Tuesday, August 14, 2012

ನಿಜವಾದ ಸ್ವಾತಂತ್ರ್ಯ ಯಾರಿಗೆ ದಕ್ಕಿದೆ?
       ಭಾರತಕ್ಕೇನೋ ಸ್ವಾತಂತ್ರ್ಯ ಬಂದು 65 ವರ್ಷಗಳು ಕಳೆದಹೋಯಿತು. ಇದೊಂದು ಮಹತ್ವದ ಮೈಲುಗಲ್ಲು. ಅದೇ ರೀತಿ ಎಲ್ಲರೂ ಹೆಮ್ಮೆ ಪಡುವಂತ ವಿಚಾರವೆನ್ನಿ. ಆದರೆ ಇಲ್ಲಿ ಆರವತ್ತಾರು ವರ್ಷಗಳು ಗತಿಸಿದರೂ ನಿಜವಾದ ಸ್ವಾತಂತ್ರ್ಯ ಯಾರಿಗೆ ದಕ್ಕಿದೆ ಎನ್ನುವುದೇ ಸೋಜಿಗ. ಈ ದೇಶದ ಬಡ ಬಗ್ಗರಿಗೆ, ದೀನ ದಲಿತರಿಗೆ, ಹರಿಜನ ಗಿರಿಜನರಿಗೆ, ಅಸಹಾಯಕರಿಗೆ, ಮಹಿಳೆಯರಿಗೆ ಯಾವ ಸ್ವಾತಂತ್ರ್ಯ ಸಿಕ್ಕಿದೆಯೋ ಅರ್ಥವಾಗುತ್ತಿಲ್ಲ. ಸಮಾನತೆ, ತಾರತಮ್ಯ, ಸಾಮಾಜಿಕ ನ್ಯಾಯ, ವ್ಯಕ್ತಿ ಸ್ವಾತಂತ್ರ್ಯ ಎಂಬುದು ಮರಿಚಿಕೆಯ ಸಂಗತಿ. ಭಾರತದಲ್ಲಿ ಇಂದಿಗೂ ಕೋಟ್ಯಾಂತರ ಮಂದಿಗೆ ನೆಲೆಯಿಲ್ಲ. ತಿನ್ನಲು ಊಟವಿಲ್ಲ. ತೊಡಲು ಬಟ್ಟೆಯಿಲ್ಲ ಈಗಿರುವಾಗ ಯಾವ ರೀತಿಯ ಸ್ವಾತಂತ್ರ್ಯ ಜನತೆ ಆಚರಿಸಬೇಕು?. ಈಗಾಗಲೇ ನಮ್ಮ ರಾಷ್ಟ್ರ ನೂರಾರು ಸಮಸ್ಯೆಗಳಿಗೆ ಸಿಕ್ಕಿ ನಲುಗುತ್ತಿದೆ. ಮಿತಿಮೀರುತ್ತಿರುವ ಜನಸಂಖ್ಯೆ. ಅಷ್ಟೇ ವೇಗದಲ್ಲಿ ಬೆಳೆಯುತ್ತಿರುವ ಅಗತ್ಯವಸ್ತುಗಳ ಬೆಲೆಗಳು. ಆರ್ಥಕ ಪರಿಸ್ಥತಿಗಳ ಬದಲಾವಣೆಗಳು ಇದರಿಂದ ಸಾಮಾನ್ಯರು ಮುಕ್ತಿಹೊಂದಲು ಸಾಧ್ಯವೇ?. ಶ್ರೀಮಂತರ ಮತ್ತು ಅಧಿಕಾರಶಾಹಿ ವರ್ಗದವರೇನೋ ಹೈಟಕ್ ಸಂಸ್ಕೃತಿಗೆ ಹೊಂದಿಕೊಳ್ಳುತ್ತಾರೆ ಆದರೆ ಸಾಮಾನ್ಯ ಜನರ ಮಾತೇನು ?. ಇದನ್ನೆಲ್ಲಾ ತಹಬಂಧಿಗೆ ತರಬೇಕಿರುವ ಸರ್ಕಾರಗಳು ಜನರಿಗೆ ಅಂಗೈಯಲ್ಲಿ ಬೆಣ್ಣೆಯನ್ನು ತೋರಿಸುತ್ತ ಕಾಲ ಕಳೆಯುತ್ತಿರುವುದು ದುರಂತವೇ ಸರಿ. ಕೇವಲ ತಮ್ಮ ಬೆಳವಣಿಗೆಗಾಗಿ ತಮ್ಮ ಅಧಿಕಾರಕ್ಕಾಗಿ ಮಾತ್ರ ಬೇಳೇ ಬೇಯಿಸಿಕೊಳ್ಳುತ್ತಿರುವುದು ಲಜ್ಜೆಗೇಡಿತನ.

        ನಮ್ಮ ಭಾರತ ಕೇವಲ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಲ್ಲ. ಅದು ಇಷ್ಟೋತ್ತಿಗಾಗಲೇ ಅಭಿವೃದ್ಧಿ ಹೊಂದಿರಬೇಕಾದ ರಾಷ್ಟ್ರವಾಗಿರಬೇಕಿತ್ತು. ಆದರೆ ಅದು ಸಾಧ್ಯವಾಗುತ್ತಿಲ್ಲ. ಈಗಾಗಲೇ ದೇಶ ಆಂತರಿಕ ಕಲಹಗಳಿಂದ ನಲುಗುತ್ತಿದೆ. ನಕ್ಸಲಿಜಂ, ಮತೀಯ ಕಲಹಗಳು, ಭಯೋತ್ಸಾದನೆಯಂತ ಸಮಸ್ಯಗಳು ಜನರಲ್ಲಿ ಭಯವನ್ನು ಮೂಡಿಸುತ್ತಿವೆ. ಭ್ರಷ್ಟಾಚಾರ. ಸ್ತ್ರೀ ಶೋಷಣೆ, ಕಳ್ಳತನ, ಸುಲುಗೆ. ಕೊಲೆ ಇಂತಹ ಸಮಸ್ಯಗಳು ಸರ್ವೇ ಸಾಮಾನ್ಯವಾಗಿಬಿಟ್ಟಿವೆ ಇವುಗಳಿಂದ ಮುಕ್ತಿ ಬೇಡವೇ?. ಈ ಪರಿಸ್ಥಿತಿಗಳನ್ನು ಬದಲಾಯಿಸುವವರು ಯಾರು?.  ಸ್ವಾತಂತ್ರ್ಯವೆಂದರೆ ಕೇವಲ ಆಗಸ್ಟ್ 15 ನೇ ದಿನಾಂಕಕ್ಕೆ ಸೀಮಿತಗೊಳಿಸಿ ಕೆಂಪು ಕೋಟೆಯ ಮೇಲೋ ಅಥವಾ ಮತ್ಯಾವುದೋ ಮೈದಾನದಲ್ಲೋ ಪೆರೇಡ್ ನಡೆಸಿ ಧ್ವಜವನ್ನು ಹಾರಿಸಿ ಸುಮ್ಮನಾಗುವುದಲ್ಲ. ನಮ್ಮ ಭಾವುಟ ಪ್ರತಿದಿನವೂ ಸ್ವತಂತ್ರವಾಗಿ ಪ್ರಜ್ವಲಿಸಬೇಕು. ಜನತೆಯ ಏಳಿಗೆಯ ಬಗ್ಗೆ, ದೇಶದ ಪ್ರಗತಿಯ ಬಗ್ಗೆ. ಆಂತರಿಕ ಸಮಸ್ಯೆಗಳ ಬಗ್ಗೆ. ಭದ್ರತೆಯ ಬಗ್ಗೆ, ನಮ್ಮನ್ನಾಳುವವರು ಗಮನ ಹರಿಸಬೇಕು. ಹಾಗಯೇ ಮಹಾತ್ಮ ಗಾಂಧಿ,  ಸರ್ದಾರ್ ವಲ್ಲಭಭಾಯ್ ಪಟೇಲ್,  ಲೋಕಮಾನ್ಯ ಬಾಲ ಗಂಗಾಧರ ತಿಲಕ, ಸುಭಾಷ್ ಚಂದ್ರ ಬೋಸ್, ಲಾಲ್ ಬಹಾದ್ದೂರ್ ಶಾಸ್ತ್ರಿ,  ಸರ್ದಾರ್ ಭಗತ್ ಸಿಂಗ್, ಚಂದ್ರ ಶೇಖರ್ ಆಝಾದ್ ಇನ್ನೂ ಮುಂತಾದವರ ಕನಸುಗಳನ್ನು ಸಕಾರಗೊಳಿಸಲು ಮನಸಾರೆ ಚಿಂತಿಸಬೇಕು. ಮೇಲು ಕೀಳಿನ ಅಂತರವನ್ನು ಸರಿದೂಗಿಸಲು ಸಮರ್ಥವಾಗಿ ಪ್ರಯತ್ನಿಸಬೇಕು. ಪ್ರತಿಯೊಬ್ಬರು ಸಂತಸದಿಂದ ನಲಿಯುವಂತ ಕಾಲ ಬರಬೇಕು. ಹಾಗ ಮಾತ್ರವೇ ಈ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ದಕ್ಕಿದೆ ಎಂಬುದನ್ನು ಸುವರ್ಣಾಕ್ಷರಗಳಿಂದ ಬರೆಯಬಹುದು..

2 comments:

ದಿನಕರ ಮೊಗೇರ said...

nivu bareda riti svaatantra sigodu kanasu anisatte vasant sir....

nimma bareda riti hiDisitu....

ವಸಂತ್ ಕೋಡಿಹಳ್ಳಿ said...

ಖಂಡಿತ ನಿಮ್ಮ ಮಾತು ಸತ್ಯ ಆದರೂ ಪ್ರಯತ್ನ ಮುಖ್ಯ ಅಲ್ಲವೆ? ಪ್ರತಿಕ್ರಿಯೆಗೆ ಧನ್ಯವಾದಗಳು ಸರ್