Wednesday, March 21, 2012

ವರುಷಕೊಂದು ಹೊಸತು ಜನ್ಮ


   ನೂತನ ವರ್ಷಾರಂಭದ ನವೋಲ್ಲಾಸದೊಂದಿಗೆ ಚೈತ್ರಮಾಸದ ಶುಕ್ಲಪಕ್ಷದಂದು ಮತ್ತೆ ಪಾದರ್ಪಣೆ ಮಾಡುತ್ತಿದೆ ಯುಗಾದಿ ಹಬ್ಬ. ಯುಗ-ಆದಿ ಎಂದೇ ಬಿಂಬಿಸುವ ಯುಗಾದಿಯು ಹಿಂದುಗಳ ಸಂಪ್ರದಾಯದಂತೆ ಪ್ರತಿ ವರ್ಷವೂ ಹೊಸ ಉದಯಕ್ಕೆ ಮುನ್ನುಡಿ ಬರೆಯುತ್ತದೆ. ಎಲ್ಲೆಡೆ ಹೊಸ ಚಿಗುರಿನಿಂದ ಕಂಗೊಳಿಸುವ ಮರಗಳು. ಚಿತ್ತಾಕರ್ಷದೊಂದಿಗೆ ಅರಳಿನಿಂತ ಹೂಗಳು ಮನತುಂಬಿ ಕೂಗುವ ಕೋಗಿಲೆಗಳು ವಯ್ಯಾರದಿಂದ ಮುತ್ತಿಕ್ಕುವ ಚಿಟ್ಟೆಗಳು ಎಂತಹವರನ್ನೂ ಆಕರ್ಷಿಸದೆ ಇರಲಾರವು. ಈ ಹಬ್ಬದಲ್ಲಿ ಅತಿ ಪ್ರಮುಕವಾದದ್ದು ಬೇವು-ಬೆಲ್ಲವನ್ನು ತಿನ್ನುವುದು. ಇದು ಮನುಷ್ಯನ ಸುಖ-ದುಃಖಗಳ ಸಂಕೇತವನ್ನು ಸೂಚಿಸುತ್ತದೆ. ಈ ಬೇವು-ಬೆಲ್ಲದ ಸಿಹಿ-ಕಹಿಯನ್ನು ಎಲ್ಲರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹೋಗಬೇಕೆನ್ನುವುದು ಹಿರಿಯರ ಅಂಬೋಣ.
    ಯುಗಾದಿಯಂದು ಎಲ್ಲೆಡೆ ಸಂಭ್ರಮದ ವಾತಾವರಣವಿರುತ್ತದೆ. ಪ್ರತಿ ಮನೆಯಲ್ಲೂ ಒಬ್ಬಟ್ಟು,ಹೋಳಿಗೆ ವಿಧ ವಿಧವಾದ ಖಾಧ್ಯಗಳನ್ನು ತಯಾರುಮಾಡುತ್ತಾರೆ. ಹೊಸ ಬಟ್ಟೆ ಧರಿಸಿ ದೇವರಿಗೆ ಕೈಮುಗಿದು ಹಿರಿಯರು ಚಿಣ್ಣರು ಸಂಭ್ರಮದಿಂದ ಕಳೆಯುತ್ತಾರೆ. ಬೇವು-ಬೆಲ್ಲವನ್ನು ದೇವರ ಮುಂದಿಟ್ಟು ಪೂಜೆ ಮುಗಿದ ಬಳಿಕ ನೈವೇಧ್ಯದಂತೆ ಎಲ್ಲರೂ ಸ್ವೀಕರಿಸುತ್ತಾರೆ. ಈ ಹಬ್ಬದ ಸಾಂಪ್ರದಾಯಿಕ ಆಚರಣೆಗಳಲ್ಲಿ ಕೆಲವು ಪ್ರಮುಖವಾದವುಗಳೆಂದರೆ ಸೂರ್ಯ ನಮಸ್ಕಾರ, ಪಂಚಾಂಗ ಪೂಜೆ, ಹಾಗೂ ಬೇವು-ಬೆಲ್ಲವನ್ನು ವಿಶ್ರಣಮಾಡಿ ಹಿರಿಯ ಕಿರಿಯರೆನ್ನದೆ ಎಲ್ಲರೂ ತಿನ್ನುವುದು. ಬೇವು ಕಷ್ಟದ ಸಂಕೇತವಾದರೆ ಬೆಲ್ಲ ಸುಖದ ಸಂಕೇತ ಇವೆರಡನ್ನೂ ಒಟ್ಟಿಗೆ ಪಡೆದು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
    ಹಳ್ಳಿಗಳಲ್ಲಿ ಈ ಹಬ್ಬವನ್ನು ತುಂಬ ವಿಶಿಷ್ಟವಾಗಿ ಆಚರಿಸುತ್ತಾರೆ.ಎತ್ತಿನ ಬಂಡಿಗಳಿಗೆ ಪೂಜಿಸುತ್ತಾರೆ. ಬೇವು ಮತ್ತು ಮಾವು ಎಲೆಗಳನ್ನು ಕೊಯ್ಡುತಂದು ಎಲ್ಲರ ಮನೆಗಳಿಗೂ ತೋರಣವಾಗಿ ಕಟ್ಟುತ್ತಾರೆ. ಮತ್ತು ಸುಣ್ಣ ಬಣ್ಣ ಬಳಿಸು ಶೃಂಗರಿಸುತ್ತಾರೆ. ಹಳ್ಳಿಯ ಪ್ರತಿ ದೇವರ ಗುಡಿಯಲ್ಲೂ ಭಯ ಭಕ್ತಿಯಿಂದ ಪೂಜೆಗಳನ್ನು ನೆರವೇರಿಸುತ್ತಾರೆ. ಎತ್ತುಗಳನ್ನು ತೊಳೆದು ಬಣ್ಣ ಅಚ್ಚಿ ಯುಗಾದಿಯನ್ನು ಸ್ವಾಗತಿಸುವುದು ಒಂದು ವಿಶಿಷ್ಟ ಸಂಪ್ರದಾಯ. ಹಳೆಯದನ್ನು ಅಳಿಸುತ್ತ ಹೊಸ ವಿಕಾಸದ ಆಶಯದೊಂದಿಗೆ ಹೊಸತನ್ನು ಆಹ್ವಾನಿಸುವುದು ಸಡಗರ ಸಂಭ್ರಮದ ವಿಷಯ.
   ಪುರಾಣಗಳ ಪ್ರಕಾರ ಯುಗಾದಿಯ ದಿನದಂದು ಅಂದರೆ ಚೈತ್ರ ಶುದ್ಧ ದಿನದಂದು ಈ ಲೋಕ ಪ್ರಾರಂಭವಾಯಿತಂತೆ. ಹಿಂದು ಜನಾಂಗಕ್ಕೆ ಯುಗಾದಿ ದಿನದಂದು ಹೊಸವರ್ಷ ಪ್ರಾರಂಭವಾಗುತ್ತದೆ. ಹಿಂದು ದಿನದರ್ಶಿ ಸಹ ಈ ದಿನದಿಂದಲೇ ಶುರುವಾಗುತ್ತದೆ. ಯುಗ ಎಂದರೆ ಅದೊಂದು ಕಾಲಗಣನೆ. ತ್ರೇತಾಯುಗ ದ್ವಾಪರಯುಗ ಕಲಿಯುಗ ಇಲ್ಲಿ ಯುಗವೆಂದರೆ ಸೂಮಾರು 5000ಕ್ಕೂ ಹೆಚ್ಚಿನ ವರ್ಷಗಳಂತೆ. ವಸಂತ ಋತುವಿನಿಂದ ಪ್ರಾರಂಭಗೊಂಡು ಕಾಲಗಣನೆ ಶಿಶಿರದಲ್ಲಿ ಮುಕ್ತಾಯಗೊಂಡು ಮತ್ತೆ ವಸಂತ ಪ್ರಾರಂಭವಾಗುವುದರ ಸೂಚಕ. ಇಂತಹ ಯುಗದ ಅಂದರೆ ವರ್ಷದ ಮೊದಲ ದಿನವನ್ನು ಯುಗಾದಿ ಎಂದು ಗುರ್ತಿಸಿ ಹಬ್ಬವನ್ನಾಗಿ ಆಚರಿಸುತ್ತಾರೆ.
    ಚಂದ್ರಮಾನ ಪಂಚಾಂಗ ರೀತ್ಯಾ ಚೈತ್ರ ಮಾಸದ ಶಯದ್ಧ ಪಾಡ್ಯದ ಶುಭದಿನದಂದು ಬ್ರಹ್ಮ ಈ ಲೋಕವನ್ನು ಸೃಷ್ಟಿಸಿದ ಎಂಬ ಪ್ರತೀತಿ ಇದೆ. ಇಂದೇ ಸೂರ್ಯನು ತನ್ನ ಮೊದಲ ಕಿರಣವನ್ನು ಭೂಮಿ ಮೇಲೆ ಹರಿಸಿದ ಎಂಬ ಮಾತೂ ಇದೆ. ಇಂದಿನಿಂದ ಚೈತ್ರಮಾಸ ಪ್ರಾರಂಭವಾಗಿ ತರು ಲತೆಗಳು ಉದುರಿ ಗಿಡ ಮರಗಳು ಮತ್ತೆ ಹೊಸ ಚೈತನ್ಯ ಪಡೆಯುತ್ತವೆ. ಜೀವನದಲ್ಲಿ ಒಂದು ವರುಷದಲ್ಲಿ ಕಂಡ ಸುಖ ದುಃಖಗಳನ್ನು ಮರೆತು ಹೊಸ ಬಾಳನ್ನು ಪುಸ್ತಕದ ಹೊಸ ಪುಡದಂತೆ ಪ್ರಾರಂಭಿಸುವ ಈ ದಿನವನ್ನು ಹಬ್ಬವನ್ನಾದಿ ಆಚರಿಸುತ್ತಾರೆ.
   ಯುಗಾದಿ ದಿನದಂದು ಬೇವು-ಬೆಲ್ಲವನ್ನು ಸೇವನೆ ಮಾಡುವುದು ವೈಜ್ಞಾನಿಕ ದೃಷ್ಟಿಯಿಂದ ಒಳ್ಳೆಯದೆನ್ನುತ್ತಾರೆ. ಅಂದರೆ ಬೇಸಿಗೆಯಲ್ಲಿ ಬರುವ ಚರ್ಮರೋಗಗಳಿಗೆ ಈ ವೇವು ಬೆಲ್ಲ ಸಿದ್ದೌಷದಂತೆ ಕೆಲಸಮಾಡುತ್ತದೆ. ಬೇವು ತುಂಬಾ ಕಹಿಯಾಗಿದ್ದು ಬೆಲ್ಲ ಆ ಕಹಿಯನ್ನು ಮರೆಮಾಚುತ್ತದೆ. ಯುಗದಿಯಂದು ಪಂಚಾಗ ಶ್ರವಣ, ಪಂಚಾಂಗ ಪೂಜೆ, ಸಂವತ್ಸರದ ಫಲಾಫಲ, ಆದಾಯ ವ್ಯಯ, ಮಳೆ ಬೆಳೆ ಮುಂದಾದವುಗಳನ್ನು ವಿಮರ್ಷೆಮಾಡಲಾಗುತ್ತದೆ. ಪಂಚಾಂಗಕ್ಕೆ ಹೆಚ್ಚಿನ ಮಹತ್ವಕೊಟ್ಟು ಅದರಲ್ಲಿನ ಫಲಾಫಲ ತಿಳಿಯುವ ವಾಡಿಕೆಯು ಬಹಳ ಹಿಂದಿನ ಕಾಲದಿಂದಲು ಸಾಗುತ್ತ ಬಂದಿದೆ.
    ವರ ಕವಿ ಬೇಂದ್ರೆಯವರು ಯುಗಾದಿಯ ಮಹತ್ವ ಮತ್ತು ಉದ್ದೇಶವನ್ನು ಬಹಳ ಸುಂದರವಾಗಿ ತಮ್ಮ ಕವನದ ಮೂಲಕ ನಿರೂಪಿಸಿದ್ದಾರೆ. ಯುಗಾದಿಯು ಯುಗ ಯುಗಗಳಿಂದ ತನ್ನ ಹೆಜ್ಜೆಗಳನ್ನು ಬದಲಿಸುತ್ತಿರುವ ದಾಟಿಯನ್ನು “ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ” ಎಂದು ಅಸ್ವಾದಿಸುತ್ತ ಬರೆದಿರುವ ಈ ಸಾಲುಗಳು ಗತ ಕಾಲದ ವೈಬವಕ್ಕೆ ಸಾಕ್ಷಿಕೊಟ್ಟಂತೆ ಇವೆ. ನೀವು ಒಮ್ಮೆ ಮೆಲುಕುಹಾಕಿ.

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ

ಹೊಂಗೆ ಹೂವ ತೊಂಗಲಲ್ಲಿ
ಭೃಂಗದ ಸಂಗೀತ ಕೇಲಿ
ಮತ್ತೆ ಕೇಳಬರುತಿದೆ
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪು ಸೂಸಿ
ಜೀವಕಳೆಯ ತರುತಿದೆ

ಕಮ್ಮನೆ ಬಾಣಕ್ಕೆ ಸೋತು
ಜುಮ್ಮನೆ ಮಾಮರವು ಹೂತು
ಕಾಮಗಾಗಿ ಕಾದಿದೆ
ಸುಗ್ಗಿ ಸುಗ್ಗಿ ಸುಗ್ಗಿ ಎಂದು
ಹಿಗ್ಗಿ ಗಿಳಿಯ ಸಾಲು ಸಾಲು
ತೋರಣದೊಲು ಕೋದಿದೆ

ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕೆ
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರೆಯ
ನಮಗದಷ್ಟೆ ಏತಕೆ?

ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಸಲ ನವೀನ ಜನನ
ನಮಗೆ ಏಕೆ ಬಾರದೊ?
ಎಲೆ ಸನತ್ಕುಮಾರದೇವ
ಸಲೆ ಸಾಹಸಿ ಚಿರಂಜೀವ
ನಿನಗೆ ಲೀಲೆ ಸೇರದೋ?

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ.
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.
ನಮ್ಮನಷ್ಟೆ ಮರೆತಿದೆ
   ಅವರ ಕಾಲದಲ್ಲಿ ಈ ಹಬ್ಬಕ್ಕೆ ಕೊಡುತ್ತಿದ್ದ ಮಣ್ಣನೆಯನ್ನು ಗುರ್ತಿಸಿ ಅವರ ಕುಂಚದಿಂದ ಅರಳಿರುವ ಈ ಸಾಲುಗಳು ಎಂತಹವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. ಯುಗದ ಹಬ್ಬ ಯುಗಾದಿಯಂತೆ ಈ ಹಾಡು ಈ ಹಬ್ಬಕ್ಕೆ ಬಹಳ ಸೂಕ್ತವಾಗಿದೆ. ವರಕವಿ ಬೇಂದ್ರೆಯವರನ್ನು ನೆನಪಿಸುತ್ತ ಮತ್ತು ಅವರಿಗೆ ನಮಸ್ಕರಿಸುತ್ತ. ಎಲ್ಲಿರಗೂ ಈ ಯುಗಾದಿಯು ಸರ್ವ ಸುಖಗಳನ್ನು ಕರುಣಿಸಲಿ ಎಂದು ಹಾರೈಸುತ್ತೇನೆ ಹಾಗೂ ಈ ಹಬ್ಬದ ಶುಭಾಶಯಗಳನ್ನು ಮುಕ್ತಮನಸ್ಸಿನಿಂದ ಎಲ್ಲರಿಗೂ ತಿಳಿಸುತ್ತೇನೆ ವಂದನೆಗಳೊಂದಿಗೆ ನಿಮ್ಮವ ವಸಂತ್ ಕೋಡಿಹಳ್ಳಿ.
ಚಿತ್ರಕೃಪೆ ಅಂತರಜಾಲ

2 comments:

sunaath said...

ಯುಗಾದಿಯ ಶುಭಾಶಯಗಳು!

ಮೌನರಾಗ said...

ಉಗಾದಿಯ ಹಾರ್ದಿಕ ಶುಭಾಶಯಗಳು....
ಹೊಸ ವರುಷ ಶುಭ ತರಲಿ....