ಆ ಮಣ್ಣ ಹಾದಿಯಲಂದು
ಗಾಂಧಿ ಸಾಗಿದ್ದರು
ಬುದ್ದ ನಡೆದೋಗಿದ್ದರು
ಬಾಬ, ಬಸವ, ಅಲ್ಲಮರೂ ನಡೆದು
ಸತ್ಯ ಅಹಿಂಸೆಯ ಗಿಡಗಳನ್ನೂ ನೆಟ್ಟಿದ್ದರು...
ಬರಡು ಬರಡಾದ ನೆಲದಲ್ಲಿ
ನೆಮ್ಮದಿಯ ನೆರಳು,
ಹಸಿರಂಬ ಉಸಿರು,
ಹಸಿವ ನೀಗಲು ಫಲವು,
ಸಿಗಲೆಂಬ ಯೋಚನೆಯಿದ್ದಿರಬೇಕು...
ಎಲ್ಲ ಮನಸ್ಸುಗಳು ಒಂದೆ,
ಎಲ್ಲ ಕನಸುಗಳು ಒಂದೆ,
ಎಲ್ಲರೂ ನಮ್ಮಂತೆಯೇ ನಡೆದೇ
ಸಾಗುವರೆಂಬ ಭ್ರಾಂತಿಯಿದ್ದಿರಬೇಕು...
ಅವರು ಸಾಗಿದ ನೆಲದಲ್ಲಿ
ಭೂ ಹಗರಣಗಳ ಬಿರುಕುಗಳೊಡೆದುಬಿಟ್ಟವು
ಸ್ವಾರ್ಥದ ಚಿಲುಮೆಯೊಡೆದು
ಈ ಮರಗಳಿಂದ ನಮಗೇನು ಪ್ರಯೋಜನವೆಂದು
ಅವುಗಳನ್ನು ಕಡಿದು ಕುರ್ಚಿಗಳನ್ನಾಗಿಸಿಕೊಂಡರು
ಇವುಗಳೆಲ್ಲವನ್ನು ಮುಚ್ಚಿಕೊಳ್ಳಲು
ಕಪ್ಪು ಟಾರನ್ನು ಬಳೆದು ಸುಮ್ಮನಾದರು...
ಸತ್ಯ ಅಹಿಂಸೆಯನ್ನು
ಅಕ್ಟೋಬರ್ 2 ನೇ ತಾರೀಕು
ಏಪ್ರೆಲ್ 14 ನೇ ತಾರೀಕು
ಮೇ 5 ನೇ ತಾರೀಕಿನಂತೆ
ಅಲವು ದಿನಗಳ ದಿನದರ್ಶಿಕೆಯಾಗಿ ತೂಗು ಹಾಕಿದರು...
ತತ್ವ ಸಿದ್ದಾಂತಗಳನು ತರಗೆಲೆಗಳಂತೆ ಗುಡಿಸಿ
ಜಾತಿ ಧರ್ಮದ ಭಾವನೆಗಳ ಬೆಳೆಸಿ
ಮನುಜ ನಿನಗೆ ನೀನೇ ಶತ್ರುವೆಂದೇಳಿ
ರಾಜಕೀಯ ದಾಳಗಳನ್ನಾಗಿ ಮಾಡಿಬಿಟ್ಟರು...
ಅವರು ಸಾಗಿದ ನೆಲವು ಒಂದಿಂಚೂ ಕಾಣುತ್ತಿಲ್ಲ
ಅವರು ಬೆಳೆಸಿದ ಮರಗಳ ಗುರುತುಗಳೇ ಸಿಗುತ್ತಿಲ್ಲ
ರಾಮ ರಾಜ್ಯದ ಕನಸು ರಾವಣನ ರಾಜ್ಯವಾಯಿತು
ಸುಲುಗೆ ವಂಚನೆಗಳಿಗೆ ತಡೆಯಿಲ್ಲದಂತಾಯಿತು...
ಕಾಯುತ್ತೇನೆ ಅವರು ಮತ್ತೆ ಬರಬಹುದೆಂದು
ಅವರ ನಡೆದ ನೆಲದಲ್ಲಿ ಮತ್ತೆ ಚಿಗುರೊಡೆಯಬಹುದೆಂದು
ಈ ಲೋಕಕ್ಕೆ ಮತ್ತೊಮ್ಮೆ ಮುಕ್ತಿ ಸಿಗಬಹುದೆಂದು....
ವಸಂತ್
ಚಿತ್ರಕೃಪೆ. http://www.gandhiserve.org