Tuesday, September 25, 2012

ಸಖಿ

ಸಖೀ...
ನೀ ಮುಸುಕು ಸರಿಸಿ
ನಲ್ಲನ ಮುಖ ನೋಡುವ ಪರಿ
ಇದೆಂತ ಛಾಯೆಯೋ
ನಾ ಕಾಣೆ ನನ್ನಾಣೆ

ಎದೆಯುಲಿ ಢವ ಢವ
ಮನಸ್ಸು ವಿಲವಿಲನೆ ಒದ್ದಾಟ
ಎತ್ತ ಎಳೆದೊಯ್ಯುತಿದೆ
ನನ್ನ ಅಂತರಂಗವನು
ನನಗೂ ತಿಳಿಸದಂತೆ

ಅವಳೆನ್ನ ಭಾಮಿನಿ
ನನ್ನ ಮುದ್ದು ಅರಗಿಣಿ
ನಕ್ಕಾಗ ನೈದಿಲೆ
ನಾಚುವಾಗವಳು ಚಂಚಲೆ

ಕೋಪ ಬಂದಾಗಲಷ್ಟೇ
ಕೊಂಚ ಧಗಧಗ 
ಉರಿವಂತ ಅಗ್ನಿ ಜ್ವಾಲೆ
ಏನು ಮಾಡಲಿ ಹೇಳಿ ?
ಮೌನವಾಗಿರಲೇ
ಹೇಳದೆ ಓಡಿ ಹೋಗಲೇ?

ನನ್ನೆದೆಯ ಏರಿಳಿತ
ಅವಳ ಗೆಜ್ಜೆಯ ನಾದ
ಮನದೊಳಗೆ ಪಿಸುಮಾತು
ಸಮ್ಮೋಹನಾ ವೇದ

ಶರಣಾಗಲೇ ಇಲ್ಲಾ
ಶಿರಭಾಗಿ ವಂದಿಸಲೇ
ಪಾತಾಳವನ್ನೇ ಮುಟ್ಟಿ
ಅವಳ ಹೃದಯದೊಳು 
ಹೊಕ್ಕಲೇ ?

ನೀ ಮುಸುಕಾದರೂ
ನಿನಗೆ ಮುನಿಸೇ ಬಂದು
ಧಗ ಧಗ ಉರಿದರೂ ಸಹ
ನಾ ಶಾಂತವಾಗುವೆ

Friday, September 14, 2012

ನೆಲದ ಸತ್ವನೆಲದ ಸತ್ವ ಸಡಿಲಗೊಂಡು
ಪರಿಹಾಸದಿ ತೊಡಗಿದೆ
ಕುಟಿಲ ಬೀಜ ಮೊಳಕೆ ಬಿರಿದು
ಜಗವೆಲ್ಲ ಹರಡಿದೆ

ಕಾಂತಿ ಹೀನ ಕಣ್ಣುಗಳು
ಜನರ ಕಂಡು ಸೊರಗಿವೆ
ಹಿಂಬಾಗಿಲ ನಾಗರಗಳು
ಹೆಡೆಯತ್ತಿ ಕುಣಿದಿವೆ

ಏನಿದೀ! ಪರಿಹಾಸವು
ಉತ್ತರಗಳ ಹುಡುಕಿದೆ
ಮಣಭಾರದ ಪ್ರಶ್ನೆಗಳೇ
ಶಿರವಬಾಗಿ ನಮಿಸಿವೆ

ಇಳೆಯ ತಂಪು ಎಂದೋ ಸೊರಗಿ
ಜ್ವಾಲೆಯಾಗಿ ಹಬ್ಬುತಿದೆ
ಕಲ್ಮಶಗಳ ಘಾಟು ಹೊಗೆ
ಪ್ರತಿ ಎಲ್ಲೆಯೂ ತಬ್ಬುತಿದೆ

ಸತ್ವಹೀನ ಟೊಳ್ಳು ಮಾತು
ಕನಸನೆಂದು ಕಟ್ಟದು
ಸತ್ಯ ಮರೆತ ಸುಳ್ಳಾಟಕೆ
ಜಯವೆಂಬುದು ದಕ್ಕದು

ಜಗವೆಂಬುದು ಬರಿ ಭ್ರಮೆಯು
ಗೊಂದಲಗಳ ಚಿತ್ರಣ  
ಜಗ್ಗದಿರು ಕಟು ವಾಸ್ತವವೇ ನೀ
ಸೋತರೆ ಅದುವೆ ಮರಣ

Thursday, September 13, 2012

ಹೊನ್ನ ಹೂ

ಅದಮ್ಯ ಸಿರಿಯ ಅಂಚಿನೊಳು
ಕಾಂತಿಯೊತ್ತ ಚಂದ್ರ ಬಿಂಬ
ಕಮಲ ವದನ ನಯನದಲ್ಲಿ
ನಲಿದಾಡುವ ಪುಷ್ಪ ಜಂಬ

ಭೂರಮೆಯ ಚಲುವ ಸೊಬಗು
ಬಾಂದಳವನು ತಟ್ಟಿದೆ
ಬಯಸಿ ಬಂದ ಅಂಧಕಾರ
ನೆಲದೊಡಲನು ಮುಟ್ಟಿದೆ

ಎಲ್ಲೆಡೆಯು ಭವ್ಯ ಬೆರುಗು
ಚಿತ್ತಾರದ ಸುಮಧುರವು
ಮಧುವನವನು ಮೆಟ್ಟಿನಿಂತ
ಮನ್ಮತನ ಬಿಸಿಯಸಿವು

ಗುಡುಗುಡುಗಿ ಸಿಡಿಲಾಯಿತು
ಹನಿ ಮೂಡುವ ತವಕದಲ್ಲಿ
ಇಳೆಯ ಹಸಿವು ಬರಿದಾಯಿತು
ಹೊಸ ಹುರುಪಿನ ಚೆಲುವಿನಲ್ಲಿ

ಎಲ್ಲೆಡೆಯು ಹೊಸ ಕಳೆಯು
ಹೊಸೆದು ಬಂದ ಹೊನ್ನ ಹೂ
ನೆಲದೊಡಲ ಕತ್ತಲರಗಿ
ನಳನಳಿಸುತಿದೆ ಈ ಜಗವು

ಶಾಯರಿ


Tuesday, September 11, 2012

ಕೌತುಕ

ಯಾರು ಚೆಲ್ಲಿಹೋದರೋ
ಇಲ್ಲಿ ಬೀಜವನ್ನು
ಯಾರು ಮಾಡಿದರೋ
ಈ ಸಸಿಗೆ ಆರೈಕೆಯನ್ನು

ಬಣ್ಣ ಬಣ್ಣದ ಹೂಗಳಿಂದ
ಚಿತ್ತಾಕರ್ಷಕವಾಗಿ
ಮಿನುಗುವ ಇದೆಂತಾ
ಕಲಾಕೃತಿಯ ವೈಭವ!

ಹಸಿರು ಬಣ್ಣದ ಥಳುಕು
ಮಿಂಚಿ ಮಿನುಗುವ ಬೆಳಕು
ಕವಿಯ ಕುಂಚದಲ್ಲಿ ಅರಳಿದ
ಕವನದಂತಾ ಚೆಲುವು

ಹುಡುಕಿ ಹೊರಟವರಿಗೆ ಮಾತ್ರ
ಬೆರಗು ಬೈಲಿನ ಸೊಬಗು
ಎಲ್ಲೆ ಎಲ್ಲೆಯಲ್ಲೂ ಸಹ
ಅರಳಿ ನಲಿಯುವಂತ ನಗು

ಪ್ರಕೃತಿಯ ಅಗಾಧತೆಯಲ್ಲಿ
ಎಲ್ಲವೂ ವಿಸ್ಮಯವೇ
ಹರಿದು ಸಾಗುವ ನೀರಲ್ಲೂ
ಕೌತುಕದ ಅನಾವರಣವೇ

Tuesday, September 4, 2012

ಕೊನೆಯ ಮಾತುಎಷ್ಟು ಸಮಯವಾಯಿತು
ವಸಂತಗಳು ಕಳೆದುಹೋದವು
ಬಿರು ಬೇಸಿಗೆ, ಚಳಿಯೂ
ಕಾಡಿಸಿ ಹಿಯ್ಯಾಳಿಸಿ ಕರಗಿದವು
ಮತ್ತೊಂದು ಮಳೆ ಬಂದರೂ
ಅವನ್ಯಾಕೆ ಬರಲಿಲ್ಲ ಇನ್ನೂ

ನೆನಪುಗಳ ಒಗ್ಗೂಡಿಸಿ
ಕಣ್ ಮುಚ್ಚಿ ಕುಳಿತಾಗ
“ನಾನಿರುವೆ ನಿನ್ನ ಜೊತೆ”
ಎಂದಷ್ಟೆ ನುಡಿಯುವನು
ಹೇಗೆ ನಂಬಲಿ ಹೇಳಿ ಅವನ
ಈ ಅಪೂರ್ಣವಾದ ಮಾತನ್ನು?

ಅವನ ನಿರೀಕ್ಷೆಯಲ್ಲಿ
ಮನಸ್ಸು ಬಾವಲಿಯಾಗುತ್ತಿದೆ
ಕನಸ್ಸುಗಳು ಕರಗುತ್ತಿವೆ
ಹೃದಯ ಬಲಹೀನಗೊಳ್ಳುತ್ತಿದೆ
ನನಗೂ ಅವನು ಬರುವ
ರಸ್ತೆಯನ್ನು ಕಾದು ಸಾಕಾಗಿದೆ

ನೀ ಬಾರದಿರಲು
ಯಾವುದೋ ಬಲವಾದ ವ್ಯಾಮೋಹ 
ನಿನ್ನ ಜಗ್ಗಿ ಹಿಡಿದಿರಬಹುದು
ಭೀತಿ ಕಂಗೆಡಿಸಿರಬಹುದು
ಬಯಕೆ ದಾರಿ ತಪ್ಪಿಸಿರಬಹುದು
ಮಾತು ಮೌನವಾಗಿಸಿರಬಹುದು

ಇನ್ನು ಬಾರದಿರು ಹುಡುಗನೇ!
ನನ್ನ ಆಸೆಗಳು ಬತ್ತಿಹೋದವು
ನನ್ನ ನಂಬಿಕೆಗಳು ಹುಸಿಯಾದವು
ನನ್ನ ಕನಸ್ಸುಗಳೆಲ್ಲಾ ಚದುರಿ
ಚೆಲ್ಲಾ ಪಿಲ್ಲಿಯಾದವು

ಅದು ಏನೇ ಆಗಿರಲಿ!
ನಿನ್ನ ಪಾಲಿಗೆ ಚಂದ್ರ ನಗುತಿರಲಿ
ಚುಕ್ಕಿಗಳು ಅರಳಲಿ
ಗಾಳಿ ತಣ್ಣಗೆ ಬೀಸಲಿ
ಇಷ್ಟಾಗಿ ಒಂದು ವೇಳೆ 
ನನ್ನ ನೆನೆದು ಬರುವುದಾದರೆ
ರಸ್ತೆಗಳು ಮಾತ್ರ ನಿನ್ನನ್ನು
ತಡೆದು ನಿಲ್ಲಿಸಲಿ.