Monday, June 20, 2011

ಮರೆಯದಿರು ನನ್ನ…



ಮರೆಯದಿರು ನನ್ನ
ತೊರೆದು ಹೋಗದಿರು ಗೆಳತಿ
ಬಯಸುತಿದೆ ನಿನ್ನೊಲವ
ನನ್ನ ಮನವು.

ಅನುದಿನವು ನಾ ಸೊರಗಿ
ಕರಗಿ ಹೋಗುವ ಹಾಗೆ
ಸುಡುತಲಿದೆ ನನ್ನೊಳಗೆ
ನಿನ್ನ ಒಲವು.

ಹಿರಿಯೂರ ದಾರಿಯಲಿ
ನೀ ನಡೆದ ಗುರುತುಗಳ
ಕಣ್ಣರಳಿಸಿ ಹುಡುಕಿದರು
ಕಾಣಲಿಲ್ಲ.

ನಿನ್ನ ಹೆಜ್ಜೆಯ ಜೊತೆಯ
ಕಾಲು ಗೆಜ್ಜೆಯ ಸದ್ದು
ಮೌನವಾಗಿದೆ ಎಲ್ಲೊ
ಕೇಳಲಿಲ್ಲ.

ಕಡಲ ಚಿಪ್ಪಿನ ರೂಪ
ನನ್ನ ಮನಸಿದು ಗೆಳತಿ
ಹನಿ ನೀರಿಗೆ ನಾ
ಕಾಯುತಿರುವೆ.

ನಿನ್ನ ನಂಬಿಕೆಯನ್ನು
ಪೋಲು ಮಾಡೆನು ಎಂದು
ಮತ್ತು ಮಣಿಯಾಗಿಸಿಯೆ
ನಿನಗೆ ಕೊಡುವೆ.

ಏನಿದು ನಿನ್ನ ಮೌನ
ಬಿಟ್ಟು ಬಿಡು ಬಿಗುಮಾನ
ನನ್ನ ನೋವನು ಕೇಳಿ
ಬರುವೆ ಏನು ?.

ಬಾನ ಬೆಳಗುವ ಚಂದ್ರ
ತಾರೆಗಳ ಎದುರಲ್ಲೆ
ನನ್ನ ಬಾಷೆಯಕೊಟ್ಟು
ನಿಂದಿರುವೆನು.

ಬಾರೆ ಬಾ ಭಾಗ್ಯವತಿ
ನನ್ನ ಬಾಳಿಗೆ ಜ್ಯೋತಿ
ನನ್ನ ಹುಲ್ಲ ಗುಡಿಸಲಲಿ
ದೀಪವಾಗಿ.

ನಿನ್ನ ಮೌನದ ಗುರುತು
ಒಲ್ಲೆ ಎಂತಿಹುದಲ್ಲ
ನಿನ್ನ ಉತ್ತರವೇನು
ನನ್ನ ಗೆಳತಿ.

ಮೌನವನು ಜೊತೆಯಾಗಿ
ಮಣ್ಣಾದರೂ ಸರಿಯೇ
ಮರುಗದಿರು ನೀನೆಂದು
ನನ್ನ ಸುಮವೆ.

ಕತ್ತಲಾಗಿದೆ ನೋಟ
ಯಾರದೋ ಈ ಆಟ
ಒಂಟಿಯಾಗಿಯೇ ನಾ
ಪಯಣಿಸುವೆ…

No comments: