Monday, June 6, 2011

ಬೇಡವೆಂದು ಹೋಗದಿರಿ

ಇಲ್ಲಿ ನೋವುಗಳು ಮಾರಾಟಕ್ಕಿವೆ
ನೊಂದ ಹೃದಯಗಳು
ಅರೆಬೆಂದ ಆಸೆಗಳು
ಪೂರ್ಣವಾಗದ ಬಯಕೆಗಳು
ಸವೆಯದ ಹೆಜ್ಜೆಗಳು
ಮುಗಿಯದ ಮಾತುಗಳು
ತೂಕಕ್ಕೆ ದೊರೆಯುತ್ತವೆ

ಬನ್ನಿ ಬನ್ನಿ ಗ್ರಾಹಕರೇ
ಬೆಲೆಯ ಬಗ್ಗೆ ಚಿಂತಿಸದಿರಿ
ನೀವು ಎಷ್ಟು ಕೊಟ್ಟರೆ ಅಷ್ಟೆ ಸಾಕು
ಮೊದಲು ಇವುಗಳನ್ನೆಲ್ಲ
ಇಲ್ಲಿಂದ ತೆರವುಗೊಳಿಸಿದರೆ
ನಾನು ಧನ್ಯನಾದಂತೆ

ಹಿಂದೆ ಬಂದ ಗ್ರಾಹಕರು
ಮುಟ್ಟಿ ತಟ್ಟಿ ಅಲುಗಾಡಿಸಿ ಹೋದರಷ್ಟೆ
ಒಂದನ್ನೂ ಕೊಂಡು ಹೋಗಲಿಲ್ಲ
ಹಾಗಂತ! ಅವು ಹಳೆಯದಾಗಿವೆಯೇ ?
ಎನ್ನಬೇಡಿ, ದಿನವೂ
ಕಣ್ಣೀರಿನಿಂದ ಒರೆಸಿಡುತ್ತೇನೆ

ಇಲ್ಲಿ ನೋಡಿ ಚಿಂದಿ ಹುಡುಗನ ಬದುಕು
ಅವು ಜೀತಗಾರನ ಸರಪಳಿಗಳು
ಅಗೋ! ಅವು ಜಾತಿಯ ಸಂಕೋಲೆಗಳು
ಎಷ್ಟೋ ದಿನಗಳಿಂದ ತಮ್ಮ ಬಿಗಿತವನ್ನು
ಸಡಿಲಿಸದೆ ಹಾಗೇಯೇ ಇವೆ

ಬನ್ನಿ ಈ ಮಂಚಕ್ಕೆ ಕಿವಿಯಾನಿಸಿ
ಎಷ್ಟೋ ಅಮಾಯಕ ಹೆಣ್ಣುಗಳ
ಆರ್ತನಾದಗಳು ಕೇಳಿಸುತ್ತವೆ
ಸೊಕ್ಕಿನ ಮೈಗಳು ಮಗ್ಗಲು ಬದಲಿಸುತ್ತವೆ

ನೋಡಿ ಆ ಮೂಲೆಯಲ್ಲಿ
ಸತ್ಯವೂ ಮೌನವಾಗಿ ಕುಳಿತಿದೆ
ನ್ಯಾಯ ತನ್ನನ್ನು ತಾನೇ ಅಳಿಸಿಕೊಳ್ಳುತ್ತಿದೆ
ಧರ್ಮವು ದಾರಿ ತಪ್ಪಿದೆ
ನೆಮ್ಮದಿಗೆ ನೆಲೆಯಿಲ್ಲದಂತಾಗಿದೆ

ದಯವಿಟ್ಟು ಯಾವುದಾದರು
ಒಂದನ್ನು ಕೊಂಡು ಹೋಗಿ
ನಾ ಧನ್ಯವಾಗಬೇಕಿದೆ
ತಲೆಬಾಗಿ ನಿಂತರೆ ಹೇಗೆ ?
ಬೇಡವೆಂದು ಮಾತ್ರ ಹೋಗದಿರಿ.
                       
                                                        ವಸಂತ್

ಚಿತ್ರಕೃಪೆ. http://www.resourcesgraphics.com

9 comments:

sunaath said...

ಅಬ್ಬಾ!

ಕನಸು ಕಂಗಳ ಹುಡುಗ said...

ದಯವಿಟ್ಟು ಅಂತಾ ಬರೆದು ಇಕ್ಕಟ್ಟಿಕೆ ಸಿಕ್ಕಿಸಿದಿರಲ್ರೀ......

ಚನ್ನಾಗಿದೆ.

Pradeep Rao said...

ಅದ್ಭುತವಾದ ಕವಿತೆ ವಸಂತ್.. ಬದುಕಿನ ಸಂಕಟಗಳ ಮಾರಾಟ ಭರ್ಜರಿಯಾಗಿ ಚಿತ್ರಣಗೊಂಡಿದೆ ನಿಮ್ಮ ಸಾಲುಗಳಲ್ಲಿ.. ಬರೆಯುತ್ತಿರಿ.

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸುನಾಥ್ ಸರ್....

ವಸಂತ್ said...

ಅಯ್ಯೋ ಅವುಗಳೆಲ್ಲವನ್ನೂ ಮಾರಿ ಧನ್ಯವಾಗಬೇಕಿದೆ ಆದ್ದರಿಂದ ದಯವಿಟ್ಟು ಅಂದೆ ಅಷ್ಟೆ. ಪ್ರತಿಕ್ರಿಯೆಗೆ ಧನ್ಯವಾದಗಳು ಫ್ರೆಂಡ್...

ವಸಂತ್ said...

ನಿಮ್ಮ ಅನಿಸಿಕೆಗೆ ತುಂಬ ಧನ್ಯವಾದಗಳು ಪ್ರದೀಪ್...

Badarinath Palavalli said...

ಪ್ರೀತಿಯ ವಸಂತ,

ನೀವು ಹೊರದಬ್ಬಲು ನೋಡುತ್ತಿರುವ ಪದಾರ್ಥಗಳು, ಸ್ವತಃ ದೇವರೇ ತನ್ನ ಭಾರ ಕಳೆದುಕೊಳ್ಳಲು ನರಾಧಮನಿಗೆ ಹುಟ್ಟಿನಲ್ಲೇ ಅಂಟಿಸಿ ಕಳಿಸಿರುವ ಪೀಡಾಗಳು!

ಆದ್ದರಿಂದ ಇವನ್ನು ತಾವೂ ಯಾರಿಗೂ ಮಾರಲೂ, ಕಡ ಕೊಡಲೂ ಮತ್ತು ಕಸ ವಿಲೇವಾರಿ ಮಾಡಲು ಬರುವುದಿಲ್ಲವೆಂದು ತಿಳಿಸಲು ವಿಷಾದಿಸುತ್ತೇವೆ.

"ಹೊರಿಸುವುದು ಬ್ರಹ್ಮ ಧರ್ಮ
ಹೊರಲೇ ಬೇಕಾದ್ದು ನಿಮ್ಮ ಕರ್ಮ"

-ಇತಿ ಪ್ರೀತಿಯಿಂದ
ಕೈವಾರ ತಾತಯ್ಯ
(ದೇವರ ಪರವಾಗಿ)

DEW DROP (ಮಂಜಿನ ಹನಿ) said...

ಗಟ್ಟಿಯಾದ ಚಿಂತನೆಯಿರುವ ಗಟ್ಟಿ ಕವಿತೆ ವಸಂತಣ್ಣ.. ನಿಮ್ಮ ಪ್ರಬುದ್ಧತೆಗೆ ಹಿಡಿದ ಕನ್ನಡಿಯಿದು.. ಭಾವಗಳಲ್ಲಿನ ಗಟ್ಟಿತನ ಮನಸ್ಸನ್ನು ಹಾಗೆಯೇ ಹಿಡಿದಿಡುತ್ತದೆ.. ನೋವುಗಳನ್ನು, ಅರೆಬೆಂದ ಕನಸ್ಸುಗಳನ್ನು, ಸವೆಯದ ಹೆಜ್ಜೆಗುರುತುಗಳನ್ನು ಮಾರುಕಟ್ಟೆಯಲ್ಲಿ ಬಿಕರಿಗಿಟ್ಟು ಕೊಳ್ಳುಲು ಕೇಳುವ ಭಾವಗಳು ವಿಡಂಬನಾತ್ಮಕವಾಗಿ ಮೂಡಿ ಬಂದು ನಾವು ನೆಡೆದುಕೊಳ್ಳುವ ನಿಲುವುಗಳನ್ನೇ ಪ್ರಶ್ನಿಸಿ, ಚಿಂತೆಗಚ್ಚುತ್ತವೆ.. ನಿಮ್ಮ ಕಾವ್ಯ ಪ್ರೌಢಿಮೆಗೊಂಡು ಸಲಾಂ.. ಇಂತಹ ಗಟ್ಟಿ ಕವನಗಳು ನಿಮ್ಮಿಂದ ಇನ್ನಷ್ಟು ಬರಲಿ..:)))

DEW DROP (ಮಂಜಿನ ಹನಿ) said...
This comment has been removed by the author.