Wednesday, September 28, 2011

ಅದೊಂದು ಕಾಲವಿತ್ತು


ಹಿಂದೊಮ್ಮೆ ಇತ್ತಲ್ಲಿ
ಹಸುರಿನ ಕಾನನ
ಜುಳ ಜುಳನೇ ಹರಿವ ಜಲಧಾರೆ

ಕೊಕ್ಕರೆ ಬೆಳ್ಳಕ್ಕಿ
ಸೀಗಡಿ ಏಡಿಗಳ ಸುಂದರ
ನೆನಪಿನ ಸಂಸಾರ

ಸುಳಿವ ಸುಯ್ಯನೆ ಗಾಳಿ
ಹುಲ್ಲಿನ ಗುಡಿಸಲು
ಹುಲ್ಲ ಮೇಲೊಂದು ಕರಿವುಂಜ

ಗುಡಿಸಲ ಒಳಗೊಂದು
ತೂಗುವ ತೊಟ್ಟಿಲು
ಜೋಕಾಲಿ ಆಡುವ ಎಳೆಕಂದ

ಅಮ್ಮನ ಲಾಲಿಯು
ಜೋಗಿಯ ಗೀಗಿಯು
ಮರದ ಮೇಗಿನಾ ಕೋಗಿಲೆಯು

ಕಿರ ಕಿರ ಕಿರುಚುವ
ಹಗ್ಗದ ಗಿರಣಿಯು
ಚೆಲ್ಲಿ ಸಾಗುವ ನೀರ ಗಡಿಗೆಯು

ಕೋಡಿಯ ಹರಿವಿತ್ತು
ಸೀಗಡಿಯು ಎಗರಿತ್ತು
ಕೆಂಚನ ಬುಟ್ಟಿಯು ತುಂಬುತ್ತಿತ್ತು

ಬೆಳ್ಳಕ್ಕಿ ಹಿಂಡು ಹಿಂಡು
ಕೊಕ್ಕಾರೆ ದಂಡು ದಂಡು
ನವಿಲು ಸಾರಂಗಗಳ ಬೆರಗಿತ್ತು

ಸಿಹಿನೀರ ಕೊಳವಿತ್ತು
ಸೊಂಪಾದ ಬೆಳೆಯಿತ್ತು
ಮಲ್ಲಿಗೆ ಸಂಪಿಗೆಯ ಘಮಲಿತ್ತು

ಗಲ್ಲೆನ್ನುವ ಗೆಜ್ಜೆಯು
ಗಾಲಿಯ ಚಿಕ್ಕಡಿಯು
ಉದ್ದುದ್ದ ಕೊಂಬಿನ ಹಸುವಿತ್ತು

ಅಜ್ಜಿಯ ಕಥೆಯಿತ್ತು
ಅಜ್ಜನಿಗೆ ಕುಶಿಯಿತ್ತು
ಎಲ್ಲರಿಗೂ ಎಲ್ಲದಕ್ಕೂ ಸಮಯವಿತ್ತು

ಕಾಲವು ಸರಿದಂತೆ
ಅಭಿವೃದ್ಧಿ ಬೆಳೆದಂತೆ
ಎಲ್ಲವೂ ಒಂದೊಂದೆ ಮರೆಯಾಯ್ತು

ಅಂದಿದ್ದ ಆ ಕಾಲ
ಮತ್ತೆ ಬಾರದು ಎಂದು
ಎಲ್ಲವೂ ನೆನಪುಗಳೆ ಮುಂದೆಂದೂ

ಮತ್ತೆ ಬಯಸುವೆ ನಾನು
ಮರು ಹುಟ್ಟು ಅಂತಿದ್ರೆ ಆ ಹುಲ್ಲ
ಗುಡಿಸಲೊಳಗೊಂದು ಪುಟ್ಟ ಮಗುವಾಗಿ.

6 comments:

Dr.D.T.Krishna Murthy. said...

ವಸಂತ್;ಸುಂದರ ಕವನ .ಇಷ್ಟವಾಯಿತು.ಬ್ಲಾಗಿಗೆ ಬನ್ನಿ.

ದಿನಕರ ಮೊಗೇರ said...

andina kaalada melaku kavanada mUlaka....
ishTa aaytu.....

ಸಾಗರದಾಚೆಯ ಇಂಚರ said...

Sundara kavana Vasant,

heege barita iri

sunaath said...

ತುಂಬ ಸುಂದರ ನೆನೆವರಿಕೆ.

ಮನದಾಳದಿಂದ............ said...

ವಸಂತ್,
ಬಹಳ ದಿನಗಳ ನಂತರ ನಿಮ್ಮ ಬ್ಲಾಗಿಗೆ ಬರುವಂತೆ ಈ ನಿಮ್ಮ ಕವನ ಎಳೆದು ತಂದಿತು. ಸುಂದರ ಕವನ.................!

ವಿಚಲಿತ... said...

ಸುಂದರ ನೆನಪಲ್ಲವೇ..
ಆ ಅನುಭವ ಇರುವವರಿಗೆಲ್ಲ ಈ ಆಸೆ ಇರಲೇಬೇಕು..