Saturday, December 22, 2012

ಮಧ್ಯಂತರ

ಬೇಕು ಬೇಡುಗಳ ನಡುವೆ
ಅಮ್ಮು ಬಿಮ್ಮಿನ ಕೂಗಾಟಗಳು
ಮೇಲು ಕೀಳನ ಗೋಳಾಟಗಳು
ಅರ್ಥವಾಗದ ಬೈಗುಳಗಳು
ಅವಸರದ ತೀರ್ಮಾನಗಳು
ಮಸಿಯುತಿವೆ ಕತ್ತಿಗಳ
ಅವಮಾನದ ನೆಲದಲ್ಲಿ

ಅವರಿವರ ರಗಳೆಗಳು
ಬಡಿದಾಟ ಹೊಡೆದಾಟಗಳು
ಅಧಿಕಾರ ಆವೇದನೆಗಳು
ಆಕ್ರೋಶ ಅವತಾರಗಳು
ಯಾರದು ಸರಿಯೋ
ಇನ್ಯಾರದು ಸರಿಯಲ್ಲವೋ
ಎಣಿಸುದೆ ಮೌನದಲಿ
ಕಾಲ ಗರ್ಭದ ನಡೆಯು.

ಹಾರು ಮನವೇ

ಹಾರು ಮನವೇ ಹಾರು
ಮಗಿಲಿನೆತ್ತರಕ್ಕೆ ಹಾರು
ಎಲ್ಲಿಯೂ ನಿಲ್ಲದೆ
ಚಿಂತೆ ಬಿಟ್ಟು ಹೇರು

ಭಾವನೆಗಳ ಸೀಳಿ ಹಾರು
ಬಯಕೆಗಳ ತುಳಿದು ಹಾರು
ಚಿಂತೆಗಳ ಒದ್ದು ಹಾರು
ಬಾಂದಳವ ಸುತ್ತ ತಿರುಗಿ
ಹಾರು ಮನವೇ ಎಲ್ಲಿಯೂ
ನಿಲ್ಲದೆ ಹಾರು ಹಾರು

ನವಿಲಿನಂತೆ ಹಾರು
ಮೇಗದಂತೆ ತೋರು
ನಗುನಗುತ ಹಾರು
ನಕ್ಷತ್ರದಂತೆ ಹೇರು
ಹಾರು ಮನವೇ ಎಲ್ಲಿಯೂ
ನಿಲ್ಲದೆ ಹಾರು ಹಾರು

ಕನಸುಗಳ ಕದ್ದು ಹಾರು
ನಲಿವುಗಳ ಗೆದ್ದು ಹಾರು
ಚಂದ್ರನಂತೆ ಹಾರು
ಸೂರ್ಯನಂತೆ ತೋರು
ಹಾರು ಮನವೇ ಎಲ್ಲಿಯೂ
ನಿಲ್ಲದೆ ಹಾರು ಹಾರು.

ಮಾರಾಟ

ಆತ್ಮ: ಡಾಕ್ಟ್ರೆ ಆ 23 ನೇ ನಂಬರಿನ ಕೋಣೆಯಲ್ಲಿ ನನ್ನ ಶವ ಇರಬೇಕಿತ್ತಲ್ಲ ಯಾಕೆ ಏನಾಯಿತು ?.

ಡಾಕ್ಟರ್: ಅಯ್ಯೋ ಹೋಗು ಹೋಗು ಇಂತ ಪಿಚಾಚಿಗಳನ್ನ ನಾನೆಷ್ಟು ನೋಡಿಲ್ಲ ಅದನ್ನ ಈಗಾಗಲೇ ಮತ್ತೊಬ್ಬರಿಗೆ ಮೂರು ಸಾವಿರಕ್ಕೆ ಮಾರಿಯಾಯಿತು ಇನ್ನೆಲ್ಲಿ ಶವ !!!.

ದುಬಾರಿ ಪ್ರೀತಿ

ಆ ಪೆಟ್ಟು ತಿಂದು ಬಿದ್ದಿರುವಂತ
ಸಿಲ್ವರ್ ಪಾತ್ರೆಯಲ್ಲಿ ನನ್ನ ಕನಸುಗಳನ್ನು
ಅರಳಿಬಿಟ್ಟಿದ್ದೇನೆ ಅವುಗಳನ್ನು
ನಿನ್ನಿಂದ ಪೋಶಿಸಲು ಸಾಧ್ಯವಾಗುವುದೇ ಗೆಳತಿ ?.

ಅಯ್ಯೋ ಜಮಾನ ಬಹಳ ಬದಲಾಗಿದೆ
ಈಗೇನಿದ್ದರೂ ಪಿಜ್ಜಾ ಬರ್ಗರ್
ತಿಂದು ಬದುಕುವಂತ ಕಾಲ
ಖಂಡಿತ ನನ್ನಿಂದ ಸಾಧ್ಯವಿಲ್ಲ ಗೆಳೆಯ !.

Tuesday, September 25, 2012

ಸಖಿ

ಸಖೀ...
ನೀ ಮುಸುಕು ಸರಿಸಿ
ನಲ್ಲನ ಮುಖ ನೋಡುವ ಪರಿ
ಇದೆಂತ ಛಾಯೆಯೋ
ನಾ ಕಾಣೆ ನನ್ನಾಣೆ

ಎದೆಯುಲಿ ಢವ ಢವ
ಮನಸ್ಸು ವಿಲವಿಲನೆ ಒದ್ದಾಟ
ಎತ್ತ ಎಳೆದೊಯ್ಯುತಿದೆ
ನನ್ನ ಅಂತರಂಗವನು
ನನಗೂ ತಿಳಿಸದಂತೆ

ಅವಳೆನ್ನ ಭಾಮಿನಿ
ನನ್ನ ಮುದ್ದು ಅರಗಿಣಿ
ನಕ್ಕಾಗ ನೈದಿಲೆ
ನಾಚುವಾಗವಳು ಚಂಚಲೆ

ಕೋಪ ಬಂದಾಗಲಷ್ಟೇ
ಕೊಂಚ ಧಗಧಗ 
ಉರಿವಂತ ಅಗ್ನಿ ಜ್ವಾಲೆ
ಏನು ಮಾಡಲಿ ಹೇಳಿ ?
ಮೌನವಾಗಿರಲೇ
ಹೇಳದೆ ಓಡಿ ಹೋಗಲೇ?

ನನ್ನೆದೆಯ ಏರಿಳಿತ
ಅವಳ ಗೆಜ್ಜೆಯ ನಾದ
ಮನದೊಳಗೆ ಪಿಸುಮಾತು
ಸಮ್ಮೋಹನಾ ವೇದ

ಶರಣಾಗಲೇ ಇಲ್ಲಾ
ಶಿರಭಾಗಿ ವಂದಿಸಲೇ
ಪಾತಾಳವನ್ನೇ ಮುಟ್ಟಿ
ಅವಳ ಹೃದಯದೊಳು 
ಹೊಕ್ಕಲೇ ?

ನೀ ಮುಸುಕಾದರೂ
ನಿನಗೆ ಮುನಿಸೇ ಬಂದು
ಧಗ ಧಗ ಉರಿದರೂ ಸಹ
ನಾ ಶಾಂತವಾಗುವೆ

Friday, September 14, 2012

ನೆಲದ ಸತ್ವನೆಲದ ಸತ್ವ ಸಡಿಲಗೊಂಡು
ಪರಿಹಾಸದಿ ತೊಡಗಿದೆ
ಕುಟಿಲ ಬೀಜ ಮೊಳಕೆ ಬಿರಿದು
ಜಗವೆಲ್ಲ ಹರಡಿದೆ

ಕಾಂತಿ ಹೀನ ಕಣ್ಣುಗಳು
ಜನರ ಕಂಡು ಸೊರಗಿವೆ
ಹಿಂಬಾಗಿಲ ನಾಗರಗಳು
ಹೆಡೆಯತ್ತಿ ಕುಣಿದಿವೆ

ಏನಿದೀ! ಪರಿಹಾಸವು
ಉತ್ತರಗಳ ಹುಡುಕಿದೆ
ಮಣಭಾರದ ಪ್ರಶ್ನೆಗಳೇ
ಶಿರವಬಾಗಿ ನಮಿಸಿವೆ

ಇಳೆಯ ತಂಪು ಎಂದೋ ಸೊರಗಿ
ಜ್ವಾಲೆಯಾಗಿ ಹಬ್ಬುತಿದೆ
ಕಲ್ಮಶಗಳ ಘಾಟು ಹೊಗೆ
ಪ್ರತಿ ಎಲ್ಲೆಯೂ ತಬ್ಬುತಿದೆ

ಸತ್ವಹೀನ ಟೊಳ್ಳು ಮಾತು
ಕನಸನೆಂದು ಕಟ್ಟದು
ಸತ್ಯ ಮರೆತ ಸುಳ್ಳಾಟಕೆ
ಜಯವೆಂಬುದು ದಕ್ಕದು

ಜಗವೆಂಬುದು ಬರಿ ಭ್ರಮೆಯು
ಗೊಂದಲಗಳ ಚಿತ್ರಣ  
ಜಗ್ಗದಿರು ಕಟು ವಾಸ್ತವವೇ ನೀ
ಸೋತರೆ ಅದುವೆ ಮರಣ

Thursday, September 13, 2012

ಹೊನ್ನ ಹೂ

ಅದಮ್ಯ ಸಿರಿಯ ಅಂಚಿನೊಳು
ಕಾಂತಿಯೊತ್ತ ಚಂದ್ರ ಬಿಂಬ
ಕಮಲ ವದನ ನಯನದಲ್ಲಿ
ನಲಿದಾಡುವ ಪುಷ್ಪ ಜಂಬ

ಭೂರಮೆಯ ಚಲುವ ಸೊಬಗು
ಬಾಂದಳವನು ತಟ್ಟಿದೆ
ಬಯಸಿ ಬಂದ ಅಂಧಕಾರ
ನೆಲದೊಡಲನು ಮುಟ್ಟಿದೆ

ಎಲ್ಲೆಡೆಯು ಭವ್ಯ ಬೆರುಗು
ಚಿತ್ತಾರದ ಸುಮಧುರವು
ಮಧುವನವನು ಮೆಟ್ಟಿನಿಂತ
ಮನ್ಮತನ ಬಿಸಿಯಸಿವು

ಗುಡುಗುಡುಗಿ ಸಿಡಿಲಾಯಿತು
ಹನಿ ಮೂಡುವ ತವಕದಲ್ಲಿ
ಇಳೆಯ ಹಸಿವು ಬರಿದಾಯಿತು
ಹೊಸ ಹುರುಪಿನ ಚೆಲುವಿನಲ್ಲಿ

ಎಲ್ಲೆಡೆಯು ಹೊಸ ಕಳೆಯು
ಹೊಸೆದು ಬಂದ ಹೊನ್ನ ಹೂ
ನೆಲದೊಡಲ ಕತ್ತಲರಗಿ
ನಳನಳಿಸುತಿದೆ ಈ ಜಗವು

ಶಾಯರಿ


Tuesday, September 11, 2012

ಕೌತುಕ

ಯಾರು ಚೆಲ್ಲಿಹೋದರೋ
ಇಲ್ಲಿ ಬೀಜವನ್ನು
ಯಾರು ಮಾಡಿದರೋ
ಈ ಸಸಿಗೆ ಆರೈಕೆಯನ್ನು

ಬಣ್ಣ ಬಣ್ಣದ ಹೂಗಳಿಂದ
ಚಿತ್ತಾಕರ್ಷಕವಾಗಿ
ಮಿನುಗುವ ಇದೆಂತಾ
ಕಲಾಕೃತಿಯ ವೈಭವ!

ಹಸಿರು ಬಣ್ಣದ ಥಳುಕು
ಮಿಂಚಿ ಮಿನುಗುವ ಬೆಳಕು
ಕವಿಯ ಕುಂಚದಲ್ಲಿ ಅರಳಿದ
ಕವನದಂತಾ ಚೆಲುವು

ಹುಡುಕಿ ಹೊರಟವರಿಗೆ ಮಾತ್ರ
ಬೆರಗು ಬೈಲಿನ ಸೊಬಗು
ಎಲ್ಲೆ ಎಲ್ಲೆಯಲ್ಲೂ ಸಹ
ಅರಳಿ ನಲಿಯುವಂತ ನಗು

ಪ್ರಕೃತಿಯ ಅಗಾಧತೆಯಲ್ಲಿ
ಎಲ್ಲವೂ ವಿಸ್ಮಯವೇ
ಹರಿದು ಸಾಗುವ ನೀರಲ್ಲೂ
ಕೌತುಕದ ಅನಾವರಣವೇ

Tuesday, September 4, 2012

ಕೊನೆಯ ಮಾತುಎಷ್ಟು ಸಮಯವಾಯಿತು
ವಸಂತಗಳು ಕಳೆದುಹೋದವು
ಬಿರು ಬೇಸಿಗೆ, ಚಳಿಯೂ
ಕಾಡಿಸಿ ಹಿಯ್ಯಾಳಿಸಿ ಕರಗಿದವು
ಮತ್ತೊಂದು ಮಳೆ ಬಂದರೂ
ಅವನ್ಯಾಕೆ ಬರಲಿಲ್ಲ ಇನ್ನೂ

ನೆನಪುಗಳ ಒಗ್ಗೂಡಿಸಿ
ಕಣ್ ಮುಚ್ಚಿ ಕುಳಿತಾಗ
“ನಾನಿರುವೆ ನಿನ್ನ ಜೊತೆ”
ಎಂದಷ್ಟೆ ನುಡಿಯುವನು
ಹೇಗೆ ನಂಬಲಿ ಹೇಳಿ ಅವನ
ಈ ಅಪೂರ್ಣವಾದ ಮಾತನ್ನು?

ಅವನ ನಿರೀಕ್ಷೆಯಲ್ಲಿ
ಮನಸ್ಸು ಬಾವಲಿಯಾಗುತ್ತಿದೆ
ಕನಸ್ಸುಗಳು ಕರಗುತ್ತಿವೆ
ಹೃದಯ ಬಲಹೀನಗೊಳ್ಳುತ್ತಿದೆ
ನನಗೂ ಅವನು ಬರುವ
ರಸ್ತೆಯನ್ನು ಕಾದು ಸಾಕಾಗಿದೆ

ನೀ ಬಾರದಿರಲು
ಯಾವುದೋ ಬಲವಾದ ವ್ಯಾಮೋಹ 
ನಿನ್ನ ಜಗ್ಗಿ ಹಿಡಿದಿರಬಹುದು
ಭೀತಿ ಕಂಗೆಡಿಸಿರಬಹುದು
ಬಯಕೆ ದಾರಿ ತಪ್ಪಿಸಿರಬಹುದು
ಮಾತು ಮೌನವಾಗಿಸಿರಬಹುದು

ಇನ್ನು ಬಾರದಿರು ಹುಡುಗನೇ!
ನನ್ನ ಆಸೆಗಳು ಬತ್ತಿಹೋದವು
ನನ್ನ ನಂಬಿಕೆಗಳು ಹುಸಿಯಾದವು
ನನ್ನ ಕನಸ್ಸುಗಳೆಲ್ಲಾ ಚದುರಿ
ಚೆಲ್ಲಾ ಪಿಲ್ಲಿಯಾದವು

ಅದು ಏನೇ ಆಗಿರಲಿ!
ನಿನ್ನ ಪಾಲಿಗೆ ಚಂದ್ರ ನಗುತಿರಲಿ
ಚುಕ್ಕಿಗಳು ಅರಳಲಿ
ಗಾಳಿ ತಣ್ಣಗೆ ಬೀಸಲಿ
ಇಷ್ಟಾಗಿ ಒಂದು ವೇಳೆ 
ನನ್ನ ನೆನೆದು ಬರುವುದಾದರೆ
ರಸ್ತೆಗಳು ಮಾತ್ರ ನಿನ್ನನ್ನು
ತಡೆದು ನಿಲ್ಲಿಸಲಿ.

Friday, August 31, 2012

ಬನ್ನಿ ಬನ್ನಿ

ಬದುಕಿನ ಕತ್ತಲೆಯ ದೂಡಿ
ಉಲ್ಲಾಸದಿ ಕುಣಿಕುಣಿದಾಡಿ
ಕತ್ತಲೆಯು ಕಷ್ಟವಲ್ಲ
ಬೆಳಕೆಂಬುದು ಸುಖವಂತೇನಲ್ಲ
ನಾಳೆಗಳನ್ನು ನೆನಪಾಗಿಸುತ್ತ
ನೆನ್ನೆಗಳನ್ನು ಮೆಲುಕುಹಾಕುತ್ತ
ಬದುಕಿಗೊಂದು ಕೊನೆಯಂತೆ
ಅದಕ್ಯಾಕೆ ಸುಮ್ಮನೆ ಚಿಂತೆಮಾಡುವುದು
ಬನ್ನಿ ಬನ್ನಿ ಗೆಳೆಯರೇ
ಅನುದಿನವೂ ಸಂಭ್ರಮಾಚರಣೆಯಲ್ಲಿ
ಮುಳಿಗೆದ್ದು ಕುಣಿಯೋಣ
ಪ್ರತಿ ದಿನವೂ ನಲಿನಲಿದಾಡೋಣ.

Sunday, August 26, 2012

ಈ ತಿಂಗಳ "ಮಯೂರ" ಮತ್ತು "ತುಷಾರ" ಸಂಚಿಕೆಗಳಲ್ಲಿ ಪ್ರಕಟಗೊಂಡ ನನ್ನ ಕವನ "ಬೇಡವೆಂದು ಹೋಗದಿರಿ"..
    ಈ ತಿಂಗಳ ಮಯೂರ ಮತ್ತು ತುಷಾರ ಮಾಸ ಪತ್ರಿಕೆಗಳಲ್ಲಿ "ಬೇಡವೆಂದು ಹೋಗದಿರಿ" ಕವನ ಪ್ರಕಟಗೊಂಡಿದೆ. ನಿಜಕ್ಕೂ ಇದು ನನಗೆ ತುಂಬಾ ಖುಷಿಕೊಟ್ಟಿದೆ. ನನಗೆ ಪ್ರೋತ್ಸಾಹ ಕೊಟ್ಟು ಮೊದಲಬಾರಿಗೆ ಪ್ರಕಟಿಸಿದ್ದಕ್ಕಾಗಿ ಈ ಎರಡೂ ಪತ್ರಿಕೆಗಳ ಸಂಪಾದಕರಿಗೆ ನನ್ನ ತುಂಬು ಮನದ ನಮನಗಳನ್ನು ಸಲ್ಲಿಸುತ್ತೇನೆ.

Tuesday, August 14, 2012

ನಿಜವಾದ ಸ್ವಾತಂತ್ರ್ಯ ಯಾರಿಗೆ ದಕ್ಕಿದೆ?
       ಭಾರತಕ್ಕೇನೋ ಸ್ವಾತಂತ್ರ್ಯ ಬಂದು 65 ವರ್ಷಗಳು ಕಳೆದಹೋಯಿತು. ಇದೊಂದು ಮಹತ್ವದ ಮೈಲುಗಲ್ಲು. ಅದೇ ರೀತಿ ಎಲ್ಲರೂ ಹೆಮ್ಮೆ ಪಡುವಂತ ವಿಚಾರವೆನ್ನಿ. ಆದರೆ ಇಲ್ಲಿ ಆರವತ್ತಾರು ವರ್ಷಗಳು ಗತಿಸಿದರೂ ನಿಜವಾದ ಸ್ವಾತಂತ್ರ್ಯ ಯಾರಿಗೆ ದಕ್ಕಿದೆ ಎನ್ನುವುದೇ ಸೋಜಿಗ. ಈ ದೇಶದ ಬಡ ಬಗ್ಗರಿಗೆ, ದೀನ ದಲಿತರಿಗೆ, ಹರಿಜನ ಗಿರಿಜನರಿಗೆ, ಅಸಹಾಯಕರಿಗೆ, ಮಹಿಳೆಯರಿಗೆ ಯಾವ ಸ್ವಾತಂತ್ರ್ಯ ಸಿಕ್ಕಿದೆಯೋ ಅರ್ಥವಾಗುತ್ತಿಲ್ಲ. ಸಮಾನತೆ, ತಾರತಮ್ಯ, ಸಾಮಾಜಿಕ ನ್ಯಾಯ, ವ್ಯಕ್ತಿ ಸ್ವಾತಂತ್ರ್ಯ ಎಂಬುದು ಮರಿಚಿಕೆಯ ಸಂಗತಿ. ಭಾರತದಲ್ಲಿ ಇಂದಿಗೂ ಕೋಟ್ಯಾಂತರ ಮಂದಿಗೆ ನೆಲೆಯಿಲ್ಲ. ತಿನ್ನಲು ಊಟವಿಲ್ಲ. ತೊಡಲು ಬಟ್ಟೆಯಿಲ್ಲ ಈಗಿರುವಾಗ ಯಾವ ರೀತಿಯ ಸ್ವಾತಂತ್ರ್ಯ ಜನತೆ ಆಚರಿಸಬೇಕು?. ಈಗಾಗಲೇ ನಮ್ಮ ರಾಷ್ಟ್ರ ನೂರಾರು ಸಮಸ್ಯೆಗಳಿಗೆ ಸಿಕ್ಕಿ ನಲುಗುತ್ತಿದೆ. ಮಿತಿಮೀರುತ್ತಿರುವ ಜನಸಂಖ್ಯೆ. ಅಷ್ಟೇ ವೇಗದಲ್ಲಿ ಬೆಳೆಯುತ್ತಿರುವ ಅಗತ್ಯವಸ್ತುಗಳ ಬೆಲೆಗಳು. ಆರ್ಥಕ ಪರಿಸ್ಥತಿಗಳ ಬದಲಾವಣೆಗಳು ಇದರಿಂದ ಸಾಮಾನ್ಯರು ಮುಕ್ತಿಹೊಂದಲು ಸಾಧ್ಯವೇ?. ಶ್ರೀಮಂತರ ಮತ್ತು ಅಧಿಕಾರಶಾಹಿ ವರ್ಗದವರೇನೋ ಹೈಟಕ್ ಸಂಸ್ಕೃತಿಗೆ ಹೊಂದಿಕೊಳ್ಳುತ್ತಾರೆ ಆದರೆ ಸಾಮಾನ್ಯ ಜನರ ಮಾತೇನು ?. ಇದನ್ನೆಲ್ಲಾ ತಹಬಂಧಿಗೆ ತರಬೇಕಿರುವ ಸರ್ಕಾರಗಳು ಜನರಿಗೆ ಅಂಗೈಯಲ್ಲಿ ಬೆಣ್ಣೆಯನ್ನು ತೋರಿಸುತ್ತ ಕಾಲ ಕಳೆಯುತ್ತಿರುವುದು ದುರಂತವೇ ಸರಿ. ಕೇವಲ ತಮ್ಮ ಬೆಳವಣಿಗೆಗಾಗಿ ತಮ್ಮ ಅಧಿಕಾರಕ್ಕಾಗಿ ಮಾತ್ರ ಬೇಳೇ ಬೇಯಿಸಿಕೊಳ್ಳುತ್ತಿರುವುದು ಲಜ್ಜೆಗೇಡಿತನ.

        ನಮ್ಮ ಭಾರತ ಕೇವಲ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಲ್ಲ. ಅದು ಇಷ್ಟೋತ್ತಿಗಾಗಲೇ ಅಭಿವೃದ್ಧಿ ಹೊಂದಿರಬೇಕಾದ ರಾಷ್ಟ್ರವಾಗಿರಬೇಕಿತ್ತು. ಆದರೆ ಅದು ಸಾಧ್ಯವಾಗುತ್ತಿಲ್ಲ. ಈಗಾಗಲೇ ದೇಶ ಆಂತರಿಕ ಕಲಹಗಳಿಂದ ನಲುಗುತ್ತಿದೆ. ನಕ್ಸಲಿಜಂ, ಮತೀಯ ಕಲಹಗಳು, ಭಯೋತ್ಸಾದನೆಯಂತ ಸಮಸ್ಯಗಳು ಜನರಲ್ಲಿ ಭಯವನ್ನು ಮೂಡಿಸುತ್ತಿವೆ. ಭ್ರಷ್ಟಾಚಾರ. ಸ್ತ್ರೀ ಶೋಷಣೆ, ಕಳ್ಳತನ, ಸುಲುಗೆ. ಕೊಲೆ ಇಂತಹ ಸಮಸ್ಯಗಳು ಸರ್ವೇ ಸಾಮಾನ್ಯವಾಗಿಬಿಟ್ಟಿವೆ ಇವುಗಳಿಂದ ಮುಕ್ತಿ ಬೇಡವೇ?. ಈ ಪರಿಸ್ಥಿತಿಗಳನ್ನು ಬದಲಾಯಿಸುವವರು ಯಾರು?.  ಸ್ವಾತಂತ್ರ್ಯವೆಂದರೆ ಕೇವಲ ಆಗಸ್ಟ್ 15 ನೇ ದಿನಾಂಕಕ್ಕೆ ಸೀಮಿತಗೊಳಿಸಿ ಕೆಂಪು ಕೋಟೆಯ ಮೇಲೋ ಅಥವಾ ಮತ್ಯಾವುದೋ ಮೈದಾನದಲ್ಲೋ ಪೆರೇಡ್ ನಡೆಸಿ ಧ್ವಜವನ್ನು ಹಾರಿಸಿ ಸುಮ್ಮನಾಗುವುದಲ್ಲ. ನಮ್ಮ ಭಾವುಟ ಪ್ರತಿದಿನವೂ ಸ್ವತಂತ್ರವಾಗಿ ಪ್ರಜ್ವಲಿಸಬೇಕು. ಜನತೆಯ ಏಳಿಗೆಯ ಬಗ್ಗೆ, ದೇಶದ ಪ್ರಗತಿಯ ಬಗ್ಗೆ. ಆಂತರಿಕ ಸಮಸ್ಯೆಗಳ ಬಗ್ಗೆ. ಭದ್ರತೆಯ ಬಗ್ಗೆ, ನಮ್ಮನ್ನಾಳುವವರು ಗಮನ ಹರಿಸಬೇಕು. ಹಾಗಯೇ ಮಹಾತ್ಮ ಗಾಂಧಿ,  ಸರ್ದಾರ್ ವಲ್ಲಭಭಾಯ್ ಪಟೇಲ್,  ಲೋಕಮಾನ್ಯ ಬಾಲ ಗಂಗಾಧರ ತಿಲಕ, ಸುಭಾಷ್ ಚಂದ್ರ ಬೋಸ್, ಲಾಲ್ ಬಹಾದ್ದೂರ್ ಶಾಸ್ತ್ರಿ,  ಸರ್ದಾರ್ ಭಗತ್ ಸಿಂಗ್, ಚಂದ್ರ ಶೇಖರ್ ಆಝಾದ್ ಇನ್ನೂ ಮುಂತಾದವರ ಕನಸುಗಳನ್ನು ಸಕಾರಗೊಳಿಸಲು ಮನಸಾರೆ ಚಿಂತಿಸಬೇಕು. ಮೇಲು ಕೀಳಿನ ಅಂತರವನ್ನು ಸರಿದೂಗಿಸಲು ಸಮರ್ಥವಾಗಿ ಪ್ರಯತ್ನಿಸಬೇಕು. ಪ್ರತಿಯೊಬ್ಬರು ಸಂತಸದಿಂದ ನಲಿಯುವಂತ ಕಾಲ ಬರಬೇಕು. ಹಾಗ ಮಾತ್ರವೇ ಈ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ದಕ್ಕಿದೆ ಎಂಬುದನ್ನು ಸುವರ್ಣಾಕ್ಷರಗಳಿಂದ ಬರೆಯಬಹುದು..