ಇಲ್ಲಿ ಕೆಲವನ್ನು ಮಾರಲಿದ್ದೇನೆ
ಕೊಳ್ಳುವವರ ಇಚ್ಛಗನುಸಾರವಾಗಿ
ತಕ್ಕ ಬೆಲೆ ನಿಗಧಿಪಡಿಸಿದ್ದೇನೆ
ಯಾರೂ ಮುಂದೆ ಬರುತ್ತಿಲ್ಲ
ದಯಮಾಡಿ ಇವುಗಳನ್ನು ಕೊಂಡುಹೋಗಿ
ನನ್ನ ವಸ್ತುಗಳ ಪಟ್ಟಿ ಇಂತಿದೆ,
ಉಪ್ಪರಿಗೆಯ ಮೇಲಿನ ಭಾರವಾದ ಮಾತುಗಳು
ಮನದ ಮೂಲೆಯಲ್ಲಿ ಉಸಿರಾಡುವ ನೆನಪುಗಳು
ಕತ್ತಲು ಕವಿದ ಹೃದಯದ ಒಳಕೋಣೆಯ ನೆರಳು
ಭಾವಕ್ಕೆ ತಕ್ಕಂತೆ ಬದಲಾಗುವ ಮನಸ್ಸು
ವರ್ಷಗಳ ಹಿಂದೆ ಕನ್ನಡಿಗೆ ಮೆತ್ತಿರುವ ಬಿಂದಿಗಳು
ಮುರಿದು ಬಿದ್ದ ಬಳೆಯ ಚೂರುಗಳು
ಜಾತ್ರೆಯಲ್ಲಿ ಅಪ್ಪನು ತೆಗೆದುಕೊಟ್ಟ ಒಡ್ಯಾಣ
ತೆಂಗಿನ ಗರಿಯ ಬಾಸಿಂಗ
ಹಾಳೆಯ ತಳದಲ್ಲಿ ಮುಚ್ಚಿಟ್ಟ ನವಿಲುಗರಿ
ಮುರಿದು ಬಿದ್ದ ಮನೆಯ ತಾರಸಿ
ಕಂಬಕ್ಕೆ ಕಟ್ಟಿರುವ ಗಾಳಿಪಟದ ದಾರ
ಉಜ್ಜಿರುವ ಹುಣಸೆ ಬೀಜಗಳು
ಉಜ್ಜಿರುವ ಹುಣಸೆ ಬೀಜಗಳು
ಜಡೆಗೆ ಮುಡಿಯುತ್ತಿದ್ದ ಕೆಂಪನೆಯ ರಿಬ್ಬನ್ನು
ಖಾಲಿಯಾದ ಗೋರಂಟಿ ಡಬ್ಬಿಗಳು
ಇನ್ನಷ್ಟರ ಸಂಗ್ರಹ ನನ್ನ ಬಳಿಯಿದೆ
ಇವುಗಳನ್ನು ನೋಡಿ ನೆನೆದು ಸಾಕಾಗಿದೆ
ಗತಿಸಿದ ಆಸೆಗಳನ್ನೆಲ್ಲ ಮತ್ತೆ ಧಕ್ಕಿಸಿಕೊಳ್ಳಲಾಗುತ್ತಿಲ್ಲ
ನನ್ನ ನೆಮ್ಮದಿಯ ಸಲುವಾಗಿ ಯಾರಾದರೂ
ಮುಂದೆ ಬಂದು ಇವುಗಳನ್ನು ಕೊಳ್ಳಿ
ಮುಂದೆ ಬಂದು ಇವುಗಳನ್ನು ಕೊಳ್ಳಿ














