Sunday, December 21, 2014

ದಿಕ್ಕು ಮತ್ತು ಹೆಜ್ಜೆ

ದಾರಿಯಲ್ಲಿ ನಡೆವಾಗ
ನನ್ನ ಪಾದಗಳು ದಿಕ್ಕುತಪ್ಪುತ್ತವೆ
ಒಮ್ಮೆಮ್ಮೆ ಉತ್ತರದ ಕಡೆಗೋ
ಇನ್ನೊಮ್ಮೆ ದಕ್ಷಿಣದ ಕಡೆಗೋ
ನಿಧಾನವಾಗಿ ಹೆಜ್ಜೆಗಳ
ಬದಲಿಸುತ್ತವೆ

ಇದನ್ನು ನಾನು
ಫವಾಡವೆಂದು ಕರೆಯುವುದಿಲ್ಲ
ಇದರ ಬಗ್ಗೆ ಮತ್ತೊಬ್ಬರಿಗೂ
ವಿವರಿಸಿ ಹೇಳುವುದಿಲ್ಲ
ಯಾಕೆಂದರೆ ?
ಇಲ್ಲಿ ದಾರಿಯೂ ನನ್ನದೆ
ಪಾದಗಳೂ ನನ್ನದೆ

ಆದರೂ ಇಲ್ಲೊಂದು ಕತೂಹಲ
ನನ್ನ ಕಾಡದಿರುವುದಿಲ್ಲ
ಸೂರ್ಯ ಹುಟ್ಟುವಾಗ
ಪಶ್ಚಿಮದಲ್ಲಿ ಮುಳುಗುವಾಗ
ನನ್ನ ಹೆಜ್ಜೆಗಳು
ಕೆಲಸ ಆರಂಭಿಸುತ್ತವೆ
ಇದು ಅನಿವಾರ್ಯವೂ ಅಗತ್ಯವೂ
ಎನ್ನುವುದು ನನ್ನ ಅಭಿಮತ

ಹೀಗೆ ಸಾಗುವಾಗ
ಒಮ್ಮೆ ಹೂಗಳನ್ನು
ಇನ್ನೊಮ್ಮೆ ಮುಳ್ಳುಗಳನ್ನು
ಮತ್ತೊಮ್ಮೆ ಕಲ್ಲುಗಳನ್ನೂ ಸಹ
ತುಳಿದು ಸಾಗಿದ್ದೇನೆ
ಯಾಕೋ ಒಮ್ಮೆಯೂ
ನೋವಾದ ಅನುಭವ
ನನಗಾಗಲಿಲ್ಲ

ವಾಸ್ತವವೂ ನನ್ನನ್ನು
ಸ್ಥಿತಿಗೆ ತಂದು ನಿಲ್ಲಿಸಿದೆ ಎಂದರೆ
ನಾನು ಒಪ್ಪುವುದಿಲ್ಲ
ಕಾರಣ ಇಲ್ಲಿ ಎಲ್ಲವೂ ನನಗೆ
ಅರಿವಾಗುತ್ತದೆ
ಯಾವುದು ಸರಿ ಯಾವುದು ತಪ್ಪು
ಎಂಬುದು ಅರ್ಥವಾಗುತ್ತದೆ

ಇರಲಿ ದಿಕ್ಕು ತಪ್ಪಿದರೂ ಸಹ
ಅದೇ ಹಾದಿಯಲ್ಲೇ ಸಾಗಿ
ಸತ್ಯವನ್ನು ಹುಡುಕಲೆತ್ನಿಸುತ್ತೇನೆ
ಸದಾ ಲವಲವಿಕೆಯಿಂದಲೇ
ನಡೆದು ಸಂಭ್ರಮಿಸುತ್ತೇನೆ.


ಚಿತ್ರಕೃಪೆ: http://dailyreckoning.com/

Friday, December 19, 2014

ಸಾಕ್ಷ್ಯ

ಆ ಶಾಲೆಯಲ್ಲಿ ನಡೆದ ಭೀಭತ್ಸಕ್ಕೆ
ಅಲ್ಲಿ ಪೆಟ್ಟು ತಿಂದು ನರಳುತ್ತಿದ್ದ ಗೋಡೆಗಳು
ಸಾಕ್ಷಿಯಾಗಿದ್ದವು
ಸುಟ್ಟು ಕರಕಲಾಗಿದ್ದ ಭೂದಿ
ತನ್ನ ಸ್ಥಿತಿಯನ್ನು ವಿವರಿಸಲು
ತಡವರಿಸುತ್ತಿತ್ತು
ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಕೈಚೀಲಗಳು
ಚಲ್ಲಿ ಚದುರಿಹೋಗಿದ್ದ ಚಪ್ಪಲಿಗಳು
ಹಿಂದಿನ ಆ ಕ್ಷಣದ ಭಯಾನಕತೆಯನ್ನು
ಮೌನವಾಗಿ ಸ್ಮರಿಸುತ್ತಿದ್ದವು
ನಿಜಕ್ಕೂ ಅಲ್ಲಿ ಯಾರದ್ದು ತಪ್ಪೊ
ಯಾರದ್ದು ಒಪ್ಪೊ .
ಏನೂ ತಿಳಿಯದ ಹಾಗೆ ನೆಲಕ್ಕೊರಗಿದ್ದ
ಆ ರೈಫಲ್ ಗಳೇ
ಸಾಕ್ಷ್ಯ ನುಡಿಯಬೇಕಿತ್ತು.

ಚಿತ್ರಕೃಪೆ: http://i3.mirror.co.uk/

Wednesday, November 12, 2014

ಪುಸ್ತಕ ಬಿಡುಗಡೆ

           ಇದೇ ತಿಂಗಳ 14 ರಂದು ಬೆಳಗ್ಗೆ 11.00 ಗಂಟೆಗೆ ಕನ್ನಡ ಪುಸ್ತಕ ಪ್ರಾಧಿಕಾರದವರು ನನ್ನ ಕವನ ಸಂಕಲನ "ನಾ ಕಂಡ ಜಗತ್ತು" ಮತ್ತು ಇನ್ನಿತರ ಹಲವು ಪುಸ್ತಕಗಳನ್ನು ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ ರಸ್ತೆ ಬೆಂಗಳೂರು ಇಲ್ಲಿ ಲೋಕಾರ್ಪಣೆ ಮಾಡುತ್ತಿದ್ದಾರೆ. ಇದು ನನ್ನ ಬಹುದಿನಗಳ ಕನಸ್ಸು ಕೂಡ ಈಗ ನನಸಾಗುತ್ತಿದೆ. ತುಂಬಾ ಶ್ರಮಪಟ್ಟು ಮುದ್ರಣಗೊಳಿಸಿದ ನನ್ನ ಪುಸ್ತಕವನ್ನೂ ಒಳಗೊಂಡಂತೆ ಇನ್ನಿತರ ಹಲವು ಕವಿಗಳ ಕೃತಿಗಳನ್ನು "ನಯನ ಸಭಾಂಗಣ"ದಲ್ಲಿ ಶ್ರೀಮತಿ ಉಮಾಶ್ರೀ , ಸನ್ಮಾನ್ಯ ಕನ್ನಡ ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು, ಡಾ. ಶಾಲಿನಿ ರಜನೀಶ್, ಮಾನ್ಯ ಪ್ರಧಾನ ಕಾರ್ಯದರ್ಶಿಗಳು ಕನ್ನಡ ಮತ್ತು ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ಮುಖ್ಯ ಅತಿಥಿ ಶ್ರೀ ಕೆ.ಎ.ದಯಾನಂದ, ಮಾನ್ಯ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧ್ಯಕ್ಷತೆ ಡಾ.ಬಂಜಗೆರೆ ಜಯಪ್ರಕಾಶ ಇನ್ನೂ ಹಲವರನ್ನೊಳಗೊಂಡತೆ ಕಾರ್ಯಕ್ರಮ ನಡೆಯಲಿದೆ. ನನ್ನ ಪುಸ್ತಕಕ್ಕೆ ಪುಖಪುಟವನ್ನು ಮಾಡಿಕೊಟ್ಟ ದಯಾನಂದ್.ಟಿ.ಕೆ ಅವರಿಗೆ ನನ್ನ ತುಂಬು ಮನದ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ಈ ಸುಸಂದರ್ಭದಲ್ಲಿ ನಿಮ್ಮೆಲ್ಲರ ಆಶೀರ್ವಾದವನ್ನೂ ಸಹ ಕೋರಲಿಚ್ಚಿಸುತ್ತೇನೆ ವಂದನೆಗಳೊಂದಿಗೆ.

                                                                      -ವಸಂತ ಕುಮಾರ್ ಆರ್ 
                                                                      ಕೋಡಿಹಳ್ಳಿ

Sunday, November 9, 2014

ಒಂದಷ್ಟು ಚುಟುಕುಗಳು - 2

ಬಿಲ್ಲು ಮತ್ತು ರೈಫಲ್

ಅವಳ ನೋಟ ನೂರೆಂಟು
ಬಿಲ್ಲುಗಳಿಗೆ ಸಮವಂತೆ..!!

ಅಯ್ಯೋ ಬಿಡಿ.!
ಒಂದು ರೈಫಲ್ ಮುಂದೆ ಅವಳ
ಯಾವ ಆಟವೂ ನಡೆಯೋದಿಲ್ಲ...!!ನಾಟಕ

ನಾಟಕ ಒಂದರಲ್ಲಿ ಒಳ್ಳೆ
ಪಾತ್ರದಾರಿ ಆಗಬೇಕೆಂದುಕೊಂಡೆ..!

ಕಡೆಗೆ ನನ್ನ ಜೀವನವೇ
ನಾಟಕ ರಂಗವಾಗಿ ಮಾರ್ಪಟ್ಟಿತು...!!ಮಳೆ

ಬೀಳುತ್ತಿದ್ದ ಮಳೆಗೆ ನನ್ನ
ದೇಹ ಮಾತ್ರ ತಣಿಯುತ್ತಿತ್ತು..!

ಮನಸ್ಸು ಮಾತ್ರ ಅವಳ
ನೆನೆದು ನಲಿಯುತ್ತಿತ್ತು...!!ಬೆವರು

ಕೃಷಿಕನ ಕಷ್ಟದ ಬೆವರು
ಸುವಾಸನೆ ಬೀರುತ್ತಿದ್ದರೆ..!

ಧನಿಕನ ಸುಖದ ಸೆಂಟಿನ
ಘಾಟು ಗಬ್ಬೆದ್ದು ನಾರುತ್ತಿತ್ತು...!!ಭೂಕಂಪ

ಅವಳು ಕುಣಿದರೆ
ಇಡೀ ಭೂಮಿಯೇ ನಡುಗುತ್ತಿತ್ತು..!

ಸಾಧ್ಯವೇ ಇಲ್ಲ.! ಆ ಕ್ಷಣದಲ್ಲಿ ಬಹುಷಃ
ಭೂಕಂಪವಾಗಿರುವ ಸಾಧ್ಯತೆಯಿರಬಹುದು...!!


ನಕ್ಷತ್ರಗಳು

ಆಕಾಶದಲ್ಲಿ ನಕ್ಷತ್ರಗಳು
ಬಹಳ ಅಂದವಾಗಿ ತೋರುತ್ತವೆ..!

ಅವುಗಳಿಗೆ ಬೇಸರವಾದಾಗ
ಭೂಮಿಗೂ ಬಂದು ಅಪ್ಪಳಿಸುತ್ತವೆ...!!ಯೋಚನೆಗಳು

ಯೋಚನೆಗಳು
ಸದಾ ನಮ್ಮ ಸುತ್ತ
ಸುಳಿದಾಡುತ್ತಿರುತ್ತವೆ
ಅವು ಆಗೆಯೇ ಇರಬೇಕು..!

ಒಂದು ವೇಳೆ
ಅವು ಸುತ್ತದೇ ಸತಾಯಿಸಿದರೆ
ಅಲ್ಲಿಗೆ ಬದುಕು
ಪರಿ ಸಮಾಪ್ತಿ...!!
                                                               -ವಸಂತ್ ಕೋಡಿಹಳ್ಳಿ

Sunday, November 2, 2014

ಒಂದಷ್ಟು ಚುಟುಕುಗಳು

ಕಟ್ಟಿಂಗ್ ಶಾಪ್

ಹೇರ್
ಕಟ್ಟಿಂಗಿಗಾಗಿ
ಕನ್ನಡಿಯ
ಮುಂದೆ ಕುಳಿತಾಗ

ಎದುರಿಗಿದ್ದ
ಕನ್ನಡಿ ನನ್ನ
ವೃತ್ತಾಂತವನ್ನೆಲ್ಲಾ
ಲೆಕ್ಕಾಚಾರ ಮಾಡುತ್ತಿತ್ತುಜ್ಞಾನಿ ಮತ್ತು ರಾಜಕಾರಣಿ

ಅವನೆಂದ
ನಾನು ಮಹಾ
ಜ್ಞಾನಿಯಾಗಬೇಕು.!

ಅವನ ಮಗನೆಂದ
ನಾನೂ ಸಹ ಮಹಾ
ರಾಜಕಾರಣಿಯಾಗಲೇ ಬೇಕು..!!ಕವಿ ಮತ್ತು ಕಥೆ

ನಾನು
ಕವಿಯಾಗಲು
ಹೊರಟೆ.!

ಅವಳು
ಕಥೆಯಾಗಿ
ಹೋದಳು..!!ನದಿ ಮತ್ತು ಪ್ರವಾಹ

ನದಿಯಾಗಿ
ಅವಳು
ನನ್ನ ದಡ
ಮುಟ್ಟಿಸುತ್ತಾಳೆ
ಎಂದುಕೊಂಡೆ.!

ಏಕೋ..,!
ಗೊತ್ತಾಗಲಿಲ್ಲ
ಪ್ರವಾಹವಾಗಿ
ಅಂಡಮಾನ್
ನಿಕೋಬಾರ್ ನತ್ತ
ಎಸೆದು ಹೋಗಿದ್ದಾಳೆ..!!ಅವಳು ನಾನು

ಅವಳು
ಕೊಡೆಯಿಡಿದು
ವಯ್ಯಾರದಿಂದ
ನಡೆದು
ಹೊರಟಳು

ನಾನು
ಕೊಡವಿಡಿದು
ದಿನವಿಡೀ
ನೀರಿಗಾಗಿ
ಕಾದು ಕಳೆದೆ..!!ಬಣ್ಣದ ಆಗಸ

ನಮ್ಮ
ಬದುಕೊಂದು
ಬಣ್ಣದ ಆಗಸದಂತೆ

ಆಯ್ಯೋ ಬಿಡಿ
ದಿನವಿಡೀ ಮೋಡ
ಮುಚ್ಚಿಕೊಂಡೇ
ಸತಾಯಿಸುತ್ತಿದೆ.ರಂಗೋಲಿ ಸ್ಪರ್ಧೆ

ಅಂಗಳದ ತುಂಬಾ
ಬಣ್ಣ ಬಣ್ಣದ
ರಂಗೋಲಿಗಳ ಚಿತ್ತಾರ.!

ಆ ದಿನದ
ರಂಗೋಲಿ ಸ್ಪರ್ಧೆ
ಅಲ್ಲಿಗೆ ಮುಕ್ತಾಯವಾಗಿತ್ತು..!!ಮೋಹ

ಅವಳ ಮೋಹಕ್ಕೆ
ಮನ ಸೋಲದವರೇ
ಇಲ್ಲವಾಗಿದ್ದರಂತೆ.!

ಸಧ್ಯ ಈಗವಳು
ಮ್ಯೂಸಿಯಂ ಒಂದರಲ್ಲಿ
ಮೂರ್ತಿಯಾಗಿ ಸೊರಗುತ್ತಿದ್ದಾಳೆ..!!ನಕ್ಲೆಸ್

ಅವಳ ಕೋಪ
ಮಿತಿ ಮೀರಿ
ಹೋದಾಗ.!

ಆ ಕೋಪವನ್ನು
ಒಂದು ನಕ್ಲೆಸ್
ತಣ್ಣಗಾಗಿಸಿತ್ತು..!!ಮಂಜುಗಡ್ಡೆ ಮತ್ತು ಮಂಜು

ಅವನು
ಮಂಜುಗಡ್ಡೆಯಲ್ಲಿ ಸಿಲುಕಿ
ಒದ್ದಾಡುವಂತಿದ್ದರೆ.!

ಇವಳು
ಮಂಜಿನಲ್ಲಿ ಸಿಲುಕಿ
ನಲಿದಾಡುತ್ತಾಳೆ..!!ಕಾಮನಬಿಲ್ಲು

ಆಗ ವರ್ಷದಲ್ಲಿ
ಒಮ್ಮೆಯಾದರೂ ಕಾಮನಬಿಲ್ಲನು
ಕಾಣಬಹುದಿತ್ತು.!

ಈಗ ವರ್ಷವಿಡೀ
ಬರಿ ಬೀಧಿಕಾಮಣ್ಣರನ್ನೇ ಮಾಧ್ಯಮಗಳಲ್ಲಿ
ಕಾಣುವಂತಾಗಿದೆ..!!


                                                               -ವಸಂತ್ ಕೋಡಿಹಳ್ಳಿ


Tuesday, April 29, 2014

ಈ ವಾರದ "ಮಂಗಳ" ವಾರ ಪತ್ರಿಕೆಯಲ್ಲಿ ಪ್ರಕಟಗೊಂಡ ಕವನ

ಈ ವಾರದ "ಮಂಗಳ" ವಾರ ಪತ್ರಿಕೆಯಲ್ಲಿ ಪ್ರಕಟಗೊಂಡ ಕವನ. ಮಂಗಳ ಸಂಪಾದಕರಿಗೆ ನನ್ನ ಹೃದಯಪೂರ್ವಕ ನಮನಗಳು.


Wednesday, January 29, 2014

ಕಟ್ಟಾಜ್ಞೆ


ಕೆಲವೊಮ್ಮೆ
ರಸ್ತೆಯಲ್ಲಿ ನನ್ನ ಕಂಡಾಗ...
ಗೋಡೆಗಳು ಮಾತಿಗಿಳಿಸುತ್ತವೆ
ಜಗುಲಿಗಳು ಜಾಗ ಕೊಡುತ್ತವೆ
ನಯವಾದ ಗಾಳಿ
ಹಿತವಾದ ಬೆಳಕು
ಯಾವೂದೊಂದೂ
ಬೇಧ ತೋರುವುದಿಲ್ಲ

ಅವುಗಳಿಗೆ
ವಾಸ್ತವದ ಒಳ ಮರ್ಮಗಳು
ಗೊತ್ತಿಲ್ಲವಿರಬಹುದು
ಮರ್ಕಟ ಮನಸ್ಸುಗಳ ಕಿತ್ತಾಟ
ಕುಲ ಧರ್ಮಗಳ ತಿಕ್ಕಾಟ
ಮೇಲು ಕೀಳುಗಳೊಳಗಿನ
ನರಲಾಟ ಗೋಳಾಟಗಳು
ಅರ್ಥವಾಗದೆಯೇ
ಇರಬಹುದು

ಮಾತಿಗಿಳಿದ ಮಾತ್ರಕ್ಕೆ
ಪ್ರತಿಕ್ರಿಯಿಸುವುದರಲ್ಲಿ ತಪ್ಪೆಂಬೇನಿಲ್ಲ
ಅಡಿಪಾಯದ ಬಗ್ಗೆಯೂ ಚಿಂತೆಯಿರಬೇಕು
ಜಗುಲಿಗಳು ಜಾಗ ಬಿಟ್ಟಾಗಲೂ ಕೂಡ
ಅದರಡಿಯ ಚೂಪು ಮುಳ್ಳುಗಳ ಬಗ್ಗೆ
ವಿಶೇಷ ಅರಿವಿರಬೇಕು

ನಯವಾದ ಗಾಳಿ
ಹಿತವಾದ ನೆರಳೇ ಆದರೂ
ನಮ್ಮ ಕಣ್ಣು, ಮೂಗಿನ ಬಗ್ಗೆಯೂ
ಜಾಗ್ರತೆಯಿರಲೇ ಬೇಕು

ಯಾರಿಗೆ ಗೊತ್ತು ?
ಹೆಜ್ಜೆಗಳು ನನ್ನವೇ ಆದರು
ಆ ಹಾದಿ ಸಾಗುವುದು
ಮತ್ತೊಬ್ಬರ ಕಟ್ಟಾಜ್ಞೆಯಿಂದಲೇ ನೋಡಿ.
 
 
ಚಿತ್ರಕೃಪೆ: www.ddo.com