Sunday, April 29, 2012

ನಾನು ಕವಿಯಲ್ಲ

ಯಾರೋ ಬರೆದಿಟ್ಟ
ಆ ನಾಲ್ಕು ಸಾಲುಗಳು
ಕವನವಾಗುತ್ತಂತೆ
ಎಷ್ಟೊಂದು ವಿಪರ್ಯಾಸ
ನನಗೆ ನಂಬಲಾಗುತ್ತಿಲ್ಲ
ನೀವಾದರೂ ಹೇಳಿ
ಅದು ಕವನವ ಎಂದು?

ನೆನ್ನೆಯಷ್ಟೆ ಬರೆದಿದ್ದ
ಹತ್ತಾರೂ ಪುಟಗಳನ್ನು
ಸಭೆಯಲ್ಲಿ ವಾಚಿಸಲು ಹೊರಟಾಗ
ಎಲ್ಲರು ಗೊಳ್ ಎಂದು ನಕ್ಕರು
ಕಥೆಯೊಳಗಿನ ಕವನವೆಂದರೆ
ಇದೇನ ಮಗು?
ಹತ್ತಲವು ಪ್ರಶ್ನೆಗಳು
ನನ್ನತ್ತ ದಾವಿಸಿದವು

ನಾನು ಮೌನವಾದೆ
ಉತ್ತರಿಸಲು ತಡವರಿಸಿದೆ
ಏಕಾಗ್ರತೆಯ ನೆಪವೊಡ್ಡಿ 
ಅಲ್ಲಿಂದ ನಿರ್ಗಮಿಸಿದೆ
ನನಗೆ ಅರ್ಥವಾಗುತ್ತಿಲ್ಲ
ಯಾವುದು ಕವನವೋ
ಯಾವುದು ಕಥೆಯೋ
ನಿವಾದರೂ ಹೇಳಿ
ಕಥೆಯೆಂದರೆ ಏನೆಂದು?

ಸಭೆಯಲ್ಲಿನ
ನನ್ನ ಮಾತುಗಳಿಂತಿದ್ದವು
ಕನಸುಗಳ ಕದ್ದು
ಬಯಕೆಗಳ ಹೊದ್ದು
ನೆನಪುಗಳ ಹಾಸಿಗೆಯ ಮೇಲೆ
ಗಾಢವಾಗಿ ನಿದ್ರಿಸುವುದು
ನಾಳೆಯೆಂಬುದು ನೆಪವಷ್ಟೆ
ನೆನ್ನೆಯೆಂಬುದು ಯೋಚನೆಯು
ಆ ನಾಲ್ಕು ಸಾಲುಗಳು 
ಕವನವೆಂದರೆ
ಈ ನನ್ನ ಪದಗಳು ಖಂಡಿತ
ಕಥೆಯಾಗಲೇ ಬೇಕು

ಸಭೆಯಲ್ಲಿನ ನನ್ನ ಸಾಲುಗಳು
ಕಥೆಯಾಗಲಿಲ್ಲ
ಕವನವೂ ಆಗಲಿಲ್ಲ
ಅದಕ್ಕಾಗಿ ನಾನು ಕವಿಯಾಗುತ್ತಿಲ್ಲ.

Saturday, April 28, 2012

ಮತ್ತೆ ಹೋಗಲಾರೆ


ಮಾರುದ್ದದ ಮನೆ
ನಾಲ್ಕಡಿಯ ಪಡಸಾಲೆ
ಹತ್ತಾರೂ ಬಯಕೆಗಳು
ಬತ್ತದೇ ಉಳಿದ
ನೆನಪುಗಳು

ಮುಳ್ಳೊದ್ದ ತಾರೀಸು
ಮುರಿದು ಬಿದ್ದ ಮುಟ್ಟುಗಳು
ಆಸ್ತಿತ್ವವಿಲ್ಲದೇ ಸೋತು
ಬಿರುಕು ಬಿಟ್ಟ ಗೋಡೆಗಳು

ಇದಕೆಲ್ಲ ಯಾರು ಕಾರಣ?
ನೂರೆಂಟು ಪ್ರಶ್ನೆಗಳು
ಮುರಿದ ಮನಸ್ಸಿನಲ್ಲಿ
ಬಲವಂತದ ಯೋಚನೆಗಳು

ನಾನೇ
ಉರಿಸಿಟ್ಟ ಪುಟ್ಟದೀಪ
ಆ ಸಣ್ಣ ಕಿಂಡಿಯೊಳಗಿದೆ
ನೋಡಿ!
ಇನ್ನೂ ಉರಿಯುತ್ತಿದೆ
ಕಾರಣ ಕೇಳಿ
ತಿಳಿದುಕೊಳ್ಳಿ

ಗುಡಿಸುವ ಪೊರಕೆ
ನನ್ನ ಕೈಗೆಟುಕಲಿಲ್ಲ
ಸಾರಿಸುದ ನೆಲ
ನನ್ನ ಗೌರವಿಸಲಿಲ್ಲ
ಜಡ್ಡುಗಟ್ಟಿದ ಜೇಡರ ಬಲೆಗಳಿಗೆ
ಸುಮ್ಮನಿರಿ ಎಂದು
ಯಾರೂ ಹೇಳಲಿಲ್ಲ

ಮನೆಯ ಮುಂದಿನ
ಗಿಡದಲ್ಲಿ
ದಾಸವಾಳ ನಗಲಿಲ್ಲ
ಸಂಪಿಗೆ ಮರದಲ್ಲಿನ ಕೋಗಿಲೆ
ಒಮ್ಮೆಯೂ
ಕೂಗಿ ಮಾತಾಡಿಸಲಿಲ್ಲ

ನೈದಿಲೆ ನಲಿಯಲಿಲ್ಲ
ನವಿಲು ಸಾಟ್ಯವಾಡಲಿಲ್ಲ
ನಕ್ಷತ್ರ ಹೊಳೆಯಲಿಲ್ಲ
ಚಂದ್ರ ಬೆಳಕಾಗಿಲ್ಲ
ಕನಸ್ಸುಗಳು ಕಥೆ ಹೇಳಲಿಲ್ಲ
ಆಸೆಗಳು ಅಳಿಸಲಿಲ್ಲ

ಏಕೆಂದು ನನ್ನ  
ಯಾರೂ ಕೇಳದಿರಿ!
ಆ ಕಿಂಡಿಯೊಳಗಿನ ದೀಪ
ಇನ್ನೂ ಉರಿಯುತ್ತಿದೆ
ಹೋಗಿ ಪ್ರಶ್ನಿಸಿಕೊಳ್ಳಿ
ಕಾರಣ ತಿಳಿದುಕೊಳ್ಳಿ
ನಾ ಮಾತ್ರ ಆ ಮನೆಗೆ
ಮತ್ತೆಂದು ಹೋಗಲಾರೆ.

Monday, April 23, 2012

ಕಾಯಕ ಯೋಗಿ ಶ್ರೀ ಬಸವೇಶ್ವರ ಜಯಂತಿಯ ಶುಭಾಶಯಗಳು

ಉಳ್ಳವರು ಶಿವಾಲಯ ಮಾಡುವವರು
ನಾನೇನು ಮಾಡಲಿ ಬಡವನಯ್ಯ
ಎನ್ನ ಕಾಲೇ ಕಂಭ, ದೇಹವೇ ದೇಗುಲ
ಶಿರವೇ ಹೊನ್ನ ಕಲಶವಯ್ಯ
ಕೂಡಲ ಸಂಗಮ ದೇವ ಕೇಳಯ್ಯ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ

ಅನುಭವಮಂಟಪದ ಸ್ಥಾಪಕರಾದ ಬಸವಣ್ಣನವರು ಸಮಾಜದ ಮೇಲು ಕೀಳಿನ ಅಂತರವನ್ನು ಜರೆಯುತ್ತ ಜಾತಿ ಮತಗಳನ್ನ ಅಳಿಸುವ ಕಾರ್ಯದಲ್ಲಿ ತೊಡಗಿ ಅಂತರಜಾತಿಯ ವಿವಾಹಗಳಿಗೆ ಪ್ರೋತ್ಸಾವನ್ನು ನೀಡಿದರು ಹಾಗೇ ಸಮಾಜದ ಆರೋಗ್ಯಕರ ಬಳವಣಿಗಗೆ ದುಡಿದ ಕಾಯಕ ಯೋಗಿಯಾದ ಬಸವಣ್ಣ.

ಲೇಸ ಕಂಡ ಮನ ಬಯಸಿ ಬಯಸಿ
ಆಶೆ ಮಾಡಿದರಿಲ್ಲ ಕಂಡಯ್ಯ
ತಾಳ ಮರಕ್ಕೆ ಕೈಯ ನೀಡಿ, ಮೇಲು ನೋಡಿ
ಗೋಣು ನೊಂದುದಯ್ಯ
ಕೂಡಲ ಸಂಗಮದೇವ ಕೇಳಯ್ಯ
ನೀನೀವ ಕಾಲಕ್ಕಲ್ಲದಿಲ್ಲ ಕಂಡಯ್ಯ.

ಎನ್ನುತ್ತ ತಮ್ಮ ಮಹತ್ ಕಾರ್ಯಗಳಿಗೆ ಸನಿಹದವರೇ ಕೇಡನ್ನುಬಯಸಿ ಬಸವ ಕುಲವನ್ನೇ ಅಳಿಸುವ ಯೋಜನೆಯನ್ನು ರೂಪಿಸುತ್ತಾರೆ. ಇದರಿಂದ ಮನನೊಂದ ಬಸವಣ್ಣನವರು 1196ರಲ್ಲಿ ಕೂಡಲಸಂಗಮಕ್ಕೆ ಮರಳಿ ಲಿಂಗೈಕ್ಯರಾಗುತ್ತಾರೆ. ಅಂದರೆ ಅವರಲ್ಲಿ "ನಮ್ಮ ಸಮಾಜಕ್ಕೆ ಬದಲಾವಣೆಯ ಅಗತ್ಯ ಬೇಕಿಲ್ಲ. ಮತ್ತಷ್ಟು ಜಾತಿ ಮತಗಳನ್ನು ಸೃಷ್ಟಿಸುತ್ತ ಮತ ಕಲಹಗಳನ್ನು ಬೆಳೆಸುವಂತ ಕಾರ್ಯವಾದರೆ ಚಾಮರವೀಸಿ ಕರೆಯುತ್ತಾರೆ" ಎಂಬ ನೋವು ಕಾಡುತ್ತದೆ.

ಒಲೆ ಹತ್ತಿ ಉರಿದರೆ ನಿಲಬಹುದು
ಧರೆ ಹತ್ತಿ ಉರಿದರೆ ನಿಲ್ಲಬಾರದು
ಏರಿ ನೀರುಂಬಡೆ ಬೇಲಿ ಕೈಯ ಮೇವಡೆ
ನಾರಿ ತನ್ನ ಮನೆಯಲ್ಲಿ ಕಳುವಡೆ
ತಾಯ ಮೊಲೆವಾಲು ನಂಜಾಗಿ ಕೊಲುವಡೆ
ಇನ್ನಾರಿಗೆ ದೂರುವೆ
ತಂದೆ ಕೂಡಲಸಂಗಮದೇವ
ನೀ ಹುಟ್ಟಿಸಿ ಜೀವನ ಭವದುಃಖಿಯ ಮಾಡಿದ ಬಳಿಕ
ಬಿಡಿಸುವರಾರುಂಟೆ?

ಎಂಬ ಪ್ರಶ್ನೆಗೆ ಉತ್ತರವನ್ನು ನಮ್ಮಲ್ಲಿ ನಾವೇ ಕೇಳಿಕೊಳ್ಳಬೇಕಾಗುತ್ತದೆ. ಒಲೆ ಹತ್ತಿ ಉರಿದರೆ ನಿಲ್ಲಬಹುದು ಆದರೆ ಭೂಮಿಯೇ ಹತ್ತಿ ಉರಿದರೆ ರಕ್ಷಣೆಗೆ ಎಲ್ಲಿ ಹೋಗುವುದು. ಕೆರೆಯೇ ನೀರನ್ನು ಕುಡಿದರೆ, ಬೇಲೇಯೇ ಎದ್ದು ಹೊಲ ಮೇಯ್ದರೆ, ತಾಯಿ ತನ್ನ ಮಗುವಿಗೆ ವಿಷವನ್ನು ಕೊಟ್ಟರೆ ನಾವು ಯಾರ ಬಳಿ ದೂರನ್ನು ಸಲ್ಲಿಸಬೇಕು. ಎಂದು ಕೂಡಲ ಸಂಗಮನಿಗೆ ತಮ್ಮ ಅತಾಶೆ, ನೋವನ್ನು ತೋರ್ಪಡಿಸಿಕೊಳ್ಳುತ್ತಾರೆ. ಹೀಗೆ ಅವರ ಪ್ರತಿಯೊಂದು ವಚನವೂ ಒಂದೊಂದು ಪರ್ವದಂತೆ ಪ್ರಶ್ನೆಯಂತೆ ನಮ್ಮನ್ನು ಕಾಡುತ್ತಾ ಸಾಗುತ್ತದೆ ಅಂಥ ಮಹಾತ್ಮನನ್ನು ಏನೆಂದು ಕೊಂಡಾಡಿದರೂ ಸಾಲದೇನೋ...


ದಾರಿ ಸೊಟ್ಟಗಿದೆ


ಯಾರೋ!
ಒಂದು ಗೊಂಬೆಯ ಮಾಡಿ
ಮತ್ಯಾರೋ ಅದಕ್ಕೆ ಜೀವತುಂಬಿ
ಸನ್ಮಾರ್ಗದತ್ತ ಹಾದಿಯತೋರಿ
ನಡೆಯಲು ಬಿಟ್ಟರೆ
ದಾರಿ ಸುಗಮಗೊಳ್ಳುವುದಿಲ್ಲ

ಹತ್ತಾರು ಸೆಳೆತಗಳು
ಒಮ್ಮೆಲೆ ಜಗ್ಗಿ ಎಳೆದಿಡಿಯುತ್ತವೆ
ಅಡ್ಡಗಟ್ಟಿ ಮುಂಬಿಡದೆ ನಿಲ್ಲುತ್ತವೆ
ದಾರಿ ವಿಶಾಲವಾಗಿದ್ದರೂ
ಅದರೊಳು ಚುಚ್ಚುವ ಚೂಪು
ಮುಳ್ಳುಗಳು ಘಾಸಿಗೊಳಿಸುತ್ತವೆ

ನಾನು ರಾಮನಲ್ಲ
ರಹೀಮನಲ್ಲ
ಬಿಟ್ಟು ಬಿಡಿ ನನ್ನ!
ನಾನು ನನ್ನಂತೆಯೇ
ನಡೆಯಬೇಕಿದೆ ಎಂದರೂ
ನಿನ್ನ ಮಾತಿಗೆ ಯಾರೂ
ಕಿವಿಗೊಡುವುದಿಲ್ಲ
ಕೊಟ್ಟರೂ ಅದಕ್ಕೆ
ಬೆಲೆಕೊಡುವುದಿಲ್ಲ

ಜಾತಿಯೆಂಬ ಭೂತ
ಮತವೆಂಬ ಮತಿಹೀನ
ಧರ್ಮವೆಂಬ ದಾನವ
ಸ್ವಾರ್ಥವೆಂಬ ಕಪಟ
ನಮ್ಮ ದಾರಿಯಲ್ಲಿ
ಹೊಂಚುಹಾಕಿ ಕಾಯುತ್ತಾರೆ

ಬುದ್ಧ ನಡೆದ
ದಾರಿ ಸುಗಮಗೊಳ್ಳಲಿಲ್ಲ
ಬಸವ ನಡೆದ ಮೆದುಗೊಳ್ಳಲಿಲ್ಲ
ಗಾಂಧಿ ನಡೆದು
ರಕ್ತದಲ್ಲಿ ಮುಳುಗಿಹೋದರು
ಅಂಬೇಡ್ಕರರಿಗೇ
ಆ ಮಾರ್ಗವೇ ಅರ್ಥವಾಗಲಿಲ್ಲ

ಅಬ್ಬಾ!
ಅದೆಂಥಾ ದಾರಿಯಿದ್ದಿರಬಹುದು?
ಎಷ್ಟು ಘನವಾದದ್ದೋ?
ತುಂಬಾ ಕಠಿಣವಾದದ್ದೇ ಇರಬೇಕು?
ಕೇವಲ ಮೂಗಿನಮೇಲೆ
ಬೆರಳಿಟ್ಟುಕೊಂಡರಷ್ಟೆ,
ಬದಲಾವಣೆಗೆ
ಯಾರೂ ಮುಂದಾಗಲಿಲ್ಲ

ನಿಜ ದಾರಿ ಸೊಟ್ಟಗಿದೆ
ನಾನೇನು ಮಾಡಲಿ
ನಡೆಯುತ್ತೇನೆ ಬಿಡಿ
ಕಷ್ಟವೋ ಸುಖವೋ!
ಬಿದ್ದ ಕಲ್ಲುಮುಳ್ಳುಗಳನ್ನು
ಆಯುತ್ತ ನಡೆದಷ್ಟೇ ದೂರ
ನನ್ನ ಪ್ರಯಾಣ
ಸುಮ್ಮನಿದ್ದರೆ ದಾರಿ
ಸಾಗುವುದಾ ಹೇಳಿ?.

Sunday, April 22, 2012

ಒಂದಷ್ಟು ಪ್ರಣಾಮಗಳು


ಸೃಷ್ಟಿಯೇ ಒಂದು ದೇವಲೋಕ.
ಅದರೊಳು ನಮ್ಮ ಇರುವಿಕೆ
ಪರಮಾತ್ಮನನ್ನು ಸ್ಪರ್ಷಿಸಿದಂತೆ

ಕಳ್ಸೆಳೆವ ವಿಂಗಮ ನೋಟಗಳು
ಬೆರಗು ಮೂಡಿಸುವ ಕಂದರ ಕಣೆವೆಗಳು
ಅದ್ಭುತ ಅದಮ್ಯ ರಹಸ್ಯತಾಣಗಳನ್ನು
ಮನಸಾರೆ ಸವಿಯುವಂತ ಅಧೃಷ್ಟ
ನಮಗಲ್ಲದೆ ಮತ್ಯಾರಿಗೆ ?

ಇಂಥ ಸೃಷ್ಟಿಯ ಸೊಬಗನ್ನು 
ರಮ್ಯ ಮನೋಹರ ಚಲುವನ್ನು
ಯಾವ ಪದದಿಂದ ವರ್ಣಿಸಿದರೂ ಸಾಲದು
ಕೋಟಿ ಬಹುಮಾನಗಳನ್ನು ಕೊಟ್ಟರೂ
ಕಿಂಚಿತ್ತೂ ತುಂಬಲಾಗದು

ಆದರೂ
ಇಂಥ ಅದ್ಭುತ ಸೃಷ್ಟಿಯ ಕರ್ತನಿಗೆ
ಒಂದಷ್ಟು ಪ್ರಣಾಮಗಳನ್ನಾದರೂ
ಸಲ್ಲಿಸಿ ಸುಮ್ಮನಾಗುತ್ತೇನೆ
ಇದಕ್ಕಿಂತ ಹಿರಿದಾಗ ಬಹುಮಾನ
ನನ್ನ ಬಳಿಯಿಲ್ಲ.

Wednesday, April 18, 2012

ಇತ್ತ ಹೆಜ್ಜೆ ಊರದಿರು


ನೋಡು ಹುಡುಗ
ನಿನ್ನ ನೆನೆಪುಗಳು ಸೊರಗುವಷ್ಟು
ಮನಸ್ಸು ಬಾವಲಿಯಾಗುವಷ್ಟು
ಕತ್ತಲು ಸರಿದೋಗುವಷ್ಟು
ಕನಸುಗಳು ಕರಗುವಷ್ಟು
ಆಸೆಗಳು ಬತ್ತುವಷ್ಟು
ಭಾಶೆಗಳು ಬದಲಾಗುವಷ್ಟು
ನಾನು ಕಾಯಲಾರೆ

ನಮ್ಮಿಬ್ಬರ ಪ್ರೀತಿಗೆ
ಬೆಳದಿಂಗಳ ಚಂದ್ರನನ್ನು
ಹೊಳೆಯುವ ತಾರೆಗಳನ್ನು
ಚಲಿಸುವ ಮೋಡಗಳನ್ನು
ಕಲಕಲಿಸುವ ಕಡಲನ್ನು
ಬೆಳಗುವ ಹಣತೆಯನ್ನು
ಮಿನುಗುವ ಮಿಣುಕುಹುಳುಗಳನ್ನು
ಸಾಕ್ಷಿಯನ್ನಾಗಿ ತರಲಾರೆ
ಈಗಲೇ ಸೋತು ಸೊರಗಿದ್ದೇನೆ
ಇನ್ನೆಚ್ಚು ಸಮಯ
ನಾ ಕಾಯಲಾರೆ ಹುಡುಗ

ನಿನ್ನ ನೆನಪುಗಳೆಂಬ
ಬೆಚ್ಚನೆಯ ಮಣ್ಣಹೊದ್ದು
ಮೌನವಾಗಿ ಮಲಗಿಬಿಡುತ್ತೇನೆ
ಮತ್ತೆ ದಾಸವಾಳವಾಗಿ
ಚಿಗುರೊಡೆಯಲಾರೆ
ನೀ ಬರುತ್ತೇನೆಂದರೂ
ನನ್ನ ಆಸೆಗಳು ನಿನ್ನನ್ನು
ನಿರ್ದಾಕ್ಷಿಣ್ಯವಾಗಿ ಹೊರಗಟ್ಟಿಬಿಡುತ್ತವೆ
ನೀನು ಅವಮಾನ ಪಡುವುದನ್ನು
ನಾನು ಸಹಿಸಲಾರೆ
ದಾರಿ ತಪ್ಪಿಯೂ ಎಂದು
ಇತ್ತ ಕಡೆ ಹೆಜ್ಜೆ ಊರದಿರು

Tuesday, April 17, 2012

ಮೊದ್ಲು ಮಳಿ ಬರ್ಬೇಕುಹೊತ್ತು ಉರಿದ್ಯಾದ
ಹೊಟ್ಟಿ ಹಸಿದ್ಯಾದ
ರೊಕ್ಕ ಎಲ್ಲೈತ್ರಿ ಅಪ್ಪಾ!
ಬರ ಬಂದ್ ಕೂತಾದ

ಕೆರೆ ಕುಂಟೆ ಬತ್ಯಾವ
ಮರಗಿಡ ಒಣಗ್ಯಾವ
ಊರ್ ಮಂದಿ ಗುಳೆ ಹೊಂಟಾರ
ಏಂಗ್ ಬದುಕಾದ್ ಹೇಳಪ್ಪ!

ಮೋಡ ಕಪ್ಪಿಡ್ತೈತಿ
ಕಾವು ಎದ್ದು ಬರ್ತೈತಿ
ಗುಡುಗು ಮೂಡಂಗಿಲ್ಲ
ಹನಿ ಉದುರಾಂಗಿಲ್ಲ

ಐದು ವರುಸಕ್ಕೊಮ್ಮೆ
ಬರೋ ಜನಗಳ್ಲು
ಇತ್ಲಾಗೆ ಮುಖಮಾಡಂಗಿಲ್ಲ
ನಮ್ ತ್ರಾಸು ಅವ್ರಿಗೆ
ಏಂಗ್ ತೀಳಿಬೇಕ

ಒಟ್ನಾಗ 
ಸಿವ ದಾರಿ ತೋರ್ಬೇಕು
ಹಟ್ಯಾಗ ದೀಪ ಉರಿಬೇಕು
ಯಾರ್ನ ಬೈದ್ರೇನ್ ಸುಖ
ಮೊದ್ಲು ಮಳಿ ಬರ್ಬೇಕು
ನಮ್ ಕಷ್ಟ ತೀರ್ಬೇಕು

Wednesday, April 11, 2012

ನಾನು ನಾನಾಗಲಿಲ್ಲ


ಆಕಾಶದಷ್ಟು ಆಸೆಗಳು
ಆಸರೆಯಾಗಿ ನಿಲ್ಲಲಿಲ್ಲ
ಭೂಮಿಯಗಲ ಮಾತುಗಳು
ಬಾಯ್ಬಿಚ್ಚಿ ಮಾತಾಡಲಿಲ್ಲ
ನೆಮ್ಮದಿಯ ರೇಖೆಗಳು
ಕೈಯಲ್ಲಿ ಮೂಡಲಿಲ್ಲ
ಒಂದು ಕ್ಷಣ ಕಾಯಿರಿ
ಅವುಗಳನ್ನು ಅಳಿಸಿಬಿಡುತ್ತೇನೆ
ಮೊದಲು
ನಾನು ನಾನಾಗಬೇಕಿದೆ

ಕನಸುಗಳಿಗೆ ರೆಕ್ಕೆಬರಲಿಲ್ಲ
ಭಾವನೆಗಳು ಬಲಗೊಳ್ಳಲಿಲ್ಲ
ಕಣ್ಣೀರಿಗೆ ಭರವಿರಲಿಲ್ಲ
ಸಂಬಂಧಗಳು ಸಾವರಿಸಲಿಲ್ಲ
ಒಂದು ಕ್ಷಣ ಕಾಯಿರಿ
ಅವುಗಳನ್ನು ಕಳೆದುಬಿಡುತ್ತೇನೆ
ಮೊದಲು
ನಾನು ನಾನಾಗಬೇಕಿದೆ

ದಾರಿ ದಿಕ್ಕುತೋರಲಿಲ್ಲ
ಮೌನ ಮಾತನಾಡಲಿಲ್ಲ
ರಕುತ ಒಳಸೇರಲಿಲ್ಲ
ಹೃದಯ ಸದ್ದುಮಾಡಲಿಲ್ಲ
ಒಂದು ಕ್ಷಣ ಕಾಯಿರಿ
ಅವುಗಳನ್ನು ಬದಲಿಸಿಬಿಡುತ್ತೇನೆ
ಮೊದಲು
ನಾನು ನಾನಾಗಬೇಕಿದೆ

ಸೂರ್ಯ ಕೆಂಪಾಗಲಿಲ್ಲ
ಗಾಳಿ ತಣ್ಣಗಾಗಲಿಲ್ಲ
ಚಂದ್ರ ಬೆಳಕತೋರಲಿಲ್ಲ
ಕತ್ತಲು ಕವಲೊಡೆಯಲಿಲ್ಲ
ಕ್ಷಮಿಸಿ ಬಿಡಿ ನನಗೆ
ಈ ಬದುಕು ಅರ್ಥವಾಗಲಿಲ್ಲ
ಅದಕ್ಕೆ
ನಾನು ನಾನಾಗಲಾಗಲಿಲ್ಲ

Monday, April 9, 2012

ಸುಮ್ಮನಿರಿ ಸಾಕು


ಸುಮ್ಮನಿರಿ ಸಾಕು
ನನಗೆಲ್ಲವೂ ಅರ್ಥವಾಗಿದೆ
ಲೋಕ ಸುತ್ತುತ್ತಿದೆ ನಿಜ
ಆದರೆ
ಮುಂದೆ ಮುಂದೆಯಲ್ಲ
ಹಿಂದೆ ಹಿಂದೆ

ಅವನ ಹರಿದ ಬಟ್ಟೆ
ಹೊಲೆಯುವ ತನಕ
ಅವಳ ಬೇಡು ಕೈಗಳು
ಸ್ವಚ್ಛವಾಗುವ ತನಕ
ಅವರ ಮಾಸಲು ನಗೆ
ತಿಳಿಯಾಗುವ ತನಕ
ಲೋಕ ಸುತ್ತುತ್ತದೆ
ಆದರೆ
ಮುಂದೆ ಮುಂದೆಯಲ್ಲ
ಹಿಂದೆ ಹಿಂದೆ

ಅವರ ಮಹಾಸಭೆಗಳಲ್ಲಿ
ಸತ್ಯಕಾಣುವ ತನಕ
ಅವರ ನಡೆಯಲ್ಲಿ
ವಿಶ್ವಾಸಮೂಡುವ ತನಕ
ಅವರ ಆಶ್ವಾಸನೆಗಳಲ್ಲಿ
ನಿಜ ಗೋಚರಿಸುವ ತನಕ
ಲೋಕ ಸುತ್ತುತ್ತದೆ
ಆದರೆ
ಮುಂದೆ ಮುಂದೆಯಲ್ಲ
ಹಿಂದೆ ಹಿಂದೆ

ಎಲ್ಲೆಲ್ಲೂ ಸಮಾನತೆ
ನೆಲೆಸಿನಿಲ್ಲುವ ತನಕ
ಸಜ್ಜನರ ಹಿತನುಡಿಗಳು
ಅರಳಿನಗುವ ತನಕ
ಜಾತಿ ಮತಗಳು
ಮರೆತುಹೋಗುವ ತನಕ
ಲೋಕ ಸುತ್ತುತ್ತದೆ
ಆದರೆ
ಮುಂದೆ ಮುಂದೆಯಲ್ಲ
ಹಿಂದೆ ಹಿಂದೆ

ಅವರ ಯುದ್ಧಗಳು
ಕೊನೆಯಾಗುವ ತನಕ
ಅವರ ಯೋಜನೆಗಳು
ಅಳಸಿಹೋಗುವ ತನಕ
ಈ ಜಗತ್ತಿನ್ನೆಲ್ಲೆಡೆ
ಶಾಂತಿ ನೆಲಸುವ ತನಕ
ಲೋಕ ಸುತ್ತುತ್ತದೆ
ಆದರೆ
ಮುಂದೆ ಮುಂದೆಯಲ್ಲ
ಹಿಂದೆ ಹಿಂದೆ ಅಲ್ಲವೆ?