Saturday, May 18, 2013

ಒಂದು ಹಳೆಯ ನೆನಪು

         ಕಾಲದ ಪಯಣ ಸಾಗುತ್ತಿತ್ತು. ನಾನು 5 ನೇ ತರಗತಿಯಲ್ಲಿ ಓದುತ್ತಿದೆ. ನಮ್ಮದೊಂದು ಸಣ್ಣ ಹೆಂಚಿನ ಮನೆ ಆ ಗೋಡೆಗೆ ತಾಗಿಕೊಂಡಂತೆ ಮನೆಯ ಮೇಲ್ಬಾಗದಲ್ಲಿ ಹುಣಸೆ ಮರ ಹೆಂಚುಗಳೆಲ್ಲವನ್ನೂ ತನ್ನೊಳಗೆ ಸೆಳೆದುಕೊಂಡಂತಿತ್ತು. ಮನೆಯ ಮುಂದೆ ಬಲ ಭಾಗದಲ್ಲಿ ಒಂದೆರಡು ಗುಡಿಸಲುಗಳಿದ್ದವು. ಊರ ತುಂಬ ಲೆಕ್ಕ ಹಾಕಿ ನೋಡಿದರೆ ಕೆಲವು ಸಣ್ಣ ಪುಟ್ಟ ಗುಡಿಸಲುಗಳನ್ನೂ ಸೇರಿಸಿ ಹತ್ತಿಪ್ಪತ್ತು ಮನೆಗಳಷ್ಟೇ ಇದ್ದವು. ನಮ್ಮ ಹಳ್ಳಿಗೆಲ್ಲಾ ಒಂದು ಅಂಗಡಿಯಿತ್ತು ಅದು ಚಂಬಪ್ಪನ ಅಂಗಡಿಯೆಂದೇ ಪ್ರಸಿದ್ಧಿ. ಆ ಅಂಗಡಿಯಲ್ಲಿ ಕೊಬ್ಬರಿ ಮಿಠಾಯಿ, ಚಕ್ಕುಲಿ, ಸಿಹಿ ತಿನುಸುಗಳು, ಕಿತ್ತಳೆ ಹಣ್ಣನ್ನು ಹೋಲುವಂತಹ ಮಿಠಾಯಿಗಳದ್ದೇ ಕಾರುಬಾರು. 1 ರೂಪಾಯಿ ಕೊಟ್ಟರೆ 20 ಮಿಠಾಯಿಗಳು ಜೋಬು ತುಂಬಿ ಹೋಗುತ್ತಿದ್ದವು. ನಮ್ಮ ಮನೆಯ ಹೆಡ ಭಾಗದ ಐವತ್ತು ಹೆಜ್ಜೆಗಳ ಹಂತರದಲ್ಲಿ ನೀರು ಸೇದುವಂತಹ ಬಾವಿಯೊಂದಿತ್ತು ಬೆಳಗಾದರೆ ಹಳ್ಳಿಯ ಜನರೆಲ್ಲಾ ನೀರು ಸೇದುವುದಕ್ಕಾಗಿ ಅಲ್ಲಿಗೆ ಮುಗಿ ಬೀಳುತ್ತಿದ್ದರು. ಬಾವಿಯ ಅಕ್ಕ ಪಕ್ಕಗಳಲ್ಲಿ ಹೆಮ್ಮೆಗಳು, ಕುರಿಗಳು, ಹಸುಗಳು ಮೇಯುತ್ತಿದ್ದವು. ಆ ಬಾವಿಯಿಂದ ಸ್ವಲ್ಪ ದೂರದಲ್ಲಿಯೇ ವಿಶಾಲವಾದ ಕೆರೆಯಿತ್ತು.

       ಕೆರೆಯಲ್ಲಿ ಯತೇಚ್ಛವಾದ ನೀರಿನ ಸಂಗ್ರಹವಿತ್ತು. ಮಳೆಗಾಲದ ಸಮಯದಲ್ಲಂತೂ ಪ್ರತಿ ಸಲವೂ ತಪ್ಪದೆ ಕೋಡಿ ಹರಿಯುತ್ತಿತ್ತು. ಅಂಥ ಸಂದರ್ಭದಲ್ಲಿ ಹಳ್ಳಿಯ ಜನ ಮೀನು, ಏಡಿಗಳನ್ನಿಡಿಯಲು ಮುಗುಬೀಳುತ್ತಿದ್ದರು. ಕೋಡಿಯ ಕೇಳ ಭಾಗಕ್ಕೆ ದಾವಿಸುತ್ತಿದ್ದರು. ಬುಟ್ಟಿಯಂತಹ ಬಲೆಗಳನ್ನಿಡಿದು, ಅವರ ಜೊತೆಗೆ ಸಣ್ಣ ಹುಡುಗರೂ ಸಹ ಸೀರೆ, ಪಂಚೆ ಮುಂತಾದ ವಸ್ತ್ರಗಳನ್ನು ತಂದು ಮೀನು ಹಿಡಿಯುವಲ್ಲಿ ಮಗ್ನವಾಗುತ್ತಿದ್ದರು. ಒಮ್ಮೆ ಕೆರೆ ಕೋಡಿ ಬಿದ್ದರೆ ಒಂದು ತಿಂಗಳಿಗೂ ಹೆಚ್ಚು ಕಾಲ ನೀರು ಹರಿಯುತ್ತಲೇ ಇರುತ್ತಿತ್ತು. ನಾನು ಶಾಲೆಗೆ ಹೋಗುವಂತಹ ಸಮಯದಲ್ಲಿ ಆ ಕೋಡಿಯ ತೂಬುಗಳಲ್ಲಿ ತೂರಿ ಕುಣಿದಾಡುತ್ತಿದೆ ಮೀನುಗಳನ್ನಿಡಿಯಲೆತ್ನಿಸಿ ಬಟ್ಟೆಯನ್ನೆಲ್ಲಾ ಒದ್ದೆ ಮಾಡಿಕೊಂಡು ಮೇಸ್ಟ್ರ ಬಳಿಯೂ ಮತ್ತು ಮನೆಯಲ್ಲಿ ಅಪ್ಪ ಅಮ್ಮನ ಬಳಿಯೂ ಒದೆ ತಿನ್ನುತ್ತಿದೆ. ಏನೋ ಅದೊಂದು ರೀತಿಯ ಖುಷಿಯೆಂದೇ ಹೇಳಬೇಕು. ಕೆರೆಯ ಪೂರ್ವ ದಿಕ್ಕಿಗೆ ಪರ ಊರಿಗೋಗುವ ಕಟ್ಟೆಯಿತ್ತು. ಕಟ್ಟೆಯ ಮಧ್ಯಭಾಗದಲ್ಲೊಂದು ದೇವರ ಗುಡಿಯೂ ಇತ್ತು (ಈಗಲೂ ಇದೆ). ಕಟ್ಟೆಯ ಕೆಳ ಬದಿಯಲ್ಲಿ ಹಸಿರನ್ನು ಹೊದಿಸಿದಂತೆ ಭತ್ತದ ಗದ್ದೆಗಳು ನಳನಳಿಸುತ್ತಿದ್ದವು. ಸಣ್ಣ ಪುಟ್ಟ ಕುರುಚಲು ಗಿಡಗಳು ಆ ಗಿಡಗಳಲ್ಲಿ ಮೊಟ್ಟೆಯಿಟ್ಟು ಹೋಗಿದ್ದ "ಜಿಟ್ಟಿಕ್ಕಾಯಿ" ಅನ್ನೋ ಹಕ್ಕಿ. ಗೋಲಿ ಗಾತ್ರದ ಆ ಹಕ್ಕಿಯ ಮೊಟ್ಟೆಗಳನ್ನು ನೋಡುವುದೇ ವೈಭೋಗವೆನಿಸುತ್ತಿತ್ತು.

         ಕಟ್ಟೆಯ ಮೇಲೆ ದೊಡ್ಡಗಾತ್ರದ ಮರದ ಗಾಲಿಗಳುಳ್ಳ ಬಂಡಿಗಳು ತಿರುಗಾಡುತ್ತಿದ್ದವು. ಶಾಲೆಯಿಂದ ಬರುವಂತಹ ಸಮಯದಲ್ಲಿ ಇವುಗಳನ್ನು ಕಷ್ಟಪಟ್ಟು ಏರಿ ತರಚು ಗಾಯಗಳನ್ನೂ ಮಾಡಿಕೊಳ್ಳುತ್ತಿದೆ. ನಮ್ಮದೊಂದು ಸಣ್ಣ ತೋಟವಿತ್ತು ತೋಟದ ಹಾದಿಯ ಎಡ ಬದಿಯಲ್ಲಿ ಹುಣಸೆ, ನೇರಳೆ, ಸಪೋಟ ಮುಂತಾದ ಹಣ್ಣುಗಳು ಬಿಟ್ಟಿರುತ್ತಿದ್ದವು. ಈಗಲೂ ಆ ಸವಿಯನ್ನು ನೆನೆದರೆ ಬಾಯಲ್ಲಿ ನೀರೂರುತ್ತದೆ ಎನ್ನಿ. ನಮ್ಮ ಸಣ್ಣ ತೋಟದಲ್ಲಿ ಕಾಕಡ, ಮಲ್ಲಿಗೆ. ಕನಕಾಂಬರಗಳನ್ನು ಬೆಳೆಸುತ್ತಿದ್ದೆವು. ನಮ್ಮ ಜೀವನಕ್ಕೆ ಈ ತೋಟವೇ ಆಧಾರವಾಗಿತ್ತು. ಇದರಿಂದ ಕಿತ್ತಂತಹ ಹೂಗಳನ್ನು ದೂರದ ಕೋಲಾರಕ್ಕೆ ಪ್ರತಿ ಮುಂಜಾನೆ 6.00 ಗಂಟೆಗೆ ಹೊರಡುತ್ತಿದ್ದ ಬಸ್ಸಿಗಾದು ಬಂದನಂತರ ಅದರಲ್ಲಾಕಿ ಕಳುಹಿಸುತ್ತದ್ದೆವು. ನಮ್ಮ ತೋಟಕ್ಕೆ ಬರುತ್ತಿದ್ದ ಚಿಟ್ಟೆಗಳು, ಮಿಡತೆಗಳು, ಕೆಂಪಿರುವೆಗಳ ಜೀವನ ಕ್ರಮವನ್ನು ನಾನು ಪ್ರತಿ ದಿನವೂ ಗಮನಿಸುತ್ತಿದೆ. ಅವುಗಳನ್ನು ಇಷ್ಟ ಪಟ್ಟು ಕಾಪಾಡುತ್ತಿದ್ದೆ, ಹಾಗೇಯೆ ಹಸಿರ ಎಲೆಗಳ ಮೇಲೆ ಕೂರುತ್ತಿದ್ದ ಬಣ್ಣದ ಜೀರುಂಡೆಗಳನ್ನಿಡಿದು ಬೆಂಕಿಪೊಟ್ಟಣದಲ್ಲಿಟ್ಟು ಅದು ಮರಿ ಮಾಡುತ್ತದೆ ಎಂಬ ನಂಬಿಕೆಯೊಂದಿಗೆ ಅದಕ್ಕೆ ತಿನ್ನಲು ಹಸಿರು ಎಲೆಗಳನ್ನು ಇಡುತ್ತಿದ್ದೆ.

       ಒಂದಷ್ಟು ಹುಡುಗರು ನಾವೆಲ್ಲ ಪರಸ್ಪರ ಜೊತೆಗಾರರಾಗಿದ್ದೆವು ಶಾಲೆ ಬಿಟ್ಟ ಮೇಲೆ ಮರಕೋತಿಯಾಟ ಆಡುತ್ತ, ದೂರದ ಮಾವಿನ ತೋಪುಗಳಿಗೆ ಗುಟ್ಟಾಗಿ ಸಾಗಿ ಅಲ್ಲಿ ಸಿಗುತ್ತಿದ್ದಂತಹ ಗೋಡಂಬಿ ಕಾಯಿಗಳನ್ನು ಕಿತ್ತು ತಂದು ತಿನ್ನುತ್ತಿದ್ದೆವು. ಕಾಶಿ ಹಣ್ಣುಗಳನ್ನು ಹುಡುಕುತ್ತಿದ್ದೆವು ಅವುಗಳ ಕೆಂಪು ಮತ್ತು ಕಪ್ಪು ಬಣ್ಣಗಳನ್ನು ಕಂಡು ಕುತೂಹಲ ವೆಕ್ತಪಡಿಸುತ್ತಿದ್ದವು, ಅಯ್ಯೋ ಬಿಡಿ ಹೇಳಿಕೊಂಡು ಹೋಗುತ್ತಿದ್ದರೆ ಸಾಲುಗಳು ಬೆಳೆಯುತ್ತಲೇ ಸಾಗುತ್ತವೆ . ಆದರೆ ಅಂತಹ ಕಾಲ ಮತ್ತೆಂದೂ ಬರುವುದಿಲ್ಲ ಎನ್ನುವುದೇ ನೋವಿನ ಸಂಗತಿ. ಈಗ ನಮ್ಮ ಹಳ್ಳಿಯಲ್ಲಿ ಮನೆಗಳ ಸಂಖ್ಯೆ ಬೆಳೆದಿದೆ, ಅಂಗಡಿಗಳು ತುಂಬಿಹೋಗಿವೆ, ಆದರೆ ಹಿಂದೆ ಸಿಗುತ್ತಿದ್ದಂತಹ ತಿನಿಸುಗಳು ಈಗ ಸಿಗುವುದಿಲ್ಲ. ಕೆರೆಯಲ್ಲಿ ನೀರೇ ಇಲ್ಲ ಪ್ರತಿ ವರ್ಷ ಮಳೆ ಬಂದರೂ ಅದು ತುಂಬುವುದಿಲ್ಲ, ಬಾವಿಗಳ ಮೂಲವೇ ಇಲ್ಲ, ಆ ಹಸಿರ ಸಿರಿ ಕಾಣದಾಗಿರುವುದು ತುಂಬಾ ದುಃಖಕರ ವಿಷಯವೆಂದೇ ಹೇಳಬೇಕು. ಈಗ ಇಲ್ಲಿ 1500 ಅಡಿಗಳ ಆಳವನ್ನು ಕೊರಿಸಿದರೂ ಬೋರ್ ವೆಲ್ ಗಳಲ್ಲಿ ಒಂದು ಹನಿ ನೀರು ಸಿಗುವುದಿಲ್ಲ. ಕೆರೆಯ ಕೋಡಿಗಳಿಲ್ಲ, ಭತ್ತದ ಗದ್ದೆಗಳಿಲ್ಲ ಒಮ್ಮೆ ಹಿಂದಿನ ಸಂತಸವನ್ನಷ್ಟೇ ನೆನೆದು ಖುಷಿಪಡುತ್ತೇನೆ. ಈಗ ಎಲ್ಲಾ ಇದ್ದರೂ ಏನೂ ಇಲ್ಲವೆಂಬ ಒಂಟಿತನ ಹಾಗಾಗ ಕಾಡುತ್ತಲೇ ಇರುತ್ತದೆ. "ಕಾಲದ ಮುಂದೆ ಯಾವುದೂ ನಿಲ್ಲದೆಂಬ ಕಟು ವಾಸ್ತವದ ಎದುರು" ನನ್ನ ನೆನಪುಗಳು ಕೇವಲ ನೀರ ಮೇಲಿನ ಗುಳ್ಳೆಗಳಂತೆ ಭಾಸವಾಗುತ್ತವೆ.
ಚಿತ್ರಕೃಪೆ: naturemagics.com

3 comments:

prabhamani nagaraja said...

ನೆನಪುಗಳನ್ನು ಸರಳ ಸು೦ದರವಾಗಿ ತೆರೆದಿಟ್ಟಿದ್ದೀರಿ ವಸ೦ತ್. ನಿಜ, ಯೌವನದ ನೆನಪು ಬಾಲ್ಯ, ಆದರೆ ಬಾಲ್ಯದ ಕನಸೇ ಯೌವನವಲ್ಲವೇ?

ವಸಂತ್ ಕೋಡಿಹಳ್ಳಿ said...

ಹೌದು ಖಂಡಿತ ಮೇಡಂ ನಿಮ್ಮ ಪ್ರತಿಕ್ರಿಯೆಗೆ ತುಂಬು ಮನದ ಧನ್ಯವಾದಗಳು.

Anonymous said...

http://networkedblogs.com/NoG5H