Saturday, November 5, 2011

ಈ ವಾರದ "ಮಂಗಳ" ವಾರಪತ್ರಿಕೆಯಲ್ಲಿ ಪ್ರಕಟಗೊಂಡ ಕವನ.. "ಬೇಡವೆಂದು ಹೋಗದಿರಿ"..

ಇಲ್ಲಿ ನೋವುಗಳು ಮಾರಾಟಕ್ಕಿವೆ 
ನೊಂದ ಹೃದಯಗಳು 
ಅರೆಬೆಂದ ಆಸೆಗಳು 
ಪೂರ್ಣವಾಗದ ಬಯಕೆಗಳು 
ಸವೆಯದ ಹೆಜ್ಜೆಗಳು 
ಮುಗಿಯದ ಮಾತುಗಳು 
ತೂಕಕ್ಕೆ ದೊರೆಯುತ್ತವೆ

ಬನ್ನಿ ಬನ್ನಿ ಗ್ರಾಹಕರೇ
ಬೆಲೆಯ ಬಗ್ಗೆ ಚಿಂತಿಸದಿರಿ
ನೀವು ಎಷ್ಟು ಕೊಟ್ಟರೆ ಅಷ್ಟೆ ಸಾಕು 
ಮೊದಲು ಇವುಗಳನ್ನೆಲ್ಲ 
ಇಲ್ಲಿಂದ ತೆರವುಗೊಳಿಸಿದರೆ 
ನಾನು ಧನ್ಯನಾದಂತೆ

ಹಿಂದೆ ಬಂದ ಗ್ರಾಹಕರು
ಮುಟ್ಟಿ ತಟ್ಟಿ ಅಲುಗಾಡಿಸಿ ಹೋದರಷ್ಟೆ
ಒಂದನ್ನೂ ಕೊಂಡೋಗಲಿಲ್ಲ
ಹಾಗಂತ! ಅವು ಹಳೆಯದಾಗಿವೆಯೇ ?
ಎನ್ನಬೇಡಿ, ದಿನವೂ
ಕಣ್ಣೀರಿನಿಂದ ಒರೆಸಿಡುತ್ತೇನೆ

ಇಲ್ಲಿ ನೋಡಿ ಚಿಂದಿ ಹುಡುಗನ ಬದುಕು
ಅವು ಜೀತಗಾರನ ಸರಪಳಿಗಳು
ಅಗೋ! ಅವು ಜಾತಿಯ ಸಂಕೋಲೆಗಳು
ಎಷ್ಟೋ ದಿನಗಳಿಂದ ತಮ್ಮ ಬಿಗಿತವನ್ನು
ಸಡಿಲಿಸದೆ ಹಾಗೇಯೇ ಇವೆ

ಬನ್ನಿ ಈ ಮಂಚಕ್ಕೆ ಕಿವಿಯಾನಿಸಿ
ಎಷ್ಟೋ ಅಮಾಯಕ ಹೆಣ್ಣುಗಳ
ಆರ್ತನಾದಗಳು ಕೇಳಿಸುತ್ತವೆ
ಸೊಕ್ಕಿನ ಮೈಗಳು ಮಗ್ಗಲು ಬದಲಿಸುತ್ತವೆ

ನೋಡಿ ಆ ಮೂಲೆಯಲ್ಲಿ
ಸತ್ಯವೂ ಮೌನವಾಗಿ ಕುಳಿತಿದೆ
ನ್ಯಾಯ ತನ್ನನ್ನು ತಾನೇ ಅಳಿಸಿಕೊಳ್ಳುತ್ತಿದೆ
ಧರ್ಮವು ದಾರಿ ತಪ್ಪಿದೆ
ನೆಮ್ಮದಿಗೆ ನೆಲೆಯಿಲ್ಲದಂತಾಗಿದೆ

ದಯವಿಟ್ಟು ಯಾವುದಾದರು
ಒಂದನ್ನು ಕೊಂಡು ಹೋಗಿ
ನಾ ಧನ್ಯವಾಗಬೇಕಿದೆ
ತಲೆಬಾಗಿ ನಿಂತರೆ ಹೇಗೆ ? 
ಬೇಡವೆಂದು ಮಾತ್ರ ಹೋಗದಿರಿ.

8 comments:

Dr.D.T.Krishna Murthy. said...

ವಸಂತ್;ಕಾವ್ಯದ ದೃಷ್ಟಿಯಿಂದ ಹೇಳುವುದಾದರೆ ಒಂದು ಉತ್ಕೃಷ್ಟವಾದ ಕಾವ್ಯ ನಿಮ್ಮಿಂದ ಮೂಡಿಬಂದಿದೆ.ನಿಮ್ಮ ಕಾವ್ಯದ ಬೆಳವಣಿಗೆಯನ್ನು ಮೊದಲಿನಿಂದ ಗಮನಿಸುತ್ತಿರುವ ನಮಗೆಲ್ಲಾ ಇದು ಹೆಮ್ಮೆಯ ವಿಷಯ.ನಿಮ್ಮಿಂದ ಇಂತಹ ಅದ್ಭುತ ಕಾವ್ಯರಚನೆ ಇನ್ನಷ್ಟು ಆಗಲಿ ಎಂದು ಹಾರ್ದಿಕವಾಗಿ ಹಾರೈಸುತ್ತೇನೆ.ಅಭಿನಂದನೆಗಳು.

ವಸಂತ್ said...

ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು ಮೂರ್ತಿ ಸರ್ ನಿಮ್ಮ ಅನಿಸಿಕೆ ನನಗೆ ತುಂಬಾ ಖುಷಿಯನ್ನು ತಂದುಕೊಟ್ಟಿದೆ. ನಿಮ್ಮಯ ಪ್ರೋತ್ಸಾಹದ ಫಲವಾಗಿ ಬರೆಯುತ್ತಿದ್ದೇನೆ ನಿಮ್ಮೆಲ್ಲರ ಶ್ರೀರಕ್ಷೆ ಎಂದೂ ನಮ್ಮ ಮೇಲಿರಲಿ ಎಂದು ಆಶಿಸುತ್ತೇನೆ...

sunaath said...

ವಸಂತ,
ಮನ ಮಿಡಿಯುವಂತಹ ಸತ್ವಪೂರ್ಣ ಕಾವ್ಯವನ್ನು ರಚಿಸಿದ್ದೀರಿ. ನಿಮಗೆ ಅಭಿನಂದನೆಗಳು.

ಜಲನಯನ said...

ವಸಂತ್ ಅಭಿನಂದನೆಗಳು...ಒಳ್ಳೆಯ ಕವನ ..
ಹಿಂದೆ ಬಂದ ಗ್ರಾಹಕರು ಮುಟ್ಟಿ ತಟ್ಟಿ ಅಲುಗಾಡಿಸಿ ಹೋದರಷ್ಟೆ ಒಂದನ್ನೂ ಕೊಂಡೋಗಲಿಲ್ಲ ಹಾಗಂತ! ಅವು ಹಳೆಯದಾಗಿವೆಯೇ ? ಎನ್ನಬೇಡಿ, ದಿನವೂ ಕಣ್ಣೀರಿನಿಂದ ಒರೆಸಿಡುತ್ತೇನೆ
ಬಹಳ ಭಾವುಕತೆಯನ್ನು ಮಿಡಿವ ಸಾಲುಗಳು...
ನಿಮ್ಮ ಸಾಹಿತ್ಯಕೃಷಿಗೆ ನಮ್ಮ ಸಾಥ್ ಖಂಡಿತಾ

ವಸಂತ್ ಕೋಡಿಹಳ್ಳಿ said...

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸುನಾಥ್ ಸರ್ ನಿಮ್ಮಯ ಪ್ರೋತ್ಸಾಹದ ಫಲವೆ ನನ್ನ ಕವನಗಳಿಗೆ ಸ್ವೂರ್ತಿ.

ವಸಂತ್ ಕೋಡಿಹಳ್ಳಿ said...

ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಕ್ಕೆ ಧನ್ಯವಾಗಳು ಜಲನಯನ ಸರ್ ನಿಮ್ಮಯ ಅಕ್ಕರೆಯ ಮಾತುಗಳಿಗೆ ವಂದನೆಗಳು..

A=|)o- said...

tumba chennagide kavana.

ಮೌನರಾಗ... said...

ಮಂಗಳದಲ್ಲಿ ಕವಿತೆ ಓದಿದ್ದೆ.. ಬಹಳ ಮೆಚ್ಚುಗೆಯಾಯಿತು ..
ನೋವುಗಳ ಲೋಕದ ಮಾರಾಟ..?! ಅದ್ಭುತ ಕಲ್ಪನೆ..
ಅಭಿನಂದನೆಗಳು...