Saturday, July 9, 2011

ಶಿಶಿರ ಚಂದಿರ...


ಶಿಶಿರ ಚಂದಿರನ ಮೌನದ ಗಾನ
ಬೆಳ್ಳಿ ಬೆಳಕನು ಮುದ್ದಿಸುತಲಿತ್ತು
ಆಗಸವೆಲ್ಲ ಓಕುಳಿ ಚೆಲ್ಲಿ
ಬಣ್ಣದ ಹಬ್ಬವೂ ಅರಳಿತ್ತು.

ತಾರೆಗಳೆಲ್ಲ ಮನೆಯನು ತೊರೆದು
ಚಂದಿರನೂರಿಗೆ ಬಂದಿರಲು
ಮೋಡಗಳೆಲ್ಲ ಮಂಜಿನ ದಿಬ್ಬದಿ
ನೈದಿಲೆಯನ್ನು ಬರೆದಿರಲು.

ಬಾನಿಗೆ ಬಾನೆ ಹಬ್ಬದಿ ಸಡಗರ
ಉಬ್ಬೇರಿಸುತಲಿ ನಡೆದಿತ್ತು
ಗಾಳಿಯು ಕೂಡ ಗರ್ವವ ತೊರೆದು
ಚಂದಿರನೂರಲಿ ನೆರೆದಿತ್ತು.

ಮೌನದ ಮಡುವಲಿ ಕುಳಿತ ಚಂದ್ರನು
ಯೋಚನೆಯಲ್ಲಿ ಮುಳುಗಿದ್ದ
ಇಂದು ಹುಣ್ಣಿಮೆಯು ನಾಳೆ ಕತ್ತಲೆಯು
ಎಲ್ಲವೂ ಬರಿ ನಾಟಕವೆಂದ.

ಹಗಲು ರಾತ್ರಿಗಳ ಕಳೆಯಲೆ ಬೇಕು
ಸೂರ್ಯನಿಗೂ ಇದು ತಪ್ಪಿದ್ದಲ್ಲ
ಕುಣಿಯಿರಿ ನಲಿಯಿರಿ ಎಲ್ಲರೂ ಕೂಡಿ
ನಮ್ಮಯ ಸುಂದರನೆ ಮುಂದಿನ ಚಂದ್ರ…

No comments: