Saturday, December 31, 2011

2012 ರ ಶುಭ ಕಾಮನೆಗಳುಹೊಸ ಭಾವನೆಗಳ
ಹೊಸ ಯೋಚನೆಗಳ
ಹೊಸ ವಿಚಾರಗಳ
ಹೊಸ ವಿನಿಮಯಗಳ
ಹೊಸ ಸಾಧನೆಗಳ
ಹೊಸ ನೋಟಗಳ
ಹೊಸ ಬಂಧಗಳ
ಹೊಸ ಸ್ನೇಹಗಳ
ಹೊಸ ಪ್ರೀತಿಯಿಂದ
ಹೊಸ ಅಂಕಿಯೊಡನೆ
ಹೊಸದಾಗಿ ಬರುತಿಹ
ಈ ಹೊಸ ವರುಷವು
ಎಲ್ಲರ ಬಾಳಿನಲ್ಲೂ
ಸದಾ ಸುಖ ಶಾಂತಿ
ನೆಮ್ಮದಿಯನ್ನು
ತರಲೆಂದು ಅರಸುತ್ತ
ತಮಗೆಲ್ಲರಿಗೂ
2012 ರ ಆತ್ಮೀಯ
ಶುಭ ಆಶಯಗಳನ್ನು
ತುಂಬು ಮನಸ್ಸಿನಿಂದ ಕೋರುತ್ತೇನೆ

                                        by: ವಸಂತ್ 

Tuesday, December 27, 2011

ಹೇಗೆ ಹುಡುಕಿಕೊಡಲಿ


ಎಲ್ಲಿಹೋದ ಅವನು
ಬೆಳಕು ಹರಿಯುವವರೆಗಾದರೂ
ಕತ್ತಲಿಗೆ ಕಾವಲಿರೆಂದರೆ
ಕತ್ತಲನ್ನೇ ಕದ್ದು ಮಾಯವಾದವನು
ಇರುಳಲ್ಲದ ಬೆಳಕಲ್ಲಿ
ಬೆಳದಿಂಗಳನ್ನು ಹೇಗೆ ಹುಡುಕಿಕೊಡಲಿ ಹೇಳಿ ?

Sunday, December 25, 2011

ಸಜ್ಜನ ಸಂಗವನು ಬಯಸಿ


ಹಾರುತಿದೆ ಜೀವಸೆಲೆ
ಹಾದಿ ಬೀದಿಗಳ ದಾಟಿ
ಹುಡುಕಾಡುತಿದೆ ಸಜ್ಜನ
ಸಂಮನಸ್ಕರನ್ನು

ಮತಿಹೀನ ಭ್ರಮೆಗಳು
ತನ್ನತ್ತ ಸೆಳೆಯುತಿವೆ
ದಾಹ ದಾರಿದ್ರ್ಯಗಳು
ಬೆಂಬಿಡದೆ ಕಾಡುತಿವೆ

ಲೋಕವೇ ಪಾಪಕೂಪವಾಗಿ
ನನ್ನೊಳಗೆ ಸೇರಿಕೋ
ನನ್ನೊಳಗೆ ಸೇರೆಂದು
ಬಾಯ್ತೆರೆದು ಕುಳಿತಾಗ

ಎಲ್ಲಿ ಅರಳಲಿ ನಾ ?
ಹೇಗೆ ಬೆಳೆಯಲಿ ನಾ ?
ಗೊಂದಲವೆ ಗಾಳವಾಗಿ
ಚೇಷ್ಟೆಯಲಿ ತೊಡಗಿದೆ

ನೆಮ್ಮದಿಯ ಬಯಲು
ಸಿಗಬಹುದೆಂಬ ಭರವಸೆ
ಇಂದಾದರಾಗಲಿ
ನಾಳೆಯಾಗಿ ಹೊಮ್ಮಲಿ

ಸಜ್ಜನರ ಸಂಗವನ್ನು
ಸಾವಧಾನದಲಿ ಹುಡುಕುತ್ತ
ನೆಮ್ಮದಿಯ ಬಯಲಲ್ಲಿ
ಮಗುವಾಗಿ ಅರಳುತ್ತೇನೆ.

Monday, December 19, 2011

ಉತ್ತರಿಸಲು ನಿನ್ನಿಂದ ಸಾಧ್ಯವಿದೆಯ


ನಿನ್ನ ಬರುವಿಕೆಗಾಗಿ
ವರುಷಗಳಿಂದ ಕಾಯುತ್ತಿದ್ದೇನೆ
ಮಗ್ಗು ಅರಳುವ ಸಮಯದಲ್ಲಿ
ನೀ ಹಿಗ್ಗಿ ಸಂಭ್ರಮಿಸಲಿಲ್ಲ
ನಿನ್ನ ನೆನಪುಗಳು ನನ್ನ
ಬಿಡದೆ ಸುತ್ತಿ ಸುಳಿದಾಡುತ್ತಿವೆಯಲ್ಲ
ಈ ಹುಚ್ಚು ಬಯಕೆಯ
ವ್ಯಾಮೋಹವನ್ನು ಏನೆಂದು ಕರೆಯಲಿ
ಉತ್ತರಿಸಲು ನಿನ್ನಿಂದ ಸಾಧ್ಯವಿದೆಯ ?

Sunday, December 18, 2011

ಮರಳಿ ಬಾರೆಯಾ ಗೆಳೆಯ...

ಈ ವಾರದ ಮಂಗಳ ಸಂಚಿಕೆಯಲ್ಲಿ ಪ್ರಕಟಗೊಂಡ ಕವನ  "ಮರಳಿ ಬಾರೆಯಾ ಗೆಳೆಯ...".
ಮರಳಿ ಬಾರೆಯಾ ಗೆಳೆಯಾ?
ಪ್ರತಿ ಕ್ಷಣವೂ ನಿನಗಾಗಿ
ಕಾಯುವೆನು ರಾಧೆಯಂತೆ

ನಿನ್ನೂರಿಗೆ ಬರಲೆನಗೆ ಧೈರ್ಯವಿಲ್ಲ
ಈ ವಿಶಾಲ ಕಡಲ
ದಾಟಿ ಬರಲು ಸಾಧ್ಯವಿಲ್ಲ

ನಿನ್ನ ಕಾಣುವ ತವಕದಲಿ
ಅನ್ನ ನೀರುಗಳ
ಬಿಟ್ಟು ಕಾಯುತ್ತಿರುವೆ

ನನ್ನ ಮನದ ನೋವ
ಒಮ್ಮೆಯಾದರೂ ಆಲಿಸಿ
ಬಂದೆನ್ನ ಸೇರಲಾರೆಯ ?

                                          by: ವಸಂತ್ ಆರ್
 

Friday, December 16, 2011

ಮನಸ್ಸ ತಳದಲ್ಲೊಂದು ನೆರಳು


ಸುತ್ತಲೂ ಹಸಿರ ವನ
ವನದ ಮಧ್ಯದಲ್ಲೊಂದು ಕೊಳ
ಕೊಳದ ತಡಿಯಲ್ಲೊಂದು ಕಲ್ಲು ಹಾಸು
ಆ ಕಲ್ಲು ಹಾಸಿನ ಕೆಳಗೆ
ಬಿಂಬ ತೋರುವ ನೀರು

ಮೌನದಂಗಳದಲ್ಲಿ
ಹೊರ ಹೊಮ್ಮುವ
ದುಖಃ ದುಮ್ಮಾನಗಳನ್ನು
ತಾನೇ ಸಂತೈಸಿಕೊಂಡಂತೆ
ತನ್ನ ಮನಸ್ಸಿನ ವೇಧನೆಯನ್ನು
ಬಿಂಬವಾಗಿ ಪ್ರಶ್ನಿಸಿಕೊಳ್ಳುತ್ತದೆ

ಗಾಳಿಯು ಬೀಸಲಿಲ್ಲ
ಹನಿಗಳು ಉದುರಲಿಲ್ಲ
ತಡಿಯಲಿರುವ ಬಿಂಬವನ್ನು ಗಮನಿಸಿದಾಗ
ಅದು ಅತ್ತು ಕರೆದು
ಸುಮ್ಮನಾದಂತೆ ತೋರುತ್ತದೆ

ಭವ್ಯ ಕನಸುಗಳ ಕಂಡು
ಹುಸಿಯಾದ ಬದುಕಿನಲ್ಲಿ
ತನ್ನ ನೆಲೆ ಎಂತು ಎಂದುಕೊಂಡಾಗ ?

ನನ್ನೊಳಗಿನ ಒಂಟಿ ಮನಸ್ಸು
ಬೆಚ್ಚಿ ಬೆದುರುತ್ತದೆ
ಆ ಮನಸ್ಸ ತಳದಲ್ಲೊಂದು ನೆರಳು
ಅದಕ್ಕೆ ಧೈರ್ಯವನ್ನು ತುಂಬುತ್ತದೆ.

Wednesday, December 7, 2011

ಮತ್ಯಾಕೆ ಕನಸಾಗಬೇಕವಳು ?

ಅವಳು ದಿನವೂ ಕನಸಾಗುತ್ತಾಳೆ
ಕನಸಲ್ಲಿ ಮಾತ್ರ ಅವಳಿರುವುದಿಲ್ಲ
ಕಾಣದ ಕನಸನ್ನು ಕಂಡಂತೆ
ಎಷ್ಟು ನಟಿಸಿದರೂ ಕೂಡ
ಅವಳ ನೆರಳು ಸಹ ಸುಳಿಯುವುದಿಲ್ಲ
ನನಗೂ ತಿಳಿಯುತ್ತಿಲ್ಲ
ಮತ್ಯಾಕೆ ಕನಸಾಗಬೇಕವಳು ???.

                                                    by: ವಸಂತ್ ಆರ್

Saturday, December 3, 2011

ಕನ್ನಡ ತಾಯಿಗೆ ನಮನ

ಅಮ್ಮ ನಾ ಎಲ್ಲೇ ಇರಲಿ
ಹೇಗೆ ಇರಲಿ
ನನ್ನ ಬಾಯಲ್ಲಿ ಕನ್ನಡವ ನುಡಿಸು
ನನ್ನ ಮನದಲ್ಲಿ ಕನ್ನಡವ ನೆಡೆಸು

ನಾ ತಪ್ಪಿಯು ಎಂದೂ
ಪರಕೀಯ ವ್ಯಾಮೋಹಕ್ಕೆ
ಒಳಗಾಗದಂತೆ
ನನ್ನ ಬಾಳನ್ನು ಅಸನುಗೊಳಿಸು

ಬೆಳೆದವರು ತಮ್ಮ ತಾಯ
ಮರೆವರಂತೆ
ಕೀಳು ಮನೋಭಾವದಿಂದ
ನೋಡುವರಂತೆ

ಹೀಗಾಗಲು ಬಿಡಬೇಡ ತಾಯಿ
ನೀನು ಶಾಂತಿ ದಾಯಿ
ಕರುಣಾಮಯಿ

ಒಳ್ಳೆತನವ ಕಲಿಸು
ಭೇದ ಭಾವ ಮರೆಸು
ಕನ್ನಡತನವನ್ನು
ಎಲ್ಲರಲ್ಲೂ ಉಳಿಸು
ಸಹ ಬಾಳ್ವೆಗೆ ದಾರಿ ತೋರಿಸು

ಓ ಕನ್ನಡ ತಾಯಿ
ಕೋಟಿ ಜನ್ಮ ಪಡೆದರೂ
ನಾ ಕರು ನಾಡಲ್ಲೇ ಹುಟ್ಟುವೆ
ನಿನ್ನ ಮಡಿಲ
ಮಗುವಾಗಲು ಬಯಸುವೆ

ನನ್ನಾಸೆಯನ್ನು ಹೀಡೇರಿಸು
ನನ್ನ ನಮನವನ್ನು
ಸ್ವೀಕರಿಸು ....................