Wednesday, June 29, 2011

“ಜಾತಿ”ಯೆಂಬ ಜಾಡು ಹಿಡಿದು…

          ನುಷ್ಯ ಹುಟ್ಟುತ್ತಾ ಹುಟ್ಟುತ್ತಾ ಸ್ವಾತಂತ್ರ ಜೀವಿ!, ಅವನು ಬೆಳೆದಂತೆಲ್ಲ ಸಮಾಜದ ಕಟ್ಟುಪಾಡುಗಳು ಅವನ ಸ್ವಾತಂತ್ರವನ್ನು ಕಸಿದುಕೊಳ್ಳುತ್ತಾ ಬರುತ್ತದೆ. ಕರ್ನಾಟಕದ ಶ್ರೇಷ್ಟ ಕವಿ ಕುಂವೆಂಪುರವರು ತನ್ನ ವಿಶ್ವಮಾನವ ಸಂದೇಶದಲ್ಲಿ ಹೀಗೆ ಹೇಳುತ್ತಾರೆ. “ಪ್ರತಿಯೊಂದು ಮಗುವೂ ಹುಟ್ಟುತ್ತಲೆ ವಿಶ್ವಮಾನವ. ಬೆಳೆದಂತೆ ನಾವು ಅದನ್ನು ‘ಅಲ್ಪಮಾನವ’ನನ್ನಾಗಿ ಮಾಡುತ್ತೇವೆ. ಎಂದರೆ ಹುಟ್ಟುವಾಗ ಎಲ್ಲರೂ ವಿಶ್ವಮಾನವರಾಗಿಯೇ ಹುಟ್ಟುತ್ತಾರೆ. ಬೆಳೆದಂತೆ ನಾವು ಅವರನ್ನು ಜಾತಿ, ಧರ್ಮ, ಬಾಷೆ, ದೇಶ, ಜನಾಂಗ ಎಂಬಲ್ಲ ಕಟ್ಟು ಪಾಡುಗಳಿಂದ ಬಂಧಿಸುತ್ತೇವೆ. ಬಹುಶಃ ಅವನು ಹುಟ್ಟಿದ ಸಮಜ ಅವನನ್ನು ಅಲ್ಪನನ್ನಾಗಿಸುತ್ತದೆ. ಇಲ್ಲಿ ‘ಸಮಾಜ’ವೆಂಬುದು ಮನುಷ್ಯ ಕಳಂಕವಲ್ಲವೇ ?. ಸರಿ ನಾನು ಕವಲುದಾರಿಗಳಲ್ಲಿ ಸಾಗಿ ಮನುಷ್ಯನ ನಿಗೂಢ ಜಾಡು ಹಿಡಿದು. ಅವನ ಕೆಲವು ಪದರುಗಳನ್ನು ಇಲ್ಲಿ ಮಂಡಿಸಲು ಪ್ರಯತ್ನಿಸುತ್ತೇನೆ. ಕುವೆಂಪುರವರು ಒಂದು ಜನಾಂಗ ಮತ್ತೊಂದು ಜನಾಂಗವನ್ನು ಮೆಟ್ಟಿ ತುಳಿಯುವುದು ವಿರಾಟ್ ಶಕ್ತಿ, ವಿರೋಧಿ ಕೃತ್ಯ, ಹೇಡಿತನ ಎಂದು ಬಣ್ಣಿಸುತ್ತಾರೆ. ಸಮಾಜದ ನೆರಳಿನಲ್ಲಿ ನಮ್ಮ ಬೆಳವಣಿಗೆಗಾಗಿ ತಮ್ಮ ಜೀವನದ ಮೌಲ್ಯಗಳನ್ನು ಸರಿದೂಗಿಸುವ ನೆಪದಲ್ಲಿ “ಜಾತಿ, ಬಾಷೆ, ಸಂಸ್ಕೃತಿಗಳ ಮೊರೆ ಹೋಗುವುದಂತೂ ಸರಿ ?. ಅಂದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬಂತೆ ವಿಂಗಡಿಸಿ ಉನ್ನತವಾದ ಸ್ತಾನಗಳನ್ನು ಮೇಲಿನ ಮೂರೂ ವರ್ಗದವರು ಪಡೆದುಕೊಂಡು ಶೂದ್ರರನ್ನು ಇಂದಿಗೂ ತುಳಿಯುತ್ತಾ ಶೋಷಣೆ ಗೈಯುವುದು ಯಾವ ನ್ಯಾಯ ?. ಇದು ಶೂದ್ರ ವರ್ಗಕ್ಕೆ ಅಂಟಿದ ಶಾಪವೇ ಸರಿ. ಇದನ್ನು ತೊಳೆಯಲು ಸಾಧ್ಯವಾಗುತ್ತಿಲ್ಲ ಆಗೆಯೇ ಸಾಧ್ಯವಾಗುವುದಕ್ಕೂ ಬಿಡುತ್ತಿಲ್ಲ. ಇದನ್ನೆ ಕೆಲವು ರಾಜಕೀಯ ಪಕ್ಷಗಳು ತಮ್ಮ ರಾಜಕೀಯದಾಟದಲ್ಲಿ ದಾಳಗಳನ್ನಾಗಿ ಬಳಸಿ ಆಡಿಕೊಂಡು ಬರುತ್ತಿದ್ದಾರೆ. ಬ್ರಾಹ್ಮಣ ವರ್ಗದಲ್ಲಿ ಹುಟ್ಟಿದ ಮಾತ್ರಕ್ಕೆ ಅವರಿಗೆ ದೇವರನ್ನು ಪೂಜಿಸುವ ಕಾರ್ಯ, ಕ್ಷತ್ರಿಯ ವರ್ಗದಲ್ಲಿ ಹುಟ್ಟಿದವರಿಗೆ ರಕ್ಷಣೆಯ ಕಾರ್ಯ, ವೈಶ್ಯ ಜನಾಂಗಕ್ಕೆ ವ್ಯಾಪಾರ ವ್ಯವಹಾರ ಆದರೆ ಶೂದ್ರ ವರ್ಗದಲ್ಲಿ ಹುಟ್ಟಿದವರಿಗೆ ಮಾತ್ರ ಏಕೆ ಚಪ್ಪಲಿ ಹೊಲೆಯುವ, ರಸ್ತೆಗಳನ್ನು ಗುಡಿಸುವ, ಸತ್ತವರಿಗೆ ಹಳ್ಳಗಳನ್ನು ತೋಡುವ, ತಮಟೆಬಡಿಯು ಕಾರ್ಯಗಳು ಅಂದರೆ ಸಮಾನತೆಯ ಹೆಸರಲ್ಲಿ ಎಂತಹ ತಾರತಮ್ಯ ನೋಡಿ. ಅನಾದಿಕಾಲದಿಂದಲೂ ಶೋಷಣೆಗಳನ್ನು ಮಾಡುತ್ತ ಕೆಳವರ್ಗವೆಂಬ ಶೂದ್ರಕುಲವೆಂಬ ಹೀನ ಕುಲದವರೆಂಬ ಹಣೆಪಟ್ಟಿ ಕಟ್ಟಿದವರಿಗೆ ಏನೆಂದು ಪ್ರಶ್ನಿಸುವುದು ?. ಗೌತಮ ಬುದ್ಧ, ಸರ್ವಜ್ಞ, ಅಲ್ಲಮ, ಬಾಬಸಾಹೇಬ ಮುಂತಾದವರು ಜಾತಿಯ ಎಲ್ಲೆಯನ್ನು ಮೀರಿ ನಡೆದವನೆ ಮನುಜ ಎಂದಿದ್ದಾರೆ. ವಿದ್ಯಯೆಂಬ ಅಸ್ತ್ರದಿಂದಲೇ ಜಾತಿಯತೆಯನ್ನು ಅಳಿಸಬಹುದು ಹೋರಾಟದಿಂದ ತಮ್ಮ ತಮ್ಮ ಬೇಡಿಕೆಗಳನ್ನು ಪೂರೈಸಿಕೊಳ್ಳಬಹುದು ಒಬ್ಬರನ್ನೊಬ್ಬರು ಅರಿತುಕೊಂಡು ನಡೆದರೆ ಸಮಾನತೆಯನ್ನು ಕಾಣಬಹುದು ಎಂಬ ಮಾತುಗಳು ಇಂದಿಗೂ ಯಾರ ಕಿವಿಗೂ ಕೇಳುತ್ತಿಲ್ಲ. ಕೇಳಿಸಿಕೊಂಡರೂ ಕೇಳದವರಂತೆ ಸಟಿಸಿ ಮರೆಯಾಗುವ ಮಂದಿಯನ್ನು ನಾವಿಂದು ಕಾಣಬಹುದು ಅಂದುಕೊಳ್ಳುತ್ತೇನೆ.

         ನನ್ನ ಪ್ರಶ್ನೆ ಎಂದರೆ ? ಕೆಳವರ್ಗಗಳಲ್ಲಿ ಹುಟ್ಟುವುದೇ ತಪ್ಪಾ ? ಅವರಲ್ಲೂ ಅರಿಯುವುದು ರಕ್ತವೆ, ಅವರು ತಿನ್ನುವುದು ಅನ್ನವನ್ನೆ, ಅವರೂ ಗಾಳಿಯನ್ನೇ ಸೇವಿಸುತ್ತಾರೆ, ಈಗಿದ್ದರು ಇವರಲ್ಲಿ ಕಾಣುವ ಲೋಪವಾದರೂ ಎಂತು ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಕೆಳಜಾತಿ ಎಂಬ ಕಾರಣಕ್ಕಾಗಿ ಅಂಥವರಿಗೆ ಗುಡಿ ಗೋಪುರಗಳನ್ನು ನಿರ್ಬಂಧಿಸುವುದು, ಹೀನರೆಂದು ಪ್ರಾಣಿಗಳ ರೀತಿಯಲ್ಲಿ ನಡೆದುಕೊಳ್ಳುವುದು, ಹೋಟೆಲ್ ಸೇಲುನುಗಳಿಗೆ ಪ್ರವೇಶವಿಲ್ಲದಂತೆ ಮಾಡಿರುವ ಎಷ್ಟೋ ಉದಾಹರಣೆಗಳನ್ನು ಕಂಡಿದ್ದೇವೆ ಈಗಲೂ ಅಲ್ಲಲ್ಲಿ ಇಂಥ ಪ್ರಸಂಗಗಳ ಬಗ್ಗೆ ಮಾಧ್ಯಮಗಳು ಪತ್ರಿಕೆಗಳು ವರದಿಯನ್ನು ಮಾಡುತ್ತಿರುತ್ತವೆ. ಹೀಗೆ ಮಾಡುವುದು ಯಾವ ನ್ಯಾಯ ?. ಇಲ್ಲಿ ಸಮಾನತೆಗೆ ಬೆಲೆ ಸಿಕ್ಕಾಂಥಾಗುವುದೇ ?. ಮಾನವತೆಯ ಸಂದೇಶವನ್ನು ಗಾಳಿಗೆ ತೂರಿ ಸಾವು ಸಾಧಿಸುವುದಾದರೂ ಏನು ?. ಹಳ್ಳಿಗಳಲ್ಲಿ ಅವರಿಗೇ ಒಂದು ಕೇರಿಯನು ನಿರ್ಮಿಸಿ ದೂರ ಹಿಡುವ ಇಂಥ ಮೂಡ ಪ್ರೌರುತ್ತಿಯನ್ನು ಎನ್ನೇನ್ನ ಬೇಕೋ ನೀವೆ ಹೇಳಿ ?. ಇಲ್ಲಿ ಜನ ಮರುಳೋ ಜಾತ್ರೆ ಮರುಳೋ ಎಂಬಂತೆ, ಇರುವೆಗಳಿಲ್ಲದ ಜಾತಿ ನಾಯಿ ನರಿಗಳಿಗಿಲ್ಲದ ಜಾತಿ, ಈ ಮನುಷ್ಯನಿಗೆ ಮಾತ್ರ ಏಕೆ ?. ಕುವೆಂಪು, ಡಿವಿಜಿ, ಶಿವರಾಮಕಾರಂತ, ಯು.ಆರ್ ಅನಂತಮೂರ್ತಿ ಇದೇ ಹಾದಿಯಲ್ಲಿ ಬಂದವರು ಇವರೂ ಸಹ ”ಮನುಷ್ಯ ಕುಲಂ ತಾನೊ೦ದೆ ವಲಂ” ಎಂಬ ಸಂಸ್ಕಾರದ ಮಾತುಗಳನ್ನಾಡುತ್ತಾರೆ. ಆದರೆ ಇಂಥ ಕವಿಗಳ ನುಡಿಗಳನ್ನು ಎಷ್ಟು ಜನ ಫಾಲಿಸುತ್ತಿದ್ದಾರೆ ?. ನಾಗರೀಕತೆ ಬೆಳೆದಂತೆಲ್ಲ ಮನುಷ್ಯನ ಜೀವನ ವಿಧಾನವು ಬದಲಾಗುತ್ತಾ ಸಾಗುತ್ತಿದೆ. ಆದರೂ ವರ್ಣಾಶ್ರಮ ಮತಕಲಹಗಳಂತವುಗಳನ್ನು ಹುಟ್ಟುಹಾಕಿ ತನ್ನ ಸ್ವಾರ್ತ ಸಾಧನೆಗಾಗಿ ಮಾನವನೇ ಮಾನವನ ಬದುಕಿನಲ್ಲಿ ಚಲ್ಲಾಟವಾಡುವುದು ಎಷ್ಟು ಮಾತ್ರ ಸರಿ ?. ನಾವುಮನುಷ್ಯರೆಂಬುದನ್ನು ಮರೆತು ನಮ್ಮ ನಮ್ಮಲ್ಲೇ ಜಾತಿಗಳನ್ನು ಸೃಷ್ಟಿಸಿ ಆ ಜಾತಿಗಳನ್ನು ಮತಗಳಾಗಿ ಪರಿವರ್ತಿಸಿ ಆ ಮತಗಳಿಂದ ಮದವಿಗಳನ್ನು ಪಡೆದು ಮನುಷ್ಯರೇ ಮನುಷ್ಯರ ಮೇಲೆ ಸಮಾರಿ ಮಾಡುವ ಕಾಲ ಸರಿದುಹೋಗುವವರೆಗೂ ಈ ಅನಿಷ್ಟ ಪದ್ದಗಳು ತೊಲಗಿಹೋಗವು ಎಂಬುದು ನನ್ನ ಅನಿಸಿಕೆ.

    ಈಗ ಬೇಕಿರುವುದು ಜ್ಯಾತ್ಯಾತೀತ ವಾದ!. ಇಲ್ಲಿ “ವಿಶ್ವಮಾನವ ಸಂದೇಶ”ವನ್ನು ಸಾರಿ ಹೇಳಬೇಕಿದೆ. ಬ್ರಾಹ್ಮಣ, ಕ್ಷತ್ರಿಯ, ಶೂದ್ರ, ಸಿಕ್, ಷಿಯಾಸುನ್ನಿ, ಕಾಥ್ಯೋಲಿಕ್ ಮುಂತಾದ ಧರ್ಮಗಳೆಂಬ ವಿಭಜನೆಯನ್ನು ತೊಡೆದು ವರ್ಣಾಶ್ರಮ ಮತಕಲಹಗಳಂತಹುಗಳನ್ನು ಸಂರ್ಫೂರ್ಣವಾಗಿ ಕಿತ್ತೊಗೆದು. ಆಧ್ಯಾತ್ಮ ಮತ್ತು ಹಿತಚಿಂತನೆಗೆ ಹೆಚ್ಚಿನ ಮಹತ್ವ ಕೊಟ್ಟು. ವಿಧ್ಯಾಬ್ಯಾಸದಿಂದ ಪೂರ್ಣಪ್ರಜ್ಞಾವಂತನಾಗಿ ತನ್ನ ನಿಲುವನ್ನು ತಾನೇ ಅರಿತುಕೊಂಡು ಬಾಳಬೇಕಿದೆ. ತನ್ನನ್ನು ತಾನೇ ಪ್ರಶ್ನಿಸಿಕೊಂಡು ತನ್ನ ಉದ್ದಾರ ಯಾವರೀತಿಯೆಂದು ತಿಳಿದು ಮುಂದುವರೆಯಬೇಕಿದೆ. ಜಾತಿಯತೆ ಮತ್ತು ಮತಕಲಹ 
ಮನುಷ್ಯ ಜನ್ಮಕ್ಕೆ ಅಂಟಿದ ಮಹಾ ಶಾಪ. ಇದರ ಆಳವನ್ನು ಅರಿಯಲೂ ಸಾಧ್ಯವಾಗದ ರೀತಿಯಲ್ಲಿ ತನ್ನ ಬಾಹುಗಳನ್ನು ಚಾಚಿಕೊಂಡಿದೆ. ಇಂದು ಇದನ್ನು ಕಿತ್ತೊಗೆಯಲಾಗದ ದೈನ್ಯ ಸ್ಥಿತಿ ನಮ್ಮದೆಂಬುದು ಖೇದದ ಸಂಗತಿ. ನಾನು ಎಂಬ ಅಹಂಕಾರ ಮನುಷ್ಯನನ್ನು ಪೂರ್ತಿಯಾಗಿ ಆವರಿಸಿ ಕಳ್ಳತನ, ದರೋಡೆ, ಮೋಸ, ವಂಚನೆಗಳಂತ ಪ್ರಕರಣಗಳು ಸರ್ವೇ ಸಾಮಾನ್ಯವಾಗಿಬಿಟ್ಟಿವೆ. ಮಾನಭಂಗ, ಮತಕಲಹ, ಶೋಷಣೆ ಇದು ಈಗಿನ ಪ್ರಸಸ್ತ ಸ್ಥಿತಿ. ತನ್ನ ಬುದ್ಧಿಯನ್ನು ಬದಿಗಿಟ್ಟು ಸ್ವಾರ್ಥ ಸಾಧನೆಗಾಗಿ ಪರಿತಪಿಸುತ್ತಿರುವ ಮನುಷ್ಯ, ಆಧ್ಯಾತ್ಮ. ಹಿತಚಿಂತನೆ, ದ್ಯಾನ ಇವುಗಳೆಲ್ಲವನ್ನೂ ಗಾಳಿಗೆ ತೂರಿ! ಬಯೋತ್ಪಾದನೆ, ವರದಕ್ಷಣೆ, ಜಾತಿಯತೆ, ಮತಕಲಹ, ಶೋಷಣೆ ಮುಂತಾದವುಗಳನ್ನೇ ತನ್ನ ಅಸ್ತ್ರವಾಗಿಸಿಕೊಂಡು ಮನುಷ್ಯಕುಲದ ನಾಷಕ್ಕಾಗಿ ಹೊಂಚು ರೂಪಿಸುತ್ತಿದ್ದಾನೆ. ಒಂದು ಕಡೆ ಜನಸಂಖ್ಯಾ ಸ್ಪೋಟ, ಮತ್ತೊಂದು ಕಡೆ ಕಿತ್ತು ತಿನ್ನುವಂತ ಬಡತನ, ಅನಕ್ಷರತೆ, ದಾರೀದ್ರ್ಯ, ಮೂಡನಂಬಿಕೆಗಳು ಮಾನವನನ್ನು ಬದುಕಲು ಬಿಡುತ್ತಿಲ್ಲ. ಅರಣ್ಯನಾಷ, ಪರಿಸರ ಮಾಲಿನ್ಯ ಮತ್ತು  ಪ್ರಾಕೃತಿಕ ವೈಪರೀತ್ಯಗಳಿಂದ ವಿಜ್ಞಾನಿಗಳಿಗೆ ತಲೆನೋವಾಗಿದೆ. ತೂಗು ಕತ್ತಿಯ ಮೇಲೆ ನಮ್ಮ ಜೀವನವೆಂಬಂತೆ ಮೇಲ್ನೋಟಕ್ಕೆ ಕಂಡುಬರುತ್ತದೆ. ಇದಕ್ಕೆಲ್ಲ ಮುಕ್ತಿಕಾಣಬೇಕಾದರೆ ಅಜ್ಞಾನವನ್ನು ತೊರೆದು ವಿಜ್ಞಾನದ ಆದಿಯಲ್ಲಿ ನಡೆಯಬೇಕು, ಮನುಷ್ಯರು ಮನುಷ್ಯರಾಗಿಯೇ ಬದುಕಲು ಇಚ್ಛಿಸಬೇಕು. ಪ್ರಾಣಿಗಳು ತನಗಾಗಿ ಬದುಕದಿದ್ದರು ತನ್ನ ಹಾಲನ್ನು ಕೊಟ್ಟು ಪರರನ್ನು ಪೋಷಿಸುತ್ತವೆ. ಮರಗಳು ನನ್ನನ್ನೊಣಗಿಸಿಕೊಂಡು ಬೇರೆಯವರಿಗೆ ನೆರಳನ್ನು ನೀಡುತ್ತವೆ. ಇದರ ಪಾರಮಾರ್ಥಿಕ ಸತ್ಯವನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು. ವಿಧ್ಯೆಯನ್ನು ಕಲಿತು ಒಂದೇ ಜಾತಿಗೆ ಧರ್ಮಕ್ಕೆ ಕಟ್ಟು ಬೀಳದೆ ಜಾತಿ, ಮತ, ಧರ್ಮ, ಪಂತಗಳ ಕೊಂಡಿಯನ್ನು ಕಳಚಬೇಕಿದೆ. ಮನುಷ್ಯರನ್ನು ಮನುಷ್ಯರಂತೆಯೇ ಕಾಣಬೇಕಾಗಿದೆ. ಮಾನವತೆಗೆ ಬೆಲೆಕೊಟ್ಟು, ಪುಸ್ತಕಗಳನ್ನು ಪ್ರೀತಿಸುತ್ತ ಹಿರಿಯರನ್ನು ಗೌರವಿಸಬೇಕು. ಅಂತರಂಗವನ್ನು ಪೂಜಿಸಿ ಮಾತೆಯರನ್ನು ಮಮತೆಯಿಂದ ಕಾಣಬೇಕು. ಛಲವಂತರಾಗಿ ತಮ್ಮ ಮನಸ್ಸಿನ ಹಿಡಿತವನ್ನು ಸಾಧಿಸಬೇಕು. ಭಾರತಾಂಬೆಯನ್ನು ಆರಾಧಿಸಿ ದೇಶ ಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು. ಅಹಂಕಾರವನ್ನು ಬಿಟ್ಟು ಸಾಧ್ಯವಾದಷ್ಟು ಸೋಲುವಂಥ ಗುಣವನ್ನು ರೂಡಿಸಿಕೊಳ್ಳಬೇಕಿದೆ. ಸ್ವಾವಲಂಬಿಯಾಗಿ ನಡೆದುಕೊಂಡು ಮಹಾತ್ಮ ಗಾಂಧೀಜಿ, ಬಾಬಸಾಹೇಬ್ ಅಂಬೇಡ್ಕರ್, ಗೌತಮ ಬುದ್ಧ, ಮಹಮದ್ ಪೈಗಂಬರ್, ಸರ್ವಜ್ಞ, ಅಲ್ಲಮ, ಕುವೆಂಪೂರಂತವರ ಕನಸನ್ನು ನನಸು ಮಾಡಿ ಎಲ್ಲರೂ “ಮನುಷ್ಯ ಕುಲಂ ತಾನೊಂದೆ ವಲಂ” ಎಂಬ ಪದಕ್ಕೆ ಪರಿಪೂರ್ಣತೆಯನ್ನು ದೊರಕಿಸಿಕೊಡಬೇಕಿದೆ ಅಲ್ಲವೆ ?…

2 comments:

sunaath said...

ವಸಂತ,
ನೀವು ಹೇಳುವದು ಸರಿಯಾಗಿದೆ.

ವಸಂತ್ said...

ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು ಸರ್