Tuesday, February 28, 2012

ಯಾರಾದರೂ ಇವುಗಳನ್ನು ಕೊಳ್ಳಿ


ಇಲ್ಲಿ ಕೆಲವನ್ನು ಮಾರಲಿದ್ದೇನೆ
ಕೊಳ್ಳುವವರ ಇಚ್ಛಗನುಸಾರವಾಗಿ
ತಕ್ಕ ಬೆಲೆ ನಿಗಧಿಪಡಿಸಿದ್ದೇನೆ
ಯಾರೂ ಮುಂದೆ ಬರುತ್ತಿಲ್ಲ
ದಯಮಾಡಿ ಇವುಗಳನ್ನು ಕೊಂಡುಹೋಗಿ

ನನ್ನ ವಸ್ತುಗಳ ಪಟ್ಟಿ ಇಂತಿದೆ,
ಉಪ್ಪರಿಗೆಯ ಮೇಲಿನ ಭಾರವಾದ ಮಾತುಗಳು
ಮನದ ಮೂಲೆಯಲ್ಲಿ ಉಸಿರಾಡುವ ನೆನಪುಗಳು
ಕತ್ತಲು ಕವಿದ ಹೃದಯದ ಒಳಕೋಣೆಯ ನೆರಳು
ಭಾವಕ್ಕೆ ತಕ್ಕಂತೆ ಬದಲಾಗುವ ಮನಸ್ಸು

ವರ್ಷಗಳ ಹಿಂದೆ ಕನ್ನಡಿಗೆ ಮೆತ್ತಿರುವ ಬಿಂದಿಗಳು
ಮುರಿದು ಬಿದ್ದ ಬಳೆಯ ಚೂರುಗಳು
ಜಾತ್ರೆಯಲ್ಲಿ ಅಪ್ಪನು ತೆಗೆದುಕೊಟ್ಟ ಒಡ್ಯಾಣ
ತೆಂಗಿನ ಗರಿಯ ಬಾಸಿಂಗ
ಹಾಳೆಯ ತಳದಲ್ಲಿ ಮುಚ್ಚಿಟ್ಟ ನವಿಲುಗರಿ

ಮುರಿದು ಬಿದ್ದ ಮನೆಯ ತಾರಸಿ
ಕಂಬಕ್ಕೆ ಕಟ್ಟಿರುವ ಗಾಳಿಪಟದ ದಾರ
ಉಜ್ಜಿರುವ ಹುಣಸೆ ಬೀಜಗಳು
ಜಡೆಗೆ ಮುಡಿಯುತ್ತಿದ್ದ ಕೆಂಪನೆಯ ರಿಬ್ಬನ್ನು
ಖಾಲಿಯಾದ ಗೋರಂಟಿ ಡಬ್ಬಿಗಳು

ಇನ್ನಷ್ಟರ ಸಂಗ್ರಹ ನನ್ನ ಬಳಿಯಿದೆ
ಇವುಗಳನ್ನು ನೋಡಿ ನೆನೆದು ಸಾಕಾಗಿದೆ
ಗತಿಸಿದ ಆಸೆಗಳನ್ನೆಲ್ಲ ಮತ್ತೆ ಧಕ್ಕಿಸಿಕೊಳ್ಳಲಾಗುತ್ತಿಲ್ಲ
ನನ್ನ ನೆಮ್ಮದಿಯ ಸಲುವಾಗಿ ಯಾರಾದರೂ 
ಮುಂದೆ ಬಂದು ಇವುಗಳನ್ನು ಕೊಳ್ಳಿ

Monday, February 27, 2012

ಆರಂಭವಾದಂತೆಯೇ !


ಗಾಳಿಯ ವೇಗಕ್ಕೆ ಮೋಡ
ತೂಗಿ ಕರಗುತ್ತಿಲ್ಲ
ಗುಡುಗಿನ ಆರ್ಭಟದೊಳಗೆ
ಸಳುಕುಮೂಡಿಸುವ ಮಿಂಚು
ಹೊಳೆಯುತ್ತಿಲ್ಲ

ಭವದ ಬಯಲಲ್ಲಿ ಕೆಂಪನೆ
ನೆತ್ತರಿನ ಹೊಳೆ ಹರಿದಂತೆ
ಭವಸಾರವನ್ನೇಲ್ಲಾ
ಬೆವರಿನ ಹನಿಗಳು
ಹೀರಿ ಸಪ್ಪೆಯಾಗಿಸಿದೆ

ಮಾತಿಲ್ಲ ..
ಮೌನದಲ್ಲಿ ಕಾಲ 
ಸುಮ್ಮನೆ ವ್ಯರ್ಥವಾಗಿ ಕಳೆಯುತ್ತಿದೆ
ಜೊತೆಗೆ ಹಿಂಬಾಲಿಸುವ ನೆರಳೂ
ಬಣ್ಣ ಕಳೆದುಕೊಂಡಿದೆ

ಬಾಡಿದ ಮೊಗದಲ್ಲಿ
ಭಾವನೆಗಳ ಕೊರತೆ
ನೆನ್ನೆ ಉಳಿಸಿಹೋಗಿದ್ದ ಹೆಜ್ಜೆ
ಇಂದು ಗಾಳಿಯ ವೇಗಕ್ಕೆ
ಅಳಸಿಹೋಗುತ್ತದೆ

ಭವದಲ್ಲಿ ಭವ್ಯತೆಯಿಲ್ಲ
ಭವ ಬಂಧಗಳ ಸೆಳೆತವಿಲ್ಲ
ನಿಸ್ವಾರ್ಥ ನಿಯಮಗಳ 
ಅಂತರವಿಲ್ಲ
ನ್ಯಾಯ ನೆಮ್ಮದಿಗಳ ಅರಿವಿಲ್ಲ
ಹಲವು ವರ್ಷಗಳ ಹಿಂದೆ
ಸುರಿದು ಹೋದಿದ್ದ
ಮಳೆಯ ಸುವಾಸನೆಯೇ 
ಕಾಣುತ್ತಿಲ್ಲ

ಒಂದರ್ಥದಲ್ಲಿ ಮಳೆಯೂ ಇಂದು
ಜಾತಿಯ ಲೆಕ್ಕಾಚಾರದಲ್ಲಿ
ತೊಡಗಿಲ್ಲ ತಾನೆ ?
ಹಾಗೇನಾದರೂ ಆಗಿದ್ದಲ್ಲಿ
ಸರ್ವನಾಶದ ಪರ್ವ ಆರಂಭವಾದಂತೆಯೇ !…

Saturday, February 25, 2012

ಇಚ್ಛೆ


ಅವಳ ನೆನಪು  
ಬೇಡವೆಂದರೂ ಕಾಡುತ್ತದೆ
ಕೆಂಪು ಇರುವೆ ಕಡಿತಗಿಂತಲೂ ಹೆಚ್ಚಾಗಿ
ಬರೆಯಲಾಗದ ಕವನವನ್ನು
ಬರೆಯಲೇ ಬೇಕೆಂದು ಬೆನ್ನಿಗೆ ಬಿದ್ದ
ಬೇತಾಳನಂತೆ

ಮೌನದಲ್ಲೂ
ಮನಸ್ಸು ತಲ್ಲಣಗೊಳ್ಳುತ್ತದೆ
ಹೃದಯದಲ್ಲಿ ಅವಳ ರೂಪ
ನಿಧಾನವಾಗಿ ತೆರೆದುಕೊಳ್ಳುತ್ತದೆ
ಗಲಿಬಿಲಿಗೊಳ್ಳುವ ಮನಸ್ಸಿನಲ್ಲಿ
ಅಕ್ಷರಗಳು ಮೂಡುವದಕ್ಕಾದರೂ 
ಆಸ್ಪದವುಂಟೇ ?

ಅವಳ ಚಂದ್ರನಂತ ನೋಟವನ್ನು
ಏನೆಂದು ಬರೆಯಲಿ
ಬರೆದೇ ಕೂಡಲೆ ? 
ಆಗದೆನ್ನಲೆ ? 
ಭ್ರಾಂತಿಯ ಬಯಲಲ್ಲಿ ಮೂಡವ
ಅಕ್ಷರಗಳಾದರೂ ಎಂತವೋ ಏನೋ ?

ಎಷ್ಟಾದರೂ ಸರಿ ನನ್ನವಳಲ್ಲವೆ
ಅವಳನ್ನೇ ಬರೆಯಲೆತ್ನಿಸುವೆ
ಅದು ಕವನವಾದರೂ ಸರಿ
ಕಥೆಯಂತಾದರೂ ಸರಿ
ಓದಿ ತೀರ್ಮಾನಿಸುವ ಇಚ್ಛೆ
ಖಂಡಿತ ನನ್ನದಲ್ಲವಲ್ಲ !…

Sunday, February 19, 2012

267 ನೇ ನಂಬರಿನ ಕೋಣೆ

     ಅದೊಂದು ಕಿರಿದಾದಕೋಣೆ, ಕೋಣೆಯ ಸುತ್ತಲೂ ಗಾಡಕತ್ತಲು ಕವಿದಿದೆ,. ಮಧ್ಯ ಭಾಗದಲ್ಲೊಂದು ಬೆಳಕು ನಿಧಾನವಾಗಿ ಅತ್ತಿಂದಿತ್ತ ಇತ್ತಿಂದತ್ತ ತೂಗಾಡುತ್ತಿದೆ. ಕೋಣೆಯ ನಾಲ್ಕೂ ಮೂಲೆಗಳಲ್ಲಿ ಯಾವುದೇ ಧನಿಯಿಲ್ಲ ತುಂಬಾ ನಿಶ್ಚಬ್ಧ ನಿಶ್ಚಲತೆ ಆವರಿಸಿದೆ. ಏನನ್ನೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ?. ಗೋಡೆಗೆ ಕೈ ತಾಗಿಸುತ್ತೇನೆ, ತುಂಬಾ ಒರಟಾಗಿದೆ, ಅಲ್ಲಲ್ಲಿ ಕೆಂಪು ಕಲೆಗಳ ಗುರುತುಗಳಿವೆ. ಆ ಮಂದ ಬೆಳಕಿನಲ್ಲಿ ಗಾಯದ ಗುರುತುಗಳಂತೆ ಕಾಣುತ್ತವೆ. ಅವು ಕೆಂಪು ಕಲೆಯ ಗುರುತುಗಳೇ ಆದರೆ ಅವು ಇನ್ನೂ ಹಸಿಯಾಗಿ ಕೈಗೆ ಅಂಟುವ ಸ್ಥತಿಯಲ್ಲಿವೆ. ಬಹುಷಃ ಯಾರದೋ ರಕ್ತದ ಕಲೆಗಳಿರಬೇಕು. ಮುಂದೊಂದು ಮೊಗಸಾಲೆಯಿದೆ ಅದರ ಕೆಳ ಭಾಗದ ಅಡಿಯಲ್ಲಿ ಎಂಥದ್ದೋ ಕಾಗದದ ಚೂರುಗಳು ಕೈತಾಗುತ್ತಿವೆ. ಇನ್ನೂ ಸ್ವಲ್ಪ ಹುಡುಕಿದಾಗ ಕಬ್ಬಿಣದ ಬಾಗಿಲೊಂದು ಸ್ವರ್ಶಿಸುತ್ತದೆ. ತುಂಬಾ ಉದ್ದವಾಗಿದೆ ಅದರ ಸರಳುಗಳುಗಳು. ಬಲಿಷ್ಟವಾದ ಕಬ್ಬಿಣದ ಬಾಗಿಲು. ಏನೂ ಅರ್ಥವಾದ ಸ್ಥಿತಿಯಿಂದ ನೋಡುತ್ತೇನೆ. ಇಲ್ಲಿ ಕಬ್ಬಿಣದ ಬಾಗಿಲಾಕಿದೆ, ಯಾವುದೀ ಕೋಣೆ ?. ಇಂಥ ಕೋಣೆಯನ್ನು ನನ್ನ ಜೀವಮಾನದಲ್ಲೇ ಎಲ್ಲೂ ನೋಡಲಿಲ್ಲವಲ್ಲ. ಇದಕ್ಕೆ ಉತ್ತರಿಸಲು ನನ್ನೊಬ್ಬನನ್ನು ಬಿಟ್ಟು ಬೇರೆ ಯಾರೂ ಕಾಣುವುದಿಲ್ಲ. ನನ್ನ ಕೋಣೆಯ ತುಂಬಾ ಪುಸ್ತಕಗಳು ತುಂಬಿದ್ದವು, ಕಬ್ಬಿಣದ ಕುರ್ಚಿಯೊಂದಿತ್ತು. ಅದರ ಪಕ್ಕದಲ್ಲಿ ಮರದ ಪೆಟ್ಟಿಗೆ. ಅದರ ಕೊನೆಯ ಭಾಗದಲ್ಲೊಂದು ಗಾಜಿನ ಶೀಷೆ, ನನ್ನ ಲೇಖನಿಗೆ ಮಸಿಯನ್ನು ತುಂಬಿಸುತ್ತಿದ್ದ ಶೀಷೆ ಅದು. ಅದರ ಎದಿರು ಸೀಮೆ ಎಣ್ಣೆಯ ದೀಪ. ಕರೆಂಟ್ ಇಲ್ಲಾದಾಗ ಅಚ್ಚುತ್ತಿದ್ದ ದೀಪ. ಗೋಡೆಗೆ ತಗುಲಿಸಿದ್ದ ಕ್ಯಾಲೆಂಡರ್ರು. ಮಧ್ಯಭಾಗದಲ್ಲಿ ಹಳೆಯ ಎರಡು ಮಣ್ಣಿನ ಕಪಾಟುಗಳು, ಅದರೊಳಗೆ ಮುಚ್ಚಿಟ್ಟಿದ್ದ ಚಿಲ್ಲರೆ ನಾಣ್ಯಗಳು. ಕಥೆ ಕವನ ಬರೆದಿಡುತ್ತಿದ್ದ ಹಾಳೆಗಳು. ಮೂಲೆಯಲ್ಲಿ ಸುತ್ತಿಟ್ಟಿದ್ದ ಚಾಪೆ. ಯಾವೂದೂ ಕಾಣುತ್ತಿಲ್ಲ. ಮಂದವಾಗಿ ಬೆಳಗುತ್ತಿದ್ದ ಹೈಮಾಸ್ ದೀಪದ ಬೆಳಕು, ರೋಸ್ ಹುಡ್ ಮರದ ಅಲಗೆಯ ಬಾಗಿಲು ಯಾವುದೂ ಸಹ.
       ಈ ಸ್ಥಳ ನನಗೆ ತೀರ ಹೊಸದು. ಅಂದರೆ ನಾನು ಓದುತ್ತಿದ್ದ (julius fuchik) “ಜ್ಯೂಲಿಯಸ್ ಫ್ಯೂಚಿಕ್ ”ರ ಕಥೆಯಲ್ಲಿ ಬರುವಂತ ಕೋಣೆ. ಅವರ 267 ನೇ ನಂಬರಿನ ಕಾರಾಗೃಹದ ಕೋಣೆ. ಹೌದು ಅದು ತುಂಬಾ ಭಯಾನಕ ಕೋಣೆ. ಜೂಲಿಯಸ್ಸರನ್ನು ಕ್ಷಣ ಕ್ಷಣವೂ ಹಿಂಸಿಸಿ ವಧೆ ಮಾಡಿದ ಕೋಣೆ. ಖಂಡಿತ ಅದು ಸಾವಿನ ಕೋಣೆ. ಅವರ ಪುಸ್ತಕದಲ್ಲಿ ಓದಿದ್ದ ಕೋಣೆ. ಅದೇ 267 ನೇ ನಂಬರಿನ ಕೋಣೆ. ಜೂಲಿಯಸ್ಸರು ತಮ್ಮ ಜೀವನದ ಕಟ್ಟ ಕಡೆಯ ಕ್ಷಣಗಳನ್ನು ಆ ಕೋಣೆಯಲ್ಲೇ ಕಳೆದಿದ್ದರು. ತುಂಬಾ ದಯಾನೀಯ ಸ್ಥಿತಿಯಲ್ಲೂ. ಅವರು ಸಾವನ್ನೂ ಸಹ ಸರಳವಾಗಿ ತೆಗೆದುಕೊಂಡ ಧೈರ್ಯಶಾಲಿ. ಅವರ ನೋವು - ಕಷ್ಟಗಳು ಯಾವುದನ್ನೂ ಲೆಕ್ಕಿಸದೆ. ಪಾನ್ ಕ್ರಾಟ್ ಜೈಲಿನಲ್ಲಿ “ಕೊನ್ ಲಿಕ್ಸಿ” ಎಂಬ ಕಾವಲುಗಾರನ ಸಹಾಯದೊಂದಿಗೆ ರಹಸ್ಯವಾಗಿ ತರಿಸಿಕೊಂಡ "ಪೆನ್ಸಿಲ್ ಮತ್ತು ಕಾಗದ"ದ ಚೂರುಗಳಿಂದ ರಚಿಸಿದ ನಾಜಿ ಜೈಲೆಂಬ ಪಿಶಾಚ ಗೃಹದಲ್ಲಿನ ಕಂಡುಂಡ ಪ್ರತ್ಯಕ್ಷ ಅನುಭವದ ದಾಖಲು. ತನ್ನ ಕಟ್ಟ ಕಡೆಯ ದಿನಗಳ ಯಾತನಾ ದಿನಚರಿಯ ಟಿಪ್ಪಣಿಗಳ ಸಂಗ್ರಹ. ತನ್ನ ಪತ್ನಿಯಾದ ಆಗಸ್ಟಿನಾ ಫ್ಯೂಚಿಕ್ ರು ಪ್ರಕಟಿಸಿದ ಪುಸ್ತಕ. ಹೌದು ಅದೇ ಪುಸ್ತಕ ಅದೇ ಕೋಣೆ. ಆ ಪುಸ್ತಕದಲ್ಲಿನ ಕೆಲವು ಘಟನೆಗಳು ನನ್ನ ಕಣ್ಣಮುಂದೆ ಸುಳಿದಾಡುತ್ತವೆ.
       ಜೂಲಿಯಸ್ ಫ್ಯೂಚಿಕ್ ರು ತಮ್ಮ ಸಮಗ್ರ ಬದುಕನ್ನೇ ಸಮರ್ಪಿಸಿಕೊಂಡ ಮಹಾ ಕೃತಿಯ ಕೊನೆಯ ಅಧ್ಯಾಯ. ಆ ಪುಸ್ತಕವನ್ನು ಓದುತ್ತಿದ್ದ ಪ್ರತಿ ಬಾರಿಯೂ ನನ್ನ ಕಣ್ಣುಗಳು ಹನಿಗೂಡುತ್ತವೆ. ಕಾರಣ ಅವರನ್ನು ಅಷ್ಟೊಂದು ದಾರುಣ ಹಿಂಸೆಗೆ ಗುರಿಪಡಿಸಿ, ಪ್ರತಿಬಾರಿಯೂ ಚಿತ್ರವಧೆ ಮಾಡಿ, ಪ್ರಜ್ಞಾಶೂನ್ಯ ಸ್ಥಿತಿಯ ತನಕ ಬಡಿದು, ಕೊನೆಗೆ ಸಾಯಿಸಿಯೇ ಬಿಟ್ಟ ಪೈಚಾಚಿಕ ಕಥೆ. ಆ ಘನ ಘೋರ ಚಿತ್ರವಧೆಯನ್ನು ನೆನೆಪಿಸಿಕೊಂಡರೆ ಹೃದಯ ತುಂಬಿಬರುತ್ತದೆ. ಯಾವುದೇ ಎದುರಾಳಿಗಳಿಗೂ ಅಂಥ ಗತಿ ಬರಬಾರದು ಎಂದುಕೊಳ್ಳುತ್ತೇನೆ. ನಿಮಗೆ ಗೊತ್ತಿಲ್ಲವೇನೋ!. ಜ್ಯೂಲಿಯಸ್ ಫ್ಯೂಚಿಕ್ ಕ್ಕರು ಪ್ರಾಗ್ ನ ಸ್ಮಿಚಾವ್ ಎಂಬ ಊರಿನವರು. ಚೆಕೋಸ್ಲೊವಾಕ್ ಸಾಹಿತ್ಯದಲ್ಲಿ ಉನ್ನತ ದರ್ಜೆಯ ಲೇಖಕರು. ಶ್ರೇಷ್ಠ ವಿಚಾರವಾದಿ – ಪತ್ರಕರ್ತ ಮತ್ತು ಸಣ್ಣ ಕಥೆಗಾರರೂ ಕೂಡ. ಎಲ್ಲಕ್ಕೂ ಮಿಗಿಲಾಗಿ ಇವರೊಬ್ಬ ಹೋರಾಟಗಾರರು. ನಾಟ್ಸಿಗಳು ಆಕ್ರಮಿಸಿಕೊಂಡ ದೇಶವನ್ನು ಶತ್ರುಗಳ ಕೈಯಿಂದ ಪಾರುಮಾಡಲು ನಡೆಸಿದ ಕ್ರಾಂತಿಯಲ್ಲಿ ಇವರದು ಮಹತ್ತರ ಪಾತ್ರವಿದೆ. ಅವರನ್ನು ಫಾಸಿಸ್ಟ್ ನರರಾಕ್ಷಸರು ಬರ್ಲಿನ್ನಿನ ಜೈಲಿನಲ್ಲಿ ದೀರ್ಘಾವಧಿ ಚಿತ್ರಹಿಂಸೆಗೆ ಒಳಪಡಿಸಿದಾಗ ಅವರ ಚಿತ್ರಹಿಂಸೆಯನ್ನೂ ಲೆಕ್ಕಿಸದೆ ಆ ನೋವಿನಲ್ಲೂ ಎದೆಗುಂದದೆ ಬರೆದಂತ ಬರಹ. ಅದರಲ್ಲಿ ಒಂದು ಸಾಲು ಇಲ್ಲಿದೆ ನೋಡಿ "{ನನಗೆ ಬದುಕಿನ ಮೇಲೆ ಬಹಳ ಪ್ರೀತಿಯಿತ್ತು. ಅದರ ಚಲುವಿಗೆ ಮನಸೋತು ನಾನು ಹೋರಾಟದ ಕಣಕ್ಕೆ ಇಳಿದೆ. ಓ ಜನತೆಯೇ! ನಾನು ನಿಮ್ಮನ್ನು ಪ್ರೀತಿಸಿದೆ. ನೀವದನ್ನು ಸ್ವೀಕರಿಸಿ ಪ್ರತಿಯಾಗಿ ನನ್ನನ್ನು ಪ್ರೀತಿಸಿದಾಗ ನನಗೆ ಸುಖವೆನಿಸಿತು. ನೀವು ನನ್ನ ಬಗ್ಗೆ ತಪ್ಪು ಭಾವಿಸಿದಾಗ ನನಗೆ ಕೆಡುಕೆನಿಸಿತು}" ಈ ಸಾಲಿನಲ್ಲಿ ದೇಶ ಪ್ರೇಮವಿದೆ. ಪ್ರಜಾ ಪ್ರೇಮವಿದೆ. 1943 ನೇ ಸೆಪ್ಟೆಂಬರ್ ತಿಂಗಳಿನಲ್ಲಿ ಅವರನ್ನು ನಾಟ್ಸಿಗಳು ಬರ್ಬರವಾಗಿ ಕೊಂದು ಸಾಯಿಸುತ್ತಾರೆ. ಒಂದು ಹಂತದಲ್ಲಿ ಅವರ ಸಾವು ತೀರ ದಯಾನೀಯ ಹಾಗೂ ಸೋಚನೀಯವೂ ಕೂಡ. ಅದು ಒಂದು ಹಂತಕ್ಕೆ ಮುಗಿದುಹೋದ ಅಧ್ಯಾಯ. ವಾಸ್ತವದ ಸ್ಥಿತಿಗೆ ಬಂದಾಗ ನಾನ್ಯಾಕೆ ಈ ಕೋಣೆಯಲ್ಲಿದ್ದೇನೆ ಎಂಬ ನೂರೆಂಟು ಪ್ರಶ್ನೆಗಳು ನನ್ನನ್ನು ಮುತ್ತಿಕೊಳ್ಳುತ್ತವೆ ?.
      ಏಳು ಹೆಜ್ಜೆ ಮುಂದೆ ಗೋಡೆಯ ಪಕ್ಕದಲ್ಲಿ ಮಡಿಸುವ ಒಂದು ಮಲಗುದಾಣವಿದೆ, ಇನ್ನೊಂದೆಡೆ ಮಂಕುಹಿಡಿದ ಕಂದು ಕಪಾಟು, ಅದರಲ್ಲೊಂದು ಮಣ್ಣಿನ ಪಾತ್ರೆ. ಹೌದು ಅದು ನನಗೆ ಗೊತ್ತಾಗುತ್ತಿದೆ. ಬಲ ಭಾಗದ ಗೋಡೆಯ ಬಳಿ ಒಂದು ಹಳೆಯ ತುಕ್ಕುಹಿಡಿದ ಎರಡು ಮಂಚಗಳಿವೆ. ತನ್ನ ಅಸ್ಥಿತ್ವವನ್ನು ಕಳೆದುಕೊಂಡು ಕೊಳೆತುಹೋದ ದೇಹಗಳಂತೆ ಕಾಣುತ್ತವೆ. ನನ್ನ ಮೇಲೊಂದು ಕಿಟಕಿಯಿದೆ ಅದರ ಕೆಳಗೆ ಹುಲ್ಲು ಹಾಸಿಗೆ. ಅದರ ಮೇಲೆ ನಿಶ್ಚಲವಾಗಿ ಕೂತಿದ್ದೇನೆ. ಆ ಹಾಸಿಗೆಯ ಹುಲ್ಲುಗರಿಗಳು ನನ್ನ ಚರ್ಮವನ್ನು ಮೆದುವಾಗಿ ಒತ್ತುತ್ತ ಗತಕಾಲದ ಕಥೆಯೊಂದನ್ನು ನೆನಪಿಸುತ್ತೆ. ಕೈಗೆಟಕುವ ಅಂತರದಲ್ಲೊಂದು ಸಣ್ಣ ನೀರಿನ ಹೂಜಿಯಿದೆ. ಅಂದರೆ ಜೂಲಿಯಸ್ಸರನ್ನು ಬಂಧಿಸಿಟ್ಟ ಕೋಣೆಯಲ್ಲಿ ಇಂತದ್ದೇ ಹೂಜಿಯಿತ್ತು ಅದು ಇಲ್ಲೂ ಇದೆ. ಅವರ ಪ್ರಜ್ಞಾಹೀನ ಸ್ಥಿತಿಯಲ್ಲಿ ಆ ಮಣ್ಣ ಹೂಜಿಯಿಂದಲೇ ನೀರು ಕುಡಿಯುತ್ತಿದ್ದರು. ನನ್ನ ಹಿಂದಿನ ಗೋಡೆ ಕಂದು ಬಣ್ಣದಿಂದ ಕಾಣುತ್ತದೆ. ಅಂದರೆ ಅದಕ್ಕೆ ಬಣ್ಣ ಬಳಿದು ವರ್ಷಗಳೇ ಕಳೆದುಹೋದಂತೆ. ನನ್ನ ಎಡಭಾಗದಲ್ಲಿ ಒಂದು ಕುಬ್ಜಗೋಡೆ ಕಾಣುತ್ತಿದೆ. ಅದರ ಒಳಗಿಂದ ಅಸಹ್ಯಕರವಾದ ವಾಸನೆ ಮೂಗಿಗೆ ಅಪ್ಪಳಿಸುತ್ತೆ. ಅದು ಶೌಚಗೃಹ. ಎಲ್ಲವೂ ಜೂಲಿಯಸ್ ರ ಕಾರಗೃಹವನ್ನು ನೆನಪಿಸುತ್ತಿದೆ. ಹೌದು ಅದೇ ಸ್ಥಳವಿದು, ಅದೇ ಸ್ಥಳ !. ನಾನಂತೂ ಯಾವ ತಪ್ಪನ್ನೂ ಮಾಡಿಲ್ಲ. ಜೂಲಿಯಸ್ ಸ್ಸರ ಕಥೆಯನ್ನೊಂದು ಓದಿದ್ದನ್ನು ಬಿಟ್ಟು ಮತ್ಯಾವ ತಪ್ಪನ್ನೂ ಮಾಡಲಿಲ್ಲ. ಅದು ಪಾಪವಾಯಿತ ಫಾಸಿಸ್ಟ್ ನರರಾಕ್ಷಸರ ಪಾಲಿಗೆ ?.
     ಕಬ್ಬಿಣದ ಬಾಗಿಲನ್ನು ಇಣುಕಿನೋಡುತ್ತೇನೆ ಹೊರಭಾಗದಿಂದ ಯಾವುದೋ ನೆರಳು ನನ್ನತ್ತ ಸುಳಿಯುತ್ತದೆ. ಬಹುಷಃ ಅದು ಈ ಜೈಲಿನ ಅಧಿಕಾರಿಯ ನೆರಳಿರಬೇಕೆಂಬ ಊಹೆ. ವಿಧಿಯಿಲ್ಲ ಅವರನ್ನೇ ಕೇಳಬೇಕು. "ನನ್ನನ್ಯಾಕೆ ಬಂಧಿಸಿಟ್ಟೀದೀರಿ ನಾನ್ಯಾವ ತಪ್ಪು ಮಾಡಿದ್ದೇನೆ" ಎಂದು ದಬಾಯಿಸಬೇಕು. ಯಾವುದೇ ಕಾರಣಕ್ಕೂ ಈ ಕೋಣೆಯಲ್ಲಿ ನಾನಿರಲಾರೆ. ಕಾರಣವಿಲ್ಲದೆ ನನ್ನನ್ನು ಬಂಧಿಸಿ ಈ ಕೊಠಡಿಯಲ್ಲಿಡಲಾಗಿದೆ ಅಂಥಲೂ ತಿಳಿಸಬೇಕು. ಹೌದು ಆ ನೆರಳು ನನ್ನತ್ತ ಬರುತ್ತಿದೆ ಬರಲಿ. ಅಯ್ಯೋ ಅದು ಬರಿ ನೆರಳು ಅದಕ್ಕೆ ಹೊಂದಿಕೊಂಡ ಯಾವುದೇ ದೇಹವಿಲ್ಲ ?. ದೇಹವಿಲ್ಲದ ನೆರಳೇ... ಪರಮಾಶ್ಚರ್ಯ... ಅದು ನನ್ನ ಮುಂದೆಯೇ ಸಾಗುತ್ತದೆ. ಅದು ಜೂಲಿಯಸ್ಸರ ಮುಖವನ್ನೂ ಸಹ ಹೋಲುತ್ತಿದೆ. ಅಂದರೆ ಆ ನೆರಳು ಅವರದೇ ಇರಬೇಕು. ಖಂಡಿತ ಅವರೇ, ಬಹುಷಃ ಜೂಲಿಯಸ್ಸರು ನನ್ನನ್ನು ಬಿಡಿಸಲು ಬಂದಿರಬಹುದು. ಈ ಸರಳುಗಳ ಮಧ್ಯ ನನ್ನ ಮುಖ ಅವರಿಗೆ ಕಾಣುತ್ತಿಲ್ಲವೇನೋ ?. ಅವರನ್ನು ತಡೆಯಬೇಕು. ಹೌದು ಅವರನ್ನು ತಡಿಯಲೇ ಬೇಕು... ಆದರೆ ಅವರು ನಿಲ್ಲುತ್ತಿಲ್ಲವಲ್ಲ.  ಕೂಗೋಣವೆಂದರೆ ಗಂಟಲಿಂದ ಮಾತೇ ಹೊರ ಬರುತ್ತಿಲ್ಲ. ಮತ್ತಷ್ಟು ದೂರ ಸಾಗಿಹೋಹುತ್ತಿದೆ ಆ ನೆರಳು. ಕೂಗಲೇಬೇಕಾದ ಅನಿವಾರ್ಯತೆ "ಜೂಲಿಯಸ್ಸರೇ,,,,,,, ನಿಲ್ಲಿ.,,,,,,,, ನಿಲ್ಲಿ,,,,,,,, ನನ್ನತ್ತ ಮುಖಮಾಡಿ".... ನಾನು ನಿಮ್ಮ 267ನೇ ನಂಬರಿನ ಕೋಣೆಯಲ್ಲಿದ್ದೇನೆ. ನನ್ನನ್ನು ವಿನಾಕಾರಣ ಈ ಕೋಣೆಯಲ್ಲಿ ಬಂಧಿಸಿಡಲಾಗಿದೆ. ಧಯವಿಟ್ಟು ರಕ್ಷಿಸಿ. ಜೂಲಿಯಸ್ಸರೇ...... ನಿಲ್ಲಿ...... ಹೋಗದಿರಿ..... ನನಗೆ ಭಯವಾಗುತ್ತಿದೆ ... ನಾನೂ ನಿಮ್ಮೊಂದಿಗೆ ಬರುತ್ತೇನೆ ಕಂಠ ಕಿರಿದಾಗುತ್ತಿದೆ. ಅಯ್ಯೋ ದೇವರೇ ಅವರು ನಿಲ್ಲುತ್ತಲೇ ಇಲ್ಲವಲ್ಲ. ಜೂಲಿಯಸ್ಸರೇ.... ನಾಲಿಗೆ ಹರಿದುಹೋಗುವಂತೆ ಕಿರುಚುತ್ತೇನೆ !!. ಮತ್ತಷ್ಟು ಗಟ್ಟಿಯಾಗಿ... ಅಮ್ಮ ನನ್ನನ್ನು ತಟ್ಟಿ ಎಬ್ಬಿಸುವವರೆಗೂ ಕಿರುಚುತ್ತಲೇ ಇದ್ದೇನೆ..

(ಇದು ನನ್ನ ಮೊದಲ ಸಣ್ಣ ಕಥೆ ನಿಮಗೇನಾದರೂ ಹೇಳಬೇಕೆನಿಸಿದರೆ ಖಂಡಿತ ತಿಳಿಸಿ)

Saturday, February 18, 2012

ನಾನೂ ಬಾಳುವೆ ಛಲದಿಂದ


ಬುಟ್ಟಿಯ ಹೊತ್ತು
ಮನದೊಳಗತ್ತು
ಬರುತಿಹೆ ಭಾರದ ಮನಸಿಂದ

ಮಣ್ಣಲಿ ನಡೆಯುತ
ಹೆಜ್ಜೆಯ ನಿಕ್ಕುತ
ನಡೆದಿಹೆ ತೋಟದ ಬಯಲತ್ತ

ತಂದೆಯು ಇಲ್ಲಾ
ತಾಯಿಯು ಇಲ್ಲಾ
ನೋಡುವರ್ಯಾರು ನನ್ನನ್ನ

ಮುಸುರೆಯ ತಿಕ್ಕುವ
ಕಸವನು ಗುಡಿಸುವ
ಜೀವನ ನೀಡಿದ ಭಗವಂತ

ಶಾಲೆಯ ಕಲಿಕೆ
ಗೆಳೆಯರ ಜೋಡಿಗೆ
ಓದಲು ನನಗೂ ಆಸೆಯಿದೆ

ಕಳಿಸುವರ್ಯಾರು
ಪಾಠದ ಮನೆಗೆ
ಗುಡಿಸಲ ಕಾಯುವ ಪಾಡುಯಿದೆ

ಇದ್ದರೆ ಇರಲಿ
ಶಕ್ತಿಯ ಮೀರಿ
ಗೆಲ್ಲುವೆ ಬಾಳನು ಬಲದಿಂದ

ಜೀವನ-ವಿದು
ಚಲಿಸುವ ಬಂಡಿ
ನಾನೂ ಬಾಳುವೆ ಛಲದಿಂದ

Saturday, February 11, 2012

ಹರಳಿಕಟ್ಟೆ ಮಾತು… (ನಗೆ ಬರಹ)


[ಗುಂಡ ನಡ್ಗತ ನಡ್ಗತ ಅರಳಿಕಟ್ಟೆ ಅತ್ರ ಬರ್ತಿದ್ದಾನೆ. ಕೆಂಚ ಅರಳಿಕಟ್ಟೆ ಮೇಲೆ ಬೀಡಿ ಸೇದ್ತ ಕುಂತಿದ್ದಾನೆ. ಗುಂಡ ಬರ್ತಿರೋ ದಾಟಿ ನೋಡಿ]
‘’ಏನ್ಲಾ ಗುಂಡ ಈ ಪಾಟಿ ನಡ್ಗತ ಬರ್ತಿದ್ದಿಯ ಹಿಮಲಯಕ್ಕೇನಾರು ಹೋಗಿ ಬಂದ್ನೇನ್ಲ..'' ?.
ಅದ್ಯಾಕ್ಲ ಕೆಂಚ ಹೀಮಾಲಯಕ್ಕೆ,,,,,,?? ರಾರ್ತಿನಾಗೆಲ್ಲಾ ಅಟ್ಯಾಗೇ ಇದ್ದೆ !!.
ಮತ್ಯಾಕ್ಲ ಒಳ್ಳೆ ಪಿಡ್ಸ್ ಬಂದಿರೋನ್ ತರ ನಡ್ಗಾತಿದ್ದೀ’’ !
‘’ಮೊನ್ನೆ ಟಿವಿ 9 ನೋಡ್ದೆ ಕಣ ಅದ್ಕೆ ಇಂಗೆ’’..
‘’ಹೌದ ಏನ್ಲಾ ಅಂತಾದ್ದು ತೋರಿಸಿದ್ದು ಟಿವಿ 9 ನಾಗೆ’’ ?
‘’ಯಾವಾನೋ ‘’ಕಿಮ್ ಜಾಂಗ್ ಹುನ್’’ ಅಂತೆ ಕನ್ಲ... ಅವ್ನಿಗಿನ್ನ 27 ವರ್ಸನಂತೆ.. ಯಾವ್ದೋ ಕೊರಿಯ ದೇಶ್ದಾಗೆ ಇದ್ದಾನಂತೆ ಅವ್ರಪ್ಪ ಬೇರೆ ಸತ್ತೋದ್ನಂತೆ, ಈಗ ಅವ್ನೆ ದೇಶಾನ ಆಳೋವ್ನಂತೆ ಕನ್ಲ. ನಮ್ ಮೇಲೆ ಬಾಂಬ್ ಹಾಕಿ ಸುಟ್ಟಾಕ್ತಾನಂತೆ ಅಂಥ ತೋರ್ಸಿದ್ರು’’ !
‘’’’ಅಲಲಲಲಾ ಯಾವಾನೋ ‘’’ಕಿಮ್ ಜಾಂಗ್ ಹುನ್ ಅಂತೆ’’ ಅವ್ನಿಗಿನ್ನ 27 ವರ್ಸನಂತೆ’’ ಯಾವ್ದೋ ಕೊರಿಯ ದೇಶ್ದಾಗೆ ಅದಾನಂತೆ ನಮ್ ಮೇಲೆ ಬಾಂಬ್ ಹಾಕಿ ಸುಟ್ಟಾಕ್ತಾನಂತೆ ಏನ್ಲಾ ಒಳ್ಳೆ ಆಡೋ ಮಗಿಗೇಳ್ದಂಗೆ ಹೇಳ್ತಿದ್ದೀಯ ?.. ಯಾವಾನೋ ಎಲ್ಲೋ ಕೊರಿಯಾ ದೇಶ್ದಾಗಿದ್ದು ಇಲ್ಲೆಂಗ್ಲ ಬಾಂಬ್ ಹಾಕ್ತಾನೆ’’’…
ವಿಷ್ಯ ಅದಲ್ಲ ಕನ’’,,,ಮುಂದ್ಕೇಳ್ತೀನಿ ಆಮೇಕೆ ನಗು ಆಯ್ತ ?....
ಸರಿ ಹೇಳಪ್ಪ !!
ನೋಡು ಅವ್ನು ಸಣ್ಣವ್ನನಾದ್ರು ಅವ್ನತಾವ 68 ನ್ಯೂಕ್ಲಿಯಸ್ ಬಾಂಬ್ಗಳು ಅವಂತೆ’’,,‘’ಒಂದಾಕಿದ್ರೆ ಸಾಕಂತೆ ಒಂದ್ದೇಶನೆ ಫೀನಿಸ್ ಗೊತ್ತ’’ ?,,,,,
‘’’’ಓಓಒಓ ಸರಿ ಸರಿ ಇದೇನಾ ಆ ಟಿವಿ9 ನವ್ರು ನಿಂಗೇ ತೋರ್ಸಿದ್ದು’’’. ಅವ್ರುಗು ಮಾಡಾಕ ಬೇರೆ ಕೆಲ್ಸ ಇದ್ದಂತೆ ಕಾಣಿ’’’,,, ಇಂಗಾನ್ನ ಜನಕ್ಕೆ ಭಯ ಇಕ್ಸೋವ ಅಂತಾನೇನೋ ?’’… ಯಾವಾಗನ್ನ ನೋಡು ಪ್ರಳಯ... ಫಜೀತಿ... ‘’ಅದು, ಇದು, ಅಂಥ ಭಯ ಇಕ್ಸೋದೆ ಆಗೋಯ್ತು ಅವ್ರ್ ಜನ್ಮ ..’’!
‘’ಲೇ ಕೆಂಚ ಅಂಗೆಲ್ಲಾ ಹೇಳ್ಬೇಡ ಕನ್ಲ,, ಟಿ.ವಿ 9 ನವ್ರಗೆ ಏನಾರು ಅಂದ್ರೆ ನಾ ಸುಮ್ಕಿರಾಕಿಲ್ಲ ಅಟ್ಟೇಯಾ,,,,’’’ ಅವ್ರೇನು ಸುಳ್ಳೇಳ್ತಾರ ?’’’’…
‘’ಏನೋ ನಂಗೊತ್ತಿಲ್ಲಪ್ಪ’’ !!!
‘’ನೋಡ್ಲ ಅವ್ನು ಸರಿಲ್ವಂತೆ ಯಾವಾಗ್ ಬೇಕಾರು ನಮ್ ಮೇಲೆ ಬಾಂಬ್ ಎಸಿಬೊದಂತೆ ಅದ್ಕೆ ಊರ್ ಬಿಟ್ಟು ಹೋಗೋಣಂತಿದ್ದಿನಿ ಕೆಂಚ’’…
‘’ಅಲಾ ಗೂಬೆ ಗುಂಡ’’ ದೇಶನೆ ಸುಟ್ಟೋಗೋವಾಗ ನೀ ಮಾದಟ್ಟಿಯಿಂದ ಸೋಮನಾಪುರಗಂಟ ಹೋಗ್ಬಿಟ್ರೆ ಆಗ್ತಾದ... ಅಲ್ಲಾ ಮೊನ್ನೆ ಏನೋ ಪ್ರಳಯ ಅಗುತ್ತೆ ಅಂದಿಲ್ವ ಏನಾರು ಆಯ್ತ ಹೇಳು ? ಮುಂದ್ಕೇನು ಅಗುತ್ತೆ ಅಂತಾರಲ್ಲ ಅದೆಲ್ಲಾ ಆಗ್ಬಿಡುತ್ತಾ ಗುಂಡ ?.... ಆದ್ರೆ ಒಂದೇ ದಪ ಎಲ್ರು ಹೋಗೋಣ್ವಂತೆ ನಡಿಲಾ.. ಹೊಲ್ದಾಗ ಕುರಿಗ್ಲು ಏನಾದ್ವೋ ಏನೋ ?,,,, ಮೊನ್ನೆ ಒಂದ್ ಕುರಿನ ಮುದಿ ನರಿ ತಿಂದಾಕ್ಲಿಲ್ವ ವಿಷ್ಯ ನಿನ್ ಚೆನ್ನಿಗೆ ಗೊತ್ತಾದ್ರೆ ನಿನ್ನ ಸಿಗ್ದಾಕ್ತಾಳೆ ನಡಿಲಾ ಅಯ್ಯೋ ನಡೀಲಾ ಇನ್ ಯಾವ್ದನ್ನ ತಿಂದಾಕ್ಬಿಟ್ಟಾತು……Friday, February 10, 2012

ಕಡಲ ಕತ್ತಲೆಡೆಗೆ


ಆಡದೇ ಉಳಿದ ಮಾತು
ಚುಚ್ಚಿ ಕಾಡುವ ನೆನಪುಗಳು
ಮನದ ಮೂಲೆಯಲ್ಲಿ ಬರೆದಿಟ್ಟ
ಅವನದೇ ಚಿತ್ರ !
ನನ್ನ ಅಸಹಾಯಕ ಭಾವ ಕಂಡು
ಗಹ ಗಹಿಸಿ ನಗುತ್ತವೆ

ಮರುಭೂಮಿಯಂತ ಮನದಲ್ಲಿ
ಮಲ್ಲಗೆಯ ಗಿಡನೆಟ್ಟು
ಕಣ್ಣೀರು ಸುರಿದೆ
ಹಗಲು ರಾತ್ರಿಗಳ ಕಾದೆ
ಚಿಗುರು ಮೂಡಲಿಲ್ಲ
ಮೊಗ್ಗು ಅರಳಲಿಲ್ಲ

ನನ್ನ ಆಸೆಗಳನ್ನು !
ಕಲ್ಲು ಹೃದಯದ ಮೇಲೆ ಬರೆದೆ
ಅವು ಅಕ್ಷರಗಳಾಗಲಿಲ್ಲ
ನನ್ನ ನೀರಿಕ್ಷಗಳಿಗೆ ಬಲ ಬರಲಿಲ್ಲ
ಮೌನವಾದ ಮನವು ಸುಮ್ಮನಿರಲಿಲ್ಲ

ನನ್ನ ಬಾಳಿಗೆ
ಮತ್ತೊಬ್ಬ ಸೂರ್ಯನ ಅವಶ್ಯವಿಲ್ಲ
ಬಯಕೆಗಳ ಬೇಗುದಿಯಲ್ಲಿ
ಬಳಲಿ ಬಾಡುವ ಮುನ್ನ
ಆ ಕಾರ್ಗತ್ತಲ ಕಡಲಲ್ಲಿ
ಮುಳುಗಿಬಿಡಬೇಕು.

ಕವನ ನಿರಾಶಭಾವದಿಂದ ಕೂಡಿದೆ  ಆಶಭಾವನೆಯೊಂದಿಗೆ ಮುಕ್ತಾಯಗೊಳಿಸಬಹುದಿತ್ತು ಆದರೆ ಸಾಧ್ಯವಾಗಲಿಲ್ಲ..

Thursday, February 9, 2012

ಆ ನೋವ ಹಾದಿಯಲ್ಲಿ

ಆ ನೋವ ಹಾದಿಯಲ್ಲಿ
ಕಣ್ಣೀರಿನ ಕಲ್ಲುಗಳಿವೆ
ವಜ್ರದಂತಯೇ ಹೊಳಪು
 
ಬೇಡವೆನ್ನುತ್ತಿದೆ ಮನಸ್ಸು

ನೆನಪುಗಳ ಹರಡಿ

ಬರವಸೆಯ ಕೋಲಿನಿಂದ
ಮೆದುವಾಗಿ ಬಡಿದು
ಆಸೆಗಳಿಗೆ ಮದ್ದರೆಯುತ್ತೇನೆ

ನೋವು ಮಾಯಲಿಲ್ಲ

ಮನಸ್ಸು ಮಾಗಲಿಲ್ಲ
ಕಾಲಮಾನದ ಕಡುಗತ್ತಲು
ಯಾವ ಸತ್ಯವನು ನುಡಿಯಲ್ಲಿಲ್ಲ

ಏಕಾಂತದ ಬಯಲಲ್ಲಿ

ಅವ್ಯಕ್ತ ಭಾವವೊಂದು
ಮೌನರಾಗವ ಹಾಡುತ್ತದೆ
ತನ್ನ ತಾನೇ ಸಂತೈಸಿಕೊಳ್ಳುತ್ತದೆ

ಹಿತ್ತಲಲ್ಲಿನ ಬಳ್ಳಿಯೊಂದು

ಬಚ್ಚಿಟ್ಟ ಹಸಿವಿಗೊಂದಷ್ಟು
ತಂಪನೆಯ ನೆರಳನೆರೆಯುತ್ತದೆ

ನೊಂದ ಮನಕೊಂದಷ್ಟು ಸಾಂತ್ವಾನಿಸುತ್ತೆ..

ಕಾಲಮಾನ....


ಭವದ ಬಯಲಲ್ಲಿ
ಸಾವಿನ ಕರಿನೆರಳು
ಸೂರ್ಯನಿಲ್ಲದ ಹಗಲು
ಕತ್ತು ಬಿಗಿದಿದೆ ಮುಗಿಲು

ಸೋಲಿನ ಸುಳಿಯಲ್ಲಿ
ಸಿಕ್ಕಿ ಸೊರಗಿದೆ ಮನ
ಋತು-ಮಾನದ ಬೇಗೆಯನು
ಕಳಚಿಕೊಳ್ಳುವ ಋಣ

ಕಿತ್ತು ತಿನ್ನಲು ಕಾದ
ರಣ-ಹದ್ದಿನ ಧ್ಯಾನ
ಎಣಿಸುತ್ತಿದೆ ಕಾಲಮಾನ
ಸಾವ ಸಮೀಪದ - ಕ್ಷಣ

ಭವದ ಬಯಲೊಳಗೆ
ಬದುಕು ಎಲ್ಲರಿಗೂ ಒಂದೆ
ಮೇಲು ಕೀಳಿನ ನಡುವೆ
ಸಣ್ಣದೊಂದು ಬಿರುಕಂತೆ

ಯಾರು ಏನೆಂದರೂ
ಕುರುಡಾಗದಿರಲಿ ಮನಸ್ಸು
ಮತ್ತೊಂದು ಸಾವಿಗಾಗಿ
ಹೊಂಚು-ಹಾಕಿದಿರಲಿ ಸಮಯ

Wednesday, February 8, 2012

ಹೊಳೆವ ಮುತ್ತಿನ ಹರಳು


ಹೆಪ್ಪುಗಟ್ಟಿದ-ಮಾತು
ದೇಹ ಸುಡುವ-ಬೆಂಕಿ
ಮನಸ್ಸು ಮಾಗಿದ ಸಮಯ
ಅಸ್ಪಷ್ಟ ಆಕೃತಿಗಳ ಮಿಲನ

ಬೆರಗುಗಣ್ಣಿನ-ನೋಟ
ಕದಲಾಡುವ ಹಣತೆ
ಮೌನವ ಬೆನ್ನಟ್ಟಿದ ಉಸಿರು
ಮನಸ್ಸು ಕಾಮನ-ಬಿಲ್ಲು

ಕವಲೊಡೆವ ಆಸೆಗಳು
ನಿಚ್ಚಳದ ಭಾವ
ನೆಲದ ಎದೆಯೊಳಗೆ
ಹೆಡೆ-ಬಿಚ್ಚಿದ ಬೀಜ

ಹೂ ಅರಳುವ-ಗಳಿಗೆ
ತಂಗಾಳಿಯ ಸ್ವರ್ಷ
ಕತ್ತಲ ಕರಿಮಣಿಯೊಳಗೆ
ಹೊಳೆವ ಮುತ್ತಿನ ಹರಳು

Monday, February 6, 2012

ಮತ್ತದೇ ಬೇಸರ


ಮತ್ತದೇ ಬೇಸರ
ಅಸ್ವಷ್ಟ ಕನಸ್ಸುಗಳು
ಲಯ ತಪ್ಪಿವ ಮಾತು
ಒದ್ದೆಯಾದ ರೆಪ್ಪೆಗಳು
ಮೌನವನ್ನು ಬೆನ್ನಟ್ಟಿ ಕಾಡುವ
ಅವಳ ನೆನಪು

ಮುಚ್ಚಿದ ಕಿವಿಯಲ್ಲಿ
ನಿಲ್ಲದ ಗೆಜ್ಜೆಯ-ನಾದ
ಅಡ್ಡಗಟ್ಟುವ ನೆರಳು
ಇಷ್ಟಾದರೂ ಬೇಸರಗೊಳ್ಳದ ಮನ
ಕೊಂಚ ಕೊಂಚವೇ 
ಕತ್ತು ಕೊಯ್ಯುವ ಸಮಯ

ಹೆಜ್ಜೆ ಹೆಜ್ಜೆಗೂ ಪ್ರಶ್ನೆ
ನೆನ್ನೆ ನಾಳೆಗಳ ಯೋಚನೆ
ಮೌನವಾದ ಮನಸ್ಸು
ಬೇಡವೆಂದರೂ 
ಕದ ಬಡಿಯುವ ನೆನಪಿನ ಮೇಳಕ್ಕೆ
ಉತ್ತರಗಳದ್ದೇ ಚಿಂತೆ

ಮುಖವಿರದ ಚಿತ್ರಗಳು
ಮುರಿದುಬಿದ್ದ ಮಾತುಗಳು
ನೇಣು ಬಿಗಿದುಕೊಂಡ ನಂಬಿಕೆಗಳು
ಎಣ್ಣೆಯಿಲ್ಲದೆ ಉರಿಯುವ ಅಣತೆ
ಬದಲಾವಣೆಗಳಿಲ್ಲದ ಕೋಣೆ
ಮತ್ತದೇ ಪ್ರಶ್ನೆ ಮತ್ತದೇ ಬೇಸರ !,

Sunday, February 5, 2012

ಆ ನೆಲದೆಡೆಗೆ


ಹೆಜ್ಜೆ ಊರದ ನೆಲದಲ್ಲಿ
ಮೌನ-ರಾಗದ ಗಾನ
ಬುದ್ಧನ ಧ್ಯಾನ
ಶಾಂತಚಿತ್ತ ಮನಸ್ಸುಗಳ
ಸುಮಧುರ ಪಾರಾಯಣ

ನೋವಿಲ್ಲ ನಲಿವಿಲ್ಲ
ಸುಖವಿಲ್ಲ ದುಃಖವಿಲ್ಲ
ಮೋಸ ವಂಚನೆಗಿದು ಜಾಗವೇ ಅಲ್ಲ
ಸದಾ ಬುದ್ದಂ ಶರಣಂ ಗಚ್ಛಾಮಿ
ಸಂಘಂ ಶರಣಂ ಗಚ್ಚಾಮಿ

ಆ ನೆಲದ ಮಹಿಮೆಯೇ ಹಾಗೆ
ನಯನ ಮನೋಹರ
ಸಿಹಿನೀರ ಸಾಗರ
ಮೇಲು ಕೀಳುಗಳರಿಯದ
ಸುಂದರ ಸರೋವರ

ಈ ಭವ್ಯ ಜಗದಲ್ಲಿ
ನೆಮ್ಮದಿಯ ಮಾತೆಲ್ಲಿ
ಒಡೆದು ಹೋಳಾದ ಮನಸ್ಸುಗಳು
ಕಡಿದು ಚೂರಾದ ದೇಹಗಳು
ನಿತ್ಯವೂ ಶಾಂತಿಗೆ ಭಂಗ
ತನ್ನಿಷ್ಟದಂತೆ-ತಾನಾಡುವ ನಾಟಕರಂಗ

ಶಪಿಸುತ್ತೇನೆ
ಈ ಜಗದ ವರ್ತನೆಗಳನ್ನು
ಇಲ್ಲಿನ ಬವಣೆಗಳನ್ನು
ನೀಚ ಕಠೋರ ಹೃದಯಗಳನ್ನು
ಕಣ್ಣು ಕಾಣದ ಮನಸ್ಸುಗಳನ್ನು

ಸಾಧ್ಯವಾದರೆ
ಆ ಶಾಂತ ನೆಲದಲ್ಲಿ 
ಹೆಜ್ಜೆಯಿಡುತ್ತೇನೆ
ಸದಾ ಧ್ಯಾನದಲ್ಲಿ ಮುಳುಗಿ
ಈ ಜಗವ ಮರೆಯುತ್ತೇನೆ.

Saturday, February 4, 2012

ಅವಳು....


ಅವಳ ಹಾದಿಯಲ್ಲಿ
ಹೂವಾಗುತ್ತೇನೆ
ತನ್ನತ್ತ ದೃಷ್ಟಿ-ಹರಿಸಬಹುದೆಂದು

ಅವಳ ದಿಕ್ಕಲಿ
ಕಾಮನ ಬಿಲ್ಲಾಗುತ್ತೇನೆ
ನನ್ನ ಇಷ್ಟಪಡಬಹುದೆಂದು

ಅವಳ ರಾತ್ರಿಯಲ್ಲಿ
ಬೆಳದಿಂಗಳಾಗುತ್ತೇನೆ
ತನ್ನ ಅಂದವ ಬಣ್ಣಿಸಬಹುದೆಂದು

ಅವಳ ಕನಸಲ್ಲಿ
ಕವಲೊಡೆಯುತ್ತೇನೆ
ನನ್ನ ಭಾವನೆ ಅರ್ಥವಾಗಲೆಂದು

ಅವಳ ನೋವಿಗೆ
ಮದ್ದಾಗುತ್ತೇನೆ
ನನ್ನ ಕೂಡಿ ನಲಿಯಬಹುದೆಂದು

ಅವಳ ಮೌನದಲ್ಲಿ
ಜೊತೆಯಾಗುತ್ತೇನೆ
ನನ್ನೊಂದಿಗೆ ಹೆಜ್ಜೆಯಿಡಬಹುದೆಂದು

Friday, February 3, 2012

ಚಿಗುರು ಒಡೆದರೇ ಸಾಕು !


ಹೊತ್ತಲ್ಲದ ಹೊತ್ತಲ್ಲಿ ಒತ್ತರಿಸಿ
ಬರುವ ಕಷ್ಟಗಳು
ಅವುಗಳೊಂದಿಗೆ ಚಿಂತೆಗಳ ಸಮಾಗಮ
ಬದುಕು ಬವಣೆಯೋ ಇಲ್ಲ ಬಂಡಿಯೋ ?
ಎಂಬ ಪ್ರಶ್ನೆಗೆ ಇವುಗಳಿಂದ
ಯಾವುದೇ ಉತ್ತರವಿಲ್ಲ !

ನನ್ನ ಬದುಕು ನಿಂತ ನೀರಂತೆ
ಬವಣೆಗಳು ಬಳ್ಳಿಯಂತೆ ತಬ್ಬಿನಿಂತಿವೆ
ನಿತ್ರಾಣವಾದ ಮನಸ್ಸು
ಇರುಳಾದಂತೆ ಮೌನದಾ ತೆವಳು
ಏಕೋ ಏನೋ ನನ್ನೊಳಗೆ ನಾನಿಲ್ಲ !

ಊರ ತುಂಬೆಲ್ಲ ಆಡಿ ನಲಿಯುವ ನಗು
ಬೆಚ್ಚನೆಯ ಸವಿಮಾತುಗಳ ಸಮವೇಶ
ಮುದನೀಡುವ ಹಣತೆಗಳ ಬೆಳಕು
ಮುರಿದ ಮನಸ್ಸುಗಳೂ ಸಹ
ಕುಣಿದಾಡಿದಂತ ಸೊಗಸು

ನಾನೂ ಸಹ ನೆಮ್ಮದಿಯ ನೆಟ್ಟು
ಸಾವದಾನದ ನೀರು ಸುರಿಯಬೇಕಿದೆ !
ದೊಗಲಾದ ಗುಡಿಸಲ ತುಂಬಾ
ಗೆಲುವಿನ ಪಸಲಬ್ಬಿಸಬೇಕಿದೆ !
ಬೆಳದಿಂಗಳ ಜೊತೆ ಕುಣಿದು ನಲಿಯಬೇಕಿದೆ
ಚಿಗುರು ಒಡೆದರೇ ಸಾಕು !…

Thursday, February 2, 2012

ಒಡೆದು ಆಳುವ ನೀತಿಗೆ ಜಾಗವಿರಬಾರದಲ್ಲವೇ ?

ನಾನು ಒಂಟಿಯಾಗಿದ್ದಾಗ
ನೆಮ್ಮದಿಯು ನೆರಳಾಗಿತ್ತು
ಕನಸ್ಸು ಕಾಮನಬಿಲ್ಲಿನಂತಿತ್ತು
ಮನಸ್ಸು ಕೋಮಲವಾಗಿತ್ತು
ಬಯಕೆಗಳಿಗೆ ಬಣ್ಣ ಬಳಿದಿತ್ತು

ಆದರೆ ಅವಳು ಬಂದ ಕ್ಷಣವೇ
ಮೊದಲನೇ ಪ್ರಶ್ನೆ
ಪ್ರಿಯಾ ನೀನು ನನಗಾಗಿ ಏನ ತರುವೆ ?
ನಾನು ನೀನು ನೆಮ್ಮದಿಯಿಂದಿರಲು
ಒಂದು ಬಂಗಲೆಯಾದರೂ ಬೇಕಲ್ಲವೆ ?
ನನಗೆ ನಡೆದಾಡಲು ಕಷ್ಟವಾಗುತ್ತದೆ
ಒಂದು ಸಣ್ಣ ನ್ಯಾನೋ
ಕಾರನ್ನಾದರೂ ತರಬಹುದಲ್ಲ ?

ನನ್ನ ಕಿವಿಗೆ ವಜ್ರಖಚಿತ ಒಲೆಯಾದರೆ ಸಾಕು
ಕೊರಳಿಗೊಂದು ಕಂಟಿಹಾರವಿದ್ದಲ್ಲಿ
ನಿನ್ನ ಘನತೆಗೆ ಕುಂದು ಬಾರದಲ್ಲ ?
ನನ್ನ ಜೊತೆ ಬರುವವ ನೀ  ಒಬ್ಬನೇ ಬಾ !
ನಾವಿಬ್ಬರೇ ಪ್ರಣಯ ಲೋಕದಲ್ಲಿ
ತೇಲುತ್ತ ಸಾಗೋಣವೆಂದಾಗ !

ಪ್ರೀತಿಯನ್ನು ತಕ್ಕಡಿಯಲ್ಲಿಟ್ಟು ತೂಗಿದಂತಿತ್ತು
ಇನ್ನೆಲ್ಲಿಯ ನೆಮ್ಮದಿ
ಇನ್ನೆಲ್ಲಿಯ ಕನಸು
ಇನ್ನೆಲ್ಲಿಯ ಬಯಕೆಗಳ ಚಿತ್ತಾರ
ಒಗ್ಗೂಡಿದ ಮನೆಯಲ್ಲಿ
ಒಡೆದು ಹಾಳುವ ನೀತಿಗೆ ಜಾಗವಿರಬಾರದಲ್ಲವೇ ?