Saturday, September 19, 2015

ಮುನ್ಸೂಚನೆ

ಅದೆಂದೋ ಗೋಡೆಗೆ ಬಡಿದಿದ್ದ
ಮೊಳೆಯೊಂದು ಮೊಸಕು
ಮೊಸಕಾಗಿ ಗೋಚರಿಸುತ್ತದೆ
ಬಹುಶಃ ನಮ್ಮಜ್ಜನ ಅಂಗಿಯ ಹೊತ್ತ
ಶ್ರಮದ ಫಲವಿರಬೇಕು ಇಲ್ಲ
ನಮ್ಮಜ್ಜಿಯು ಗೋಡೆಗೆ ಬಳಿದ
ಸುಣ್ಣದ ಕಾರದ ಬಿಗಿಯಿರಬೇಕು

ದಿನಂಪ್ರತಿ ಹಾಗೂ
ಹಬ್ಬ ಹರಿದಿನಗಳಲ್ಲಿ
ಅಬ್ಬರಿಸಿ ಬೊಬ್ಬಿಡುತ್ತಿದ್ದ
ರುಬ್ಬು ರೋಲುಗಳಿಂದು
ನಾಗರಿಕತೆಯ ಬರಾಟೆಯಲ್ಲಿ
ಮೌನದ ಮೆಟ್ಟಿಲಾಗಿ ಕಂಡಿವೆ
ಸ್ಥಾನವನ್ನೀಗ ಮಿಕ್ಸಿ
ಗೈಂಡರ್ ಗಳು ಆಕ್ರಮಿಸಿಕೊಂಡು
ಸಂತಸಗೊಂಡು ಸುಖಿಸುತ್ತಿವೆ

ದಿನದಿಂದ ದಿನಕ್ಕೆ
ಬೆಲೆಗಳ ಏರಿಳಿತವು 
ಏರು ಮುಖದ ಸಾಧನೆಯತ್ತ
ಸಾಗತೊಡಗಿದೆ
ಅದೇ ಧಾಟಿಯಲ್ಲಿ
ಗಾಂಧಿ ತಾತನ ಕನ್ನಡಕ
ಟಿಪ್ಪು ಸುಲ್ತಾನನ ಕೈಕತ್ತಿ
ಕದ್ದು ಕಡಲು ದಾಟಿಹೋದ
ಕೋಹಿನೂರ್ ವಜ್ರದ ಬೆಲೆಗಳಲ್ಲೂ
ಭಾರೀ ಏರಿಕೆಯ

ಮುನ್ಸೂಚನೆಯು ಕಾಣುತ್ತಿದೆ.

Wednesday, September 16, 2015

ಮರ್ಮಗಳು

ಎಲ್ಲರ ಮನೆಗಳಲ್ಲೂ ಹಬ್ಬದ ಘಾಟು ಕಮರು
ವಿಧ ವಿಧಧ ರಂಗೋಳಿಗಳು
ಕೇಕೆ ಆರ್ಭಟಗಳ ಸಮಾಗಮವು ಹೀಗಿದ್ದರೂ
ಅಲ್ಲೊಬ್ಬ ಭಿಕ್ಷುಕನಿಗೆ ಹಸಿವಿನ ಚಿಂತೆ ಕಾಡಿದೆ

ಬದುಕಿನ ಭ್ರಾಂತಿಯಲಿ ನಗುವ ಮರೆತು
ಸಾಗುತ್ತಿದ್ದೇವೆ ಹಸಿವಿನ ಜೋಪಡಿಗೆ ಉತ್ತರವ
ಹೊದಿಸಲು ಹುಡುಕುತ್ತೇವೆ ಜೊತೆಯಾಗಿರಿ
ನೆಮ್ಮದಿಗಳೆ ಸದಾ ಜೊತೆಯಾಗಿರಿ ಚಿಂತೆಗಳೆ

ಅವನು ಚಿನ್ನದ ಕುರ್ಚಿಯಲ್ಲಿ ಕೂತ
ಚಿನ್ನದ ಪೇಟ ತೊಟ್ಟು ಸಂಭ್ರಮಿಸಿದ
ಚಿನ್ನವನ್ನೇ ಹಾಸು ಹೊದ್ದು ಮಲಗಿದ ಕಡೆಗೆ
ಅವನ ಚಿನ್ನ ಅವನಿಗೆ ಊಟವಾಗಿ ರುಚಿಸಲೇ ಇಲ್ಲ

ಪ್ರತಿಯೊಬ್ಬರ ಹಣೆಯಲ್ಲೂ ಒಂದೊಂದು ಚಿಂತೆಯನ್ನು
ಬರೆದುಕೊಂಡು ತಿರುಗಾಡುತ್ತಿದ್ದಾರೆ
ಬದುಕಿನ ವಾಸ್ತವತೆ ಅರಿವಿನ ಕೊರತೆಯಿರಬೇಕು
ಇಲ್ಲಾ ಬದುಕೇ ಅವರಿಗೆ ಮರ್ಮವಾಗಿ ಕಾಡಿರಬೇಕು.

ಚಿತ್ರಕೃಪೆ: pjmcclure.com/

ವಾಸ್ತವತೆಯ ಮುಖವಾಡಗಳು

ಯಾವುದೋ ಜ್ಞಾನದಲಿ ಮನ ಸೊರಗಿ ಕುಳಿತಾಗ
ಬೆಳ್ಮುಗಿಲ ಚಂದ್ರ ಮುಸಿ ಮುಸಿ ನಗುತ್ತಿದ್ದ
ಹತ್ತಾರು ಹತಾಶೆಗಳು ಒಮ್ಮೆ ಸುತ್ತುವರಿದು ಸಾವರಿಸಿದಾಗ
ಅವನು ಏಕಾಗಿ ನಕ್ಕ ಎಂಬ ಗೋಜಿಗೆ ನಾ ಹೋಗಲಿಲ್ಲ

ಅಲ್ಲೊಂದು ಮೌನಕ್ಕೆ ಚಿನ್ನದ ಕನಸಾಗುವಾಸೆಯಿದೆ
ಆದರೆ ಅದರ ಜೋಪಡಿಯ ಗರಿಗಳು ಸರಿದು ಸದ್ದಾದಾಗ
ಹಸಿದ ಚಿಂತೆಗಳ ಕೂಗು ಕೊರಳಲ್ಲಿ ಮೂದಲಿದಿದಾಗ
ವಾಸ್ತವದ ಬಿಂಬಿ ಕರಿ ನೆರಳಂತೆ ಗೋಚರಿಸುತ್ತದೆ

ಯಾರೋ ಎಸೆದು ಹೋದ ಕುಂಬಳದ ಬೀಜವೊಂದು
ಮೊಳಕೆಯೊಡೆದು ಕಾಯಿ ಬಿಡಲು ಸಿದ್ದವಾಗುತ್ತಿದೆ ಆದರೆ
ಅಲ್ಲೊಬ್ಬ ವ್ಯಾಪಾರಿ ಕುಂಬಳವು ನನದೆ ಕುಂಬಳದ ಗಿಡವು ನನದೇ
ಎಂಬ ಹುಚ್ಚು ಬ್ರಾಂತಿಯಲ್ಲಿ ಮುಳುಗಿ ಕನವರಿಸುತ್ತಿದ್ದಾನೆ.

ಕವಿದ ಕಾರ್ಗತ್ತಲೂ ಒಮ್ಮೊಮ್ಮೆ ಹೊಳೆವ ಬೆಳಕಂತೆ ಪ್ರಖಾಶಿಸುತ್ತದೆ.
ನಿಜ! ಕಡು ಕಷ್ಟದಲ್ಲೂ ಆಗಾಗ ಹೊಳೆವ ನಗುವನ್ನು ಕಂಡಾಗ
ಬೆಳದಿಂಗಳ ಪ್ರಖರತೆಯು ಮಿಂಚಿ ಮರೆಯಾದಂತೆ ಭಾಸವಾಗುತ್ತದೆ
ಅದೇ ಅಲ್ಲವೆ ವಾಸ್ತವದ ನಿಜ ಸಂಗತಿಯ ಛಾಯೆಯು.

ಚಿತ್ರಕೃಪೆ:img05.deviantart.net/

Sunday, September 6, 2015

ಮೂರು ಮುಖಗಳು

ಬಿಗು ವಯ್ಯಾರದಲ್ಲಿದ್ದ
ಬೆಡಗಿ ತನ್ನ ಯೌವನವನ್ನು
ರಾಜರೋಷವಾಗಿ ಗಿರವಿ ಇಡಲು
ಮುಂದಾಗುತ್ತಿದ್ದಾಳೆ
ಬಹುಷಃ ಆಕೆಗೆ
ತನ್ನ ಬದುಕಿನ ವಾಸ್ತವದ
ಆಳ ಅರಿವಿಲ್ಲದಿರಬಹುದು
ಇಲ್ಲಾ ಆಕೆ ತಾನೊಂದು
ಸೂತ್ರ ಹರಿದು
ಅತ್ತಿಂದಿತ್ತ ಇತ್ತಿಂದತ್ತ
ತೇಲಾಡುವ ಗಾಳಿ ಫಟದ
ಕನವರಿಕೆಯಲ್ಲಿ ಪೂರ್ತಿಯಾಗಿ
ತೇಲಿಹೋಗಿರಬೇಕು.

ನೆನ್ನೆ ತಾನೆ ಸ್ವಚಂಧ
ಬಣ್ಣಗಳಿಂದ ಶೃಂಗಾರಗೊಂಡಿದ್ದ
ಒಂಟಿ ಮನೆ
ಇಂದು ಕಡು ಕಪ್ಪಾಗಿ
ಕಾಣತೊಡಗಿದೆ
ಬಹುಷಃ ಮನೆಯಲ್ಲಿನ
ಆ ಪುಟ್ಟ ಹಣತೆ ತನ್ನ ಪ್ರಕಾರತೆಯನ್ನು
ಮಂದಗೊಳಿಸಿರಬೇಕು
ಇಲ್ಲ ಅವಳ ಆಸೆಗಳಿಗೆ
ರೆಕ್ಕೆಗಳು ಮೂಡಿ
ತನ್ನ ಮನೆಯ ಮರೆತು
ಸ್ವಚಂದವಾಗಿ 
ಹಾರಿ ಹೋಗಿರಬೇಕು

ಕಣ್ಣು ಕೋರೈಸುವ
ಹಸಿರುಟ್ಟ ಬಳ್ಳಿಗಳು
ಇಂದು ಹೂ ಬಿಡದೆ
ಏಕೋ ಶಾಂತವಾಗಿವೆ
ಪಾಪ ಅವುಗಳಿಗೂ ಇಂದಿನ
ಬಲಾತ್ಕಾರಗಳ ವಂಚನೆಗಳ
ಹೊಲಸು ಘಾಟು ಮೂಗಿಗೆ
ಬಡಿದು ಮೂಕವಾಗಿರಬೇಕು
ಇಲ್ಲ ಇಂದಿನ ಕೊಲೆ ಸುಲಿಗೆ
ದೌರ್ಜನ್ಯ ನರಳಾಟಗಳ
ಆರ್ತನಾಧಗಳನ್ನು ಕೇಳಿ
ಬೆಚ್ಚುಗೊಂಡಿರಬೇಕು.

ಚಿತ್ರಕೃಪೆ: images.worldgallery.co.uk/