Monday, April 23, 2012

ದಾರಿ ಸೊಟ್ಟಗಿದೆ


ಯಾರೋ!
ಒಂದು ಗೊಂಬೆಯ ಮಾಡಿ
ಮತ್ಯಾರೋ ಅದಕ್ಕೆ ಜೀವತುಂಬಿ
ಸನ್ಮಾರ್ಗದತ್ತ ಹಾದಿಯತೋರಿ
ನಡೆಯಲು ಬಿಟ್ಟರೆ
ದಾರಿ ಸುಗಮಗೊಳ್ಳುವುದಿಲ್ಲ

ಹತ್ತಾರು ಸೆಳೆತಗಳು
ಒಮ್ಮೆಲೆ ಜಗ್ಗಿ ಎಳೆದಿಡಿಯುತ್ತವೆ
ಅಡ್ಡಗಟ್ಟಿ ಮುಂಬಿಡದೆ ನಿಲ್ಲುತ್ತವೆ
ದಾರಿ ವಿಶಾಲವಾಗಿದ್ದರೂ
ಅದರೊಳು ಚುಚ್ಚುವ ಚೂಪು
ಮುಳ್ಳುಗಳು ಘಾಸಿಗೊಳಿಸುತ್ತವೆ

ನಾನು ರಾಮನಲ್ಲ
ರಹೀಮನಲ್ಲ
ಬಿಟ್ಟು ಬಿಡಿ ನನ್ನ!
ನಾನು ನನ್ನಂತೆಯೇ
ನಡೆಯಬೇಕಿದೆ ಎಂದರೂ
ನಿನ್ನ ಮಾತಿಗೆ ಯಾರೂ
ಕಿವಿಗೊಡುವುದಿಲ್ಲ
ಕೊಟ್ಟರೂ ಅದಕ್ಕೆ
ಬೆಲೆಕೊಡುವುದಿಲ್ಲ

ಜಾತಿಯೆಂಬ ಭೂತ
ಮತವೆಂಬ ಮತಿಹೀನ
ಧರ್ಮವೆಂಬ ದಾನವ
ಸ್ವಾರ್ಥವೆಂಬ ಕಪಟ
ನಮ್ಮ ದಾರಿಯಲ್ಲಿ
ಹೊಂಚುಹಾಕಿ ಕಾಯುತ್ತಾರೆ

ಬುದ್ಧ ನಡೆದ
ದಾರಿ ಸುಗಮಗೊಳ್ಳಲಿಲ್ಲ
ಬಸವ ನಡೆದ ಮೆದುಗೊಳ್ಳಲಿಲ್ಲ
ಗಾಂಧಿ ನಡೆದು
ರಕ್ತದಲ್ಲಿ ಮುಳುಗಿಹೋದರು
ಅಂಬೇಡ್ಕರರಿಗೇ
ಆ ಮಾರ್ಗವೇ ಅರ್ಥವಾಗಲಿಲ್ಲ

ಅಬ್ಬಾ!
ಅದೆಂಥಾ ದಾರಿಯಿದ್ದಿರಬಹುದು?
ಎಷ್ಟು ಘನವಾದದ್ದೋ?
ತುಂಬಾ ಕಠಿಣವಾದದ್ದೇ ಇರಬೇಕು?
ಕೇವಲ ಮೂಗಿನಮೇಲೆ
ಬೆರಳಿಟ್ಟುಕೊಂಡರಷ್ಟೆ,
ಬದಲಾವಣೆಗೆ
ಯಾರೂ ಮುಂದಾಗಲಿಲ್ಲ

ನಿಜ ದಾರಿ ಸೊಟ್ಟಗಿದೆ
ನಾನೇನು ಮಾಡಲಿ
ನಡೆಯುತ್ತೇನೆ ಬಿಡಿ
ಕಷ್ಟವೋ ಸುಖವೋ!
ಬಿದ್ದ ಕಲ್ಲುಮುಳ್ಳುಗಳನ್ನು
ಆಯುತ್ತ ನಡೆದಷ್ಟೇ ದೂರ
ನನ್ನ ಪ್ರಯಾಣ
ಸುಮ್ಮನಿದ್ದರೆ ದಾರಿ
ಸಾಗುವುದಾ ಹೇಳಿ?.

No comments: