Sunday, October 30, 2011

ನಾ ಒಂಟಿಯಲ್ಲ.


ವರುಷಗಳು ಕಳೆದವು
ಬಯಕೆಗಳು ಅರಳಿದವು
ಒಮ್ಮೆ ಸಂತಸ 
ಮರು ಕ್ಷಣವೇ ದುಗುಡ
ನಾ ಒಂಟಿಯಂತೆ ಆದರೂ
ನಾನೊಂಟಿಯಲ್ಲ

ಅವನ ನೆನಪುಗಳು ಕಾಡುತ್ತವೆ
ಮರಳುಗಾಡಿನ ವಯಸಸ್ಸಿನಂತೆ 
ಕವಲೊಡೆಯುತ್ತವೆ
ಬಿರುಗಾಳಿಯಂತೆ ಹಿಂಬಾಲಿಸುತ್ತವೆ
ಬಿಸಿಲಂತೆ ಒಣಗುತ್ತವೆ
ಆದರೂ ನಾನೊಂಟಿಯಲ್ಲ

ನಾ ಕಾಯುತ್ತಿದ್ದೇನೆ - ಕಾಯುತ್ತೇನೆ
ಅವನು ಬಾರದಿದ್ದರೂ ಸಹ 
ಹೊಸ ಚಿಗುರಂತೆ ಅರಳುತ್ತೇನೆ
ಅವನಿಗಾಗಿಯೇ ಹಂಬಲಿಸುತ್ತೇನೆ
ಆದರೂ ನಾನೊಂಟಿಯಲ್ಲ

ತಿಳಿಯದ ಭ್ರಮೆಗಳು ಅಣಕಿಸುತ್ತವೆ
ಅವನು ಬರುತ್ತಾನ? 
ಎಲ್ಲವೂ ನಿನ್ನ ಮೂಡ ಭ್ರಮೆ? 
ಎಂದು ವ್ಯಂಗ್ಯವಾಡುತ್ತವೆ
ಒಳಗೊಳಗೇ ಮುಸಿ ಮುಸಿ ನಗುತ್ತವೆ
ಆದರೂ ನಾನೊಂಟಿಯಲ್ಲ

ನನ್ನಿಂದೆ ಅವನ ನೆನಪುಗಳು
ಸದಾ ಸುಳಿದಾಡುತ್ತವೆ
ಪ್ರತಿ ಕ್ಷಣವೂ ಅವನು
ಜೊತೆಯಿದ್ದಂತೆ ಭಾಸವಾಗುತ್ತದೆ
ಆದ್ದರಿಂದ ಯಾರು ಏನೆಂದರೂ
ನಾನು ಒಂಟಿಯಲ್ಲ..

Saturday, October 22, 2011

ಎಲ್ಲಿ ಹೋದ ಅವನು


ಮೌನವಾಗಿ ಜಾರುತಿದೆ ಹೊತ್ತು
ಆಗಾಗ ಸುಳಿದು ಸಾಗುತಿವೆ ನೆನಪುಗಳು
ಕತ್ತಲು ಬೆಳಕಾಯಿತು, ಬೆಳಕು ಕತ್ತಲಾಯಿತು
ನನ್ನ ನಿರೀಕ್ಷೆಗಳು ಉಸಿಯಾಯಿತೆ ?
ಬಯಕೆಗಳು ಬಣ್ಣ ಕಳೆದಂತೆ ಕಾಣುತ್ತಿವೆ
ಬಾನು ಬಾಗಿ ಕತ್ತಲಾಗಿದ್ದರೂ
ಇನ್ನೂ ಏಕೆ ಬರಲಿಲ್ಲ ಅವನು ?

ತಾರೆಗಳ ತೋಟದಲ್ಲಿ
ಹೊಂಬೆಳಕ ಬೀರುವ ಚಂದ್ರನ ಮುಂದೆ
ಚಲಿಸುತ್ತಿದ್ದ ಮೋಡಗಳ ಸಾಕ್ಷಿಯಾಗಿ
ಸದಾ ನಿನ್ನ ಬಾಳಿನಲ್ಲಿ ದೀಪದಂತೆ ಬೆಳಗುತ್ತೇನೆ
ಜನ್ಮ ಜನ್ಮದಲ್ಲೂ ಜೊತೆಯಾಗುತ್ತೇನೆ
ನೀ ಭಯಗೊಳ್ಳದಿರು ಸುಮವೆ ಎಂದಿದ್ದನಲ್ಲ ?

ಅಮಾವಾಸ್ಯಗಳು ಬಂದುಹೋಗುತ್ತಿವೆ
ಚಂದ್ರ ಕತ್ತಲಾಗಿದ್ದಾನೆ
ಮೋಡಗಳು ಚಲಿಸದೆ ಸುಮ್ಮನಾಗಿವೆ
ತಾರೆಗಳು ಜಾರಿ ಬೀಳಲಾರಂಭಿಸಿವೆ
ಎಲ್ಲಿಹೋದನೆಂದು ಅರಿಯದಾದೆನೆ !

ನನ್ನ ಬಯಕೆಗಳು ಉಸಿಯಾಗುವ ಮುನ್ನ
ಮತ್ತೊಂದು ಕತ್ತಲು ಕವಿಯುವ ಹೊತ್ತಿಗಾದರೂ
ಬಿದ್ದು ಹೋದ ತಾರೆಗಳನ್ನು
ಕತ್ತಲು ತೋರುವ ಚಂದ್ರನನ್ನು
ಚಲಿಸದೆ ಸುಮ್ಮನಾದ ಮೋಡಗಳನ್ನು
ತಡೆದು ಕೇಳಿಬಿಡುತ್ತೇನೆ ಎಲ್ಲಿ ಹೋದ ಅವನೆಂದು ?.

Sunday, October 16, 2011

“ಗೌತಮ ಬುದ್ಧ”


ಸರಿರಾತ್ರಿಯ ಸಮಯ
ನಿದುರೆಯು ಎಲ್ಲರನ್ನೂ
ಬೆನ್ನುತಟ್ಟಿ ಬೆಚ್ಚಗೆ ಮಲಿಗಿಸಿತ್ತು
ಲೋಕವೆಲ್ಲಾ ಮೌನವಾಗಿ ಮಲಗಿರುವಾಗ
ಅವನೊಬ್ಬನಿಗೆ ಮಾತ್ರ ಎಚ್ಚರವಾಗಿತ್ತು

ತಣ್ಣಗೆ ಗಾಳಿ ಬೀಸುತ್ತಿತ್ತು
ಚುಕ್ಕಿಗಳು ಇಣುಕಿನೋಡುತ್ತಿದ್ದವು
ಚಂದ್ರ ಬೆಳದಿಂಗಳನ್ನು ಚೆಲ್ಲಿದ್ದ
ಅವನು ಎದ್ದು ನಿಧಾನವಾಗಿ ನಡೆಯತೊಡಗಿದ

ಕೋಟೆಯಂತಹ ಮನೆ
ಚಿನ್ನ ಹೊನ್ನಿನ ಖಜಾನೆ
ನಯವಾದ ಕೆಂಪು ಕಲ್ಲಿನ ನೆಲ
ಉಕ್ಕಿನ ಬಾಗಿಲುಗಳು
ಒಂದು ಕ್ಷಣವೂ ಅವನು ಯೋಚಿಸಲಿಲ್ಲ
ತಂದೆ ತಾಯಿ ಮಡದಿ ವ್ಯಾಮೋಹಿಸಲಿಲ್ಲ

ಬಾಗಿಲುಗಳು ತೆರೆದುಕೊಂಡವು
ಭೋಗ ಅವನನ್ನು ತಡೆಯಲೆತ್ನಿಸಿತು
ಆಸೆಯು ಅಸೂಯೆಪಟ್ಟಿತು
ಎಲ್ಲವನ್ನೂ ದೂರಕ್ಕಟ್ಟಿ ಬೋಧಿ ವೃಕ್ಷದಡಿ
ಮೌನವಾಗಿ ಕುಳಿತುಬಿಟ್ಟ

ಬೆಚ್ಚು ಬೆರಗಾಯಿತು ಜಗ
ತೀಕ್ಷ್ಣ ಕಣ್ಣಿನಿಂದ ಇವನನ್ನೇ ನೋಡತೊಡಗಿತು
ವರ್ತನಗೆಳು ವಿಚಿತ್ರವೆನಿಸಿದವು
ಮಾತಿನ ವರಸೆ ಒಂದು ಕ್ಷಣ
ಎಲ್ಲರನ್ನೂ ಕಟ್ಟಿ ನಿಲ್ಲಿಸುವಂತಿತ್ತು

ಅಲ್ಲೊಬ್ಬಳು ಅತಿಯಾಗಿ ವೇದನೆ ಪಡುತ್ತ
ತನ್ನ ಕರುಳ ಬಳ್ಳಿಯನ್ನು ತಬ್ಬಿಕೊಂಡು
ಉಳಿಸಿಕೊಡಿ ! ಉಳಿಸಿಕೊಡಿ !! ಎನ್ನುತ್ತ
ಗೋಗರೆದು ಇವನಲ್ಲಿಗೆ ತರುತ್ತಿದ್ದಾಳೆ

ಎಲ್ಲರೂ ಮೌನರಾಗಿದ್ದಾರೆ
ಅವನೂ ಮೌನವಾಗಿದ್ದಾನೆ
ಉಪಾಯ ಸರಳ ಸಾಮಾನ್ಯದಂತಿತ್ತು
ಅದು ಸಾವಿಲ್ಲದ ಮನೆಯ
ಸಾಸುವೆಯ ಕಾಳಾಗಿತ್ತು

ಅವಳು ಬಡಿಯ ತೊಡಗಿದಳು
ಒಂದೊಂದೆ ಮನೆಯ
ಒಂದು ಎರಡು ಮೂರು
ಹತ್ತು ಇಪ್ಪತ್ತು ನೂರು
ಸಾವಿರ ಬಾಗಿಲುಗಳನ್ನು
ದ್ವಂದ್ವ ಅವಳಲ್ಲಿ ಆವರಿಸಿತ್ತು
ಸೋತು ಸುಮ್ಮನೆ ಕೈಚೆಲ್ಲಿ ಕುಳಿತಳು

ಎಲ್ಲರ ಮನೆಯಲ್ಲೂ ಸಾಸುವೆಯಿತ್ತು
ಅದರಡಿಯಲ್ಲಿ ಸಾವಿತ್ತು
ಅದರ ಕರಿ ನೆರಳು ಎಲ್ಲರನ್ನೂ ಕವಿದಿತ್ತು
ಅವಳು ಮೌನವಾದಳು
ಅವನೂ ಮೌನವಾದ್ದನು
ಮಂದಿಯೆಲ್ಲ ಮೌನವಾದರು

ಅವನು ಜಗವನ್ನೇ ಜಯಸಿದ
ಜನ ಸಾಮಾನ್ಯರ ಮನಕ್ಕೆ ಅತ್ತರವಾದ
ಆಸೆಯೇ ದುಃಖಕ್ಕೆ ಮೂಲ ಕಾರಣವೆಂದ
ಆಸೆಯನ್ನು ತೊರೆದರೆ ಮೋಕ್ಷಸಾಧಿಸಬಹುದೆಂಬ
ಅನುಭವದ ನುಡಿಗಳನ್ನಾಡಿದ

ಹಲವರಿಗೆ ದೈವವಾದ
ಮತ್ತಲವರಿಗೆ ಸ್ಪೂರ್ಥಿಯಾದ
ಇನ್ನಲವರಿಗೆ ದಾರಿತೋರೋ ದಾತನಾದ
ಬೌಧ ಧರ್ಮದ ಉಗಮಕ್ಕೆ ಕಾರಣವಾದ
ಮಹಾನ್ ಪುರುಷ “ಗೌತಮ ಬುದ್ಧ”..

Saturday, October 15, 2011

ಇನ್ನು ಕೇವಲ ಸ್ವಲ್ಪವೇ ಸಮಯವಷ್ಟೆ


ಎಲ್ಲೆಲ್ಲೂ ಗಾಡ ಕತ್ತಲು
ಮನೆಗಳಲ್ಲಿ ಮಂದವಾಗಿ
ಬೆಳಕು ತೋರುವ ಚಿಮಣಿ ಬುಡ್ಡಿಗಳು
ಮೇಣಿದ ಬತ್ತಿಗಳ ನಿದ್ದೆಯ ಜೋಂಪು
ಒಂದೆರಡು ಕಡೆ ವಿದ್ಯುತ್ತಿನಂತೆ
ಉಸಿರಾಡುವ ಎಮರ್ಜನ್ಸಿ ಬಲ್ಬುಗಳು

ತೋಳಗಳ ಆರ್ಥನಾದ
ಗೂಬೆಗಳ ಬೊಬ್ಬೆಗಳು
ಮೌನವಾಗಿ ಸುಳಿದಾಡುವ ತಿಳಿಗಾಳಿ
ಮಿಣಿಕುಹುಳುಗಳ ಕಣ್ಣಾಮುಚ್ಚಾಲೆ
ಎಲ್ಲವನ್ನೂ ಚಾಚು ತಪ್ಪದೇ
ಗಮನಿಸುತ್ತಿರುವ ನಕ್ಷತ್ರ ಪುಂಜ

ಗೋಡೆಯ ಬಣ್ಣ ಕಪ್ಪಾಗಿದೆ 
ಆ ಕಪ್ಪೊಳಗೊಂದು ಕನ್ನಡಿಯಲ್ಲಿ
ಗಾಡ ಕತ್ತಲು ಕವಿದಿದೆ
ಗೋಚರಿಸದ ಬಿಂಬಕ್ಕಾಗಿ
ಅದರ ಮುಂದೊಂದು ಕಪ್ಪು ಛಾಯೆ
ಬಿಕ್ಕಿ ಬಿಕ್ಕಿ ಅಳುತ್ತಿದೆ

ಅಗೋ ಆಗಸದಲ್ಲೊಂದು
ಸಿಡಿಲ ಕೋಲು ಮಿಂಚಿ ಮರೆಯಾಯಿತು
ಅದರ ಕಿಡಿತಾಗಿ ಇಳೆಯ ಮರವೊಂದು
ಧಗಧಗಿಸಿ ಉರಿಯುತ್ತಿದೆ
ಮೋಡಗಳು ಮೌನವಾಗಿ ನೋಡುತ್ತಿವೆ

ಆ ದಾರಿ ಈಗ ನಯವಾಗಿದೆ
ಮೊನ್ನೆಯಷ್ಟೇ ಅದಕ್ಕೆ ಭಾವಿನ ರೋಗವಿತ್ತು
ಯಾವುದೋ ಸರ್ಕಾರಿ ಆಸ್ವತ್ರೆಯಲ್ಲಿ
ಚಿಕಿಸ್ಥೆ ಪಡೆದು ಗುಣವಾಗಿಸಿಕೊಂಡಿರಬೇಕು
ನನ್ನ ಚಂಚಲ ಮನಸ್ಸಿನ ಕಾಯಿಲೆಗೂ
ಈ ದಾರಿಯೇ ಉತ್ತರಿಸಬಹುದೇನೋ ?

ಇನ್ನು ಸ್ವಲ್ಪ ಸಮಯವಷ್ಟೇ ಕಾಯಿರಿ
ಆಗಸದ ತುಂಬೆಲ್ಲ ಬೆಂಕಿ ಹೊಗೆಯಾಡುತ್ತದೆ
ಅಕ್ಕಿ ಅನ್ನವಾಗುತ್ತದೆ
ಅಸಿವು ಮಾಯವಾಗುತ್ತದೆ
ಇನ್ನು ಕೇವಲ ಸ್ವಲ್ಪವೇ ಸಮಯವಷ್ಟೆ
ಇದೇ ದಾರಿಯಲ್ಲಿ ಅಮೃತವು ಸಹ
ಕೋಡಿಯಾಗಿ ಹರಿಯುತ್ತದೆ.

Sunday, October 9, 2011

ಸೋಜಿಗ ಜಗವಿದು ತಿಳಿಯಣ್ಣ

ಎಳ್ಳಿನ ಒಳಗೆ ಹಸುರಿನ ಚಿಗುರು
ಹನಿಹನಿಯಾಗಿ ಉದುರುವ ತುಂತುರು
ಆಗಸವೆಲ್ಲಾ ನೀಲಿಯ ಬಣ್ಣ
ಸೃಷ್ಟಿಯ ಸೊಬಗಿದು ಅರಿಯಣ್ಣ

ಎಲೆಗಳ ನಡುವೆ ಕೂಗುವ ಕೋಗಿಲೆ
ತಳಕುತ ಬಳಕುವ ಚಿನ್ನದ ನವಿಲು
ಮರಗಳ ತಬ್ಬಿದ ಪಚ್ಚೆಯ ಬಳ್ಳಿ
ಗಾಳಿಗೆ ತೂಗುವ ಕಮಲದ ಹೂವು

ಗನವ ತಾಗುವ ಬೀಟೆಯ ಮರಗಳು
ತೇಗಸಿರಿಗಂಧದ ಸುಮಧುರ ಘಮಲು
ಹರಿಯುವ ಜುಳು ಜುಳು ನೀರಿನ ಶಬ್ಧ
ಸೃಷ್ಟಿಯ ಮುಂದೆ ಎಲ್ಲವು ಸ್ಥಬ್ಧ

ಬೆಟ್ಟದ ಮೇಲೆ ಮಂಜಿನ ಮುಸುಕು
ತೇಲುತ ಸಾಗುವ ಮೋಡದ ತಳುಕು
ಸಂಜೆಯ ಕೆಂಪಲಿ ಸಾಗುವ ಹಿಂಡು
ಕೊಕ್ಕರೆ ಬೆಳ್ಳಕ್ಕಿ ಸಾಲುಗಳು

ಬೈಗು ಹುಲ್ಲಿನ ಪೋದೆಗಳ ನೋಟ
ಹುಲ್ಲಲಿ ನಲಿವ ಮೊಲಗಳ ಆಟ
ಹಲವು ಬಣ್ಣದ ಚಿಟ್ಟೆಗಳಣ್ಣ
ಇಂಥ ಸೊಬಗಿದು ಸಿಗದಣ್ಣ

ಬೆಟ್ಟಗಂಳತ ಹಿಮಗಲ್ಲುಗಳು
ಭೋರ್ಗರೆಯುವ ಜಲಪಾಥಗಳು
ಕೊತ ಕೊತ ಕುದಿಯುವ ಜ್ವಾಲ ಮುಖಿಗಳು
ಇದುವೇ ಸೃಷ್ಟಿಯ ಅದ್ಭುತವಣ್ಣ

ಬಣ್ಣ ಬಣ್ಣದ ಕಾಮನ ಬಿಲ್ಲು
ಹಿಣುಕುವ ರವಿಯ ಚಿನ್ನದ ಕೋಲು
ನೆತ್ತಿಯ ಮೇಲೆ ತಣ್ಣನೆ ಚಂದ್ರ
ಜಗವೇ ಒಂದು ಸುಂದರ ಮಂದಿರ

ಕಳೆಗುಂದದಿರಲಿ ಹಸುರಿನ ಕಾನನ
ನಶಿಸದಿರಲಿ ಮನುಜನ ಜೀವನ
ಸೃಷ್ಟಿಯು ನಮಗೊಂದು ಅದ್ಭುತ ತಾಣ
ಸೋಜಿಗ ಜಗವಿದು ತಿಳಿಯಣ್ಣ.