Saturday, April 28, 2012

ಮತ್ತೆ ಹೋಗಲಾರೆ


ಮಾರುದ್ದದ ಮನೆ
ನಾಲ್ಕಡಿಯ ಪಡಸಾಲೆ
ಹತ್ತಾರೂ ಬಯಕೆಗಳು
ಬತ್ತದೇ ಉಳಿದ
ನೆನಪುಗಳು

ಮುಳ್ಳೊದ್ದ ತಾರೀಸು
ಮುರಿದು ಬಿದ್ದ ಮುಟ್ಟುಗಳು
ಆಸ್ತಿತ್ವವಿಲ್ಲದೇ ಸೋತು
ಬಿರುಕು ಬಿಟ್ಟ ಗೋಡೆಗಳು

ಇದಕೆಲ್ಲ ಯಾರು ಕಾರಣ?
ನೂರೆಂಟು ಪ್ರಶ್ನೆಗಳು
ಮುರಿದ ಮನಸ್ಸಿನಲ್ಲಿ
ಬಲವಂತದ ಯೋಚನೆಗಳು

ನಾನೇ
ಉರಿಸಿಟ್ಟ ಪುಟ್ಟದೀಪ
ಆ ಸಣ್ಣ ಕಿಂಡಿಯೊಳಗಿದೆ
ನೋಡಿ!
ಇನ್ನೂ ಉರಿಯುತ್ತಿದೆ
ಕಾರಣ ಕೇಳಿ
ತಿಳಿದುಕೊಳ್ಳಿ

ಗುಡಿಸುವ ಪೊರಕೆ
ನನ್ನ ಕೈಗೆಟುಕಲಿಲ್ಲ
ಸಾರಿಸುದ ನೆಲ
ನನ್ನ ಗೌರವಿಸಲಿಲ್ಲ
ಜಡ್ಡುಗಟ್ಟಿದ ಜೇಡರ ಬಲೆಗಳಿಗೆ
ಸುಮ್ಮನಿರಿ ಎಂದು
ಯಾರೂ ಹೇಳಲಿಲ್ಲ

ಮನೆಯ ಮುಂದಿನ
ಗಿಡದಲ್ಲಿ
ದಾಸವಾಳ ನಗಲಿಲ್ಲ
ಸಂಪಿಗೆ ಮರದಲ್ಲಿನ ಕೋಗಿಲೆ
ಒಮ್ಮೆಯೂ
ಕೂಗಿ ಮಾತಾಡಿಸಲಿಲ್ಲ

ನೈದಿಲೆ ನಲಿಯಲಿಲ್ಲ
ನವಿಲು ಸಾಟ್ಯವಾಡಲಿಲ್ಲ
ನಕ್ಷತ್ರ ಹೊಳೆಯಲಿಲ್ಲ
ಚಂದ್ರ ಬೆಳಕಾಗಿಲ್ಲ
ಕನಸ್ಸುಗಳು ಕಥೆ ಹೇಳಲಿಲ್ಲ
ಆಸೆಗಳು ಅಳಿಸಲಿಲ್ಲ

ಏಕೆಂದು ನನ್ನ  
ಯಾರೂ ಕೇಳದಿರಿ!
ಆ ಕಿಂಡಿಯೊಳಗಿನ ದೀಪ
ಇನ್ನೂ ಉರಿಯುತ್ತಿದೆ
ಹೋಗಿ ಪ್ರಶ್ನಿಸಿಕೊಳ್ಳಿ
ಕಾರಣ ತಿಳಿದುಕೊಳ್ಳಿ
ನಾ ಮಾತ್ರ ಆ ಮನೆಗೆ
ಮತ್ತೆಂದು ಹೋಗಲಾರೆ.

2 comments:

DEW DROP (ಮಂಜಿನ ಹನಿ) said...

ಒಂದು ಗಟ್ಟಿ ಆಯಾಮದ ಸುತ್ತಾ ಸುರುಳಿಯಾಗಿ ಸುತ್ತಿದ್ದೀರಿ ವಸಂತಣ್ಣ.. ಸುತ್ತಿರುವ ಬಿಗಿತಕ್ಕೆ ಜೋತು ಬಿದ್ದ ಮನ ಇನ್ನೂ ಉರಿಯುತ್ತಿರುವ ದೀಪವನ್ನು ಪ್ರಶ್ನಿಸುತ್ತಿದೆ.. ಸಿಗದಿರುವ ಉತ್ತರವನ್ನು ಬೆದಕಿ, ಕೆದಕುತ್ತಿದೆ.. ಮನಸ್ಸಿನಲ್ಲಿನ ಸುಪ್ತ ಭಾವಗಳನ್ನು ಹೊರಗೆಡವಲು ಉರುವಲಾಗಿ ಪಡೆದುಕೊಂಡಿರುವ ಉಪಮೆಗಳು ಗಟ್ಟಿಯಾಗಿವೆ.. ಕವಿತೆಗೆ ಧನಾತ್ಮಕತೆಯನ್ನು ತುಂಬಿದೆ.. ಬಹಳವಾಗಿ ಮೆಚ್ಚುಗೆಯಾಯ್ತು..:))

ವಸಂತ್ ಕೋಡಿಹಳ್ಳಿ said...

ಪ್ರತಿಕ್ರಿಯೆಗೆ ಮತ್ತು ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು ಸರ್