Tuesday, August 9, 2011

ಹೊಸ ಉದಯ

ಬಿರಿದ ಸೂರ್ಯನ ಬಣ್ಣ
ಉರಿವ ಹೊಂಬೆಳಕು
ಸದ್ದುಗದ್ದಲದ ಸಂಭ್ರಮ
ಊರುಳಾಡುವಾ ಕಾಲ

ಗುಬ್ಬಿಗಳ ಚಲ್ಲಾಟ
ಕೂಗೊ ಕೋಳಿಯ ಜಂಭ
ಗುಟುರಾಡುವ ಕರಿಬಸವ
ಜೋಗಿಯ ಗೀ,ಗೀ ಪದವು

ಚೌಕ ಬಾರದ ಆಟ
ಕುಂಟು ಬಿಲ್ಲೆಯ ನೋಟ
ಮರಕೋತಿ ಚಿನ್ನಿದಾಂಡು
ಕಣ್ಣಮುಚ್ಚಾಲೆಯು

ಬೀಸು ಕಲ್ಲಿನ ಚಬುದ
ಜೋಳ ಕುಟ್ಟುವ ಒನಕೆ
ಹಾಲು ಕಡೆಯುವ ಕೋಲು
ಕಳ್ಳ ಬೆಕ್ಕಿನ ಕಾಟ

ಜಾನ ಪದ ಜಗುಲಿಗಳು
ಪಂಚಾಯ್ತಿ ಕಚೇರಿಗಳು
ಬಾವಿಯಲಿ ಕಿರುಚುವ
ಕಬ್ಬಿಣದ ಗಿರಣಿಗಳು

ಕೆಳಗೇರಿ ಹೊಲಗೇರಿ
ಗೌಡನ ನಡುಗೇರಿ
ಬ್ರಾಹ್ಮಣರ ಸುಳಿಗೇರಿ
ಮತ್ತಲವು ಬೀದಿಗಳು

ಆ ಕಪ್ಪುಡುಗಿಯ ಮೊಗದಲ್ಲಿ
ಚಂದ್ರನಂತಹ ಕಳೆಯು
ಮುಡಿಗೆ ಮಲ್ಲಿಗೆ ಹೂವು
ಮನಸ್ಸು ಕಾಮನಬಿಲ್ಲು

ಕಾಳಜ್ಜನ ಗೂಡಂಗಡಿ
ಪಕೀರಪ್ಪನ ಕಸಾಯಿಖಾನೆ
ಶಂಕರನ ಶೇಂಧಿ ನಶೆ
ಕೆಂಚವ್ವನ ಹೋಟಲ್ಲು

ಕರೆಯ ತುಂಬಿಲ್ಲ ನೀರು
ಕೋಡಿ ಹರಿಯುವ ಝರಿಯು
ಜಿಗಿದು ಎಗರುವ ಮೀನು
ಸೀಗಡಿ ಪಕ್ಕೆಗಳು

ರಾಗಿ ಭತ್ತದ ತೆನೆಗಳು
ತೂಗುವ ಹೊಂಬಾಳೆ
ಅಡಿಕೆ ಮಾವಿನ ತೋಟ
ಬೈಗು ಹುಲ್ಲಿನ ನಗೆಯು

ಸೂರ್ಯ ಜಾರುವ ಸಮಯ
ಮತ್ತೊಂದು ಹೊಸ ಸಂಜೆ
ಉರುಳುತಿದೆ ಕಾಲವು
ಕೆಂಬಣ್ಣದ ಮುಗಿಲನು ದಾಟಿ.

Tuesday, August 2, 2011

ಬಾಡಿಹೋದ ಹೂ..

"ಕೆಲವು ಸಂದರ್ಭಗಳಲ್ಲಿ ಪರಿಸ್ಥಿತಿಗಳು ಎಷ್ಟೊಂದು ಕೃರವಾಗಿ ವರ್ತಿಸುತ್ತವೆ".
         ನಮ್ಮ ಮನೆಯಿಂದ ಅವರ ಮನೆಗೆ ಕೇವಲ 50 ಹೆಜ್ಜೆಗಳ ದೂರ. ಅವರದು ಅಷ್ಟೇನು ದೊಡ್ಡ ಮನೆಯಲ್ಲದಾಗಿದ್ದರೂ ತುಂಬಿದ ಕುಟುಂಬವಾಗಿತ್ತು. ಅಜ್ಜಿ, ಮಗ, ಸೊಸೆ, ಮೊಮ್ಮಕ್ಕಳು, ಅಜ್ಜ ಮಾತ್ರ ಇಹಲೋಕ ತ್ಯೆಜಿಸಿದ್ದ. ಅಜ್ಜಿಯ ಮಗ ಕೂಲಿ ಮಾಡುತ್ತಿದ್ದ. ಸೊಸೆ ಗಾರ್ಮೆಂಟ್ ಗೆ ಹೋಗುತ್ತಿದ್ದಳು. ಮೂರು ಜನ ಮಕ್ಕಳಲ್ಲಿ. ಎರಡು ಹೆಣ್ಣು, ಒಂದು ಗಂಡು. ದೊಡ್ಡವಳ ಹೆಸರು ಶಾಂಭವಿ, ದ್ವಿತಿಯ ಪಿಯುಸಿಗೆ ಹೋಗುತ್ತಿದ್ದಳು. ಮಗನ ಹೆಸರು, ಗೋಪಿ, ಐದನೇ ತರಗಳಿಗೆ ಹೋಗುತ್ತಿದ್ದಾನೆ ಮತ್ತು ಚಿಕ್ಕವಳ ಹೆಸರು ಆಶಾ ತುಂಬಾ ಚೂಟಿ ಹುಡುಗಿ, ನಾಲಕ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಏನಪ್ಪ ಇಷ್ಟೊಂದು ಪೀಠಿಕೆ!.ಎನ್ನಬೇಡಿ. ಇದೊಂದು ಕರುಣಾಜನಕ ಕಥೆ ಹೇಳಲೇ ಬೇಕಿಸಿಸುತ್ತಿದೆ ಅದಕ್ಕೆ ಹೇಳುತ್ತಿದ್ದೇನೆ.

ಮೊನ್ನೆ ಸೋಮವಾರ ಬೆಳಗ್ಗೆ ಆ ಹುಡುಗಿಯನ್ನು ಕಾಲೇಜಿಗೆ ಹೋಗುತ್ತಿದ್ದಾಗ ಕಡೆಯದಾಗಿ ಕಂಡಿದ್ದೆ. ಮುದ್ದು ಮುಖದ ಹುಡುಗಿ. ಕಣ್ಸೆಳೆವ ಸೌಂಧರ್ಯ. ತುಂಬಾ ಜಾಣೆ. ಓದಿನಲ್ಲಿ ಅಷ್ಟೇ ಉತ್ಸಾಹ. ಎಲ್ಲಾ ವಿಷಯಗಳಲ್ಲೂ ಡಿಸ್ಟಂಷನ್ ಹಂತದಲ್ಲಿ ಅಂಕಗಳನ್ನು ಪಡೆಯುತ್ತಿದ್ದಳು. ಬಡತನವಿದ್ದರೂ ಅವರಲ್ಲಿ ಆತ್ಮ ವಿಶ್ವಾಸಕ್ಕೇನು ಕೊರತೆಯಿರಲಿಲ್ಲ. ಒಂದು ಹಂತದಲ್ಲಿ ಸಣ್ಣ ಪುಟ್ಟ ಜಗಳಗಳನ್ನು ಬಿಟ್ಟರೆ ಇನ್ನೆಲ್ಲವೂ ಸರಿಯಿತ್ತು ಎನ್ನಬಹುದು. ಅವಳ ತಂದೆಗೆ ಸ್ವಲ್ಪ ಕುಡಿತದ ಚಟವಿತ್ತು. ಆಗಾಗ ಕುಡಿದು ಬಂದು ಮನೆಯಲ್ಲಿ ಜಗಳಮಾಡುತ್ತಿದ್ದ. ಮತ್ತೆ ಬೆಳಗ್ಗೆ ಎಲ್ಲವೂ ಸರಿಯಿರುತ್ತಿತ್ತು. ಆದರೆ ಅವನೆಲ್ಲಾ ತಪ್ಪುಗಳನ್ನು ಅವನ ತಾಯಿ ಹಿಂದೆಹಾಕಿಕೊಂಡು ಸೊಸೆಯನ್ನು ಸುಮ್ಮನಾಗಿಸುತ್ತಿದ್ದಳು. ಒಂದು ಹಂತದಲ್ಲಿ ಆ ಅಜ್ಜಿಯ ನಡುವಳಿಕೆಯಿಂದಲೇ ಆತ ಹೆಚ್ಚು ಕುಡಿದು ಬರುತ್ತಿದ್ದ ಎಂದರೆ ತಪ್ಪಾಗಲಾರದು.

ಮೊನ್ನೆ ಮಂಗಳವಾರ ಅವನಿಗೆ ಕೂಲಿಯ ಹಣ ಬಂದಿದೆ. ಆ ಹಣದಲ್ಲಿ ಅರ್ಧವನ್ನು ಕುಡಿದು ತೂರಾಡುತ್ತ ಮನೆಗೆ ಬಂದಿದ್ದಾನೆ. ಹೆಂಡತಿ ಕೆಲಸಕ್ಕೆ ಹೋಗಿದ್ದರಿಂದ ಶಾಂಭವಿ ಮಾತ್ರ ಕಾಲೇಜಿಗೆ ಹೋಗಲು ತಯಾರಾಗುತ್ತಿದ್ದಳಂತೆ. ಮನೆಗೆ ಬಂದವನೆ ಹೆಂಡತಿಯನ್ನು ಬಯ್ಯುತ್ತ ಜಗಳ ಕಾಯಲು ಶುರುಮಾಡಿದ್ದಾನೆ. ಆ ಹುಡುಗಿ ಎಷ್ಟೇ ಹೇಳ ಹೊರಟರು ಕೇಳುವಂತ ಸೌಜನ್ಯವೂ ಅವನಿಗೆ ಇಲ್ಲದಾಗಿತಂತೆ. ತಂದೆಯ ಬೈಗುಳಗಳನ್ನು ಪ್ರತಿರೋಧಿಸಿದಾಗ. ಅವನು ಆ ಹುಡುಗಿಗೆ ಮನಸಾರೆ ಹೊಡೆದನಂತೆ. ಇದನ್ನು ತಡೆಯಬೇಕಿದ್ದ ಆ ಅಜ್ಜಿ ಮಗನಿಗೆ ಮತ್ತಷ್ಟು ಇಂಬುಕೊಟ್ಟಾಗ ಅವನು ಹುಡುಗಿಯನ್ನು ಇಷ್ಟ ಬಂದಂತೆ ನಿಂದಿಸಿದನಂತೆ. ಅವನ ವರ್ತನೆಯಿಂದ ಬೇಸತ್ತ ಹುಡುಗಿಯ ಮನಸ್ಸಿಗೆ ಹೇಳಲಾರದಷ್ಟು ನೋವುಂಟಾಗಿರಬೇಕು. ಎಷ್ಟು ನೊಂದುಕೊಂಡಳೋ ಏನೋ. ತನ್ನ ತಾಯಿಯು ಬರುವ ಮುಂಚೆಯೇ ನೇಣುಬಿಗಿದುಕೊಂಡು ಆತ್ಮಹತ್ತೆ ಮಾಡಿಕೊಂಡಿದ್ದಳಂತೆ. ಈ ವಿಷಯ ತಿಳಿದು ನನ್ನ ಮನಸ್ಸಿಗೆ ತುಂಬಾ ಬೇಸರ ಉಂಟಾಯಿತು.

"ಭವಿಷ್ಯದ ಕನಸುಗಳನ್ನುಹೊತ್ತು  ಕುಶಿಯಾಗಿ ನಡೆದಾಡುತ್ತಿದ್ದ ಹುಡುಗಿ ಈಗ ಕೇವಲ ನೆನಪು ಮಾತ್ರ". ಆಕೆಯ ಬದುಕು ಬಿರುಗಾಳಿಯಾಗಿಹೋಗಿದೆ ಆದರೆ ಆಗಾಗಬಾರದಿತ್ತು. ಸಂಕಷ್ಟಗಳೇಷ್ಟೇ ಬಂದರೂ ಅವುಗಳನ್ನುನಿಭಾಯಿಸುವಂತ ಶಕ್ತಿ ಅವಳಲ್ಲಿರಬೇಕಿತ್ತು.  ತಾನು ಸಾಯುವ ಮುನ್ನ ತನ್ನ ತಾಯಿ, ತಮ್ಮ, ತಂಗಿಯ ನೆನಪಾದರೂ  ಆಕೆಯನ್ನು ಕಾಡಬೇಕಿತ್ತು."ಹೂ ಅರಳುವ ಮೊದಲೇ ಮೊಗ್ಗು ಬಾಡಿಹೋದ" ಹಾಗೆ ಅವಳ ಆತುರದ ತಿರ್ಮಾನಕ್ಕೆ ತನ್ನ ಜೀವವನ್ನೇ ಕಳೆದುಕೊಂಡಿದ್ದಾಳೆ. ಎಷ್ಟೇ ನೋವುಂಟಾದರೂ ಅದನ್ನು ತಡೆತಯುವಂಥ ಶಕ್ತಿಯಿರಬೇಕು. ಎಂತಹ ಸಮಯದಲ್ಲೂ ದುಡುಕದೆ ಎದುರುನಿಲ್ಲುವ ಸಾಮರ್ಥ್ಯವಿರಬೇಕು ಯಾವುದೇ ಕಾರಣಕ್ಕೂ ಕುಗ್ಗವಂಥ ಗುಣವುಳ್ಳವರಾಗಿರಬಾರದು. ತಂದೆಯಾದವನು ಮನಸಾ ಇಚ್ಚೆ ಹುಡುಗಿಯ ಮೇಲೆ ಕೈ ಮಾಡಬಾರದಿತ್ತು. ಈ ಕುಡಿತದ ಚಟ ಎಷ್ಟೋ ಮನೆಗಳನ್ನೇ ಒಡೆದು ಆಳುಮಾಡಿಬಿಟ್ಟಿದೆ ಎನ್ನುವುದಕ್ಕೆ ಇದಕ್ಕಿಂತ ಮತ್ತೊಂದು ಉದಾಹರಣೆ ಬೇಕಿಲ್ಲ.

ಅವನ ಕುಡಿತವೇ ಅವಳನ್ನು ಕತ್ತಲೆಗೆ ದೂಡಿತೆಂದರೆ  ಇದರ ಶಿಕ್ಷೆ ಯಾರಿಗೆ ?. ಅವನ ತಪ್ಪುಗಳನ್ನೆಲ್ಲಾ ತನ್ನ ಮೇಲಾಕಿಕೊಂಡು ಬರುತ್ತಿದ್ದ ಅವನ ಅಮ್ಮನಿಗಾ ?. ಇಲ್ಲಾ ಕುಡಿದು ಬಂದು ಮಗಳ ಮೇಲೆ ಕೈಮಾಡಿದ ಅವನಿಗಾ ?. ಉತ್ತರ ನಿಮಗೆ ಬಿಟ್ಟಿದ್ದು..   ಧಯವಿಟ್ಟು ಎಲ್ಲರಲ್ಲೂ ಒಂದು ವಿನಂತಿ. ಮನಸ್ಸಿಗೆ ಎಷ್ಟೇ ಕಷ್ಟ ಉಂಟಾದರೂ ಸರಿ. ಎಂತಹ ಸಮಯದಲ್ಲೂ ಕುಗ್ಗದೆ ಅದಕ್ಕೊಂದು ಪರಿಹಾರ ಮಾರ್ಗವನ್ನು ಹುಡಿಕಿಕೊಳ್ಳುವಂತ ಸಾಮರ್ಥ್ಯ ನಿಮ್ಮದಾಗಲಿ ಎಂದು ಹಾರೈಸುತ್ತೇನೆ .