Tuesday, May 29, 2012

ಕರ್ಮ ಫಲ


      “ಕರ್ಮ ಪದಕ್ಕೆ ಮೊದಲ ಅರ್ಥ ಕಾಯಕ. ಕೆಲಸ ಅಥವಾ ದುಡಿಮೆ ಎಂಬಾಗುತ್ತದೆ. ಲೋಕದಲ್ಲಿ ಮಾಡಲೇ ಬೇಕಾದ ಕರ್ತವ್ಯದ ನಿಯಮವನ್ನು ಕರ್ಮವೆಂದು ಹೇಳಬಹುದು. ಹಿಂದೂ ಧರ್ಮದ ಭಗವದ್ಗೀತೆಯ ಪ್ರಕಾರ ಕರ್ಮವೆಂಬ ಪದದ ಅರ್ಥ ಹೀಗಿದೆ. ಅಂದರೆ ಹಿಂದೂ ಧರ್ಮದಲ್ಲಿ ಹೇಳಲ್ಪಡುವ ನಾಲ್ಕು ಯೋಗಗಳಲ್ಲಿ ಕರ್ಮಯೋಗವೂ ಒಂದು. 'ಕರ್ಮ' ಎಂಬ ಶಬ್ದವು 'ಕೃ' ಎಂಬ ಧಾತುವಿನಿಂದ ಹುಟ್ಟಿರುತ್ತದೆ. 'ಕೃ' ಎಂದರೆ ಮಾಡುವುದು, ವ್ಯವಹರಿಸುವುದು ಮುಂತಾದ ಅರ್ಥಗಳ ಪ್ರಕಾರ ಕರ್ಮ ಎಂದರೆ ಕೆಲಸ ಎಂದು ತಾತ್ಪರ್ಯವಾಗುತ್ತದೆ. ಅಂದರೆ ಪ್ರತಿಯೊಬ್ಬ ಜೀವಿಯೂ ತನ್ನ ಬದುಕಿಗೆ ಸಂಬಂಧಪಟ್ಟಂತೆ ಯಾವುದಾದರೂ ಕರ್ಮ (ಕೆಲಸ) ಮಾಡುತ್ತಲೇ ಇರುತ್ತಾನೆ

         ಕರ್ಮಗಳಿಂದ  ತಾನು ಮಾಡಿದ ಕೆಲಸಕ್ಕೆ ಸರಿಯಾಗಿ ಒಳ್ಳೆಯ ಅಥವಾ ಕೆಟ್ಟ ಪ್ರತಿಫಲಗಳನ್ನು ಗಳಿಸಿಕೊಳ್ಳುತ್ತಾನೆ. ರೀತಿ ಕೆಲಸಗಳನ್ನು ಮಾಡುತ್ತಾ ಅದಕ್ಕೆ ಪ್ರತಿಫಲಗಳನ್ನು ಪಡೆಯುತ್ತಾ  'ಕರ್ಮಬಂಧ'ಕ್ಕೆ ಒಳಗಾಗುತ್ತಾನೆ. ಇದರಿಂದಾಗಿ ಮತ್ತೆ ಮತ್ತೆ ಹುಟ್ಟು ಸಾವುಗಳ ಚಕ್ರಕ್ಕೆ ಸಿಲುಕುತ್ತಾನೆ. ತಾನು ಮಾಡುವ ಕೆಲಸಗಳಿಂದ ಯಾವಾಗ  'ಕರ್ಮಬಂಧ' ಕ್ಕೆ ಸಿಲುಕುವುದಿಲ್ಲವೋ ಆಗ ಜೀವಿಯು ಕರ್ಮದಿಂದ ಮುಕ್ತನಾಗುತ್ತಾನೆ. ಒಂದೆಡೆ ಕೆಲಸಗಳು ಜನತೆಯನ್ನು ಕರ್ಮಬಂಧಕ್ಕೆ ಒಳಪಡಿಸಿದರೆ ಅದೇ ಕೆಲಸ ಸರಿಯಾಗಿ ನಿರ್ವಹಿಸಲ್ಪಟ್ಟಾಗ ಜನತೆಯ ಕರ್ಮವಿಮೋಚನೆಗೆ ಸಾಧನವಾಗುತ್ತದೆ ಎಂಬುದಾಗಿ ವ್ಯಾಖ್ಯಾನಿಸಲಾಗಿದೆ. 

     ಅದೇ ರೀತಿ ಕರ್ಮವೆಂಬ ಪದಕ್ಕೆ ಮತ್ತೊಂದು ಅರ್ಥದಲ್ಲಿ ಬಡತನ, ದಾರಿದ್ಯ್ರ, ಕಷ್ಟ ಕಾರ್ಪಣ್ಯಗಳು, ಕೈಗೂಡದ ಬಯಕೆಗಳು, ರೋಗ ರುಜಿನಗಳು ಹೀಗೆ ಹತ್ತಾರೂ ವ್ಯಾಖ್ಯಾನಗಳು ಹುಟ್ಟುತ್ತಾ ಸಾಗುತ್ತವೆ.  ಅಯ್ಯೋ ಶಿವನೆ ನಾನ್ಯಾವ ಕರ್ಮ ಮಾಡಿರುವೆ ನನ್ನ ಕಷ್ಟಕ್ಕೆ ಪ್ರತಿಫಲವೇ ಇಲ್ಲವೆ ? ಎಂಬಂತೆ ಹಲವಾರೂ ರೂಪಗಳಲ್ಲಿ ಜನರ ಮಧ್ಯೆ ಜೀವಾಳ ಪಡೆದುಕೊಳ್ಳುತ್ತದೆ. ಅದರಂತೆ ಮಾನವ ಸಂಬಂಧಗಳಲ್ಲಿ ಹಾಸುಹೊಕ್ಕಾಗಿ ಹೂತುಹೋಗಿದೆಯೂ ಸಹ. ಮಾಡಿದ ತಪ್ಪಿಗಾಗಿ ಕೆಲವರು ಶಿಕ್ಷೆಗೊಳಪಡುತ್ತಾರೆ. ಆದರೆ ಅವರು ತಮ್ಮ ಸಂವೇಧನೆಯನ್ನು ಕರ್ಮವೆಂಬ ಪದದ ಮೂಲಕವೇ ಸೂಚಿಸುತ್ತಾರೆ. ಕರ್ಮ ಸಿದ್ಧಾಂತವು ನಮ್ಮ ಧರ್ಮ ಗ್ರಂಥಗಳಲ್ಲಿ ಪ್ರತಿಪಾಧಿಸಿದಂತೆ ಹಲವಾರೂ ಅರ್ಥಗಳನ್ನೊಳಗೊಂಡಿದೆ. ಒಂದರ್ಥದಲ್ಲಿ ಕಾರ್ಯೋನಿಮಿತ್ತವಾದ ಕಾರಣಗಳನ್ನು ಹುಡುಕುತ್ತ ಸಾಗುವುದೇ ಕರ್ಮದ ಫಲ ಅಥವ ಕಾರ್ಯವೆನ್ನಬಹುದು. ಒಂದೆಡೆ ಬಿಡುವಿಲ್ಲದ ಕೆಲಸಗಳು ಮಾನವನನ್ನು ಕರ್ಮಬಂಧಕ್ಕೆ ಒಳಪಡಿಸಿದರೆ ಅದೇ ಕೆಲಸ ಸರಿಯಾಗಿ ನಿರ್ವಹಿಸಲ್ಪಟ್ಟಾಗ ಮಾನವನ ಕರ್ಮವಿಮೋಚನೆಗ ದಾರಿಯಾಗುತ್ತದೆ

   ಹಾಗೆಯೇ ತನ್ನ ದಾರಿದ್ರ್ಯವನ್ನು ದೂರಮಾಡುವ ಸಾಧನವೂ ಕರ್ಮವೆಂಬ ಪದದಲ್ಲೇ ಅಡಗಿದೆ. ಎಲ್ಲಾ ತೊಂದರೆಗಳಿಗೂ ಮೂಲ ರೂಪ ಇಕರ್ಮಫಲವೆಂದರೆ ತಪ್ಪಾಗಲಾರದು. ಆದರೆ ನಾವು ಸೋಮಾರಿತನದಿಂದ ಕರ್ಮದ ಅರ್ಥವನ್ನು ಹುಡುಕಲು ಪ್ರಯತ್ನಿಸಿದರೆ ಅದಕ್ಕೆ ಯಾವುದೇ ಅರ್ಥವು ಸಿಗುವುದಿಲ್ಲ. ನಮ್ಮ ಕಷ್ಟ ನಷ್ಟಗಳನ್ನು ಕರ್ಮವೆಂಬ ಪದಕ್ಕೆ ತೂಗುಹಾಕದೆ ತಾನು ಮಾಡುವ ಕಾರ್ಯಗಳನ್ನು ನಿಷ್ಟಾನೂಸಾರ ಮಾಡುತ್ತ ಕರ್ಮಬಂಧಕ್ಕೆ ಸಿಲುಕದಂತೆ ಮಾಡಿ ಅದೇ ಕೆಲಸಗಳನ್ನು ಆತ್ಮಸಾಕ್ಷಾತ್ಕಾರ ವನ್ನಾಗಿಸಿಕೊಳ್ಳುವುದೇ ಇದರ ಮೂಲ. ಅಂದರೆ ಮುಕ್ತಿಗೆ ಸಾಧನವನ್ನಾಗುವಂತಾಗುವುದೇ ಕರ್ಮಯೋಗದ ಫಲ. ಸಕಲ ಕಾರ್ಯಗಳನ್ನು ಶ್ರದ್ಧೆ ಮತ್ತು ಭಕ್ತಿಯಿಂದ ನಿರ್ವಹಿಸುತ್ತಾ ಸಾಗಿದ್ದಲ್ಲಿ ಕರ್ಮವೆಂಬುದು ನಮ್ಮನ್ನು ಕಳಚಿ ಬಹುದೂರ ಸಾಗಿಹೋಗುತ್ತದೆ. ಅದರಂತೆ ನಮ್ಮ ಜೀವನವನ್ನು ಸಾಕ್ಷಾತ್ಕಾರದತ್ತ ಕೊಂಡೊಯ್ಯುವ ಕೀಲಿಯೂ ಕರ್ಮಫಲವೇ ಆಗಿದೆ.

(ನನಗೆ ಗೊತ್ತಿರುವಷ್ಟು ಬರೆಯಲು ಪ್ರಯತ್ನಿಸಿದ್ದೇನೆ ಏನಾದರೂ ಬದಲಾವಣೆಗಳಿದ್ದಲ್ಲಿ ಖಂಡಿತ ಸ್ವಾಗತಿಸುತ್ತೇನೆ)

No comments: