊಬ್ಬರು ಎಬ್ಬಿಸಬೇಕು...

ಬೀಸು ಗಾಳಿಯಲಿ ನಾನೆಂಬುದಿಲ್ಲ...
ಸುರಿವ ಮಳೆಯಲು ಕೂಡ ನಾನೆಂಬುದುಂಟೆ ?
ಉರಿವ ಸೂರ್ಯನು ನಾನು ನಾನೆಂದು ಕೂತರೆ...
ಬೆಳಕ ಕಾಣಲು ನಾವು ಮತ್ತೆಲ್ಲಿ ಹೋಗುವುದು...

ನಾನು ನನ್ನದು ನಿಜ, ಎಷ್ಟು ದಿನ ಈ ಬಾಳು...
ಮುಪ್ಪು ಕಾಡಿದರೆ ನಿನಗೆ ನಾನೆಂಬುದುಂಟೆ ?
ಬಾಳೊಂದು ನದಿಯಂತೆ ಸಾಗುವುದು ನಮ ಧರ್ಮ
ಸಾಗಿ ಹೋಗುವ ನಾವು ಎಲ್ಲರೊಳು ಸೇರಿ...

                                                          ವಸಂತ್

Saturday, February 26, 2011

ದೂರವಿಲ್ಲವೆನಿಸುತ್ತಿದೆ.....


ದೂರದಲ್ಲಿ ಕಾಣುವ ಬೆಟ್ಟವನು ಕಂಡು
ಅನುದಿನವೂ ಕೈ ಮುಗಿದು ಪ್ರಾರ್ಥಿಸುತ್ತೇನೆ
ಆದರೆ ಅದು ದೇವರೆಂದಲ್ಲ !!.
ಅದರ ಮೇಲೆ ಯಾರ ವಕ್ರದೃಷ್ಠಿಯೂ ಬೀಳದಿರಲೆಂದು...

ಮಾನವನ ಮನಸ್ಸು ಸುಕೋಮಲದಂತಿದ್ದರೂ.
ಅವನೊಳಗೆ ಕಂಡಿದ್ದೆಲ್ಲವನ್ನೂ 
ದಕ್ಕಿಸಿಕೊಳ್ಳುವಂತ ಸ್ವಾರ್ಥವಿದೆ.
ಎಲ್ಲವನ್ನೂ ಬರಿದಾಗಿಸುವ
ಮಾಯಾ ಚಂಚಲೆಯ ಮರ್ಮವಿದೆ..
ಇದರಲ್ಲಿ ತನ್ನ ಪಾತ್ರವೇನು ಇಲ್ಲವೆಂಬ 
ಮೋಸ ವಂಚನೆಯ ತಂತ್ರಗಾರಿಕೆಯೂ ಇದೆ…

ಕಣ್ತೆರೆದು ಕಣ್ಮುಚ್ಚುವುದರೊಳಗೆ
ಕೇವಲ ಬೆಟ್ಟವನ್ನೇ ಅಲ್ಲಾ,..
ಈಡೀ ಪರಿಸರವನ್ನೇ ನುಂಗಿ ಹಾಕುವಂತ
ಪರಮಾಣು ಆಯುಧಗಳ ಸಂಗ್ರವೂ ಇದೆ...

ತನ್ನ ಅಸ್ಥತ್ವದ ಉಳಿವಿಗಾಗಿ
ಇತರರನ್ನೂ ಬಲಿಕೊಡಲೆಯತ್ನಿಸುವ
ಕ್ರೂರ ಮನಸ್ಸುಗಳ ಯೋಜನೆಗಳಿವೆ.
ಭೂಮಿಯನ್ನೇ ಅಲ್ಲದೆ ಇತರ ಗ್ರಹಗಳಿಗೂ
ತನ್ನ ಸಂಕುಲವನ್ನು ಸಾಗಿಸುವ ಯೋಚನೆಗಳೂ ಇವೆ.

ಹಿಂದಿದ್ದ.. ಬೆಟ್ಟಗಳು ಅಡವಿಗಳು,
ಝರಿ. ತೊರೆಗಳು,
ಮಣ್ಣು ದಿಬ್ಬಗಳು, ಗಿರಿ ಶಿಕರಗಳು,  
ಕೆರೆ ಕುಂಟೆಗಳು, ವನ್ಯಜೀವಿಗಳು,
ಮೀನುಗಳು, ಕೊಕ್ಕರೆಗಳು,
ಸಣ್ಣ ಪುಟ್ಟ ಗುಬ್ಬಿಗಳನ್ನೂ ಸಹ
ಮುಂದೊಂದು ದಿನ ಕೇವಲ ಚಿತ್ರಪಟಗಳಲ್ಲಿ
ಕಾಣುವ ಕಾಲ ದೂರವಿಲ್ಲವೆನಿಸುತ್ತಿದೆ....

                                                            ವಸಂತ್
ಚಿತ್ರಕೈಪೆ. http://sampada.net

Wednesday, February 23, 2011

ಚಿತ್ರ ಬೇಟೆ ...7.


1
2
ಈ ಜೇಡರಗಳ ಹೆಸರು ಗೊತ್ತಿಲ್ಲ. ಮೊನ್ನೆ ನಮ್ಮ ಆಪೀಸಿನ ಬಳಿಯ ಗಿಡವೊಂದರಲ್ಲಿ ಇಂತಹವುಗಳು ಬಹಳಷ್ಟು ಇದ್ದವು. ಇವುಗಳ ಕಾಲುಗಳ ಮೇಲೆ ಮುಳ್ಳುಗಳನ್ನು ಕಾಣಬಹುದು..

Wednesday, February 16, 2011

ನಟರಾಜ...


ಸರಿಗಮಪದನಿ ಸಪ್ತಸ್ವರ.
ಸ್ವರ ಮಾದುರ್ಯದ ಸಂಗೀತ ಸಾಗರ..
ಸರಿಗಮಪದನಿ ಸಪ್ತಸ್ವರ…(ಪ)

ರಾಗಕೇ ರೂಪವು ಕೋಗಿಲೆಯಂತೆ.
ಗಾನದ ಸ್ವರವೆ ಕೊಳಲಂತೆ..
ನಾಟ್ಯದ ರೂಪ ನಟರಾಜ..
ನಟನಟಿಯರಿಗೆಲ್ಲ ಯುವತೇಜ

ನುಡಿಯೊಳ್ ಪಲಕುತ ನಾಟ್ಯವ ಗೈವ.
ಸುಂದರ ಪುರುಷನು ನಿನಾರೊ.
ಭಾವದಿ ನಲಿಯುತ ಮನವನು ತಣಸುವ..
ಮಾಯ ಚಂದಿರ ತಾನಾರೊ..

ಹೆಜ್ಜೆಯೊಳ್ ಗೆಜ್ಜೆಯ ಗಲ್ ಗಲ್ ಸದ್ದಿಗೆ
ಕುಣಿಯುವೆ ನಿನ್ನೊಳು ಜೊತೆಯಾಗಿ..
ನಿನ್ನಯ ನೋಟದಿ ಬಂಧಿಯು ನಾನು
ಸೇರುವೆ ನಿನ್ನೊಳು ಶರಣಾಗಿ....

ಸರಿಗಮಪದನಿ ಸಪ್ತಸ್ವರ.
ಸ್ವರ ಮಾದುರ್ಯದ ಸಂಗೀತ ಸಾಗರ..
ಸರಿಗಮಪದನಿ ಸಪ್ತಸ್ವರ…

                                                   ವಸಂತ್ 
ಚಿತ್ರಕೃಪೆ. http://natyakala.com

Wednesday, February 9, 2011

ಬಾರದಿರು ಚಲುವೆ ನನ್ನೂರಿಗೆ...!.


ನನ್ನ ಹಂಬಲಕೆ ಸೋತು
ಪ್ರೀತಿಯೆಂಬ ಹುಚ್ಚಿನೊಳು ಸಿಲುಕಿ
ನಿನ್ನ ಬಾಳನು ಬಿರುಗಾಳಿಯಾಗಿಸಿದಿರು.
ಅರ್ಥವಿಲ್ಲದ ಊರಿನಲಿ
ವೆರ್ಥವಾಗಿ ಹೋಗುವುದು ಬೇಡ
ಬಾರದಿರು ಚಲುವೆ ನೀ ನನ್ನೂರಿಗೆ...

ಬಯಲು ಬೆತ್ತಲ ಕಾಡು.
ಬಂಡೆ ಕಲ್ಲುಗಳ ಬೀಡು.
ಜಾತಿ ಮತಗಳಿಂದ್ ಹವಣಿಸುವ
ರಾಕ್ಷಸರ ಸೀಮೆಯದು..
ಬಾರದಿರು ಚಲುವೆ ನೀ ನನ್ನೂರಿಗೆ...

ನಗಲಲ್ಲಿ ಸ್ಥಳವಿಲ್ಲ.
ನಡೆದಾಡಲು ಕೊಡುವುದಿಲ್ಲ.
ಹೃದಯವಿಲ್ಲದ ಜನ.
ಹೂ ಅರಳದ ಊರದು..
ಬಾರದಿರು ಚಲುವೆ ನೀ ನನ್ನೂರಿಗೆ..

ರಾತ್ರಿಯೊಳು ಕಾದಾಟ.
ಹಗಲಿನೊಳು ಬಾಡೂಟ.
ಎದರುರು ನಿಂತವರ
ಎದಯನೇ ಬಗೆದು ನೋಡುವ.
ಹಂತಕರ ಕೇರಿಗೆ..
ಬಾರದಿರು ಚಲುವೆ ನೀ ನನ್ನೂರಿಗೆ...

ಬೆಳಕು ಕಾಣದ ಊರದು
ಪ್ರೀತಿಯನೇ ಅರಿಯದ ನರಕವದು.
ಮಮತೆಯನು ಮರೆತಿರುವ ಸ್ಥಳದಲ್ಲಿ
ನೀ ನಗುವುದಾದರು ಎಂತು.
ಮತಿಹೀನ ಭಾವನೆಯೋಳ್
ಸದಾ ಕತ್ತಿ ಮಸೆಯುವರ ಎದಿರು.
ಬಾರದಿರು ಚಲುವೆ ನೀ ನನ್ನೂರಿಗೆ...

ಕೊಳದಲಿ ಅರಳುವಂತ
ಶುದ್ದಮನಸ್ಸಿನ ಸುಮವು ನೀ
ನಿನಗಾಗಿ ಹಂಬಲಿಸುವ,
ಸುಖ ಸಾಗರದಲ್ಲಿ ತೇಲಿಸುವಂತ.
ಬೆಳಕೊಂದು ಕಾಯುತಿರಬಹುದು..
ನೊಂದು ಒಲ್ಲೆಂದು ಮಾತ್ರ ನುಡಿಯದಿರು
ಬಾರದಿರು ಚಲುವೆ ನೀ ನನ್ನೂರಿಗೆ...

ನಾನೊಂದು ಕತ್ತಲು.
ನನಗ್ಯಾರ ಭಯವಿಲ್ಲ.
ನನಗಾಗಿ ಯೋಚಿಸದೆ 
ನೀ ಬಾಳನು ಹಸನಾಗಿಸು..
ನಿನ್ನ ನೆನಪಲ್ಲೇ ಈ ಜೀವನವನ್ನು.
ಕನಸಂತೆ ಕಳೆದು ಬಿಡುತ್ತೇನೆ..
ಬಾರದಿರು ಚಲುವೆ ನೀನೆಂದೂ ನನ್ನೂರಿಗೆ...
                                                         ವಸಂತ್ 

ಚಿತ್ರಕೃಪೆ.. http://www.wearebsm.com

Sunday, February 6, 2011

ಮರಳಿ ಬಾರೆಯಾ ಗೆಳೆಯ...


ಮರಳಿ ಬಾರೆಯಾ ಗೆಳೆಯ?
ಪ್ರತಿ ಕ್ಷಣವೂ ನಿನಗಾಗಿ
ಕಾಯುವೆನು ರಾಧೆಯಂತೆ

ನಿನ್ನೂರಿಗೆ ಬರಲೆನಗೆ ಧೈರ್ಯವಿಲ್ಲ
ಈ ವಿಶಾಲ ಕಡಲ
ದಾಟಿ ಬರಲು ಸಾಧ್ಯವಿಲ್ಲ

ನಿನ್ನ ಕಾಣುವ ತವಕದಲಿ
ಅನ್ನ ನೀರುಗಳ
ಬಿಟ್ಟು ಕಾಯುತ್ತಿರುವೆ

ನನ್ನ ಮನದ ನೋವ
ಒಮ್ಮೆಯಾದರೂ ಆಲಿಸಿ
ಬಂದೆನ್ನ ಸೇರಲಾರೆಯ ?

                                                     ವಸಂತ್ ಕೋಡಿಹಳ್ಳಿ

Wednesday, February 2, 2011

ಪೂರ್ಣವಾಗದ ಹೆಜ್ಜೆಗಳು..ಭಾವನೆಗಳ ಆಳವನ್ನು ಅರಿಯುವುದು
ತೀರ ಕಷ್ಟವೇ ಸರಿ !..
ನಡೆದಷ್ಟು ದೂರ
ನಡೆಯುತ್ತಲೇ ಇರುತ್ತೇವೆ !.

ಕೊನೆಯ ಮುಟ್ಟಲು ತವಕಿಸುತ್ತ
ಓಡುತ್ತ ಕಾದಾಡುತ್ತಲೇ…!.
ಯಾರಿಗೂ ದಕ್ಕದ ಅಂತರವನ್ನು
ದಕ್ಕಿಸಿಕೊಳ್ಳಲು ಎತ್ನಿಸುತ್ತೇವೆ

ಒಮ್ಮೆ ಬೆಳದಿಂಗಳು.
ಮತ್ತೊಮ್ಮೆ ಕಾರೀರುಳು.
ಒಮ್ಮೆ ಮೌನ.
ಮತ್ತೊಮ್ಮೆ ಸವಿಗಾನ.
ಏನೂ ಅರ್ಥಕಾಣದ
ಯಾವುದಕ್ಕೂ ಉತ್ತರವನ್ನು ಕಾಣದ
ಕೆಲವು ಒಗಟುಗಳು ನಮ್ಮ ಬಾಳು.

ನಾವು ಬಂದಾದ್ದಾದರೂ ಏಕೆಂಬ
ಕೆಲವು ಪ್ರಶ್ನೆಗಳಿಗಾದರು ಉತ್ತರ ಕಾಣದೆ
ನಮ್ಮ ಅಧ್ಯಾಯವನ್ನೂ ಪೂರ್ಣಗೊಳಿಸಲಾಗದೆ
ಅರ್ಧಕ್ಕೆ ಮುಚ್ಚಿ ಮರೆಯಾಗುತ್ತೇವೆ….
                                                                    ವಸಂತ್
ಚಿತ್ರಕೃಪೆ.. ಅಂತರ್ಜಾಲ.