ಅಬ್ಬಾ !!
ಎಷ್ಟೊಂದು ದೂರ ಸಾಗಿ ಬಂದೆ
ಯಾವುದೊಂದು ಅರ್ಥವಾಗುತ್ತಿಲ್ಲ
ಅದೇ ಬಾಂದಣ
ಅದೇ ಚಿತ್ತಾರ
ಅವೇ ಕಮರಿ, ಸೊರಗಿ,
ಮಿಸುಕಾಡುವ ಮುಖಭಾವಗಳು,
ಭಯಕೆಗಳು ಹಿಮ್ಮೆಟ್ಟುವಾಗ,
ಆಸೆಗಳು ಸತ್ತು!
ಮತ್ತೆ ಮತ್ತೆ
ಮರುಹುಟ್ಟು ಪಡೆಯುತ್ತಿವೆ
ಒಂದರ್ಧ ಗಂಟೆಯ ಹಿಂದೆ
ಅವನಿಂದ ಭಾಷೆಯೊಂದನ್ನ ಪಡೆದಿದ್ದೆ
ನಿನ್ನ ಜೋಳಿಗೆಯ ತುಂಬಾ
ನನ್ನ ಬಿಸಿ ಅಪ್ಪುಗೆಯ
ಮುಖ ಭಾವನೆಗಳನ್ನು
ಜೋಪಾನವಾಗಿಡು
ಬೆಳದಿಂಗಳು ಕಮರುವ ಮುನ್ನ
ಎಲ್ಲಿಯೂ ಸೋರಿ ಹೋಗದಂತೆ
ಹಿಂದೊಪ್ಪಿಸು ಎಂದು!!
ಆದರೆ
ಅಮಾವಾಸ್ಯೆಯ ಕಡುಗತ್ತಲಾದರೂ
ಅವನ ಸುಳಿವೆಯೇ ಇಲ್ಲ
ಅವಳ ನೀಲಿ ಕಂಗಳಲ್ಲಿ
ಚಿತ್ತಾರದ ಹೊಂಬೆಳಕು ಮೂಡುತ್ತದೆ
ಅವಳು ರಾಧೆಯೋ,
ಸುನಾದದ ವೀಣೆಯೋ
ಎಂಬುದನ್ನು ಖಾತ್ರಿಗೊಳಿಸಬೇಕಿದೆ!
ಕೊಂಚ ಕಾಯಿರಿ
ಈಗಷ್ಟೇ
ಅವಳಿಂದ ಕೆಲವು ಕನಸುಗಳನ್ನು
ಎರವಲು ಪಡೆಯಬೇಕಿದೆ.
ಮುಂಗಾರು ಮಳೆ ಸುರಿಸಬೇಕಿದೆ
ಮನಸ್ಸಿನ ಅಂಗಳದ ತುಂಬಾ
ಅವಳದೇ ಚಿತ್ತಾರದ
ಬಿಂಬಗಳನ್ನು ಕೃಷಿಸಬೇಕಿದೆ.
2 comments:
ತೀವ್ರ ಭಾವನೆಗಳನ್ನು ಸಮರ್ಪಕವಾದ ರೀತಿಯಲ್ಲಿ ಹಿಡಿದಿಟ್ಟಿದ್ದೀರಿ ಕವನರೂಪದಲ್ಲಿ.
ನಿಮ್ಮ ಪ್ರತಿಕ್ರಿಯೆಗೆ ತುಂಬು ಮನದ ಧನ್ಯವಾದಗಳು ಸರ್
Post a Comment