Tuesday, November 3, 2015

ಹೆಜ್ಜೆಗಳು

ಯಾರೋ ತುಳಿದು ಹೋದ
ಹೆಜ್ಜೆಯ ಅಡಿಯಲ್ಲಿ
ಗೆಜ್ಜೆಯ ದನಿಯೊಂದು
ಉಳಿದುಹೋಗಿದೆ
ಕಾಲು ತೀರ ಸವೆದಿರಬೇಕು!
ಇಲ್ಲ ಗೆಜ್ಜೆಯೇ ಕಾಲಿಗೆ
ಭಾರವಾಗಿ ಕಾಡಿರಬೇಕು

ತದೇಕಚಿತ್ತದಿಂದ
ಗಡಿಯಾರವೊಂದು
ಸಣ್ಣಗೆ ಕತ್ತು ಕೊಯ್ಯಲು
ತವಕಿಸುತ್ತಿದೆ
ಗಡಿಯಾರದ ಕೆಳಗೆ
ಜೀವವೊಂದು ನಲುಗುತ್ತಿದೆ
ಉಸಿರಾಟದ ಏರಿಳಿತವು
ಶಬ್ದವಾಗಿ ಹೊಮ್ಮುತಿದೆ

ಹೊತ್ತಲ್ಲದ ಹೊತ್ತಲ್ಲಿ
ಯಾರೋ ಕೂಗಿ ಕರೆಯುತ್ತಾರೆ
ಯಾವುದೋ
ಸ್ಪರ್ಶ ಬೆಚ್ಚಿ  ಭಯಗೊಳಿಸುತ್ತದೆ
ವಾಸ್ತವಕ್ಕೆ ಅದು
ಭ್ರಮೆಯೆಂದುಕೊಂಡರೂ
ಉರಿವ ಅಣತೆ ಸಳ್ಳಾಗುವುದಿಲ್ಲ
ಬಿದ್ದ ಕನಸು ನಿಜವಾಗುವುದಿಲ್ಲ

ಕುಂಬಾರನ ಗಡಿಗೆಗಿಂದು
ಬೇಡಿಕೆಯು ಕುಸಿದಿದೆ
ನಂಬಿಕೆಗೆ ಕೊಲೆಯಾಗಿದೆ
ಗೌರವವು ನರಳುತ್ತಿದೆ
ಬಿಟ್ಟು ಬಿಡಿ ಸಾಕು!
ಜಗದ ನಿಜ ನಿಯಮಕ್ಕೆ
ತಲೆಬಾಗಬೇಕಿದೆ
ಸತ್ಯವನ್ನು ಹುಡುಕಾಡಬೇಕಿದೆ
ನ್ಯಾಯಾವನ್ನು ಓಲೈಸಬೇಕಿದೆ.