Saturday, September 19, 2015

ಮುನ್ಸೂಚನೆ

ಅದೆಂದೋ ಗೋಡೆಗೆ ಬಡಿದಿದ್ದ
ಮೊಳೆಯೊಂದು ಮೊಸಕು
ಮೊಸಕಾಗಿ ಗೋಚರಿಸುತ್ತದೆ
ಬಹುಶಃ ನಮ್ಮಜ್ಜನ ಅಂಗಿಯ ಹೊತ್ತ
ಶ್ರಮದ ಫಲವಿರಬೇಕು ಇಲ್ಲ
ನಮ್ಮಜ್ಜಿಯು ಗೋಡೆಗೆ ಬಳಿದ
ಸುಣ್ಣದ ಕಾರದ ಬಿಗಿಯಿರಬೇಕು

ದಿನಂಪ್ರತಿ ಹಾಗೂ
ಹಬ್ಬ ಹರಿದಿನಗಳಲ್ಲಿ
ಅಬ್ಬರಿಸಿ ಬೊಬ್ಬಿಡುತ್ತಿದ್ದ
ರುಬ್ಬು ರೋಲುಗಳಿಂದು
ನಾಗರಿಕತೆಯ ಬರಾಟೆಯಲ್ಲಿ
ಮೌನದ ಮೆಟ್ಟಿಲಾಗಿ ಕಂಡಿವೆ
ಸ್ಥಾನವನ್ನೀಗ ಮಿಕ್ಸಿ
ಗೈಂಡರ್ ಗಳು ಆಕ್ರಮಿಸಿಕೊಂಡು
ಸಂತಸಗೊಂಡು ಸುಖಿಸುತ್ತಿವೆ

ದಿನದಿಂದ ದಿನಕ್ಕೆ
ಬೆಲೆಗಳ ಏರಿಳಿತವು 
ಏರು ಮುಖದ ಸಾಧನೆಯತ್ತ
ಸಾಗತೊಡಗಿದೆ
ಅದೇ ಧಾಟಿಯಲ್ಲಿ
ಗಾಂಧಿ ತಾತನ ಕನ್ನಡಕ
ಟಿಪ್ಪು ಸುಲ್ತಾನನ ಕೈಕತ್ತಿ
ಕದ್ದು ಕಡಲು ದಾಟಿಹೋದ
ಕೋಹಿನೂರ್ ವಜ್ರದ ಬೆಲೆಗಳಲ್ಲೂ
ಭಾರೀ ಏರಿಕೆಯ

ಮುನ್ಸೂಚನೆಯು ಕಾಣುತ್ತಿದೆ.

2 comments:

sunaath said...

ನೀವು ಕೊಡುತ್ತಿರುವ ಮುನ್ಸೂಚನೆ ತುಂಬ ಸಮರ್ಪಕವಾಗಿದೆ, ವಸಂತಕುಮಾರ್!

- ವಸಂತ ಕುಮಾರ್ ಆರ್, ಕೋಡಿಹಳ್ಳಿ said...

ಕಾಮೆಂಟಿಗೆ ಧನ್ಯವಾದಗಳು ಸರ್..