Wednesday, June 27, 2012

ವಿಧಿಯ ಹೆಜ್ಜೆಗುರುತುಗಳು

ವಿಧಿಯಾಟದ ಹೆಜ್ಜೆಗುರುತುಗಳು
ಕಂಡ ಕಂಡಲ್ಲಿ ಕಣ್ತೆರೆಯುತ್ತಿವೆ
ಮುಂದಿನ ಘನಘೋರ ಅನಾಹುತಗಳನ್ನು
ನೆನಪಿಸುತ್ತ
ಕಣ್ಣಾ ಮುಚ್ಚಾಲೆಯಲ್ಲಿ ತೊಡಗಿವೆ

ಕಾಲ ಸರಿದಂತೆ ಅದರ ಹೆಜ್ಜೆಗಳೂ
ಮಸಕು ಮಸಕಾಗಿ
ಬೆನ್ನಿಗೆ ಗುದ್ದಿದಂತೆ
ಪರಿಹಾಸವನ್ನು ಮಾಡುತ್ತ
ನಾಳೆಯ ನೆನಪುಗಳನ್ನು ಉಳಿಸದೇ
ಅಳಿಸಿಹಾಕುತ್ತಿವೆ

ದೂರದಲ್ಲೊಂದು ಕಾನನ
ಹಸಿರಂತೆ ಕಂಡರೂ
ಅದು ಕಬ್ಬಿಣದ ಕಾಡೋ
ಮಣ್ಣು ಧೂಳುಗಳು ಮೆತ್ತಿಕೊಂಡ
ಅದ್ಭುತ ಕಲಾಕೃತಿಯೋ
ಹತ್ತಿರ ಹೋದವನೇ ಬಲ್ಲ

ಆಸೆಗಳು ಹುಡುಕಾಟದಲ್ಲಿ
ಎಲ್ಲವನ್ನೂ ಹರಿದು ಚಿಂದಿಮಾಡಿಬಿಟ್ಟಿವೆ
ಕಮ್ಮಾರನ ಬಡಿಗಲ್ಲು
ಕುಂಬಾರನ ಸುಟ್ಟ ಮಡಿಕೆ
ಚಮ್ಮಾರನ ಚಪ್ಪಲಿ ಹೊಲಿಗೆಗೂ
ಈಗ ಚಿನ್ನದಂತಾ ಬೆಲೆ

ಏನಿದೆ ಈ ಜಗದಲ್ಲಿ
ಬರೀ ಭ್ರಮೆಗಳ ಹುಡುಕಾಟ
ಕುಡುಕರ ಕೂಗಾಟ
ಹುಚ್ಚರ ಕಿರುಚಾಟ
ಮನೆ ಮಾಡುಗಳಲ್ಲಿ ತುಟಿ ಬಿಚ್ಚದೇ
ನಡೆಯುವ ಕಾಮದ ಕೋಲಾಟ

ಆ ಕಾಲದ ಮಹಿಮೆ
ಮುಗಿದು ಹೋಯಿತು ಬಿಡಿ
ಈಗ ಬರಿ ಭ್ರಮೆಯಷ್ಟೆ
ಕನಸಿನಲ್ಲಿ ಕವಲುಗಳು ತೆರೆದುಕೊಳ್ಳುವಹಾಗೆ
ಎಲ್ಲವನ್ನೂ ದುಡ್ಡಿನಿಂದಲೇ ಕೊಳ್ಳಬೇಕು
ಮಳೆಯನ್ನು, ಮಾನವನ್ನು, ಮಹಿಮೆಯನ್ನು
ಸಜ್ಜನರ ಬದುಕನ್ನೂ ಸಹ

ಮತ್ತೊಂದು ಸತ್ವತುಂಬಿದ ಕಾಲ
ಸಮೀಪಿಸುವ ತನಕ
ಕಲಿಗಾಲದಲ್ಲಿ ಕೋಲಾಟವೇ ನೋಟ
ಅದುವೇ ವಿಧಿಯ ನಲಿದಾಟ

ಎಂ. ಎಸ್. ಮೂರ್ತಿಯವರ ಚಿತ್ರಕ್ಕೆ ಹೊಂದುವಂತ ನನ್ನದೊಂದು ಕವನ

Sunday, June 24, 2012

ಜ್ಞಾನವೆಂಬ ಶಿಲ್ಪ

ಜ್ಞಾನವೆಂಬ ಶಿಲ್ಪವನ್ನು ಸಿದ್ದಗೊಳಿಸಲು
ತಾಳ್ಮೆ, ಏಕಾಗ್ರತೆ, ಸಹನೆ, ಧಯೆ, ತ್ಯಾಗ,
ಪ್ರೀತಿ, ಕರುಣೆ, ನಿಸ್ವಾರ್ಥ ಮತ್ತು ಸಕಲ ಇಂದ್ರಿಯಗಳನ್ನು
ನಿಗ್ರಹಿಸುವಂತಹ ಉಳಿಪೆಟ್ಟಿನ
ಬಲವಾದ ಏಟು ಮುಖ್ಯವಾಗಿ ಬೇಕಾಗುತ್ತದೆ.

Monday, June 18, 2012

ನೆನಪಾಗದ ಕವನ

ಎಂದಾದರೊಮ್ಮೆ
ಕವನ ಬರೆಯುವಂತ
ಹುಚ್ಚು ಆಸೆ ಪುಟಿದೇಳುತ್ತದೆ
ಬರೆದ ಕವನ
ಬರೆಯುತ್ತಲೇ ಇದ್ದಂತೆ
ಒಂದು ಪದದಲ್ಲಿ
ನೂರು ಚಿಗುರುಗಳು
ಮೂಡಿದಂತೆ
ಬರೆಯುವಂತ ಭಾವ
ಸ್ವಲ್ಪವೂ ಬಸಿಯದಂತೆ
ಪರಿ ಪರಿಯಾಗಿ
ಕಾಡುತ್ತದೆ

ಅದೂ ಕೇವಲ
ಮನಸ್ಸಿನ ಕಾವು
ತಣ್ಣಗಾಗುವ ತನಕವಷ್ಟೆ
ಕವನ ಮತ್ತೆ
ಕಣ್ಮರೆಯಾಗುತ್ತದೆ
ಬರೆಯಬೇಕೆಂದರೂ
ಪದಗಳು ಕೂಡದ ಹಾಗೆ
ಭಾವನೆಗಳು ಅರಳದ ಹಾಗೆ
ನೆನಪುಗಳು ಸುಕಾಸುಮ್ಮನೆ
ಸಹಕರಿಸಲು
ಸಿದ್ದಗೊಳ್ಳದ ಹಾಗೆ

ಮತ್ತೊಂದು ದಿನಕ್ಕಾಗಿ
ಕಾಯುತ್ತೇನೆ
ಬರೆಯುವಂತ ಹುಚ್ಚು
ಪುಟಿದೇಳುವವರೆಗೂ
ಒಂದು ಪದದಲ್ಲಿ
ನೂರು ಚಿಗುರು
ಚಿಗುರೊಡೆಯುವವರೆಗೂ
ಹಿಯ್ಯಾಳಿಸುವ ಭಾವನೆಗಳು
ಬೆಂಬಿಡದೇ
ಹಿಂಬಾಲಿಸುವವರೆಗೂ
ಕಾಯುತ್ತೇನೆ
ಮತ್ತೊಂದು ಕವನ
ಬರೆಯುವುದಕ್ಕೆ
ಮತ್ತೆ ಸಿದ್ದನಾಗುತ್ತೇನೆ.

Wednesday, June 6, 2012

ಯಾವುದನ್ನೂ ಲೆಕ್ಕಿಸದೆ ಬೆಳೆಯುತ್ತೇನೆ


ಬೆಳೆಯುತ್ತೇನೆ ಜಗ್ಗದೆ
ಭೂ ಒಡಲು ಬರಿದಾಗುವವರೆಗೂ
ಮರಗಳನ್ನೇ ಕಡಿದುಮುಗಿಸುವವರೆಗೂ
ಹುಲಿ ಸಿಂಹಗಳ ಸದೆ ಬಡಿದು
ದಿಕ್ಕಾಪಾಲಾಗಿಸುವವರೆಗೂ
ಸಕಲ ಜೀವ ಸಂಕುಲಕ್ಕೂ ಕುತ್ತಾದರೂ
ಯೋಚಿಸದೆ ಸಣ್ಣಗೆ ನಗುತ್ತೇನೆ
ಖುಷಿಯಿಂದಲೇ ಕುಣಿಯುತ್ತೇನೆ

ಎದಿರು ನಿಲ್ಲುವ ಮಾತುಗಳಿಗೆ
ಒಂದಷ್ಟು ನೋಟಿನ ಮುಲಾಮು
ಸಂಕೋಲೆ ಬಿಗಿವ ಕೈಗಳಿಗೆ
ಮಣ ಭಾರದ ಚಿನ್ನದ ಕಡಗಗಳು
ಧಿಕ್ಕರಿಸಿ ನಿಲ್ಲುವ ರೋಷಕ್ಕೆ
ಹೂವಿನ ತೋಟದಲ್ಲೊಂದು
ಅಮೃತ ಶಿಲೆಯ ಸಮಾಧಿ
ಇನ್ನೇನು ಬೇಕು ಹೇಳಿ
ನನ್ನ ಬೆಳವಣಿಗೆಗೆ ಯಾವ
ಕುತ್ತೂ ಬಾರದಂತೆ ಬೆಳೆಯಬಹುದು

ನೆತ್ತಿ ಸುಡುವ ಸೂರ್ಯನನ್ನು
ಬುಟ್ಟಿಯಲ್ಲಿರಿಸಿಕೊಳ್ಳುತ್ತೇನೆ
ಬೆಳಕು ಚೆಲ್ಲುವ ಚಂದ್ರನ ಕರೆದು
ಚಂದಾ ವಸೂಲಿಗಾರನನ್ನಾಗಿಸುತ್ತೇನೆ
ಗಾಳಿ ಮಳೆಗೂ ಹಗ್ಗ ಬಿಗಿದು
ಹಿತ್ತಲಲ್ಲಿ ನೇತುಹಾಕುತ್ತೇನೆ
ಒಂದು ಕ್ಷಣವೂ ನಿಲ್ಲದೆ
ನಾನಂತೂ ಬೆಳೆಯುತ್ತೇನೆ

ಇಗೋ ಆಗಸಕ್ಕೆ ನೋವಾಗಿದೆಯಂತೆ
ರಕ್ತ ಕಲೆಗಳ ತೋರಿ
ಕಂಬನಿ ಮಿಡಿದು ಹೇಳುತ್ತಿದೆ
ನಕ್ಷತ್ರಗಳು ತಲೆಸುತ್ತಿ ಬೀಳುತ್ತಿವೆ
ಜಗವೆಲ್ಲಾ ಅಲ್ಲೋಲ ಕಲ್ಲೋಲವಾಗುತ್ತಿದೆ
ಆದರೇನಂತೆ!
ನನ್ನ ಬಳಿ ಮೂಲಾಮುಗಳಿಗೇನಿಲ್ಲ ಬರ
ಸದ್ಯಕ್ಕೆ ನಾನು ಸರ್ವಾಧಿಕಾರಿ
ನಿಲ್ಲದೇ ಬೆಳೆಯುತ್ತಿದ್ದೇನೆ

ಹುಚ್ಚು ಮನ ಉಸಿರಾಡುವವರೆಗೂ
ಬಿಚ್ಚು ಆಸೆಗಳು ಮಿಸುಕಾಡುವವರೆಗೂ
ನಾ ಸರ್ವಾಧಿಕಾರಿಯೆಂಬ ಜಂಭ
ಸರ್ವತಾ ನನ್ನಲ್ಲಿ ನೆಲೆಸಿನಿಲ್ಲುವವರೆಗೂ
ನಾನಂತೂ ಬೆಳೆಯುತ್ತಿರುತ್ತೇನೆ
ನನ್ನ ಸರ್ವ ಅಧಿಕಾರದ ಗತ್ತನ್ನು
ಲೋಕಕ್ಕೆಲ್ಲಾ ತಿಳಿಸಿಹೇಳುತ್ತೇನೆ
ಯಾವುದನ್ನೂ ಲೆಕ್ಕಿಸದೆ 
ಮತ್ತೆ ಮತ್ತೆ ಬೆಳೆಯುತ್ತಿರುತ್ತೇನೆ