Saturday, March 31, 2012

ಬಾಳ ಹೆಜ್ಜೆಗಳನ್ನು ಮುಂದಿಡುವ ಮುನ್ನ

ಮೋಹ ಎಂಬ ಪಾಶದಲ್ಲಿ ಸಿಕ್ಕಿ
ನಲುಗುತ್ತಿದೆ ಜಗವು
ಆಸೆಗಳ ಬೆನ್ನುಹತ್ತಿ ಮರಗುತ್ತಿದೆ ಮನವು
ಯಾರೋ ಬರೆದಿಟ್ಟ ಅಕ್ಷರಗಳಿಗೆ
ಮತ್ಯಾರೋ ಮುನ್ನುಡಿ ಬರೆದು ಮುಗಿಸುತ್ತಾರೆ
ಆಂತರ್ಯದ ಅರ್ಥವನ್ನೇ ಅರಿಯದೆ  
ಎಡವಿಬೀಳುತ್ತಾರೆ

ಪ್ರೀತಿಯೆಂಬುದು ಸೆಳೆತವೇ!
ಹಾಗಂತ ಎಲ್ಲಾ ಹಿತಾಸಕ್ತಿಗಳನ್ನು ಬಲಿಕೊಟ್ಟು
ತಿಳಿಸದೇ ಮುನ್ನಡೆವುದು ಸಮಸ್ಯಗಳನ್ನು 
ಮೈಮೇಲೆ ಎಳೆದುಕೊಂಡಂತೆ
ಒಮ್ಮೆ ಕುಲದ ನೆರಳುಗಳು ಅಡ್ಡಗಟ್ಟಿದರೆ
ಅದರ ಹಿಂದೆಯೇ ಸಾವಿನ ಹೆಜ್ಜೆಗಳು 
ಹಿಂಬಾಲಿಸುತ್ತವೆ
ಒಪ್ಪು ತಪ್ಪುಗಳ ಅರ್ಥವನ್ನು ತಿಳಿಯುವ ಮುನ್ನವೇ
ಯಾವುದೋ ಸಂಗರ್ಷಕ್ಕೋ ಸಮಾಪ್ತಿಗೋ
ದಾರಿಯಾಗುವುದು ಒಳಿತಲ್ಲ

ಪ್ರೀತಿಯೆಂಬುದು ಪಾವಿತ್ರ್ಯವೇ
ಅದನ್ನು ಪರಿಪೂರ್ಣವಾಗಿ ಅರ್ಥೈಕೊಳ್ಳಬೇಕು
ಸಾವು ನೋವಿನ ಮಧ್ಯದ
ಅಂತರವನ್ನು ಅರಿತುಕೊಳ್ಳಬೇಕು
ಬಯಕೆಗಳ ಬಳ್ಳಿಯಲ್ಲಿ ಅರಳಿದ ಹೂಗಳು
ಎಂದೂ ಬಾಡದ ಹಾಗೇ ಎಚ್ಚರವಹಿಸಬೇಕು
ಭಯದ ಬವಣೆಯಲ್ಲಿ ಸಿಕ್ಕಿ ತತ್ತರಿಸುದ್ಯಾಕೆ
ಪರಿಸ್ಥಿತಿಯ ಅಗಾಧತೆಯನ್ನೊಮ್ಮೆ
ಅವಲೋಕಿಸಬಹುದಲ್ಲವೆ?

ಎಲ್ಲ ಗೆರೆಗಳೂ ನೇರವಾದವುಗಳಲ್ಲ
ಎಲ್ಲ ಅಕ್ಷರಳು ಕವನವಾಗುವುದಿಲ್ಲ
ಅರಿವಿನಾ ಕಿಡಿಗೆ ಬೆಂಕಿಯನ್ನಚ್ಚುವ ಮುನ್ನ
ಅದರ ಕಿಡಿ ಎಲ್ಲವನ್ನೂ ಧಹಿಸದ ಹಾಗೇ
ತನಗೂ ಆಪತ್ತು ಸಂಭವಿಸದಂತೆ
ಬಾಳಿನ ಹೆಜ್ಜೆಗಳನ್ನು ಮುಂದಿಡಬೇಕಲ್ಲವೇ ?..

Sunday, March 25, 2012

ಯಾರು ಕರೆದರೋ ಅವನನ್ನು


ಯಾರು ಕರೆದರೋ ಅವನನ್ನು
ನನ್ನ ಜೊತೆಗಾರನೆಂದು?
ಗುಳಿಬಿದ್ದ ಆವನ ಕಣ್ಣಗಳು
ಸುಕ್ಕುಗಟ್ಟಿದ ಮುಖ
ಪ್ರಪಂಚದ ಚಿಂತೆಯನ್ನೆಲ್ಲಾ
ತಲೆಯಮೇಲೆ ಹೊತ್ತು
ನಡೆವಂತ ಅವನ ಮೌನವನ್ನು

ಅವನನ್ನು ಯಾರೂ
ಜೊತೆಯಾಗಲು ಬಯಸುತ್ತಿರಲಿಲ್ಲ
ಅವನ ದೀನ ಸ್ಥಿತಿ
ಅವ್ಯಕ್ತ ಭಾವ
ಪೇಲವಗೊಂಡ ಮುಖ
ಜನರಿಂದ ದೂರವೇ ಇಟ್ಟಿದ್ದರು?
ನನಗೆ ಜೊತೆಗಾರನಾಗಿದ್ದ

ಅವನಲ್ಲೂ ಗರಿಗೆದರುವ ಆಸೆಗಳಿತ್ತು
ಕನಸು ಕಾಣುವ ಕಣ್ಣುಗಳಿತ್ತು
ನಿಂತ ನೆಲದಲ್ಲೇ
ಚಿಗುರುಮೂಡಿಸುವ ಛಲವಿತ್ತು
ಏನಿದ್ದರೂ ಅವನು ಮೂಕನಂತಿದ್ದ

ಅವನ ಬದುಕಲ್ಲಿ ವಿಷಾದವಿತ್ತು
ಬಿಡಿಸಲಾಗದ ವ್ಯಥೆಯಿತ್ತು
ಒಂಟಿತನದ ಭಾವವಿತ್ತು
ನಿಶ್ಚಲದ ಛಾಯೆಯಿತ್ತು

ಆದರೂ 
ಅವನಲ್ಲಿ ಸೂರ್ಯಕಾಂತಿಯಂತೆ 
ಅರಳುವ ನಗುವಿತ್ತು
ನನ್ನ ಬೆನ್ನುತಟ್ಟುವ ಮಾತುಗಳು
ಅವನಿಗೆ ಸ್ವಲ್ಪವೂ ಹಿಡಿಸುತ್ತಿರಲಿಲ್ಲ

ಏಕೋ ಏನೋ !
ಅವನ ನೆನಪುಗಳು
ಮತ್ತೆ ಮತ್ತೆ ಜೊತೆಯಾಗುತ್ತವೆ
ಒಟ್ಟಿಗೆ ಕೂಡಿ ನಡೆಯುತ್ತವೆ

ಒಂಟಿಯಾಗಿದ್ದಾಗ
ಚಿತ್ರಬರೆಯಲು ಕುಳಿತಾಗ
ಕವನ ಕಟ್ಟಲು ಯೋಚಿಸುವಾಗ
ಒಬ್ಬಳೆ ದಾರಿಯಲ್ಲಿ ನಡೆವಾಗ
ಎಲ್ಲವೂ ಮರುಕಳಿಸುತ್ತದೆ
ಯಾರು ಕರೆದರೋ ಅವನನ್ನು
ನನ್ನ ಜೊತೆಗಾರನೆಂದು?

Wednesday, March 21, 2012

ವರುಷಕೊಂದು ಹೊಸತು ಜನ್ಮ


   ನೂತನ ವರ್ಷಾರಂಭದ ನವೋಲ್ಲಾಸದೊಂದಿಗೆ ಚೈತ್ರಮಾಸದ ಶುಕ್ಲಪಕ್ಷದಂದು ಮತ್ತೆ ಪಾದರ್ಪಣೆ ಮಾಡುತ್ತಿದೆ ಯುಗಾದಿ ಹಬ್ಬ. ಯುಗ-ಆದಿ ಎಂದೇ ಬಿಂಬಿಸುವ ಯುಗಾದಿಯು ಹಿಂದುಗಳ ಸಂಪ್ರದಾಯದಂತೆ ಪ್ರತಿ ವರ್ಷವೂ ಹೊಸ ಉದಯಕ್ಕೆ ಮುನ್ನುಡಿ ಬರೆಯುತ್ತದೆ. ಎಲ್ಲೆಡೆ ಹೊಸ ಚಿಗುರಿನಿಂದ ಕಂಗೊಳಿಸುವ ಮರಗಳು. ಚಿತ್ತಾಕರ್ಷದೊಂದಿಗೆ ಅರಳಿನಿಂತ ಹೂಗಳು ಮನತುಂಬಿ ಕೂಗುವ ಕೋಗಿಲೆಗಳು ವಯ್ಯಾರದಿಂದ ಮುತ್ತಿಕ್ಕುವ ಚಿಟ್ಟೆಗಳು ಎಂತಹವರನ್ನೂ ಆಕರ್ಷಿಸದೆ ಇರಲಾರವು. ಈ ಹಬ್ಬದಲ್ಲಿ ಅತಿ ಪ್ರಮುಕವಾದದ್ದು ಬೇವು-ಬೆಲ್ಲವನ್ನು ತಿನ್ನುವುದು. ಇದು ಮನುಷ್ಯನ ಸುಖ-ದುಃಖಗಳ ಸಂಕೇತವನ್ನು ಸೂಚಿಸುತ್ತದೆ. ಈ ಬೇವು-ಬೆಲ್ಲದ ಸಿಹಿ-ಕಹಿಯನ್ನು ಎಲ್ಲರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹೋಗಬೇಕೆನ್ನುವುದು ಹಿರಿಯರ ಅಂಬೋಣ.
    ಯುಗಾದಿಯಂದು ಎಲ್ಲೆಡೆ ಸಂಭ್ರಮದ ವಾತಾವರಣವಿರುತ್ತದೆ. ಪ್ರತಿ ಮನೆಯಲ್ಲೂ ಒಬ್ಬಟ್ಟು,ಹೋಳಿಗೆ ವಿಧ ವಿಧವಾದ ಖಾಧ್ಯಗಳನ್ನು ತಯಾರುಮಾಡುತ್ತಾರೆ. ಹೊಸ ಬಟ್ಟೆ ಧರಿಸಿ ದೇವರಿಗೆ ಕೈಮುಗಿದು ಹಿರಿಯರು ಚಿಣ್ಣರು ಸಂಭ್ರಮದಿಂದ ಕಳೆಯುತ್ತಾರೆ. ಬೇವು-ಬೆಲ್ಲವನ್ನು ದೇವರ ಮುಂದಿಟ್ಟು ಪೂಜೆ ಮುಗಿದ ಬಳಿಕ ನೈವೇಧ್ಯದಂತೆ ಎಲ್ಲರೂ ಸ್ವೀಕರಿಸುತ್ತಾರೆ. ಈ ಹಬ್ಬದ ಸಾಂಪ್ರದಾಯಿಕ ಆಚರಣೆಗಳಲ್ಲಿ ಕೆಲವು ಪ್ರಮುಖವಾದವುಗಳೆಂದರೆ ಸೂರ್ಯ ನಮಸ್ಕಾರ, ಪಂಚಾಂಗ ಪೂಜೆ, ಹಾಗೂ ಬೇವು-ಬೆಲ್ಲವನ್ನು ವಿಶ್ರಣಮಾಡಿ ಹಿರಿಯ ಕಿರಿಯರೆನ್ನದೆ ಎಲ್ಲರೂ ತಿನ್ನುವುದು. ಬೇವು ಕಷ್ಟದ ಸಂಕೇತವಾದರೆ ಬೆಲ್ಲ ಸುಖದ ಸಂಕೇತ ಇವೆರಡನ್ನೂ ಒಟ್ಟಿಗೆ ಪಡೆದು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
    ಹಳ್ಳಿಗಳಲ್ಲಿ ಈ ಹಬ್ಬವನ್ನು ತುಂಬ ವಿಶಿಷ್ಟವಾಗಿ ಆಚರಿಸುತ್ತಾರೆ.ಎತ್ತಿನ ಬಂಡಿಗಳಿಗೆ ಪೂಜಿಸುತ್ತಾರೆ. ಬೇವು ಮತ್ತು ಮಾವು ಎಲೆಗಳನ್ನು ಕೊಯ್ಡುತಂದು ಎಲ್ಲರ ಮನೆಗಳಿಗೂ ತೋರಣವಾಗಿ ಕಟ್ಟುತ್ತಾರೆ. ಮತ್ತು ಸುಣ್ಣ ಬಣ್ಣ ಬಳಿಸು ಶೃಂಗರಿಸುತ್ತಾರೆ. ಹಳ್ಳಿಯ ಪ್ರತಿ ದೇವರ ಗುಡಿಯಲ್ಲೂ ಭಯ ಭಕ್ತಿಯಿಂದ ಪೂಜೆಗಳನ್ನು ನೆರವೇರಿಸುತ್ತಾರೆ. ಎತ್ತುಗಳನ್ನು ತೊಳೆದು ಬಣ್ಣ ಅಚ್ಚಿ ಯುಗಾದಿಯನ್ನು ಸ್ವಾಗತಿಸುವುದು ಒಂದು ವಿಶಿಷ್ಟ ಸಂಪ್ರದಾಯ. ಹಳೆಯದನ್ನು ಅಳಿಸುತ್ತ ಹೊಸ ವಿಕಾಸದ ಆಶಯದೊಂದಿಗೆ ಹೊಸತನ್ನು ಆಹ್ವಾನಿಸುವುದು ಸಡಗರ ಸಂಭ್ರಮದ ವಿಷಯ.
   ಪುರಾಣಗಳ ಪ್ರಕಾರ ಯುಗಾದಿಯ ದಿನದಂದು ಅಂದರೆ ಚೈತ್ರ ಶುದ್ಧ ದಿನದಂದು ಈ ಲೋಕ ಪ್ರಾರಂಭವಾಯಿತಂತೆ. ಹಿಂದು ಜನಾಂಗಕ್ಕೆ ಯುಗಾದಿ ದಿನದಂದು ಹೊಸವರ್ಷ ಪ್ರಾರಂಭವಾಗುತ್ತದೆ. ಹಿಂದು ದಿನದರ್ಶಿ ಸಹ ಈ ದಿನದಿಂದಲೇ ಶುರುವಾಗುತ್ತದೆ. ಯುಗ ಎಂದರೆ ಅದೊಂದು ಕಾಲಗಣನೆ. ತ್ರೇತಾಯುಗ ದ್ವಾಪರಯುಗ ಕಲಿಯುಗ ಇಲ್ಲಿ ಯುಗವೆಂದರೆ ಸೂಮಾರು 5000ಕ್ಕೂ ಹೆಚ್ಚಿನ ವರ್ಷಗಳಂತೆ. ವಸಂತ ಋತುವಿನಿಂದ ಪ್ರಾರಂಭಗೊಂಡು ಕಾಲಗಣನೆ ಶಿಶಿರದಲ್ಲಿ ಮುಕ್ತಾಯಗೊಂಡು ಮತ್ತೆ ವಸಂತ ಪ್ರಾರಂಭವಾಗುವುದರ ಸೂಚಕ. ಇಂತಹ ಯುಗದ ಅಂದರೆ ವರ್ಷದ ಮೊದಲ ದಿನವನ್ನು ಯುಗಾದಿ ಎಂದು ಗುರ್ತಿಸಿ ಹಬ್ಬವನ್ನಾಗಿ ಆಚರಿಸುತ್ತಾರೆ.
    ಚಂದ್ರಮಾನ ಪಂಚಾಂಗ ರೀತ್ಯಾ ಚೈತ್ರ ಮಾಸದ ಶಯದ್ಧ ಪಾಡ್ಯದ ಶುಭದಿನದಂದು ಬ್ರಹ್ಮ ಈ ಲೋಕವನ್ನು ಸೃಷ್ಟಿಸಿದ ಎಂಬ ಪ್ರತೀತಿ ಇದೆ. ಇಂದೇ ಸೂರ್ಯನು ತನ್ನ ಮೊದಲ ಕಿರಣವನ್ನು ಭೂಮಿ ಮೇಲೆ ಹರಿಸಿದ ಎಂಬ ಮಾತೂ ಇದೆ. ಇಂದಿನಿಂದ ಚೈತ್ರಮಾಸ ಪ್ರಾರಂಭವಾಗಿ ತರು ಲತೆಗಳು ಉದುರಿ ಗಿಡ ಮರಗಳು ಮತ್ತೆ ಹೊಸ ಚೈತನ್ಯ ಪಡೆಯುತ್ತವೆ. ಜೀವನದಲ್ಲಿ ಒಂದು ವರುಷದಲ್ಲಿ ಕಂಡ ಸುಖ ದುಃಖಗಳನ್ನು ಮರೆತು ಹೊಸ ಬಾಳನ್ನು ಪುಸ್ತಕದ ಹೊಸ ಪುಡದಂತೆ ಪ್ರಾರಂಭಿಸುವ ಈ ದಿನವನ್ನು ಹಬ್ಬವನ್ನಾದಿ ಆಚರಿಸುತ್ತಾರೆ.
   ಯುಗಾದಿ ದಿನದಂದು ಬೇವು-ಬೆಲ್ಲವನ್ನು ಸೇವನೆ ಮಾಡುವುದು ವೈಜ್ಞಾನಿಕ ದೃಷ್ಟಿಯಿಂದ ಒಳ್ಳೆಯದೆನ್ನುತ್ತಾರೆ. ಅಂದರೆ ಬೇಸಿಗೆಯಲ್ಲಿ ಬರುವ ಚರ್ಮರೋಗಗಳಿಗೆ ಈ ವೇವು ಬೆಲ್ಲ ಸಿದ್ದೌಷದಂತೆ ಕೆಲಸಮಾಡುತ್ತದೆ. ಬೇವು ತುಂಬಾ ಕಹಿಯಾಗಿದ್ದು ಬೆಲ್ಲ ಆ ಕಹಿಯನ್ನು ಮರೆಮಾಚುತ್ತದೆ. ಯುಗದಿಯಂದು ಪಂಚಾಗ ಶ್ರವಣ, ಪಂಚಾಂಗ ಪೂಜೆ, ಸಂವತ್ಸರದ ಫಲಾಫಲ, ಆದಾಯ ವ್ಯಯ, ಮಳೆ ಬೆಳೆ ಮುಂದಾದವುಗಳನ್ನು ವಿಮರ್ಷೆಮಾಡಲಾಗುತ್ತದೆ. ಪಂಚಾಂಗಕ್ಕೆ ಹೆಚ್ಚಿನ ಮಹತ್ವಕೊಟ್ಟು ಅದರಲ್ಲಿನ ಫಲಾಫಲ ತಿಳಿಯುವ ವಾಡಿಕೆಯು ಬಹಳ ಹಿಂದಿನ ಕಾಲದಿಂದಲು ಸಾಗುತ್ತ ಬಂದಿದೆ.
    ವರ ಕವಿ ಬೇಂದ್ರೆಯವರು ಯುಗಾದಿಯ ಮಹತ್ವ ಮತ್ತು ಉದ್ದೇಶವನ್ನು ಬಹಳ ಸುಂದರವಾಗಿ ತಮ್ಮ ಕವನದ ಮೂಲಕ ನಿರೂಪಿಸಿದ್ದಾರೆ. ಯುಗಾದಿಯು ಯುಗ ಯುಗಗಳಿಂದ ತನ್ನ ಹೆಜ್ಜೆಗಳನ್ನು ಬದಲಿಸುತ್ತಿರುವ ದಾಟಿಯನ್ನು “ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ” ಎಂದು ಅಸ್ವಾದಿಸುತ್ತ ಬರೆದಿರುವ ಈ ಸಾಲುಗಳು ಗತ ಕಾಲದ ವೈಬವಕ್ಕೆ ಸಾಕ್ಷಿಕೊಟ್ಟಂತೆ ಇವೆ. ನೀವು ಒಮ್ಮೆ ಮೆಲುಕುಹಾಕಿ.

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ

ಹೊಂಗೆ ಹೂವ ತೊಂಗಲಲ್ಲಿ
ಭೃಂಗದ ಸಂಗೀತ ಕೇಲಿ
ಮತ್ತೆ ಕೇಳಬರುತಿದೆ
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ

ಕಮ್ಮನೆ ಬಾಣಕ್ಕೆ ಸೋತು
ಜುಮ್ಮನೆ ಮಾಮರವು ಹೂತು
ಕಾಮಗಾಗಿ ಕಾದಿದೆ
ಸುಗ್ಗಿ ಸುಗ್ಗಿ ಸುಗ್ಗಿ ಎಂದು
ಹಿಗ್ಗಿ ಗಿಳಿಯ ಸಾಲು ಸಾಲು
ತೋರಣದೊಲು ಕೋದಿದೆ

ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕೆ
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರೆಯ
ನಮಗದಷ್ಟೆ ಏತಕೆ?

ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಸಲ ನವೀನ ಜನನ
ನಮಗೆ ಏಕೆ ಬಾರದೊ?
ಎಲೆ ಸನತ್ಕುಮಾರದೇವ
ಸಲೆ ಸಾಹಸಿ ಚಿರಂಜೀವ
ನಿನಗೆ ಲೀಲೆ ಸೇರದೋ?

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.
ನಮ್ಮನಷ್ಟೆ ಮರೆತಿದೆ
   ಅವರ ಕಾಲದಲ್ಲಿ ಈ ಹಬ್ಬಕ್ಕೆ ಕೊಡುತ್ತಿದ್ದ ಮಣ್ಣನೆಯನ್ನು ಗುರ್ತಿಸಿ ಅವರ ಕುಂಚದಿಂದ ಅರಳಿರುವ ಈ ಸಾಲುಗಳು ಎಂತಹವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. ಯುಗದ ಹಬ್ಬ ಯುಗಾದಿಯಂತೆ ಈ ಹಾಡು ಈ ಹಬ್ಬಕ್ಕೆ ಬಹಳ ಸೂಕ್ತವಾಗಿದೆ. ವರಕವಿ ಬೇಂದ್ರೆಯವರನ್ನು ನೆನಪಿಸುತ್ತ ಮತ್ತು ಅವರಿಗೆ ನಮಸ್ಕರಿಸುತ್ತ. ಎಲ್ಲಿರಗೂ ಈ ಯುಗಾದಿಯು ಸರ್ವ ಸುಖಗಳನ್ನು ಕರುಣಿಸಲಿ ಎಂದು ಹಾರೈಸುತ್ತೇನೆ ಹಾಗೂ ಈ ಹಬ್ಬದ ಶುಭಾಶಯಗಳನ್ನು ಮುಕ್ತಮನಸ್ಸಿನಿಂದ ಎಲ್ಲರಿಗೂ ತಿಳಿಸುತ್ತೇನೆ ವಂದನೆಗಳೊಂದಿಗೆ ನಿಮ್ಮವ ವಸಂತ್ ಕೋಡಿಹಳ್ಳಿ.
ಚಿತ್ರಕೃಪೆ ಅಂತರಜಾಲ

Friday, March 16, 2012

ಪ್ರೀತಿ ಕೊಂದ ಕೊಲೆಗಾರ.

      ವ್ಯಾಗನ್ 120 ಕಿ.ಮೀ ಸ್ಪೀಡಿನಲ್ಲಿ ಹೋಗುತ್ತಿದೆ. ಅಷ್ಟು ವೇಗದ ಅಗತ್ಯವೇನೂ ಇರಲಿಲ್ಲ ಚಾಲಕನಿಗೆ. ಆದರೂ ಮತ್ತಷ್ಟು ವೇಗ ಬೆಳಸಿಕೊಂಡು ಸಾಗುತ್ತಿದ್ದಾನೆ. ವಿಶಾಲವಾದ ಹೈವೇ ರಸ್ತೆ ಮಧ್ಯಾಹ್ನದ ಸಮಯವಾದ್ದರಿಂದ ವಾಹನ ದಟ್ಟಣೆಯೂ ಅಷ್ಟಾಗಿ ಇರಲಿಲ್ಲ. ಹೈವೇ ರಸ್ತೆಯನ್ನು ಬದಲಿಸಿ ಮತ್ತೊಂದು ದಾರಿಗೆ ಬದಲಾಗಬೇಕು. ಕಠಿಣವಾದ ಪರ್ವತದ ಏರು ರಸ್ತೆ ಪ್ರಾರಂಭವಾಗುತ್ತದೆ. ಅಂದರೆ ಪ್ರಪಾತದಂಚಿನಲ್ಲಿ ಸಾಗುವಂಥ ರಸ್ತೆ ಅದು. ಕೊಂಚ ಮೈಮರೆತರೆ ಸಾವಿನ ಕದವನ್ನು ತಟ್ಟಿಬಂದಂತೆ. ಅಷ್ಟೊಂದು ಆಳವಾದ ಪ್ರಪಾತ ಕಣ್ಮುಂದೆ ಸುಳಿದಾಡುತ್ತದೆ. ರಸ್ತೆಯ ಪ್ರಾರಂಭದಲ್ಲಿ ವೇಗ ನಿಯಂತ್ರಕ ಹುಬ್ಬುಗಳನ್ನು ಹಾಕಲಾಗಿದೆ. ಭಾರಿ ವಾಹನಗಳಿಗೆ ದಾರಿ ನಿಷಿದ್ಧ. ಏರು ರಸ್ತೆಯ ಪ್ರಾರಂಭದಲ್ಲಿ ಒಂದು ಚಕ್ ಫೋಸ್ಟ್ ಇದೆ. ಅಲ್ಲಿ ಹಾದುಹೋಗುವ ಪ್ರತಿ ವಾಹನವನ್ನೂ ಪರಿಶೀಲಿಸುವುದಕ್ಕಾಗಿ ಅದನ್ನು ಸ್ಥಾಪಿಸಲಾಗಿದೆ. ಇಬ್ಬರು ಖಾಕಿಧಾರಿಗಳು ಕೋವಿಗಳೊಂದಿಗೆ ಯಾವಾಗಲೂ ಗಸ್ತು ತಿರುಗುತ್ತಿರುತ್ತಾರೆ. ವಾಹನದ ಸಂಖ್ಯೆ, ಎಷ್ಟು ಜನ ಪ್ರಯಾಣಿಸುತ್ತಿದ್ದರು. ಎಲ್ಲಿಗೆ ಪ್ರಯಾಣಿಸಬೇಕಿತ್ತು. ಆಗಂತಕಾರಿ ವಸ್ತುಗಳನ್ನೇನಾದರೂ ಕೊಂಡೊಯ್ಯುತ್ತಾರ ಎಂಬುದರ ಮಾಹಿತಿಯನ್ನು ಕಲೆಹಾಕುವುದು ಅವರ ಕೆಲಸ ಮತ್ತು ಕ್ಲಿಷ್ಟಕರವಾದ ರಸ್ತೆಯಾದ್ದರಿಂದ ಜಾಗ್ರತೆ ವಹಿಸಿ ಎನ್ನುವುದರ ಬಗ್ಗೆ ಅರಿವುಮೂಡಿಸುತ್ತಾರೆ. ವ್ಯಾಗನ್ ಆರ್ನ ವೇಗದಲ್ಲಿ ಯಾವುದೇ ಬದಲಾವಣೆಯಿರಲಿಲ್ಲ. ಮತ್ತಷ್ಟು ವೇಗಪಡೆದುಕೊಂಡು ಮುನ್ನುಗ್ಗುತ್ತಿದೆ. ಚಕ್ ಪೋಸ್ಟಿನ ಸಿಬ್ಬಂದಿಯನ್ನೂ ಲೆಕ್ಕಿಸದೆ ಪರ್ವತದ ರಸ್ತೆಯಲ್ಲಿ ಸಾಗಿತು. ಅಲ್ಲಿನ ಖಾಕಿದಾರಿಗಳು ಒಮ್ಮೆಗೆ ಬೆಚ್ಚಿ ಬಿದ್ದರು. ರೀತಿ ಮಾಹಿತಿಯಿಲ್ಲದೆ ಸಾಗುವ ಕಾರುಗಳನ್ನು ಅಡ್ಡಿಪಡಿಸುವುದು ಅವರ ಕೆಲಸ. ಆದರೆ ಕಾರನ್ನು ಅವರು ತಡೆಯಲಾಗಲಿಲ್ಲ. ಕಾರನ್ನು ಫಾಲೋ ಮಾಡಿ ತಡೆಯಬೇಕು ಆದರೆ ಅವರ ಬಳಿ ಇರುವುದು ಹಳೆಯ ಹೋಂಡ ಬೈಕು. ಅದರೊಂದಿಗೆ ಇಂಥ ಏರು ಪರ್ವತದ ರಸ್ತೆಗಳಲ್ಲಿ ಅತಿ ವೇಗದೊಂದಿಗೆ ಸಾಗಿ ತಡೆಯುವುದು ಅಸಾಧ್ಯವಾದ ಮಾತು ಅದಕ್ಕಾಗಿ ಏನೂ ಮಾಡಲಾಗದೆ ಸುಮ್ಮನಾಗಿದ್ದರು.  
     ಚಾಲಕನ ಮುಖದಲ್ಲಿ ಚಿಂತೆಯ ಗೆರೆಗಳಿವೆ. ಏನನ್ನೋ ಕಳೆದುಕೊಂಡ ಭಾವ ಅವನಲ್ಲಿ ಎದ್ದು ಕಾಣುತ್ತಿದೆ. ಲೋಕವೇ ಬೇಡ ಎಂಬ ತೀರ್ಮಾನ ಅವನದಾಗಿದೆ. ಕಾರು ಕಣ್ಮರೆಯಾದ ಸ್ವಲ್ಪ ಸಮಯದಲ್ಲೆ ಖಾಕಿದಾರಿಗಳು ತತ್ತರಿಸಿಹೋಗಿದ್ದಾರೆ. ಅಂದರೆ ಈಗತಾನೇ ಚಲಿಸಿದ ಕಾರು ಯಾವುದೋ ಅನಾಹುತದ ಮುನ್ಸೂಚನೆ ಎಂಬುದರ ಬಗ್ಗೆ ಅರಿವಾಗಿದೆ. ಅವರ ಮುಖಗಳಲ್ಲಿ ಭಯ - ಆತಂಕ ಒಟ್ಟಿಗೆ ಮಡುಗಟ್ಟಿದೆ. ಹತ್ತಿರವೇ ಇದ್ದ ಹೋಂಡಬೈಕನ್ನು ತೆಗೆದುಕೊಂಡು ನಿಧಾನವಾಗಿಯೇ ಪರ್ವತದ ರಸ್ತೆಯಲ್ಲಿ ಸಾಗುತ್ತಿದ್ದಾರೆ. ಇವರು ಚಲಿಸಿದ ಐದೇ ನಿಮಿಷಗಳ ಅಂತರದಲ್ಲಿ ಪೋಲೀಸ್ ಕಮೀಷನರ್ ಸೈರನ್ನಿನ ಸದ್ಧಿನೊಂದಿಗೆ ಧಾವಿಸಿ ಬರುತ್ತಿದ್ದಾರೆ. ಅವರ ಹಿಂದೆ ಇನ್ನೂ ನಾಲ್ಕೈದು ಜೀಪುಗಳು ಪರ್ವತದತ್ತ ಹೆಜ್ಜೆಯಿಡುತ್ತಿವೆ. ಅನಾಹುತದ ಬಗ್ಗೆ ಮುಂಚೆಯೇ ಚಕ್ ಪೋಸ್ಟ್ ಸಿಬ್ಬಂದಿಗೆ ಕಮೀಷನರ್ ಕರೆಮಾಡಿದ್ದಾರೆ. ಪರ್ತದ ರಸ್ತೆಯತ್ತ ಸಾಗುತ್ತಿರುವ ಕಾರನ್ನು ತಡೆದು ನಿಲ್ಲಿಸಿ. ಮುಂದೆ ಹೋಗಲು ಬಿಡಬೇಡಿ. ಅದರಲ್ಲಿ ಸಾಗುತ್ತಿರುವುದು ಮಂತ್ರಿಯ ಮಗನೆಂದು ಅವರಿಗೆ ತಿಳಿಸಲಾಗಿತ್ತು. ಆದ್ದರಿಂದ ಖಾಕಿಧಾರಗಳು ಎಚ್ಚರಗೊಳ್ಳುವ ಮೊದಲೆ ಕಾರು ಪರ್ವತದತ್ತ ಕಣ್ಮರೆಯಾಗಿತ್ತು. ಅಂದರೆ ಸ್ವಲ್ಪ ಸಮಯಕ್ಕೂ ಮುಂಚೆ ಗಾಳಿಯ ವೇಗದಲ್ಲಿ ಸಾಗಿಹೋದ ಕಾರು ಸಾಮಾನ್ಯ ವ್ಯಕ್ತಿಯದಾಗಿರಲಿಲ್ಲ ಅವನು ಅಲ್ಲಿನ ಸ್ಥಳೀಯ ಶ್ರೀಮಂತ ವ್ಯಕ್ತಿಯ ಮಗನಾಗಿದ್ದ ಮತ್ತು ಅವನ ತಂದೆ ಆಡಳಿತ ಪಕ್ಷದ ರಾಜಕಾರಣಿಯೂ ಆಗಿದ್ದಾನೆ. ತನ್ನ ಮಗ ಮಾಡಿಕೊಳ್ಳುತ್ತಿರುವ ಅನಾಹುತದ ಬಗ್ಗೆ ಮೊದಲೇ ಕಮೀಷನರಿಗೆ ತಿಳಿಸಿದ್ದಾನೆ. ಅದನ್ನು ತಡೆಯುವ ಉದ್ದೇಶದಿಂದ ಪೋಲೀಸರ ಜೊತೆ ಅವನೂ ಬರುತ್ತಿದ್ದಾನೆ.
    ವ್ಯಾಗನ್ ಪ್ರಪಾತದಂಚಿನ ರಸ್ತೆಯ ತಿರುವುಗಳನ್ನು ದಾಟಿ ಮುನ್ನುಗ್ಗುತ್ತಿದೆ. ಚಾಲಕನ ಮುಖದಲ್ಲಿ ಯಾವುದೇ ಬದಲಾವಣೆಯಿಲ್ಲ. ಅವನ ಎಡಬದಿಯ ಪಾಕೇಟಿನಲ್ಲಿ ಫೋನ್ ರಿಂಗುಣಿಸುತ್ತಿದೆ. ಮತ್ತಷ್ಟು ಜೋರಾಗಿ ರಾಗ ತೆಗೆಯುತ್ತಿದೆ. ಒಮ್ಮೆಲೆ ಅವನ ಕೋಪ ಆವೇಶ ಬುಗಿಲೆದ್ದಿದೆ. ತೆಗೆದು ನೋಡಿದಾಗ ಅದು ಅವನ ಅಪ್ಪನ ಕಾಲ್. ಮುಖ ಮತ್ತಷ್ಟು ಕೆಂಪಕಾಯಿತು. ಆವೇಶದಿಂದ ಮೊಬೈಲನ್ನು ಪ್ರಪಾತದ ಕಡೆ ತೂರಿದ. ಮೊಬೈಲ್ ರಿಂಗುಣಿಸುತ್ತಲೇ ಆಳ ಕಣಿವೆಯಲ್ಲಿ ಬಿದ್ದುಹೋಯಿತು. ಪ್ರಪಾತದ ತುತ್ತ ತುದಿಯ ಭಾಗ. ವ್ಯಾಗನ್ ಈಗ ವೇಗವನ್ನು ಕಡಿಮೆಗೊಳಿಸಿ ಕಾಯುವಂತಿದೆ. ಇಲ್ಲಿನ ಅನಾವುತದ ಬಗ್ಗೆ ಮಾಹಿತಿ ಸಿಕ್ಕ ತಕ್ಷಣವೇ ಕಮೀಷನರ್ ಎರಡೂ ಕಡೆ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ತಡೆಹಿಡಿಯುವಂತೆ ಆದೇಶಿಸಿದ್ದಾನೆ. ಅದ್ದರಿಂದ ರಸ್ತೆ ನಿರ್ಜನವಾಗಿತ್ತು. ಅವನು ಕಾರನ್ನು ಪ್ರಪಾತಕ್ಕೆ ಅಡ್ಡಲಾಗಿ ನಿರ್ಮಿಸಿರುವ ತಡೆಗೋಡೆಯತ್ತ ಮುಖಮಾಡಿ ನಿಲ್ಲಿಸಿದ್ದಾನೆ. ಸೈಲೆನ್ಸರ್ ಬುಸುಗುಡುತ್ತಲೇ ಇದೆ. ತಡೆ ಗೋಡೆಯ ಹಿಂಬದಿ ಅತಿ ಭಯಾನಕ ಆಳವಾದ ಕಂದಕಗಳಿಂದ ಕೂಡಿದೆ. ಹಸಿರಾದ ಕಾಡು ಮತ್ತು ಸಣ್ಣ ಸಣ್ಣ ತೊರೆಗಳನ್ನು ಕಣ್ತುಂಬಿ ನೋಡಬಹುದು. ಚಾಲಕ ಸ್ಥಿಮಿತವನ್ನು ಕಳೆದುಕೊಳ್ಳುತ್ತಿದ್ದಾನೆ ಏನನ್ನೂ ಯೋಚಿಸುವ ಮಟ್ಟದಲ್ಲಿಲ್ಲ ಅವನ ದೃಷ್ಟಿ ಅಡ್ಡಲಾಗಿದ್ದ ತಡೆಗೋಡೆಯತ್ತ ಹರಿದಿದೆ. ಸೈಲೆನ್ಸರಿನ ಶಬ್ಧ ಮತ್ತಷ್ಟು ಹೆಚ್ಚಾಗುತ್ತಿದೆ. ಅವನು ಒಂದು ಕ್ಷಣವೂ ತಡಮಾಡುತ್ತಿಲ್ಲ. ಎಕ್ಸಲೇಟರ್ ಪಟ್ಟಿಯ ಮೇಲೆ ತನ್ನ ಬಲವನ್ನೆಲ್ಲಾ ಉಪಯೋಗಿಸಿ ಒತ್ತಿ ಹಿಡಿದಿದ್ದಾನೆ. ಬ್ರೇಕನ್ನು ಸಡಿಲಿಸಬೇಕು ಒಮ್ಮೆ ನಿಶ್ಚಬ್ಧ ನಿಶ್ಚಲತೆ ಆವರಿಸಿದೆ. ಏನನ್ನೋ ನೆನಪುಮಾಡಿಕೊಳ್ಳುವಂತೆ ಚಡಪಡಿಸುತ್ತಿದ್ದಾನೆ. ಅವನ ಕಣ್ಣುಗಳು ಹನಿಗೂಡುತ್ತಿವೆ. ಮನಸ್ಸು ಭಾರವಾಗುತ್ತಿದೆ. ದುಃಖಿಸುತ್ತಿದ್ದಾನೆ ತನ್ನ ಎಡಬದಿಯ ಪರ್ಸ್ ತೆಗೆದು ಏನನ್ನೋ ತಡಕಾಡುತ್ತಿದ್ದಾನೆ.
      ಅದು ಯಾವುದೋ ಹುಡುಗಿಯ ಭಾವಚಿತ್ರ. ಅವನು ಗೋಳಾಡಿತ್ತಿದ್ದಾನೆ ಚಿತ್ರಾ ನನ್ನನ್ನು ಬಿಟ್ಟು ಹೋದೆಯ ?, ನರಹಂತಕ ನಮ್ಮ ತಂದೆಯ ಕಾರಣದಿಂದ ನೀನು ಬಲಿಪಶುವಾದೆಯ ?. ಅವನ ಕ್ರೂರ ವರ್ತನೆಗೆ ನಿನ್ನ ಜೀವವನ್ನೇ ಕಳೆದುಕೊಂಡೆಯಲ್ಲ. ಇದಕ್ಕೆಲ್ಲ ಮೂಲ ಕಾರಣ ನಾನೇ ಚಿತ್ರ. ನಿನ್ನನ್ನು ಪ್ರೀತಿಸಬಾರದಿತ್ತು. ನೀನು ಬಡವಳಾಗಿದ್ದೆ. ಆದರೂ ನಿನ್ನನ್ನು ಮದುವೆಯಾಗಲು ನಾನು ತುದಿಗಾಲಲ್ಲಿ ನಿಂತಿದ್ದೆ. ನನ್ನ ತಂದೆಗೆ ಇದು ಸಹಿಸಲು ಸಾಧ್ಯವಾಗಲಿಲ್ಲ. ಅವನು ಶ್ರೀಮಂತ ರಾಜಕೀಯದಲ್ಲೂ ಒಳ್ಳೆ ಹೆಸರುಳ್ಳವನು. ನಿನ್ನಂಥ ಸಾಮಾನ್ಯ ಹೆಣ್ಣನ್ನು ಪ್ರೀತಿಸುತ್ತಿದ್ದೇನೆ ಎಂದು ತಿಳಿದಕೂಡಲೆ ಅಂತಸ್ಸಿನ ಪೆಡಂಭೂತ ಮೆಟ್ಟಿಕೊಂಡಿದೆ. ತನ್ನ ಮನೆತನದ ಮರ್ಯಾದೆ ಹೆಡೆಬಿಚ್ಚಿ ಕುಕ್ಕಿದೆ ಇದಕ್ಕಾಗಿ ನಿನ್ನ ಮೇಲೆ ಒಳಸಂಚು ರೂಪಿಸಿಬಿಟ್ಟ. ನನ್ನ ಮೂಲಕವೇ ನಿನ್ನನ್ನು ಕರೆಸಿಕೊಂಡು ಕೊಲೆಮಾಡಿಸಿಬಿಟ್ಟ. ಅತ್ಯಂತ ದಾರುಣವಾಗಿ ಬಲಿ ಪಡೆದುಕೊಂಡ. ನೀನು ಸಾಯುವ ಮೊದಲು ನನ್ನ ಹೆಸರನ್ನೇ ಕರೆಯುತ್ತಿದ್ದೆ. ಅದೂ ಅಸಹಾಯಕಳಾಗಿ, ಅತಿಘೋರವಾಗಿ. ನಾನು ನಿನ್ನನ್ನು ಉಳಿಸಿಕೊಳ್ಳಲಾಗಲಿಲ್ಲ ಚಿತ್ರಾ. ಅವನ ದರ್ಪದ ಮುಂದೆ ಸೋತು ಹೋದೆ. ಅವನ ಚೇಲಾಗಳ ಹಿಡಿತದಲ್ಲಿ ನಾನು ಕುಗ್ಗಿ ಹೋದೆ. ಕಡೆಗೆ ನಿನ್ನ ದೇಹವನ್ನು ಸಿಗದಂತೆ ಅವನು ಸುಟ್ಟು ಬೂಧಿಯಾಗಿಸಿಬಿಟ್ಟ. ನಾನು ನಿನ್ನನ್ನು ಇಷ್ಟಪಡಬಾರದಿತ್ತು ಚಿತ್ರಾ. ನಿನ್ನ ಹಿಂದೆ ಬೀಳಬಾರದಿತ್ತು. ಕೊಲೆಗಡುಕರಿಗೆ ಶಿಕ್ಷೆಯಾಗುವುದಿಲ್ಲ. ಅಧಿಕಾರದ ಧರ್ಪದಿಂದ ನನ್ನ ತಂದೆ ಎಲ್ಲವನ್ನೂ ಮುಚ್ಚಿಹಾಕುತ್ತಾನೆ. ನಿನ್ನ ನೆನಪು ನನ್ನಲ್ಲಿ ದಿನೇ ದಿನೇ ಕಾಡುತ್ತಿದೆ. ಚಿತ್ರಹಿಂಸೆಗೆ ಗುರಿಪಡಿಸುತ್ತಿದೆ. ಮಾನಸಿಕವಾಗಿ ನಾನು ಎಂದೋ ಸತ್ತುಹೋಗಿದ್ದೇನೆ ಚಿತ್ರಾ. ಜಡವಾದ ದೇಹದೊಂದಿಗೆ ನಾನಿಲ್ಲಿ ಬದುಕಲಾರೆ. ನಿನ್ನ ಜೊತೆಯೇ ಬಂದು ಬಿಡುತ್ತೇನೆ. ನನಗೆ ಯಾವ ಆಸ್ತಿಯೂ ಬೇಡ ಐಶ್ವರ್ಯವೂ ಬೇಡ ಇದರ ಮೂಲಕವಾಗಿ ನಿನ್ನನ್ನು ಕಳೆದುಕೊಂಡೆ ಚಿತ್ರಾ. ಅವನು ಹುಚ್ಚನಂತೆ ಕೂಗಾಡುತ್ತಿದ್ದಾನೆ. ಮಾನಸಿಕವಾಗಿ ರೋಧಿಸುತ್ತಿದ್ದಾನೆ. 
     ಅವನು ಕಣ್ಣುಗಳು ಹನಿಗೂಡುತ್ತಿವೆ. ಹೃದಯ ಒಡೆದು ಹೋಳಾಗುತ್ತಿದೆ. ಕ್ಷಣ ಕ್ಷಣಕ್ಕೂ ಅವಳನ್ನು ನೆನೆದು ಕುಗ್ಗಿಹೋಗುತ್ತಿದ್ದಾನೆ. ದಯನೀಯ ಸ್ಥಿತಿ. ಪೇಲವಗೊಂಡ ಮುಖ, ಗುಳಿಬಿದ್ದ ದುರ್ಬಲ ಕಣ್ಣುಗಳು, ಒತ್ತಡಕ್ಕೆ ಸಿಲುಕಿದ ಭಾವ ಅವನಲ್ಲಿ ಎದ್ದು ಕಾಣುತ್ತಿದೆ. ತಡೆಗೋಡೆಗೆ ಅಡ್ಡಲಾಗಿ ನಿಲ್ಲಿಸಿದ್ದ ಕಾರು ಯಾವುದೇ ಕ್ಷಣದಲ್ಲಾದರು ಪ್ರಪಾತದೆಡೆಗೆ ನುಗ್ಗಬಹುದು. ಮುಷ್ಟಿ ಬಿಗಿಯುತ್ತಿದೆ. ದೂರದಲ್ಲಿ ನಾಲ್ಕೈದು ಕಾರುಗಳು ಇವನತ್ತ ಧಾವಿಸುತ್ತಿವೆ. ಮೊದಲನೆಯದು ಅವನ ತಂದೆಯ ಕಾರು ಮಿಕ್ಕವು ಪೋಲೀಸರವು. ಸ್ವಲ್ಪ ದೂರದಲ್ಲಿ ಕಾರನ್ನು ನಿಲ್ಲಿಸಿ ಕೆಳಗಿಳಿದ. ಅವನ ತಂದೆಯ ಮುಖದಲ್ಲಿ ಪೈಶಾಚಿಕ ಕಳೆಯಿದೆ. ಎಲ್ಲವನ್ನೂ ಗೆದ್ದೆ ಎಂಬ ಅಹಂಕಾರವಿದೆ. ಅವನ ಮಾತಿನಲ್ಲಿ ರೋಷವಿದೆ. ಆರ್ಜುನ್ ದುಡುಕಬೇಡ ಮಗ. ಹಿಂದೆ ಸರಿ ನಾನು ತಪ್ಪು ಮಾಡಿದ್ದೇನೆ. ಅದು ನನಗೆ ಮನವರಿಕೆಯಾಗಿದೆ. ಎಷ್ಟೇ ಆದರೂ ನಾನು ನಿನ್ನ ತಂದೆ. ಎಲ್ಲವನ್ನೂ ನಿನ್ನ ಹಿತಕ್ಕಾಗಿಯೇ ಮಾಡಿದ್ದೇನೆ. ನಾಳೆಯೇ ಸಾವಿರಾರು ಶ್ರೀಮಂತ ಮನೆತನದ ಹುಡುಗಿಯರನ್ನು ನಿನ್ನ ಮುಂದೆ ಸಾಲಾಗಿ ನಿಲ್ಲಿಸುತ್ತೇನೆ. ಯಾರನ್ನಾದರೂ ಆರಿಸಿಕೋ ನಿನ್ನ ಮದುವೆಯನ್ನು ಪ್ರಪಂಚಕ್ಕೆ ತಿಳಿಯುವಂತೆ ಅದ್ಧೂರಿಯಿಂದ ಮಾಡೋಣ. ನೀನು ದೇಶದ ಮಂತ್ರಿಯ ಮಗನೆಂದು ಮರೆಯಬೇಡ. ಯಾವಳೋ ಭಿಕಾರಿಯ ಬಗ್ಗೆ ತಲೆಕೆಡಿಸಿಕೊಳ್ಳುವುದು ಸರಿಯಲ್ಲ. ನಮ್ಮ ಮನೆತನಕ್ಕೆ ಧಕ್ಕೆಯಾಗುವಂತ ಯಾವ ಕೆಲಸವನ್ನೂ ನಾನು ಮಾಡಲು ಬಿಡುವುದಿಲ್ಲ. ದುಡುಕಬೇಡ ಹಿಂದೆ ಸರಿ ಮನೆಗೆ ಹೋಗೋಣ ಎಂಬ ದರ್ಪದ ಮಾತುಗಳು ತಂದೆಯ ಮಾತಿನಿಂದ ಹೊರಬರುತ್ತಿವೆ. ಮಾತುಗಳು ಆರ್ಜುನನು ಮತ್ತಷ್ಟು ವಿಚಲಿತನನ್ನಾಗಿಸುತ್ತಿವೆ ಅದರೊಳಗಿನ ಮರ್ಮ ಅರ್ಥವಾಗಿದೆಆರ್ಜುನನ ರೋಷ ಮತ್ತಷ್ಟು ದ್ವಿಗುಣಗೊಳ್ಳುತ್ತಿದೆ. ತನ್ನ ಪ್ರೇಯಸಿಯನ್ನೇ ಅತಿ ದಾರುಣವಾಗಿ ಕೊಂದು ಸುಟ್ಟಂತ ಪೈಚಾಚಿಕ ಕೃತ್ಯ ಅವನ ಕಣ್ಣೆದುರು ಸುಳಿದಾಡುತ್ತಿದೆ.
      ಹೃದಯ ಮತ್ತಷ್ಟು ಕಲ್ಲಾಗುತ್ತಿದೆ. ತನ್ನ ಕಾರಿನ ಒಳಗೆ ಸ್ಥಿಮಿತ ಕಳೆದುಕೊಳ್ಳುತ್ತಿದ್ದಾನೆ. ಸೀಟಿನ ಅಡಿಯಲ್ಲಿ ಅಡಗಿಸಿಟ್ಟಿದ್ದ ಸರ್ವೀಸ್ ರಿವಾಲ್ವರ್ನ ಹಿಂದಿಟ್ಟುಕೊಂಡ. ಒಮ್ಮೆ ಜೋರಾಗಿ ನಕ್ಕೂ ಕಾರಿನಿಂದ ಕೆಳಗಿಳಿದ. ಅಪ್ಪಾ ನೀನು ಸಾವಿರಾರು ಶ್ರೀಮಂತ ಹುಡುಗಿಯರನ್ನು ಸಾಲಾಗಿ ನಿಲ್ಲಿಸಬಹುದೇನೋ ಆದರೆ ಅವರ್ಯಾರು ನನ್ನ ಚಿತ್ರಾಳಾಗುವುದಿಲ್ಲ. ಅವರಲ್ಲಿ ಒಬ್ಬಳಲ್ಲಾದರೂ ನನ್ನ ಚಿತ್ರಾಳ ಗುಣವನ್ನು ತೋರಿಸಲಾಗುತ್ತದೆಯೆ?. ಅವಳ ಪ್ರೀತಿಯನ್ನು ಮತ್ತೆ ನನಗೆ ಕೊಡಬಲ್ಲೆಯ ?. ಸತ್ತು ಹೋದ ನನ್ನ ಹೃದಯದಲ್ಲಿ ಪುನಃ ಚೈತನ್ಯದ ಹಣತೆ ಹಚ್ಚ ಬಲ್ಲೆಯಾ ?. ಅದು ಎಂದಿಗೂ ಸಾಧ್ಯವಾಗದ ಮಾತು. ನನ್ನ ಚಿತ್ರಾ ಬಡವಳಾಗಿದ್ದರೂ ಗುಣವಂತ ಹೆಣ್ಣು. ನಿನ್ನ ಸ್ವಾರ್ಥಕ್ಕಾಗಿ ಅವಳನ್ನು ಬಲಿಪಡೆದುಕೊಂಡೆ, ಇದಕ್ಕೆ ಪ್ರಾಯಶ್ಚಿತ್ತ ಏನು ಗೊತ್ತೆ ?. ಅವನ ಬೆನ್ನ ಹಿಂದಿನ ರಿವಾಲ್ವರ್ ಹೊರತೆಗೆದು ತಂದೆಯ ಗುಂಡಿಗೆಗೆ ಗುರಿಯಿಟ್ಟ. ತನ್ನ ಮಗನಿಂದ ಇಂಥ ಸಂದರ್ಭವನ್ನು ಎಂದೂ ನಿರೀಕ್ಷಿಸಿರಲಿಲ್ಲ. ಅವನು ನಡುಗಿಹೋಗುತ್ತಿದ್ದಾನೆ. ಬೆವರಿಂದ ಅವನ ದೇಹ ಒದ್ದೆಯಾಗುತ್ತಿದೆ. ಅವನ ಧರ್ಪ ದೌರ್ಜನ್ಯಗಳು ಕೊಂಚ ಕೊಂಚವೇ ದೌರ್ಬಲ್ಯ ಕಳೆದುಕೊಳ್ಳುತ್ತಿವೆ. ಬೇಡ ನನ್ನನ್ನು ಕೊಲ್ಲಬೇಡ ಆರ್ಜುನ್ ನನ್ನಿಂದ ತಪ್ಪಾಗಿದೆ ಇದಕ್ಕಾಗಿ ಸುಡಬೇಡ ಕ್ಷಮಿಸುಬಿಡು ಎಷ್ಟೇ ಆದರೂ ನಿನಗೆ ಜನ್ಮ ಕೊಟ್ಟ ತಂದೆ ನನ್ನ ಮಾತುಕೇಳು ಎಂಬ ಭಯದಿಂದ ಹಿಂದೆ ಸರಿಯುತ್ತಿದ್ದಾನೆ. ಅವನ ಹಿಂದೆ ಬಂದಿದ್ದ ಕಮೀಷನರ್ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾನೆ. ಆದರೆ ಅಪ್ಪ ಮಕ್ಕಳ ವಿಷಯದಲ್ಲಿ ಮೂಗು ತೂರಿಸುವುದು ಬೇಡ ಎಂದು ಸ್ವಲ್ಪ ದೂರದಲ್ಲೇ ನಿಂತಿದ್ದಾನೆಆರ್ಜುನನಿಗೆ ಹುಚ್ಚು ಕೋಪ ನೆತ್ತಿಗೇರಿದೆ. ಎದುರಲ್ಲಿ ನಿಂತಿದ್ದ ತನ್ನ ತಂದೆಯಲ್ಲಿ ಅಪರಾಧಿಯನ್ನು ಕಾಣುತ್ತಿದ್ದಾನೆ. ಅಂದರೆ ಅವನ ಅಪರಾಧ ಕೃತ್ಯದ ಚಿತ್ರಗಳು ಒಂದೊಂದಾಗಿ ತೆರೆದುಕೊಳ್ಳುತ್ತಿವೆ. ತನ್ನ ಸೊಸೆಯಾಗುವಳನ್ನೇ ಅತಿ ಅಮಾನುಷವಾಗಿ ಅತ್ಯಾಚಾರವೆಸಗಿಸಿ ಕೊಲೆಮಾಡಿಸಿದಂತ ಹೀನ ಕೃತ್ಯ ಆರ್ಜುನನ ಕೋಪವನ್ನು ಮತ್ತಷ್ಟು ಹೆಚ್ಚಿಸುತ್ತಿದೆ.
    ಸರ್ವೀಸ್ ರಿವಾಲ್ವರ್ ಟ್ರಿಗರ್ ಒತ್ತಿದ್ದಾನೆ. ಇದೋ ಅಪ್ಪ ನೀನು ಮಾಡಿದಂತ ಹೀನ ಕೃತ್ಯಕ್ಕೆ ಕಡೆಯದಾಗಿ ನಿನಗೆ ಕೊಡುವ ಬಹುಮಾನ. ಕಾನೂನು ಕಟ್ಟಲೆಗಳಿಂದ ನಿನ್ನನ್ನು ನೀನು ರಕ್ಷಿಸಿಕೊಳ್ಳಬಹುದೇನೋ. ಆದರೆ ನಿನ್ನ ಮಗನ ಗುಂಡೇಟಿನಿಂದ ಬಚಾವಾಗಲು ಸಾಧ್ಯವೇ ಇಲ್ಲ ಎಂಬ ಉದ್ವೇಗದ ಮಾತು ಆರ್ಜುನನ ಕಂಠದಿಂದ ಹೊರಬಂತು. ಒಂದೇ ಕ್ಷಣ ಹತ್ತಾರು ಗುಂಡುಗಳು ಒಂದರ ಹಿಂದೆ ಒಂದರಂತೆ ತೂರಿಬರುತ್ತಿವೆ. ಎದುರಲ್ಲಿ ನಿಂತಿದ್ದ ಅವನ ತಂದೆಯ ದೇಹವನ್ನು ಹೊಕ್ಕುತ್ತಿವೆ ರಕ್ತ ಚಿಮ್ಮುತ್ತಿದೆ. ಅವನ ದೇಹ ಅಚಾನಕ್ಕಾಗಿ ನೆಲದ ಮೇಲೆ ಕುಸಿದುಬಿತ್ತು. ರಕ್ತದ ಮಡುವಿನಲ್ಲಿ ಅಲುಗಾಡುತ್ತಿದ್ದಾನೆ ಕಡೆಯದಾಗಿ ತನ್ನ ಪಾಪ ಪ್ರಜ್ಞೆ ಕಾಡಿದಂತೆ ಕಣ್ಣುಗಳಲ್ಲಿನ ಕಾಂತಿಯೂ ಕಡಿಮೆಯಾಯಿತು. ಪೋಲಿಸರು ದಂಗಾದರು ಏರು ಧ್ವನಿಯಲ್ಲಿ ಕೂಗೂತ್ತಿದ್ದಾರೆ. ಬೇಡ ಬೇಡ ಹಾಗೇ ಮಾಡಬೇಡ ಆರ್ಜುನ್ ಅವರನ್ನು ಸಾಯಿಸಬೇಡ ಅವರು ನಿನ್ನ ತಂದೆ ಗುಂಡು ಹಾರಿಸಬೇಡ. ಇಂಥ ಸಂದರ್ಭವನ್ನು ಅವರೂ ಸಹ ನಿರೀಕ್ಷಿಸಿರಲಿಲ್ಲ. ಎಲ್ಲವೂ ಮುಗಿದುಹೋಗಿತ್ತು. ತಡಮಾಡದೆ ಆರ್ಜುನ್ ಕಾರಿನಲ್ಲಿ ಕೂತು ಎಕ್ಸಲೇಟರನ್ನು ಬಲವಾಗಿ ಒತ್ತಿ ಹಿಡಿದ. ಸೈಲೆನ್ಸರಿನಿಂದ ಧಟ್ಟ ಹೊಗೆ ಹೊರಹೊಮ್ಮುತ್ತಿದೆ. ಕಾರು ಅತಿ ವೇಗವನ್ನು ಪಡೆದುಕೊಂಡು ಗೋಡೆಯತ್ತ ನುಗ್ಗಿತು. ಡಿಕ್ಕಿಯ ರಭಸಕ್ಕೆ ಅಡ್ಡಲಾಗಿ ಕಟ್ಟಿದ್ದ ಗೋಡೆ ಪೀಸ್ ಪೀಸ್ಸಾಗಿ ಒಡೆದು ಹೋಗಿದೆ. ಕಾರು ಪ್ರಪಾತದೆಡೆಗೆ ಹಾರುತ್ತಿದೆ. ಇಗೋ ಚಿತ್ರಾ ನಿನ್ನಲ್ಲಿಗೆ ನಾನು ಬರುತ್ತಿದ್ದೇನೆ. ಇಗೋ ಬಂದುಬಿಟ್ಟೆ ಭಯಪಡಬೇಡ ಬಂದುಬಿಟ್ಟೆ. ಎಂಬ ಕೂಗು ಅಲ್ಲಿ ನೆರದಿದ್ದವರ ಕಿವಿಗಳಲ್ಲಿ ಮಾರ್ಧನಿಸುತ್ತಿದೆ.  ಕೆಲವೇ ನಿಮಿಷಗಳಷ್ಟೆ ಡಬ್ ಎಂಬ ಸದ್ದು. ಕಾರಿನಲ್ಲಿದ್ದ ಇಂಧನ ಸೋರಿಕೆಯಾಗಿ ಸಾವಿರಾರು ಅಡಿಗಳ ಆಳದಲ್ಲಿ ದಟ್ಟಹೊಗೆಯಾವರಿಸಿದೆ ಬೆಂಕಿ ಹೊತ್ತಿಕೊಂಡು ಧಗ ಧಗ ಉರಿಯುತ್ತಿದೆ. ಇಂಥ ಭೀಬತ್ಸ ದೃಶ್ಯವನ್ನು ಕಂಡ ಪೋಲಿಸರು ಭಯಭೀತರಾಗಿದ್ದಾರೆ. ಇಗೋ ಚಿತ್ರಾ ನಿನ್ನಲ್ಲಿಗೆ ನಾನು ಬರುತ್ತಿದ್ದೇನೆ ಇಗೋ ಬಂದುಬಿಟ್ಟೆ. ಎನ್ನುವಂತ ಕೂಗು ಕಮೀಷನ್ನರ ಕಿವಿಯಲ್ಲಿ ಮತ್ತೆ ಮತ್ತೆ ಮಾರ್ಧನಿಸುತ್ತಲೇ ಇದೆ.

ಪ್ರೀತಿ ಕೊಂದ ಕೊಲೆಗಾರ  ಇದು ನನ್ನ ಎರಡನೇ ಸಣ್ಣ ಕಥೆ.
ಚಿತ್ರಕೃಪೆ: ಅಂತರಜಾಲ