Thursday, March 31, 2011

ಎಲ್ಲಾ ಪಾತ್ರಗಳನ್ನೂ ಸರಿದೂಗಿಸಬಲ್ಲೆ…


ನಾನೇನು ಬಲ ಭೀಮನಲ್ಲ.
ಈ ಲೋಕದ ತಪ್ಪುಗಳನ್ನೆಲ್ಲ ಮೆಟ್ಟಿ ತುಳಿಯಲು...
ನಾನೇನು ಅರ್ಜುನನಲ್ಲ.
ಈ ಜಗದ ಪಾಪಗಳ ಒಡೆದು ಉರುಳಿಸಲು...
ನಾನಂತು ಕರ್ಣನಲ್ಲ.
ನನ್ನ ದೇಹವನ್ನು ಇತರರಿಗೆಲ್ಲ ಹರೆದು ಕೊಡಲು...
ನಾನಂತು ಧುರ್ಯೋದನನಲ್ಲ.
ಈ ರಾಜ್ಯ ಸಂಪತನ್ನೆಲ್ಲ ನನ್ನದೇ ಎಂದು ಬಾವಿಸಲು...
ನಾನಂತು ರಾವಣನಲ್ಲ.
ಸದಾ ಇತರರ ಮನಸ್ಸಿಗೆ ಘಾಸಿ ಮಾಡಲು...
ನಾನಂತು ರಾಮನಲ್ಲ.
ವರ್ಷಗಳ ಕಾಲ ಅಜ್ಞಾತವನು ಅನುಭವಿಸಲು...
ನಾನಂತು ಕೃಷ್ಣನೂ ಅಲ್ಲ.
ಭಗವತ್ಗೀತೆಯ ಅರ್ಥದಂತೆ ಈ ಲೋಕಕ್ಕೆ ಮಾದರಿಯಾಗಲು....

ಆದರೆ
ನಾನೊಬ್ಬ ಸಾಮಾನ್ಯ ಮನುಷ್ಯ
ನಾ ಮೆಟ್ಟುವ ದಾರಿಯಲಿ ನಾ
ಉತ್ತಮನಾಗಿ ನುಡಿದು ನಡೆದರೆ ಸಾಕು
ಈ ಮೇಲಿನ ಎಲ್ಲಾ ಪಾತ್ರಗಳನ್ನೂ ಸರಿದೂಗಿಸಬಲ್ಲೆ…

                                                              ವಸಂತ್

Friday, March 18, 2011

ಪ್ರಕೃತಿ ಮಾತೆ.....

ಅದೋ ನೋಡಲ್ಲಿ ನುಗ್ಗಿ ಬರುತಿಹಳು ವಿಪ್ಲವ ಕಾಳಿ
ಮೀತಿ ಮೀರಿದ ಪಾಪಗಳನ್ ಒಸೆದು ತುಳಿಯುತ
ಮಾನವರೂಪಿ ಕುತಂತ್ರಗಳನ್ ಸಹಿಸಿ ಸಾಕಾಗಿ
ಎಲೆ ಮಾನವ ನಿನಗಿದೊ ಕಡೆಯ ಪಯಣವೆಂದು..

ಭೂಮಿಯನ್ ಬಗೆದು ಮುತ್ತು ರತ್ನಗಳ ದೋಚು
ವನಸಿರಿಯ ಕಡಿದು ನಿನ್ನದೇ ನೆಲೆಯನ್ನು ಸ್ಥಾಪಿಸು
ಕಂಡರಿಯದ ವಿಷ ವಾಯುಗಳನ್ ಹೊರಸೂಸು
ಬೆಟ್ಟವನ್ ಬಗೆದು ನಿನ್ನದೇ ಶಿಲ್ಪವನ್ ನಿರ್ಮಿಸು..

ಯಾರ ಕೇಳಿ ಈ ದುಸ್ಸಾಹಸಕ್ಕಿಳಿದೆ ನೀ ?
ಯಾರ ಮುಂದೆ ನಿನ್ನೆಲ್ಲಾ ಪರಾಕ್ರಮಕೆ ಜಯವು ?
ಚಂದ್ರ ಗೋಳದಲ್ಲಿ ನೀ ಅಡಿಯಿಟ್ಟು ಬಂದರು
ನಿನ್ನ ಮೃತ್ಯುವಿನ ಅರಿವುಂಟೆ ಎಲೆ ಮಾನವ ?..

ನಿನ್ನೆಲ್ಲಾ ಪಾಪಗಳಿಗೂ ಒಂದು ಎಲ್ಲೆಯುಂಟು
ಇಷ್ಟೇ ಅಂತರವೆಂಬ ಮಿತಿಯುಂಟು
ಒಮ್ಮೆ ನಾ ಕೆಂಗಣ್ಣು ಬೀರಿ ನೋಟ ನೆಟ್ಟರೆ ಸಾಕು
ನಿನ್ನ ಸಕಲ ಭೋಗ ವೈಭೋಗವೆಲ್ಲ ನುಚ್ಚು ನೂರಾದೀತು..

ಎಚ್ಚೆತ್ತುಕೊ,, ನಿನ್ನೆಲ್ಲಾ ಕುತಂತ್ರಗಳನ್ ಬದಿಗಿಟ್ಟು
ನನ್ನ ಪಾಡಿಗೆ ನಾ ಜೀವಿಸಲು ದಾರಿಯಾಗಿಸು
ನನ್ನೇಲ್ಲ ಸಂಪತ್ತನ್ನು ನಿನಗಾಗಿಯೇ ಧಾರೆಯೆರೆದಿರುವೆ
ಪಾಪಿಯಾಗಬೇಡ ಪರಮ ಪಾವನನಾಗು
ನಿಜವಾದ ಮನುಜನಂತೆ ನೀ ಬದುಕಲು ಕಲಿತುಕೊ...

                                                        ವಸಂತ್ 

ಚಿತ್ರಕೃಪೆ. http://indiangods-godess.blogspot.com/.

Tuesday, March 15, 2011

ಮೊರೆಯನು ಕೇಳೊಹರಿ,,,


ಮೊರೆಯನು ಕೇಳೊ ನರಹರಿಯೆ ನನ್ನ...
ಮೊರೆಯನು ಕೇಳೊ ನರಹರಿಯೆ IIಪII

ಭವ ಬಂಧನದಲ್ಲಿ ಸಿಕ್ಕಿ ಬಿದ್ದಿದ್ದಾಗಿದೆ
ಹೊರ ಬರಲಾಗದೆ ನೊಂದು ಬೆಂದಿಹಿನೆಯ್ಯ
ನೂರು ಕರ್ಮಗಳೆನ್ನ ಮುತ್ತಿ ಮುದ್ದಾಡಿವೆ
ರಕ್ಷಸಿ ಎನ್ನಯ ಸಲಹಯ್ಯ ಹರಿ 
ನೆಮ್ಮದಿಯನು ನೀ ತೋರಯ್ಯ..

ಸಪ್ತ ಸಾಗರವೆನಗೆ ಅಡ್ಡವೆ ಬಂದತೆ
ಬಿರುಗಾಳಿ ಬಿನ್ನಾಣ ತೋರುತ ಇದೆಯಲ್ಲ
ಹೇಗೆ ನಾ ಸಾಗಲಿ ಎಲ್ಲಿಗೆ ಹೋಗಲಿ
ಮುಕ್ತಿಯ ಮಾರ್ಗವ ತೋರಯ್ಯ ಹರಿ
ಮನಸ್ಸಿಗೆ ಶಾಂತಿಯ ನೀಡಯ್ಯ

ಕಾಣದ ವೇದನೆ ಕಾಡುತಿದೆ ನನ್ನಲ್ಲಿ
ತೀರದ ಧಾಹವೇ ಮನಸ್ಸೆಲ್ಲ
ಚಂಚಲವೆಂಬುದು ನಿತ್ಯ ಕಾಯಕವಯ್ಯ
ಬಂದಿಸೋ ಎನ್ನಯ ಮನಸನ್ನ ಹರಿ
ನಿನ್ನನೇ ಅನುದಿನ ಜಪಿಸಯ್ಯ..


                                                ವಸಂತ್ 

ಚಿತ್ರಕೃಪೆ.http://awesomepower.net


Friday, March 11, 2011

ಕನ್ನಡದ ಧ್ವಜವ ಹಾರಿಸೈ …


ಹಾರಿಸೈ ಹಾರಿಸೈ
ಕನ್ನಡದ ಧ್ವಜವ ನೀವು ಹಾರಿಸೈ
ಮೊಳಗಿಸೈ ಮೊಳಗಿಸೈ
ಕರುನಾಡ ಘೋಷವಿಲ್ಲಿ ಮೊಳಗಿಸೈ  IIಪll

ಬನ್ನಿರೈ ಬನ್ನಿರೈ
ಎಲ್ಲರೊಟ್ಟುಗೂಡಿ ಇಲ್ಲಿ ಬನ್ನಿರೈ
ಕುಣಿಯಿರೈ ನಲಿಯಿರೈ
ಕರುನಾಡ ಜ್ಯೋತಿಯನ್ನು ಬೆಳಗಿರೈ

ವಂದಿಸೈ ವಂದಿಸೈ
ಶಿರಬಾಗಿ ಕನ್ನಡಮ್ಮನಿಗೆ ವಂದಿಸೈ
ಬೆಳೆಯಿರೈ ನೀವು ಬೆಳೆಯಿರೈ
ಉತ್ತುಂಗ ಶಿಕರವೇರಿ ಬೆಳೆಯಿರೈ

ದೇಶದಲ್ಲೆ ಅಲ್ಲ ವಿದೇಶದಲ್ಲು ಕೂಡ
ನಿಮ್ಮ ಶಕ್ತಿಯನ್ನು ನೀವು ತಿಳಿಸಿರೈ
ನಮ್ಮ ಬಾಷೆ ಒಂದೆ ಅದು ಕನ್ನಡವೇ ಎಂದೆ
ಎಂದು ಬಿಗುಮಾನದಿಂದ ನೀವು ಬೀಗಿರೈ

                                                  ವಸಂತ್

Wednesday, March 9, 2011

ರಾಕ್ಷಸನಂತಾಗಿ ಸಾಗದಿರು.....


ಮಲ್ಲಿಗೆ ಗಿಡದಲ್ಲಿ ಸಾಸುವೆ ಕಾಳು ಹುಟ್ಟುವುದಿಲ್ಲ
ಸುಡುವ ಸೂರ್ಯನಲ್ಲಿ ಚಂದ್ರನ ತಂಪು ಬರುವುದಿಲ್ಲ
ಈ ನುಡಿಗಳು ಯಾರಿಗೂ ರುಚಿಸುವುದಿಲ್ಲ
ಈ ಪ್ರಶ್ನೆಗಳಿಗೆ ಯಾರಿಂದಲೂ ಉತ್ತರ ದೊರೆಯುವುದಿಲ್ಲ..

ನಗರೀಕರಣದ ಬರದಲ್ಲಿ ಹಸಿರನ್ನು ಕಬಳಿಸುತ್ತ
ನಡೆದಷ್ಟು ದೂರ ನನ್ನದೇ ನೆಲವೆಂಬ ಉಬ್ಬುತೋರಿ
ಬಂದವರಿಗೆಲ್ಲ ಚಿಲ್ಲರೆಯನು ಎಸೆದು ತಮ್ಮ ತಮ್ಮ
ಸಾಮ್ರಾಜ್ಯಗಳನ್ನು ಹೊನ್ನನ ರಾಶಿಯ ಬಳಸಿ ಕಟ್ಟುತಿದ್ದಾರೆ..

ಹಸಿರು ನೆಲ ಬಿಳೀ ದೊರೆಗಳ ಕಾಲ ಕಸವಾಗುತಿದೆ
ಬೆಟ್ಟ ಗುಡ್ಡಗಳು ಉಳಿಯಿಡಿದು ನಿಂತವನ ಪಾಲಾಗುತಿದೆ
ಕಾಡು ಮೇಡುಗಳು ಕಾಡುಗಳ್ಳರ ಕಟ್ಟಿಗೆ ಹೊರೆಯಾಗಿವೆ

ಇದು ಶ್ರೀಮಂತರ ರಾಜ್ಯವೂ ಸಾಮಂತರ ಭೂಮಿಯೊ ?
ತುತ್ತು ನೀಡದ ಬಡವನಿಗೆ ನೆರಳಾಗಿ ನಿಲ್ಲುರವರೆ ??
ಎಲ್ಲಿದೆ ನೆಮ್ಮದಿ ?. ಇನ್ನೆಲ್ಲಿಯ ಸ್ವಾತಂತ್ರ್ಯ?.
ನಾನು ನನದೇ ಎಂಬ ಭರದಲ್ಲಿ.
ಬಳಲಿ ಬೆಂಡಾದ ಜನತೆಗೆ ನೆಮ್ಮದಿಯನು ತೋರುವರಾರು
ಅಡ್ಡಗೋಡೆಯ ಮೇಲೆ ದೀಪವನಿಟ್ಟಂತೆ..

ಎಲ್ಲದಕ್ಕೂ ಒಂದು ಎಲ್ಲೆಯುಂಟು ಒಂದು ಮಿತಿಯುಂಟು
ಇರುವೆ ಗೂಡನ್ನೂ ಸಹ ಬರಿಯ ಕಾಲಿಂದ ಹೊಸೆಯಲಾಗದು
ತಮ್ಮ ಕಾರ್ಯಗಳೆ ತಮಗೆ ಮುಳುವಾಗುಂತ ಕಾಲ ದೂರವಿಲ್ಲ
ಇದನ್ನರಿತು ನೀನು ನೀನಂತಲ್ಲದೆ ರಾಕ್ಷಸನಂತಾಗಿ ಸಾಗದಿರು...

                                                                      ವಸಂತ್ 

Friday, March 4, 2011

ನೆನಪುಗಳು....


ಒಮ್ಮಿಂದೊಮ್ಮೆಗೆ ಎಷ್ಟೊಂದು
ನೆನಪುಗಳು ಬಂದು ಕಾಡುತ್ತವೆ
ಮರುಭೂಮಿಯಲ್ಲಿ ಬಿರುಗಾಳಿ ಎದ್ದಂತೆ...

ಬಾಲ್ಯದಲ್ಲಿ ಗೆಳೆಯರ ಜೋತೆ
ಚಡ್ಡಿಯನ್ನು ಎಳೆಯುತ್ತಾ ಶಾಲೆಗೆ ಹೋಗುತ್ತಿದ್ದದ್ದು.
ಎಮ್ಮೆಮೆಯಿಸಲು ಹೊಲಕ್ಕೆ ಹೋಗುತ್ತಿದ್ದಾಗ  
ಅಗ್ಗ ಕಾಲಿಗೆ ಸಿಕ್ಕಿ ಕುಂಟೆಗೆ ಬಿದ್ದದ್ದು.
ಅಪ್ಪನ ಜೋಬಿನಲ್ಲಿ ಹಣವನ್ನು ಕದ್ದು
ರಂಗನ ಜೋತೆ ಗೋಲಿಹಾಡಿ ಸೋತಿದ್ದು...

ಕೆರೆಯ ಕಟ್ಟೆ ಒಡೆದು 
ಮೀನುಗಳೆಲ್ಲ ಹರಿದು ಹೋಗುತ್ತಿದ್ದಾಗ
ಅಕ್ಕನ ದಾವಣಿಯನ್ನು ಕದ್ದು ಮೀನು ಹಿಡಿದಿದ್ದು.
ಹರಿದ ಅಂಗಿಯನ್ನು ಅಮ್ಮನ ಬಳಿಕೊಟ್ಟು
ಹೊಲೆದು ಕೊಡೆಂದು ಪೀಡಿಸಿದ್ದು.
ಅಣ್ಣನ ಸೈಕಲ್ಲನೇರಿ ಕೆಳಗೆಬಿದ್ದು
ಕಾಲು ಮುರಿದುಕೊಂಡದ್ದು.

10 ನೇ ತರಗತಿಯಲ್ಲಿ ಎಲ್ಲರನ್ನು ಹಿಂದೆಹಾಕಿ
ಹೆಚ್ಚು ಅಂಕ ಪಡೆದದ್ದು.
ಕಾಲೇಜಿನಲ್ಲಿ ಅನಿತ ಮೇಡಂಗೆ
ರಾಕೇಟ್ ಎಸೆದು ವಾರದ ಕಾಲ
ಹಿಂಬದಿಯ ಬೆಂಚಿನ ಮೇಲೆ ನಿಂತದ್ದು.
ಶಿಲ್ಪಾಳಿಗೆ ಪ್ರೀತಿಯ ನಿವೇಧನೆಯನ್ನು
ಹೂ ಕೊಟ್ಟು ಹೇಳಿದ್ದು…
                                        
ಎಷ್ಟೋಂದು ನೆನಪುಗಳು..
ಒಂದರ ಮೇಲೊಂದರಂತೆ
ಬದುಕಿನ ಅಧ್ಯಾಯಗಳಾಗಿ
ತಡವರಿಸುತ್ತಾ ತೆರೆದುಕೊಳ್ಳುತ್ತವೆ..
ಒಂದೊಂದು ನೆನಪು ಸಹ
ತನ್ನ ಕಿರಿತನದ ಸಿಹಿಯನ್ನು
ಹಿರಿತನದ ಕಹಿಯನ್ನು ಉಣಬಡಿಸುತ್ತ...

ಕೆಲವೊಮ್ಮ ಕಾಣದ ವೇದನೆಗಳು
ಧಕ್ಕದ ಬಯಕೆಗಳು, ವಿಷಾದದ ಅಲೆಗಳು
ಕೈ ತಪ್ಪಿಹೋದ ಪ್ರಸಂಗಗಳು.
ಈಗಲೂ ಮುಗಿಯದಂತೆ ಮುಗಿದುಹೋದಂತೆ
ಪ್ರತಿದಿನವು ನನ್ನೊಂದಿಗೆ ಹಗಲು ರಾತ್ರಿಗಳನ್ನಾಚರಿಸುತ್ತವೆ.

                                             ವಸಂತ್ 
ಚಿತ್ರಕೃಪೆ. http://img.wallpaperstock.net:81/