Sunday, November 27, 2011

ಮುಸ್ಸಂಜೆ ಸಮಯ


ಮುಸ್ಸಂಜೆ ಸಮಯ
ಬಾನಲ್ಲಿ ರಕ್ತದೋಕುಳಿ ಹರಿದಿತ್ತು
ಕಣ್ಣಿಗೆ ಕೈಅಗಲಿಸಿ ದಿಟ್ಟಿಸುತ್ತೇನೆ
ಸೂರ್ಯ ಕೆಂಪಲ್ಲಿ ಮುಳುಗುತ್ತಿದ್ದ

ನಿಲ್ಲು ನಿಲ್ಲು ಸೂರ್ಯನೇ
ನಿನ್ನ ಮುಳುಗಲು ಬಿಡೆನು
ನಿನ್ನ ಕಿರು ಬೆರಳನ್ನಾದರೂ ನೀಡು
ಹೊರಗೆಳೆದು ರಕ್ಷಿಸುವೆ!

ಸೂರ್ಯ ನಗುತ್ತ !
ಎಲೈ ಹುಚ್ಚು ಹುಡುಗನೇ
ನನ್ನ ನೀ ಮುಟ್ಟದಿರು
ಉರಿದು ಬೂದಿಯಾಗುತ್ತಿ
ಹೊರಡು ಹೊರಡೆಂದು
ಅಸ್ತಮಿಸಿಯೇ ಬಿಟ್ಟ

ಬಾನಕ್ಕಿಗಳು ಹಾರುತ್ತಿದ್ದವು
ನರಿಗಳು ಊಳಿಡುತ್ತಿದ್ದವು
ಗೂಬೆಗಳು ಬೊಬ್ಬೆಯಿಡುತ್ತ
ಅತ್ತಂತೆ ತೋರುತ್ತಿತ್ತು

ಕೆಂಪುಗೆರೆಗಳು ಇನ್ನೂ
ಮುಸುಕಾಗಿ ಇಣುಕುತ್ತಿದ್ದವು
ನಕ್ಷತ್ರಗಳು ಅವುಗಳನ್ನು ದಿಟ್ಟಿಸುತ್ತಿದ್ದವು
ಚಂದ್ರ ಬರುವವನಿದ್ದ

ನಾಳೆಯಂತೂ ಬಿಡೆನು
ಅವನ ಕೈಕಾಲುಗಳ ಮುರಿದು
ಮನೆಯಂಗಳಕ್ಕೆ ತಂದಾಕಬೇಕು
ಬರಲೆಂದು ಮೌನದಲಿ ಹಿಂದುರುಗಿದೆ  

Thursday, November 17, 2011

ಆರಿದ್ರೆಅವಳು ನನ್ನ ಪಾಲಿಗೆ ಆರಿದ್ರೆ ಮಳೆಯಂತೆ
ನೆನಪಾದಾಗೆಲ್ಲ ತಣ್ಣನೆಯ
ಹನಿ ಸುರಿಸುವ ಸಂಭ್ರಮ
ವರ್ಷಕೊಮ್ಮೆಯಾದರೂ
ನನ್ನ ಮನೆಯಂಗಳ ತನಕ
ತಪ್ಪದೇ ಬಂದು ಸುರಿದು ಹೋಗುವ ಆರಿದ್ರೆ
ನನ್ನವಳಷ್ಟೇ ನಯನಮನೋಹರಿ

ಮಾಗಿಯ ಚಳಿಯಲ್ಲಿ
ಮಲೆನಾಡ ಬೆಟ್ಟಗಳನ್ನು ಬಿಗಿದಪ್ಪಿ
ಆಕಾಶಕ್ಕೂ ಭೂಮಿಗೂ
ಅಂತರವೇ ಇಲ್ಲವೆಂಬಂತೆ
ಮುತ್ತಿಕ್ಕಿ ಸುರಿವ ಮಳೆಯು
ನಮ್ಮಿಬ್ಬರ ಪ್ರೀತಿಯನ್ನು ನೆನಪಿಸುತ್ತೆ

ಕಣ್ಣು ಕೋರೈಸುವ
ಹಸಿರ ವನರಾಶಿಯ ನಡುವೆ
ತಣ್ಣನೆಯ ತೊರೆಗಳ ಸಿಂಚನ
ಜುಳು ಜುಳು ಸುನಾಧ
ಹುಚ್ಚು ಹಿಡಿಸುವಂತಾ ಅನುಭವ

ನನ್ನ ಹೃದಯದ ಬಯಲಲ್ಲಿ
ಆರಿದ್ರೆಯಂತೆ ತಂಪನೆರೆವ ಅವಳೇ
ನನ್ನ ಬದುಕಿಗೊಂದು ಭೂಷಣ
ನನ್ನ ಬಾಳಲ್ಲಿ ಕಳಶವಿಟ್ಟು
ನಂದಾ ದೀಪವಾಗಿ ಬೆಳಗಲಿರುವ 
ನನ್ನಾಕೆಯನ್ನು ಏನೆಂದು ವರ್ಣಿಸಲಿ  ಪದಗಳೇ ಸಿಗುತ್ತಿಲ್ಲ !

Monday, November 14, 2011

ಅಣ್ಣನಿಗೊಂದು ಇ ಸಂದೇಶ

ಹಾಯ್ ಅಣ್ಣ ಹೇಗಿದ್ದೀ ?.

           ಮನೆಗೆ ಯಾವಾಗ ಬರ್ತಿಯ ? ಅಜ್ಜಿ ನಿನ್ನ ನೋಡಬೇಕಂತೆ ತುಂಬಾ ಮಿಸ್ ಮಾಡ್ಕೊತಿದ್ದಾಳೆ. ನೀ ಆದಷ್ಟು ಬೇಗ ಬಂದ್ರೆ ನಮಗೆಲ್ಲ ಹ್ಯಾಪಿ. ನಾಳೆ ಸಂಜೆ ಫ್ಲೈಟ್ಗೆ ಬಂದ್ಬಿಡು ಫ್ಲೀಸ್. ಅಮ್ಮಾ ಕೂಡ ಅಪ್ಪನ ಜೊತೆ ನಿನ್ನ ಕರ್ಕೊಂಡು ಬರೋದಕ್ಕೆ ಏರ್ ಪೋರ್ಟೆಗೆ ಬರ್ತಾಳಂತೆ, ನಾನು ಸಹ ನಿನ್ನ ತುಂಬಾ ಮಿಸ್ ಮಾಡ್ಕೋತೀನಿ.

          ಹಾ ನಿಂಗೊಂದು ಕೇಳೋದು ಮರ್ತಿದ್ದೆ ನೀ ಬರೋವಾಗ ನಂಗೊಂದು ಕ್ಯಾಮರಾ ತಗೊಬಾ ಫ್ಲೀಸ್. ನಿಂಗೆ ಗೊತ್ತಲ್ಲ ನನ್ ಹುಚ್ಚು ಎಂಥದ್ದು ಅಂಥ. ನನ್ನ ಹಳೇ ನಿಕ್ಕೊನ್ ಕ್ಯಾಮಾರಾದಲ್ಲಿ ಸುಮಾರು 5000 ಫೋಟೋಸ್ ತೆಗ್ದು ರೆಕಾರ್ಡ್ ಮಾಡಿದ್ದೆ. ಅದ್ರಲ್ಲಿ ಕೆಲವು ಚಿತ್ರಗಳನ್ನ ಮಂಗೇಶರಾಯರ ಹಾರ್ಟ್ ಗ್ಯಾಲರಿಯಲ್ಲಿ ಪ್ರದರ್ಶನಕ್ಕೆ ಇಟ್ಟಾಗ ನಂಗೆ "ಉತ್ತಮ ಛಾಯಾ ಚಿತ್ರಕಾರ" ಅನ್ನೋ ಅವರ್ಡ್ ಸಹ ಬಂತು. ಆದ್ರೆ ನೀ ಆ ಫ್ರೋಗ್ರಮ್ ಗೆ ಬಂದಿರ್ಲಿಲ್ಲ ಬಿಡು.

          ಇರ್ಲಿ ನೀ ಅಣ್ಣ ನಿಂಗೆ ಗೌರವ ಕೊಡೊದು ತಮ್ಮನ ಆಧ್ಯ ಕರ್ತವ್ಯ ಅಲ್ವ. ಅಪ್ಪ ನಿನ್ನ ದಿನಕ್ಕೆರಡು ಬಾರಿಯಾದ್ರು ನೆನಪಿಸ್ಕೊತಾರೆ ಹಾಗೆ ನಿಂಗೊಂದು ವಿಷಯ ಹೇಳೊದು ಮರ್ತಿದ್ದೆ ಈ ಸಾರಿ ಬರೋವಾಗ ಮಾತ್ರ ಒಂಟಿ ಹೋಗೋವಾಗ ನಿಂಗೆ ಗೊತ್ತಾಗುತ್ತೆ. ಯಾವ್ದಕ್ಕೂ ಒಂದೆರಡು ತಿಂಗಳು ಜಾಸ್ತಿ ರಜೆ ಆಕಿ ಬಾ ಅಣ್ಣ. ಈ ಸಾರಿ ಅಂತೂ ನಿ ತಪ್ಪಿಸ್ಕೊಳ್ಳೊಕೆ ಚಾನ್ಸ್ ಇಲ್ಲಾ ಬಿಡು.

         ನೀ ಯಾರಿಗೂ ಏನು ತರ್ದಿದ್ರು ಪರ್ವಾಗಿಲ್ಲ ನಂಗೆ ಮಾತ್ರ ಒಂದು ಕ್ಯಾಮರಾ ತರೋದನ್ನ ಮಾತ್ರ ಮರಿಬೇಡ ಫ್ಲೀಸ್. ಅದು ನಿಕ್ಕೊನ್ ಆದ್ರೆ ಪರ್ವಾಗಿಲ್ಲ ಇಲ್ಲಾ ಸೋನಿ ಆದ್ರೂ ಓಕೆ ಕಡೇ ಪಕ್ಷ 100 X Zoom ಇರ್ಲಿ ಹಾಗೆ ಅದಕ್ಕೆ ಸಪ್ರೆಟ್ ಲೆನ್ಸ್ ಅಳವಡಿಸೋ ಸೌಲಭ್ಯ ಇದ್ರೆ ಇನ್ನೂ ಚೆನ್ನ. ನೀ ತರೋ ಕ್ಯಾಮಾರಾದಿಂದ ನಾನು ಈಸಾರಿ ಅತ್ಯುತ್ತಮ ಛಾಯಚಿತ್ರಕಾರ ಅನ್ನೋ ಬಿರುದಿಗೆ ಕಾರಣ ಆಗ್ಬೇಕು ತಾನೆ. ಸರಿ ಯಾವ್ದಕ್ಕೂ ಬೇಗ ಬಂದ್ಬಿಡು .. :)


                                                                                                ಇಂತಿ ನಿಂಗಾಗಿ ಕಾಯುತ್ತಿರುವ
                                                                                             ಅಪ್ಪ, ಅಮ್ಮ, ಅಜ್ಜಿ, ಮತ್ತು ನಿನ್ನ ತಮ್ಮ

Tuesday, November 8, 2011

ಅಣಕು ಶಾಯರಿಗಳು

ಅವಳು ಮಂದವಾಗಿ ಉರಿಯುವ
ಹಣತೆಯಂತಿದ್ದರೆ ಹೆಣ್ಣು...
ಅವಳು ಮಂದವಾಗಿ ಉರಿಯುವ
ಹಣತೆಯಂತಿದ್ದರೆ ಹೆಣ್ಣು...
.
.
.
.
.
.
ಹಾಗಿಲ್ಲದೆ ಆಕೆ
ಹೊತ್ತಿ ಉರಿಯುವ ಜ್ವಾಲೆಯಂತಾಗಿದ್ದರೆ
ಅವಳ ವರಿಸುವವನ ಬಾಯಿಗೆ ಮಣ್ಣು ! :) :p
 
 
 
ದೇವದಾಸ ನಾನಿರಬಹುದು’
ಆದರೆ ಕುಡಿತಕ್ಕೆ ಎಂದೂ ದಾಸನಾಗಿರಲಿಲ್ಲ..

ದೇವದಾಸ ನಾನಿರಬಹುದು’
ಆದರೆ ಕುಡಿತಕ್ಕೆ ಎಂದೂ
ದಾಸನಾಗಿರಲಿಲ್ಲ..
.
.
.
.
.
.
.
.
ಆಗಿದ್ದರೂ ಪಾರ್ವತಿಯ ಜಾಗದಲ್ಲಿ
ದೇವದಾಸಿಯೇ ಜೊತೆಯಾದಾಗ
ಕುಡಿಯದೆ ನನಗೆ ಅನ್ಯ ಮಾರ್ಗವಿಲ್ಲ..

Monday, November 7, 2011

ಮೂಕ ಮನದ ವೇದನೆ


ದೇವರೇ ನನ್ನ ಮನವಿಯನ್ನೊಮ್ಮೆ ಆಲಿಸು
ಜೀವನವು ತುಂಬಾ ಬೇಸರವಾಗುತ್ತಿದೆ
ಕಷ್ಟಗಳಿಗೆ ಕರುಣೆಯಿಲ್ಲದಂತಾಗಿದೆ
ಕೊರತೆಗಳಲ್ಲಿ ಸಿಕ್ಕಿ ನರಳಾಡುತ್ತಿರುವೆ

ದೇವರೇ ನನಗೆ ಚಿನ್ನ ಕೊಡು 
ಹೊನ್ನು ನೀಡೇಂದು ಬೇಡುವುದಿಲ್ಲ
ದವಸ ಧಾನ್ಯಗಳನ್ನು ಕೊಡದಿದ್ದರೂ ಚಿಂತೆಯಿಲ್ಲ
ಒಂದಷ್ಟು ನೆಮ್ಮದಿಯನ್ನು ಕೊಟ್ಟರೆ ಸಾಕು ನಾನು ಧನ್ಯ

ದೇವರೇ ನನ್ನನ್ನು
ಪ್ರಾಣಿಯೆಂದು ತಿರಸ್ಕರಿಸದಿರು
ನನಗೂ ಒಂದು ಬದುಕಿದೆ
ನನ್ನಗೂ ಹಲವು ಯೋಚನೆಗಳಿವೆ ?

ದೇವರೇ ನೀ ಕರುಣಾಮಯಿ
ನಿನ್ನ ಪೂಜಿಸುವಷ್ಟು ಶಕ್ತಿ ನನಗಿಲ್ಲ
ನಿನಗೆ ಸಮರ್ಪಿಸಲು ನನ್ನ ಬಳಿ ಏನೂ ಉಳಿದಿಲ್ಲ
ನನ್ನ ಮನವಿಯನ್ನು ಆಲಿಸಿ ಒಮ್ಮೆ ದಯೆತೋರು.

Saturday, November 5, 2011

ಈ ವಾರದ "ಮಂಗಳ" ವಾರಪತ್ರಿಕೆಯಲ್ಲಿ ಪ್ರಕಟಗೊಂಡ ಕವನ.. "ಬೇಡವೆಂದು ಹೋಗದಿರಿ"..

ಇಲ್ಲಿ ನೋವುಗಳು ಮಾರಾಟಕ್ಕಿವೆ 
ನೊಂದ ಹೃದಯಗಳು 
ಅರೆಬೆಂದ ಆಸೆಗಳು 
ಪೂರ್ಣವಾಗದ ಬಯಕೆಗಳು 
ಸವೆಯದ ಹೆಜ್ಜೆಗಳು 
ಮುಗಿಯದ ಮಾತುಗಳು 
ತೂಕಕ್ಕೆ ದೊರೆಯುತ್ತವೆ

ಬನ್ನಿ ಬನ್ನಿ ಗ್ರಾಹಕರೇ
ಬೆಲೆಯ ಬಗ್ಗೆ ಚಿಂತಿಸದಿರಿ
ನೀವು ಎಷ್ಟು ಕೊಟ್ಟರೆ ಅಷ್ಟೆ ಸಾಕು 
ಮೊದಲು ಇವುಗಳನ್ನೆಲ್ಲ 
ಇಲ್ಲಿಂದ ತೆರವುಗೊಳಿಸಿದರೆ 
ನಾನು ಧನ್ಯನಾದಂತೆ

ಹಿಂದೆ ಬಂದ ಗ್ರಾಹಕರು
ಮುಟ್ಟಿ ತಟ್ಟಿ ಅಲುಗಾಡಿಸಿ ಹೋದರಷ್ಟೆ
ಒಂದನ್ನೂ ಕೊಂಡೋಗಲಿಲ್ಲ
ಹಾಗಂತ! ಅವು ಹಳೆಯದಾಗಿವೆಯೇ ?
ಎನ್ನಬೇಡಿ, ದಿನವೂ
ಕಣ್ಣೀರಿನಿಂದ ಒರೆಸಿಡುತ್ತೇನೆ

ಇಲ್ಲಿ ನೋಡಿ ಚಿಂದಿ ಹುಡುಗನ ಬದುಕು
ಅವು ಜೀತಗಾರನ ಸರಪಳಿಗಳು
ಅಗೋ! ಅವು ಜಾತಿಯ ಸಂಕೋಲೆಗಳು
ಎಷ್ಟೋ ದಿನಗಳಿಂದ ತಮ್ಮ ಬಿಗಿತವನ್ನು
ಸಡಿಲಿಸದೆ ಹಾಗೇಯೇ ಇವೆ

ಬನ್ನಿ ಈ ಮಂಚಕ್ಕೆ ಕಿವಿಯಾನಿಸಿ
ಎಷ್ಟೋ ಅಮಾಯಕ ಹೆಣ್ಣುಗಳ
ಆರ್ತನಾದಗಳು ಕೇಳಿಸುತ್ತವೆ
ಸೊಕ್ಕಿನ ಮೈಗಳು ಮಗ್ಗಲು ಬದಲಿಸುತ್ತವೆ

ನೋಡಿ ಆ ಮೂಲೆಯಲ್ಲಿ
ಸತ್ಯವೂ ಮೌನವಾಗಿ ಕುಳಿತಿದೆ
ನ್ಯಾಯ ತನ್ನನ್ನು ತಾನೇ ಅಳಿಸಿಕೊಳ್ಳುತ್ತಿದೆ
ಧರ್ಮವು ದಾರಿ ತಪ್ಪಿದೆ
ನೆಮ್ಮದಿಗೆ ನೆಲೆಯಿಲ್ಲದಂತಾಗಿದೆ

ದಯವಿಟ್ಟು ಯಾವುದಾದರು
ಒಂದನ್ನು ಕೊಂಡು ಹೋಗಿ
ನಾ ಧನ್ಯವಾಗಬೇಕಿದೆ
ತಲೆಬಾಗಿ ನಿಂತರೆ ಹೇಗೆ ? 
ಬೇಡವೆಂದು ಮಾತ್ರ ಹೋಗದಿರಿ.